ಟೆಲ್ಸಾ ಮತ್ತು ಸ್ಪೇಸ್ ಎಕ್ಸ್ ಮಾಲೀಕ ಇಲಾನ್ ಮಸ್ಕ್ ಕಳೆದ ತಿಂಗಳು 44 ಬಿಲಿಯನ್ ಡಾಲರ್‌ಗಳಿಗೆ ಟ್ಟಿಟ್ಟರ್ ಸಂಸ್ಥೆಯನ್ನು ಖರೀದಿ ಮಾಡಿದರು. ಈ ವರ್ಷದ ಕೊನೆಯಲ್ಲಿ ಈ ವ್ಯವಹಾರ ಪೂರ್ಣಗೊಳ್ಳಲಿದೆ. ಈ ವೇದಿಕೆಯಲ್ಲಿ ತನಗೆ ಹಲವಾರು ಸಾಧ್ಯತೆಗಳು ಕಾಣುತ್ತಿದ್ದು, ಈ ಸಾಧ್ಯತೆಗಳ ಬಾಗಿಲನ್ನು ತೆರೆಯುವುದಾಗಿ ಮಸ್ಕ್ ಹೇಳಿದ್ದಾರೆ.
ಈ ನಡೆಯನ್ನು ಎರಡು ಕಾರಣಗಳಿಗಾಗಿ ಟೀಕಿಸಲಾಗುತ್ತಿದೆ. ಮೊದಲನೆಯದಾಗಿ, ಅಷ್ಟೊಂದು ಪ್ರಭಾವಶಾಲಿಯಾಗಿರುವ ಸಾಮಾಜಿಕ ಮಾಧ್ಯಮವನ್ನು ಒಬ್ಬನೇ ವ್ಯಕ್ತಿ ಅಷ್ಟು ಸುಲಭವಾಗಿ ಕೊಳ್ಳಲು ಸಾಧ್ಯವಾಗುತ್ತಿರುವುದು. ಎರಡನೆಯದಾಗಿ, ಈಗಲೇ ದುರ್ಬಲವಾಗಿರುವ ನಿಯಂತ್ರಣ ಅಥವಾ ಮಧ್ಯಸ್ಥಿಕೆಯ ವ್ಯವಸ್ಥೆಯನ್ನು ತಾನು ಇನ್ನಷ್ಟು ಸಡಿಲಗೊಳಿಸುವುದಾಗಿ ಆತ ಹೇಳಿದ್ದು, ಇದು ಟ್ವಿಟ್ಟರ್‌ನಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷ ಭಾಷಣಗಳನ್ನು ಇನ್ನಷ್ಟು ಹರಡಲು ಕಾರಣವಾಗುತ್ತದೆ ಎಂಬುದು.
ಚೀನಾದಲ್ಲಿನ ಮಸ್ಕ್ ಹಿತಾಸಕ್ತಿಗಳು, ಚೀನಾ ಮತ್ತು ಪಾಶ್ಚಾತ್ಯ ದೇಶಗಳ ನಡುವೆ ಇರುವ ಇಲೆಕ್ಟ್ರಾನಿಕ್ ಪರದೆಯನ್ನು ತೆಗೆದುಹಾಕಬಹುದು ಎಂಬ ಆತಂಕವನ್ನು ಪಾಶ್ಚಾತ್ಯ ಬೃಹತ್ ಶಕ್ತಿಗಳು ಹೊಂದಿವೆ. ಕೋವಿಡ್ ಪಿಡುಗಿನ ವೇಳೆ ಸಾಂಕ್ರಾಮಿಕದ ಬಗೆಗಿನ ಅಗತ್ಯ ಕಥಾನಕಗಳನ್ನು ಹರಡಲು ಮತ್ತು ಮುಖ್ಯವಾಗಿ ರಷ್ಯಾದಿಂದ ಹೊರಡುತ್ತಿದ್ದ ಪ್ರತಿ-ಕಥಾನಕಗಳನ್ನು ದಮನಿಸಲು ಪಾಶ್ಚಾತ್ಯ ಶಕ್ತಿಗಳು ಹೆಣಗಬೇಕಾಗಿತ್ತು. ಕೋವಿಡ್ ಪಿಡುಗಿನ ಕೆಟ್ಟ ನಿರ್ವಹಣೆಯು ಯುಎಸ್‌ಎಯಲ್ಲಿ ಉಂಟಾದ ರಾಜಕೀಯ ಅಶಾಂತಿಯ ಹಾಗೂ ಮುಖ್ಯವಾಗಿ ತಪ್ಪು-ಸುಳ್ಳು ಮಾಹಿತಿ ಹರಡುವಿಕೆಯ ವಿಷಯದ ಕಾರಣಕ್ಕಾಗಿ ಕೆಲವು ರೀತಿಯ ನಿಯಂತ್ರಣಗಳನ್ನು ತರುವುದಕ್ಕೆ ಅವು ಬೆಂಬಲ ದೊರಕಿಸಿಕೊಟ್ಟಿದ್ದವು.
ಅನೇಕ ಪ್ರಗತಿಪರರು ಈ ಖರೀದಿಯ ಬಗ್ಗೆ ಆತಂಕಗೊಂಡಿದ್ದಾರೆ. ಇದೀಗ ಫೇಸ್‌ಬುಕ್ ಮತ್ತು ಗೂಗಲ್ ಜೊತೆಗೆ ಟ್ವಿಟ್ಟರ್ ಕೂಡಾ ನೇರವಾಗಿ ಅತೀ ಶ್ರೀಮಂತ ವ್ಯಕ್ತಿಗಳ ಮಾಲಕತ್ವದ ಅಡಿಯಲ್ಲಿ ಬರುವಂತಾಗಿದೆ. ಈಗಾಗಲೇ ರಾಜಕೀಯ ರಂಗದಲ್ಲಿ ಟ್ವಿಟ್ಟರ್ ಇನ್ನೂ ಬಹಳಷ್ಟು ಪ್ರಭಾವಶಾಲಿಯಾಗಿ ಉಳಿದಿದೆ ಮತ್ತು ಇಲಾನ್ ಮಸ್ಕ್ ಪ್ರಭಾವ ಈಗಾಗಲೇ ಚಿಂತೆಗೆ ಕಾರಣವಾಗಿದೆ.
ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಅಥವಾ ಸುಳ್ಳು ಮಾಹಿತಿ ಹರಿದಾಡುತ್ತಿರುವುದರ ಕುರಿತು ವಿಶ್ವದಾದ್ಯಂತ ಆತಂಕ ಇದೆ. ಕೋವಿಡ್ ಪಿಡುಗಿನ ವೇಳೆ ಸಾಂಕ್ರಾಮಿಕದ ಕುರಿತ ತಪ್ಪು ಮಾಹಿತಿಗಳು, ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಮಾತುಗಳು ಮತ್ತು ಸಂಚಿನ ಸಿದ್ಧಾಂತಗಳು, ಕಥಾನಕಗಳು ಸಾರ್ವಜನಿಕರ ನಡುವೆ ತಲ್ಲಣ ಉಂಟುಮಾಡಿದ್ದವು. ಇದೇ ಹೊತ್ತಿನಲ್ಲಿ, 2021ರ ಫೇಸ್‌ಬುಕ್ ರಾದ್ಧಾಂತದಲ್ಲಿ ಕಂಡುಬಂದಂತೆ, ಸಾಮಾಜಿಕ ಮಾಧ್ಯಮಗಳು ಹಲವಾರು ದೇಶಗಳಲ್ಲಿ ಸಮನ್ವಯ ಮತ್ತು ಸಂಪರ್ಕದ ಏಕೈಕ ವ್ಯವಸ್ಥೆಯಾಗಿಬಿಟ್ಟಿದ್ದವು. ಇದು- ದ್ವೇಷದ ಮಾತುಗಳು, ಪಿಡುಗಿನ ಕುರಿತ ಪೋಸ್ಟುಗಳ- ಟ್ಯಾಗ್‌ಗಳ ನಿಯಂತ್ರಣ, ಸಮುದಾಯ ನಿಯಮಾವಳಿಗಳನ್ನು ಉಲ್ಲಂಘಿಸುವ ಖಾತೆಗಳ ನಿಷೇಧ ಇತ್ಯಾದಿಯಾಗಿ ಹಲವಾರು ನಿಯಂತ್ರಣ ಕ್ರಮಗಳನ್ನು ತರುವಂತೆ ಒತ್ತಾಯಕ್ಕೆ ಕಾರಣವಾಗಿತ್ತು.
ನಿಯಂತ್ರಣವಿಲ್ಲದ (ಆಬ್ಸಲ್ಯೂಟಿಸ್ಟ್) ವಾಕ್ ಸ್ವಾತಂತ್ರ್ಯದ ವಕ್ತಾರನೆ?
ತಾನು ಮುಕ್ತ ವಾಕ್ ಸ್ವಾತಂತ್ರ್ಯವನ್ನು ಬೆಂಬಲಿಸಲು ಬಯಸಿರುವುದಾಗಿ ಮಸ್ಕ್ ಹೇಳಿಕೊಂಡಿದ್ದಾರೆ. ತನ್ನ ಟೀಕಾಕಾರರು ತನ್ನೊಂದಿಗೆ ಚರ್ಚೆಯಲ್ಲಿ ತೊಡಗುವುದು ತುಂಬಾ ಮುಖ್ಯವೆಂದು ತಾನು ನಂಬಿರುವುದಾಗಿಯೂ, ತನ್ನ ಅಥವಾ ತನ್ನ ಕಂಪೆನಿಗಳ ವಿರುದ್ಧದ ಯಾವುದೇ ಕಂಟೆಂಟನ್ನು ತಾನು ಬ್ಲಾಕ್ ಮಾಡುವುದಿಲ್ಲ ಎಂದೂ ಮಸ್ಕ್ ಹೇಳಿಕೊಂಡಿದ್ದಾರೆ. ಇದರ ಅರ್ಥ ಅವರು ತನ್ನ ಹಿತಾಸಕ್ತಿಗಳಿಗೆ ವಿರುದ್ಧ ಹೋಗುವ ಮಾತುಗಳನ್ನು ಪ್ರೋತ್ಸಾಹಿಸುತ್ತಾರೆ ಎಂದಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಇದರ ಭಾಗವಾಗಿ ಅವರು ಯುಎಸ್‌ಎಯ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಮತ್ತೆ ಆರಂಭಿಸಲಿದ್ದಾರೆ. ಯುಎಸ್‌ಎಯ ಕ್ಯಾಪಿಟಲ್ ಹಿಲ್ ದಾಳಿಯಲ್ಲಿ ಟ್ರಂಪ್ ಪಾತ್ರಕ್ಕಾಗಿ ಆತನ ಟ್ವಿಟ್ಟರ್ ಖಾತೆಯನ್ನು ಕಳೆದ ವರ್ಷ ನಿಷೇಧಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಭರವಸೆಗಳೆಲ್ಲಾ ಮೇಲುಮೇಲಿನವು ಮತ್ತು ಇಲಾನ್ ಮಸ್ಕ್ ಹೊಂದಿರುವ ನಿಜವಾದ ಅಧಿಕಾರ ಮತ್ತು ಪ್ರಭಾವವನ್ನು ಅಡಗಿಸುವಂತವುಗಳು. ಸಾಮಾಜಿಕ ಮಾಧ್ಯಮಗಳ ಪ್ರಚಾರ ವ್ಯವಸ್ಥೆಗಳು ಕೇವಲ ಬ್ಲಾಕ್ ಮಾಡುವುದಕ್ಕಿಂತ ಹೆಚ್ಚು ಸಂಕೀರ್ಣ ಮತ್ತು ಆಧುನಿಕವಾದವುಗಳು. ಅಲ್ಗೋರಿದಂಗಳು ವಿಷಯವನ್ನು ತೂಗಿನೋಡುತ್ತವೆ ಮತ್ತು ಪ್ರತಿಯೊಂದು ವೇದಿಕೆಯೂ ನಿರ್ದಿಷ್ಟ ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಮಾತ್ರ ಪ್ರೋತ್ಸಾಹಿಸುತ್ತದೆ. ನಿರ್ದಿಷ್ಟ ಸಂದೇಶಗಳು ಸಾರ್ವಜನಿಕರನ್ನು ತಲುಪದಂತೆ ತಡೆಯುವ ಅಧಿಕಾರವಿರುವ ಸೆನ್ಸಾರ್‌ಶಿಪ್ ಈ ಪ್ರಚಾರ ವ್ಯವಸ್ಥೆಯ ಕೇವಲ ಒಂದು ವಿಧಾನ ಅಷ್ಟೇ. ಇಲಾನ್ ಮಸ್ಕ್ ಯಾವುದೇ ವಿಷಯವನ್ನು ಬ್ಲಾಕ್ ಅಥವಾ ಖಾತೆಯನ್ನು ಅಮಾನತು ಮಾಡದಿರಬಹುದು. ಆದರೆ, ಈತನ ಬಳಿ ಇನ್ನೂ ಅನೇಕ ಸಾಧನ, ವಿಧಾನಗಳು ಸದಾಸಿದ್ಧವಾಗಿ ಇರುತ್ತವೆ.
ಟೀಕಾಕಾರರನ್ನು ಮಾತನಾಡಲು ಬಿಡುವುದು ಕೂಡಾ, ತಾವು ಎಷ್ಟು ಉದಾರ ಸ್ಪಂದನೆ ಹೊಂದಿದ್ದೇವೆ ಎಂದು ತೋರಿಸಿಕೊಳ್ಳಲು ಕಂಪೆನಿಯು ಬಳಸುವ ಮಾರ್ಕೆಟಿಂಗ್ ಅಥವಾ ಪ್ರಚಾರ ಕಾರ್ಯತಂತ್ರದ ಭಾಗವಾಗಿರಬಹುದು. ಬೆಂಬಲದ ಧ್ವನಿಗಳನ್ನು ಕೃತಕವಾಗಿ ಇನ್ನಷ್ಟು ಎತ್ತರಿಸಿ ಕೇಳಿಸಲು ಸಾಧ್ಯವಿದೆ. ಟ್ವೀಟ್‌ಗಳು ಫೀಡ್‌ನಲ್ಲಿ ಕಾಣಿಸಿಕೊಳ್ಳುವ ನಿರ್ದಿಷ್ಟ ಸಮಯ, ಸಂದರ್ಭಗಳು ಕೂಡಾ ಸಂದೇಶಗಳ ಮೇಲೆ ಪ್ರಭಾವ ಬೀರಬಹುದು. ಇಲಾನ್ ಮಸ್ಕ್ ಅವರ ಅಧಿಕಾರ ಮತ್ತು ಲಾಭವನ್ನು ಖಾತರಿಪಡಿಸುವಂತೆ ವಿಷಯವನ್ನು ಕೃತಕವಾಗಿ ಪರಿಶೀಲಿಸಿ, ನಿಯಂತ್ರಿಸುವ ಹಲವಾರು ವಿಧಾನಗಳಿವೆ.
ಹೊಸಯುಗದ ಬಂಡವಾಳಶಾಹಿಯಾಗಿ ಮಸ್ಕ್
1980ರ ದಶಕದಿಂದ ಬಂಡವಾಳಶಾಹಿಯ ಸ್ವರೂಪವು ಭಾರೀ ಬದಲಾವಣೆಗಳನ್ನು ಕಂಡಿದೆ. ಒಬ್ಬ ಸಾಮಾಜಿಕ ವಿಶ್ಲೇಷಕರಾಗಿ ನಓಮಿ ಕ್ಲೀಯ್ನ್ (Naomi Klein), ಹಿಂದೆ ಮಾರ್ಕೆಟಿಂಗ್ ಎಂದರೆ ಸರಕುಗಳನ್ನು ಮಾರಾಟ ಮಾಡುವುದರ ಕುರಿತಾಗಿದ್ದರೆ, ಈಗ ಬ್ರಾಂಡ್ ಮತ್ತು ಲೋಗೋಗಳನ್ನು ಮಾರುವುದು ಎಂದಾಗಿದೆ ಎಂಬುದನ್ನು ಗಮನಿಸುತ್ತಾರೆ. ಇದು ಸಾಂಸ್ಕೃತಿಕ ಪಲ್ಲಟಕ್ಕೆ ಕಾರಣವಾಗಿದ್ದು, ರಾಜಕೀಯ, ವ್ಯವಹಾರ ಮತ್ತು ಮಾಧ್ಯಮಗಳಲ್ಲಿ ಭಾರೀ ಪರಿಣಾಮಗಳ ಅಲೆಗಳನ್ನು ಎಬ್ಬಿಸುತ್ತದೆ. ಮಾಧ್ಯಮಗಳಲ್ಲಿ ಇರುವ ವಿಷಯಗಳಿಗಿಂತ ಮಾಧ್ಯಮ ವೇದಿಕೆಗಳಿಗೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ. ರಾಜಕೀಯ ಧೋರಣೆಗಳು, ನೀತಿಗಳಿಗಿಂತ ಹೆಚ್ಚಿನ ಮಹತ್ವವನ್ನು ವ್ಯಕ್ತಿತ್ವಗಳು ಮತ್ತು ಇಮೇಜುಗಳಿಗೆ ನೀಡಲಾಗುತ್ತಿದೆ. ಉತ್ಪನ್ನಗಳಿಗಿಂತ ಹೆಚ್ಚಿನ ಮಹತ್ವವನ್ನು ಬಿಸಿನೆಸ್ ಬ್ರಾಂಡ್‌ಗಳಿಗೆ ನೀಡಲಾಗುತ್ತಿದೆ.
ಇಲ್ಲಿ ಇಲಾನ್ ಮಸ್ಕ್ ಒಬ್ಬ ಉದ್ಯಮಿಯಾಗಿ ತನ್ನ ಬ್ರಾಂಡನ್ನು ಮಾರಾಟ ಮಾಡಬೇಕು. ಇಲ್ಲಿ ಇಲಾನ್ ಮಸ್ಕ್, ಜನರೆಲ್ಲಾ ಸ್ವತಂತ್ರವಾಗಿ, ಸಂತೋಷದಿಂದ ಇರುವ ಮತ್ತು ತಾಂತ್ರಿಕವಾಗಿ ತುಂಬಾ ಮುಂದುವರಿದ ಸಮಾಜವನ್ನು ಕಟ್ಟುವಲ್ಲಿ, ಅದರ ಸಾಧ್ಯತೆಗಳ ಬಗ್ಗೆ ಕನಸು ಕಾಣುವ ಒಬ್ಬ ಉಜ್ವಲ ದಾರ್ಶನಿಕನ ಇಮೇಜನ್ನು ಮಾರುತ್ತಿದ್ದಾರೆ. ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಈ ಎಲ್ಲಾ ತಂತ್ರಜ್ಞಾನಗಳ ಕುರಿತು ಸದಾ ಚಿಂತಿಸಿ, ಆವಿಷ್ಕರಿಸುವ ಒಬ್ಬ ಶ್ರೀಮಂತ ಬಂಡವಾಶಾಹಿಯಾಗಿ ಮತ್ತು ಚಾಲಕ ಶಕ್ತಿಯಾಗಿ ತನ್ನ ಪಾತ್ರವನ್ನು ಅವರು ಮಾರಾಟ ಮಾಡುತ್ತಿದ್ದಾರೆ. ಅವರ ಲಾಭಕೋರತನ, ಮಾನವ ಕುಲವನ್ನು ಹೊಸ ಮತ್ತು ಉಜ್ವಲ ಭವಿಷ್ಯದತ್ತ ಕೊಂಡೊಯ್ಯುವ ಮಹಾಯೋಜನೆಯ ಒಂದು ಭಾಗವಾಗಿದೆ ಆದರೆ ಅದು ಕೇವಲ ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರವಷ್ಟೇ ಕಂಡುಬರುವಂಥದ್ದು.
ಇದಕ್ಕಾಗಿಯೇ ಇಲಾನ್ ಮಸ್ಕ್ ಇಲೆಕ್ಟ್ರಿಕ್ ಕಾರುಗಳನ್ನು ಆರಂಭಿಸುತ್ತಾರೆ; ಖಾಸಗಿ ಕ್ಷೇತ್ರದಲ್ಲಿ ಗಗನಯಾನದ ಮೇಲೆ ಭಾರೀ ಹೂಡಿಕೆ ಮಾಡುತ್ತಾರೆ. ಅವರು ಸ್ವತಃ ಟಿವಿ ಶೋಗಳಲ್ಲಿ, ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಕಂಪೆನಿಗಳಾದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್- ಜಾಹಿರಾತು ಮತ್ತು ಅಭಿಯಾನಗಳಿಗೆ ಹಣ ಖರ್ಚು ಮಾಡುವುದಿಲ್ಲ. ಯಾಕೆಂದರೆ, ಅದರ ಉತ್ಪನ್ನವೇ ಇಲಾನ್ ಮಸ್ಕ್. ಸ್ಟೀವ್ ಜಾಬ್ಸ್‌ನಂತೆ ಜನರಿಗೆ ಅವರ ಭವಿಷ್ಯವನ್ನು ಮಾರುವ ಒಬ್ಬ ಮಹಾಮೇಧಾವಿಯಾಗಿ ತನ್ನ ಇಮೇಜನ್ನು ಅವರು ಮಾರುತ್ತಾರೆ. ತನ್ನ ಉತ್ಪನ್ನಗಳನ್ನು ಕೊಳ್ಳುವುದರ ಮೂಲಕ ತಮ್ಮ ಭವಿಷ್ಯದ ಮೇಲೆ ಹೂಡಿಕೆ ಮಾಡುವಂತೆ ಅವರು ಜನರನ್ನು ಕೇಳಿಕೊಳ್ಳುತ್ತಾರೆ.
ವ್ಯಾಪಾರ ಮತ್ತು ರಾಜಕೀಯದ ಈ ಮಾದರಿಯು ಫ್ಯಾಸಿಸಂನ ಆಧುನಿಕ ಆವೃತ್ತಿಯನ್ನು ಬೆಳೆಸುತ್ತದೆ. ವಿಶ್ವದಾದ್ಯಂತದ ಸರ್ವಾಧಿಕಾರಿ ನಾಯಕರು ಜನರಿಗೆ ತಮ್ಮ ಬ್ರಾಂಡನ್ನು ಮಾರುತ್ತಾರೆ. ಯಶಸ್ವಿ ಮಾರುಕಟ್ಟೆ ಅಭಿಯಾನದಿಂದ ತಮಗೆ ಬರುವ ಜನಪ್ರಿಯತೆಯು ವ್ಯಾಪಾರಿ ಮಾಲಕರಿಗೆ ಒಂದು ಉತ್ಪನ್ನವಾಗಿದ್ದು, ಇದರಿಂದಾಗಿ ಜನವಿರೋಧಿ ಧೋರಣೆಗಳನ್ನು ಜಾರಿಗೊಳಿಸುತ್ತಲೇ ಜನತೆಯನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಏನಿದ್ದರೂ, ಇದೇ ಹೊತ್ತಿಗೆ ದೊಡ್ಡ ಉದ್ಯಮಪತಿಗಳು ತಮ್ಮ ಬ್ರಾಂಡ್ ಇಮೇಜನ್ನು ಮಾರುತ್ತಲೇ ಇರುತ್ತಾರೆ. ಕೆಲವು ಸಂದರ್ಭಗಳಲ್ಲಿ ಬ್ರಾಂಡ್ ಇಮೇಜನ್ನು ರಾಷ್ಟ್ರೀಯತೆಯ ಸಂಕೇತ ಎಂಬಂತೆ ಮಾರಲಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಅದನ್ನು ಸಂಪ್ರದಾಯದ ಸಂಕೇತ ಎಂಬಂತೆ ಮಾರಲಾಗುತ್ತದೆ. ಇಲಾನ್ ಮಸ್ಕ್ ಪ್ರಕರಣದಲ್ಲಿ ಅದನ್ನು ಪ್ರಗತಿ ಎಂಬಂತೆ ಮಾರಲಾಗುತ್ತಿದೆ.
ಟ್ವಿಟ್ಟರ್ ಪಾತ್ರ ಇಲ್ಲಿ ಏನಾಗಿರುತ್ತದೆ?
ಟ್ವಿಟ್ಟರ್ ಇನ್ನೂ ಸಮಾಜದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿರುವ ಆದರೆ ಅತ್ಯಂತ ಕಡಿಮೆ ಲಾಭದಾಯಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದು. ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ಭಾರೀ ಸಾಮೂಹಿಕ ಪ್ರಭಾವ ಹೊಂದಿದ್ದರೆ, ಟ್ವಿಟ್ಟರ್ ಸಾರ್ವಜನಿಕರು ಮತ್ತು ಪ್ರಭಾವಿ ಜನರ ನಡುವಿನ ಕೊಂಡಿಯಾಗಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತದೆ.
ಟ್ವಿಟ್ಟರನ್ನು ಸಾಮಾನ್ಯವಾಗಿ ಕಾರ್ಯಕರ್ತರು ಮತ್ತು ಪತ್ರಕರ್ತರು ಬಳಸುತ್ತಾರೆ ಮತ್ತು ನಿರ್ದಿಷ್ಟ ವಿಷಯದ ಕುರಿತು ಇತರ ಕಾರ್ಯಕರ್ತರು, ಮಾಧ್ಯಮ ಮತ್ತು ರಾಜಕಾರಣಿಗಳ ಗಮನಸೆಳೆಯಲು ಅದನ್ನು ಉಪಯೋಗಿಸುತ್ತಿದ್ದಾರೆ. ಲಾಭದಾಯಕವಲ್ಲದ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಖರೀದಿ ಮಾಡುವುದು ವ್ಯಾವಹಾರಿಕವಾಗಿ ಕೆಟ್ಟ ಯೋಚನೆಯಂತೆ ಕಾಣಬಹುದು. ಆದರೆ ಇದು ಇಲಾನ್ ಮಸ್ಕ್ ಅವರ ವಿಶಾಲ ವ್ಯಾಪಾರ ತಂತ್ರದೊಂದಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಯಾವ ವ್ಯವಹಾರದಲ್ಲಿ ತಾನು ಆಸಕ್ತಿವಹಿಸಬೇಕು ಎಂದು ಅವರು ಈ ತನಕ ಬಹಳ ಲೆಕ್ಕಾಚಾರ ಹಾಕಿದವರಾಗಿದ್ದಾರೆ. ಅವರು ಸಾಮಾನ್ಯವಾಗಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ, ತನ್ನ ಪೂರೈಕೆ ಜಾಲಕ್ಕೆ ಪೂರಕವಾದ ವ್ಯವಹಾರಗಳನ್ನು ಮಾತ್ರ ಕೊಳ್ಳುತ್ತಾ ಬಂದಿದ್ದಾರೆ. ಖರೀದಿ ಮಾಡಿದ ವ್ಯವಹಾರದ ಲಾಭ ನಷ್ಟವು ಅವರ ಚಿಂತೆಯಾಗಿಲ್ಲ. ಅವರ ಚಿಂತೆಯೆಂದರೆ, ಅಂತಿಮ ಉತ್ಪನ್ನಗಳ ಬೆಲೆಯನ್ನು ಉಳಿದವರಿಗಿಂತ ಕಡಿಮೆ ಮಾಡುವುದು. ಪೂರೈಕೆ ಜಾಲವನ್ನು ನಿಯಂತ್ರಿಸಲು ಸಾಧ್ಯವಾಗುವುದಾದರೆ, ಸೊನ್ನೆ ಲಾಭದ ವ್ಯವಹಾರವನ್ನೂ ಕೊಳ್ಳಲು ಅವರು ಸಿದ್ಧ. ಈ ನಿಯಂತ್ರಣವು ಮುಂದೆ ಅವರಿಗೆ ದೊಡ್ಡ ಲಾಭವನ್ನು ತಂದುಕೊಡುವುದು.
ಇಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯು ಒಂದು ಅತ್ಯುತ್ತಮ ಹೂಡಿಕೆಯಾಗಿದೆ. ಅದು ಅವರ ಕಂಪೆನಿ ಮತ್ತು ಅದರ ಉತ್ಪನ್ನಗಳಿಗೆ ಪ್ರಚಾರ ಒದಗಿಸಿಕೊಡುತ್ತದೆ. ಟ್ವಿಟ್ಟರ್‌ನಲ್ಲಿ ಆಗುವ ವಾದವಿವಾದಗಳು ಮಸ್ಕ್ ವ್ಯಕ್ತಿತ್ವದತ್ತ ಗಮನವನ್ನು ಇನ್ನಷ್ಟು ಆಕರ್ಷಿಸುತ್ತದೆ. ಆಗ ಅವರು ಮಧ್ಯಸ್ಥಿಕೆದಾರನಾಗಿ ಅಥವಾ ಮುಕ್ತ ವಾಕ್ ಸ್ವಾತಂತ್ರ್ಯದ ವಕ್ತಾರನಾಗಿ ತನ್ನ ಇಷ್ಟಕ್ಕೆ ಅನುಸಾರವಾಗಿ ಮಧ್ಯಪ್ರವೇಶ ಮಾಡಬಹುದು. ಈ ಎಲ್ಲಾ ಗಮನವು ವಿಶ್ವದಾದ್ಯಂತ ಅವರ ಬ್ರಾಂಡ್‌ನ ಗುರುತಿಸುವಿಕೆಯನ್ನು ಹೆಚ್ಚಿಸುತ್ತದೆ. ನೀವು ಆತನನ್ನು ಪ್ರೀತಿಸಿ, ಅಥವಾ ದ್ವೇಷಿಸಿ; ಇಲಾನ್ ಮಸ್ಕ್ ಒಬ್ಬ ಶಕ್ತಿಶಾಲಿ, ಪ್ರಭಾವಿ ಮತ್ತು ಲಾಭದಾಯಕ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ.
ಇಲಾನ್ ಮಸ್ಕ್ ಈಗಾಗಲೇ ಗಮನಾರ್ಹವಾದ ಪ್ರಭಾವವನ್ನು ಹೊಂದಿದ್ದಾರೆ. ನೇರ ವಿದೇಶಿ ಹೂಡಿಕೆ ಕಾನೂನುಗಳನ್ನು ಕುಶಲತೆಯಿಂದ ಬಳಸಿಕೊಂಡು ಅವರು ಭಾರತದಲ್ಲಿ ಒಂದು ಬಗೆಯ ಪ್ರತಿಷ್ಠೆಯನ್ನು ಬೆಳೆಸಿಕೊಂಡು, ಗಮನಾರ್ಹವಾದ ಹೂಡಿಕೆಯನ್ನು ಇಲ್ಲಿ ಮಾಡಿದ್ದಾರೆ. ತನ್ನ ಹಿಂದಿನ ವ್ಯವಹಾರದ ಮಾದರಿಯನ್ನು ಅನುಸರಿಸಿದಲ್ಲಿ, ಅವರಿಲ್ಲಿ ತನ್ನ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುವುದರ ಹೊರತಾಗಿ ದೊಡ್ಡ ಲಾಭದ ಕುರಿತು ಚಿಂತೆ ಮಾಡಲಾರರು. ಅವರು ಇಲ್ಲಿನ ಉದ್ಯಮಿ ಸಮುದಾಯ ಮತ್ತು ಸ್ಥಳೀಯ ಸರಕಾರಗಳ ಜೊತೆ ಉತ್ತಮ ಸಂಬಂಧ ಹೊಂದಿರಬೇಕಾಗುತ್ತದೆ. ಮುಕ್ತ ವಾಕ್ ಸ್ವಾತಂತ್ರ್ಯ ಮತ್ತು ಮಧ್ಯಸ್ಥಿಕೆಯ ಕುರಿತ ಚರ್ಚೆಗಳು ಮುಂದುವರಿದಂತೆಲ್ಲಾ ಅವರು ಈ ಎಲ್ಲರನ್ನೂ ಖುಷಿಪಡಿಸಲು ಯತ್ನಿಸುತ್ತಾರೆ. ಬ್ರಾಂಡ್ ಯುಗದ ಒಬ್ಬ ಬಂಡವಾಳಶಾಹಿಯಾಗಿ, ಒಬ್ಬ ದಾರ್ಶನಿಕ ನಾಯಕನಾಗಿ ತನ್ನ ಇಮೇಜಿನ ಜಾಲವನ್ನು ಹರಡುತ್ತಾಹೋಗುತ್ತಾರೆ. ಟ್ವಿಟ್ಟರ್ ಇನ್ನು ಮುಂದೆ ಬೃಹತ್ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಯಂತ್ರಾಂಗದ ಒಂದು ಭಾಗವಾಗಲಿದೆ.
(ಕನ್ನಡಕ್ಕೆ) ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಜಗತ್ತಿನ ಅತಿ ದೊಡ್ಡ ಶ್ರೀಮಂತ ಇಲಾನ್ ಮಸ್ಕ್‌ನ ಫ್ರೀ ಸ್ಪೀಚ್ ವಾದದ ಹುಳುಕು
ಇದನ್ನೂ ಓದಿ: ಸರ್ಕಾರದ 40% ಕಮಿಷನ್ ಭ್ರಷ್ಟಾಚಾರಕ್ಕೆ ಅಮಿತ್ ಶಾ ಅಧಿಕೃತ ಒಪ್ಪಿಗೆ: ಸಿದ್ದರಾಮಯ್ಯ ಟೀಕೆ


