ದೇವಾಲಯಗಳ ಅರ್ಚಕರ ನೇಮಕಾತಿಯು ಒಂದು ನಿರ್ದಿಷ್ಟ ಜಾತಿ ಅಥವಾ ವಂಶಾವಳಿಯಿಂದ ಮಾತ್ರ ಆಗಿರಬೇಕು ಎಂದು ಯಾರೂ ಒತ್ತಾಯಿಸಲು ಸಾಧ್ಯವಿಲ್ಲ. ಅಂತಹ ಜಾತಿ ಅಥವಾ ವಂಶಾಧಾರಿತ ನೇಮಕಾತಿಯು ಭಾರತದ ಸಂವಿಧಾನದಡಿ ರಕ್ಷಣೆ ಪಡೆಯಲು ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ಕೇರಳ ಹೈಕೋರ್ಟ್ ಬುಧವಾರ (ಅ.22) ಹೇಳಿದೆ.
ಅರೆಕಾಲಿಕ ದೇವಾಲಯ ಅರ್ಚಕರ ನೇಮಕಾತಿಗಾಗಿ ‘ತಂತ್ರ ವಿದ್ಯಾಲಯಗಳು’ ನೀಡುವ ಅನುಭವ ಪ್ರಮಾಣಪತ್ರಗಳನ್ನು ಮಾನ್ಯ ಮಾಡುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಕೇರಳ ದೇವಸ್ವಂ ನೇಮಕಾತಿ ಮಂಡಳಿ (ಕೆಡಿಆರ್‌ಬಿ) ನಿರ್ಧಾರವನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ.ವಿ. ಜಯಕುಮಾರ್ ಅವರ ವಿಭಾಗೀಯ ಪೀಠವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇರಳದ ಸುಮಾರು 300 ಸಾಂಪ್ರದಾಯಿಕ ತಂತ್ರಿ ಕುಟುಂಬಗಳನ್ನು ಒಳಗೊಂಡ, ಯುವ ಪೀಳಿಗೆಯ ಪುರೋಹಿತರಿಗೆ ದೇವಾಲಯದ ಆಚರಣೆಗಳ ತರಬೇತಿ ನೀಡುತ್ತಿರುವ ಅಖಿಲ ಕೇರಳ ತಂತ್ರಿ ಸಮಾಜವು ತಂತ್ರ ವಿದ್ಯಾಲಯಗಳ ಮೂಲಕ ದೇವಾಲಯಗಳ ಅರ್ಚಕರ ನೇಮಕಾತಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.
ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಗಳ ಮತ್ತು ಸಿಬ್ಬಂದಿಯ ಸೇವಾ ನಿಯಮಗಳು, 2022ರ ರೂಲ್ 6(1)(b)ರ ಅರ್ಹತೆ ಸಂಖ್ಯೆ 2(ii) ಮೇಲೆ ಪ್ರಕರಣ ಕೇಂದ್ರೀಕೃತವಾಗಿತ್ತು. ಈ ನಿಯಮ ಮತ್ತು ಸಂಬಂಧಿತ ಅಧಿಸೂಚನೆಗಳನ್ನು ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ, 1950 ಮತ್ತು ಕೇರಳ ದೇವಸ್ವಂ ನೇಮಕಾತಿ ಮಂಡಳಿ ಕಾಯ್ದೆ, 2015 ರ ಅಡಿಯಲ್ಲಿ ರಚಿಸಲಾಗಿದೆ.
ಅರೆಕಾಲಿಕ ದೇವಾಲಯದ ಪೂಜಾರಿಯಾಗಿ ನೇಮಕಗೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಥವಾ ಕೇರಳ ದೇವಸ್ವಂ ನೇಮಕಾತಿ ಮಂಡಳಿ (ಕೆಡಿಆರ್‌ಬಿ) ಯಿಂದ ಅನುಮೋದಿತವಾದ ಯಾವುದೇ ತಾಂತ್ರಿಕ ವಿದ್ಯಾ ಪೀಠಗಳಿಂದ ಅಥವಾ ಇತರ ಪ್ರತಿಷ್ಠಿತ ಸಂಸ್ಥೆಗಳಿಂದ ಶಾಂತಿ ಕೋರ್ಸ್‌ನಲ್ಲಿ ಪ್ರಮಾಣಪತ್ರ ಪಡೆದಿರಬೇಕು ಎಂದು ನಿಯಮ ಹೇಳುತ್ತದೆ.
‘ಶಾಂತಿ’ (ದೇವಾಲಯದ ಅರ್ಚಕ) ಹುದ್ದೆಗೆ ಅಂತಹ ಅರ್ಹತೆಗಳನ್ನು ಸೂಚಿಸಲು ಟಿಡಿಬಿ ಮತ್ತು ಕೆಡಿಆರ್‌ಬಿಗೆ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಡೀಪ್‌ಫೇಕ್ ದುರುಪಯೋಗ ತಡೆಗಟ್ಟಲು ಎಐ ಮೇಲೆ ನಿಯಂತ್ರಣ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್