ಕಳೆದ ಆರೇಳು ವರ್ಷದಲ್ಲಿ ಯೂನಿಕೋಡ್ ಫಾಂಟನ್ನು ನುಡಿಗೆ, ನುಡಿ ಫಾಂಟನ್ನು ಯೂನಿಕೋಡಿಗೆ ಬದಲಾಯಿಸಲು ಬಹಳಷ್ಟು ಜನ ಬಳಸುತ್ತಿರುವ ತಂತ್ರಾಂಶವನ್ನು ಅರವಿಂದ ವಿ.ಕೆ ಅವರು ಅಭಿವೃದ್ಧಿಪಡಿಸಿರುವುದು. ಗೂಗಲ್‌ನಲ್ಲಿ ಅರವಿಂದ ವಿ.ಕೆ ಎಂದು ನೀವು ಹುಡುಕಿದರೆ, ಕೆಳಗೆ ಒಂದಷ್ಟು ಕೊಂಡಿಗಳು ತೆರೆದುಕೊಳ್ಳುತ್ತವೆ. ಅದರಲ್ಲಿ ಪರಿಷ್ಕೃತ ತಂತ್ರಾಂಶವಾದ https://aravindavk.in/sanka/ ಲಿಂಕನ್ನು ಒತ್ತಿದರೆ ’ಸಂಕ’ ಆಸ್ಕಿ-ಯುನಿಕೋಡಿಗೆ ಕನ್ನಡದ ಸಂಕ ಎನ್ನುವ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಎರಡು ಖಾಲಿ ಬಾಕ್ಸ್‌ಗಳು ಕಾಣುತ್ತವೆ. ನಿಮಗೆದುರಾಗಿ ಎಡದ ಬಾಕ್ಸ್‌ಗೆ ನುಡಿ/ಬರಹದ ಫಾಂಟ್ ಹಾಕಿ, ಯೂನಿಕೋಡಿಗೂ, ಯೂನಿಕೋಡ್ ಅಂಟಿಸಿ ನುಡಿಗೂ ಕ್ಷಣಾರ್ಧದಲ್ಲಿ ಪಡೆಯಬಹುದು.
ಈ ತಂತ್ರಾಂಶವನ್ನು ನಾನು ದಿನಕ್ಕೆ ಎರಡು ಮೂರು ಬಾರಿಯಾದರೂ ಬಳಸುತ್ತಿದ್ದೆನಾದರೂ ಈ ಅರವಿಂದ್ ಯಾರು? ಎನ್ನುವ ಬಗ್ಗೆ ಯೋಚಿಸಿರಲಿಲ್ಲ. ನಂತರ ಅವರ ಬ್ಲಾಗ್, ಫೇಸ್‌ಬುಕ್‌ನಲ್ಲಿ ಒಂದಷ್ಟು ಮಾಹಿತಿ ಸಂಗ್ರಹಿಸಿ ಫೇಸ್‌ಬುಕ್ ಅಕೌಂಟಲ್ಲಿ ಒಂದು ಸ್ಟೇಟಸ್ ಹಾಕಿದ್ದೆ. ಇದೀಗ ಅರವಿಂದ ಅವರನ್ನು ಮಾತನಾಡಿಸಿ ಒಂದಷ್ಟು ಸಂಗತಿಗಳ ಬಗ್ಗೆ ಚರ್ಚಿಸಿದೆ. ಬರೆಯುವುದಿದ್ದರೆ ಕನ್ವರ್ಟ್ ಟೂಲ್ ಬಗ್ಗೆ ಬರೆಯಿರಿ ನನ್ನ ಬಗ್ಗೆ ಹೆಚ್ಚು ಬರೆಯಬೇಡಿ ಎಂದು ಎಚ್ಚರಿಸಿದರು.
2011 ಮಾರ್ಚ್ 6 ರ ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ’ಮುಕ್ತ ಜಗತ್ತಿಗೆ ಸ್ವಾಗತ’ ಎನ್ನುವ ಲೇಖನ ಬಂದಿತ್ತು. ಆ ಲೇಖನದಲ್ಲಿ ಫ್ರೀ ಸಾಪ್ಟವೇರ್, ಕನ್ನಡದ್ದೇ ತಂತ್ರಾಂಶ ಬರೆಯಲು ಇರುವ ಸಾಧ್ಯತೆಗಳೇನು, ಆ ನಿಟ್ಟಿನಲ್ಲಿ ಏನೇನು ಕೆಲಸಗಳಾಗಿವೆ, ಮುಂತಾದ ಸಂಗತಿಗಳ ಬಗ್ಗೆ ತಂತ್ರಾಂಶದ ಪರಿಭಾಷೆ ಅರಿಯದವರಿಗೂ ಅರ್ಥವಾಗುವಂತೆ ಕನ್ನಡದ ತಂತ್ರಾಂಶದ ಬಿಕ್ಕಟ್ಟನ್ನು ತುಂಬಾ ಸೂಕ್ಷ್ಮವಾಗಿ ಬರೆದಿದ್ದರು. ಈ ಲೇಖನ ಬರೆದವರು ಹಳ್ಳಿಮನೆ ಅರವಿಂದ ಎನ್ನುವವರು. ಹೀಗೆ ಉಚಿತ ತಂತ್ರಾಂಶದ ಥಿಯರಿ ಮತ್ತು ಪ್ರಾಯೋಗಿಕತೆಗೆ ತೆರೆದುಕೊಂಡ ಈ ಹಳ್ಳಿಮನೆ ಅರವಿಂದರೇ ನುಡಿ/ಬರಹ ಫಾಂಟಿಂದ ಯುನಿಕೋಡಿಗೂ, ಯುನಿಕೋಡಿಂದ ನುಡಿ/ಬಹರಕ್ಕೂ ಬದಲಾಯಿಸುವ `ಸಂಕ’ ಉಚಿತ/ಮುಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ ಅರವಿಂದ ವಿ.ಕೆ.
ಶೃಂಗೇರಿಯ ಹತ್ತಿರ ಉತ್ತಮೇಶ್ವರದವರಾದ ಇವರು ಪಿ.ಯು ತನಕ ಶೃಂಗೇರಿಯಲ್ಲಿ ಓದಿದ ನಂತರ ಬೆಂಗಳೂರಿನಲ್ಲಿ ಬಿಇ (ಇಂಡಸ್ಟ್ರಿಯಲ್ ಇಂಜಿನೀರಿಂಗ್ ಆಂಡ್ ಮ್ಯಾನೇಜ್ಮೆಂಟ್)ಪದವಿ ಪಡೆದವರು. ಬೆಂಗಳೂರಿನಲ್ಲಿ ಇದೀಗ ತಮ್ಮದೇ ’ಕಡಲು’ ಎನ್ನುವ ಸಾಪ್ಟ್ವೇರ್ ಕಂಪನಿಯನ್ನು ನಿರ್ವಹಿಸುತ್ತಿದ್ದು, ಓಪನ್ ಸೋರ್ಸ್ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದೆ ಇಂತಹದ್ದೇ ಹಿನ್ನೆಲೆಯ ರೆಡ್ ಹ್ಯಾಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಯುನಿಕೋಡಿಗೆ ’ಗುಬ್ಬಿ’ ಮತ್ತು ’ನವಿಲು’ ಎನ್ನುವ ಎರಡು ಫಾಂಟ್‌ಗಳನ್ನು ಕನ್ನಡಕ್ಕಾಗಿ ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿದ್ದಾರೆ. ನವಿಲು ಫಾಂಟ್ ಕೈಬರಹದ ಮಾದರಿಯದು.
ಗೂಗಲ್ ಅನಾಲಿಸಸ್ ಪ್ರಕಾರ ಪ್ರತಿದಿನ ಮೂರು ಸಾವಿರದಿಂದ 3500 ಬಾರಿ ’ಸಂಕ’ ಟೂಲಿನ ಉಪಯೋಗ ಪಡೆಯುತ್ತಾರೆ. ಅಂದರೆ ತಿಂಗಳಿಗೆ ಕನಿಷ್ಠ ಒಂದು ಲಕ್ಷದಷ್ಟು ಬಾರಿ ಈ ಟೂಲ್ ಉಚಿತವಾಗಿ ಬಳಕೆಯಾಗುತ್ತದೆ. ಇಂತಹ ಟೂಲ್ ಅರವಿಂದ್ ಅವರು ಯಾಕಾಗಿ ಮಾಡಿದರು ಎನ್ನುವುದನ್ನು ಅವರು ಸಹಜವಾಗಿ ವಿವರಿಸುತ್ತಾರೆ. ನಾನೊಂದು ಕತೆ ಬರೆದಿದ್ದೆ, ಅದು ASCII (American Standard Code for Information Interchange) ಫಾರ್ಮೆಟ್‌ನಲ್ಲಿತ್ತು. ಅದನ್ನು ಯೂನಿಕೋಡ್‌ಗೆ ಕನ್ವರ್ಟ್ ಮಾಡಬೇಕಿತ್ತು. ಸಾಫ್ಟವೇರ್‌ಗಾಗಿ ಹುಡುಕಿದೆ, ಸಿಗಲಿಲ್ಲ. ನಾನಾವಾಗ Linux ಬಳಸುತ್ತಿದ್ದೆ. ಕನ್ವರ್ಟರ್ ಸಿಗದೇ ಇರುವಾಗ ನಾನೇ ಯಾಕೆ ಕನ್ವರ್ಟರ್ ಮಾಡಬಾರದು ಎಂದು ಅನಿಸಿತು. ಪ್ರತಿಯೊಂದು ಎನ್ಕೋಡಿಂಗ್ ನೋಡಿಕೊಂಡು ನಾನೇ ಕನ್ವರ್ಟರ್ ಸಿದ್ಧಪಡಿಸಿದೆ.
ಈ ಸೌಲಭ್ಯವನ್ನು ಎಲ್ಲರಿಗೂ ಯಾಕೆ ಕಲ್ಪಿಸಬಾರದು ಎಂದು ಯೋಚಿಸಿ ಅದನ್ನೇ ನನ್ನ ಬ್ಲಾಗ್ ನಲ್ಲಿ ಹಾಕಿದೆ. ವೆಬ್ ನಲ್ಲಿ ಹುಡುಕಿದಾಗ ನನ್ನ ಬ್ಲಾಗ್ ಸಿಗುತ್ತಿತ್ತು. ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಕನ್ವರ್ಟರ್ ಬಳಸಿದ ಜನರು ಇಮೇಲ್ ಮಾಡುತ್ತಿದ್ದರು. ಕನ್ವರ್ಟ್ ಮಾಡುವಾಗ ಕೆಲವೊಂದು ಅಕ್ಷರಗಳು ಸರಿಯಾಗಿ ಬರುವುದಿಲ್ಲ, ತಪ್ಪುಗಳು ಗಮನಕ್ಕೆ ಬಂದಾಗ ತಿದ್ದಿದ್ದೇನೆ ಎನ್ನುತ್ತಾರೆ.
ಇಂಥಹದ್ದೊಂದು ವೆಬ್ ಆಪ್ ನಿರ್ವಹಣೆ ಮಾಡೋಕೆ ಪ್ರತಿ ವರ್ಷ ಒಂದಷ್ಟು ಖರ್ಚು ಮಾಡಬೇಕು. ಅದನ್ನೆಲ್ಲಾ ಅವರೇ ಸ್ವಂತ ಹಣದಲ್ಲಿ ಭರಿಸುತ್ತಾರೆ. ಸಂಕ ಕನ್ವರ್ಟ್ ಟೂಲ್ ಬಳಕೆಯಿಂದ ಕನ್ನಡಿಗರಿಗೆ ಅಪಾರ ಸಹಾಯವಾಗುವುದನ್ನು ಅರಿತು ವಾರ್ತಾ ಇಲಾಖೆ ಅರವಿಂದ್ ಅವರ ಬಗೆಗೆ ಒಂದು ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ. ಇದಿನ್ನೂ ಬಿಡುಗಡೆಯಾಗಿಲ್ಲ.
ಕನ್ನಡದಲ್ಲಿ ತಂತ್ರಜ್ಞಾನದ ತಿಳಿವನ್ನು ಸರಳವಾಗಿ ವಿವರಿಸುವ ಸೂಕ್ಷ್ಮ ಪತ್ರಕರ್ತರಾದ ಎನ್. ಎ. ಎಮ್. ಇಸ್ಮಾಯಿಲ್ ಅವರು ಓಪನ್‌ಸೋರ್ಸ್ ಮತ್ತು ಅರವಿಂದ ವಿ. ಕೆ ಅವರ ಬಗ್ಗೆ ’ಫ್ರೀ ಸಾಫ್ಟ್ವೇರ್ ಮತ್ತು ಓಪನ್ ಸೋರ್ಸ್ ತಾತ್ವಿಕತೆಯಲ್ಲಿ ಕೆಲಸ ಮಾಡುವವರೆಲ್ಲಾ ಯಾರೂ ಜಾಹೀರಾತು ಮತ್ತು ಹಣದ ಹಿಂದೆ ಬೀಳುವುದಿಲ್ಲ. ತಮ್ಮ ಜ್ಞಾನದ ಬೆಳವಣಿಗೆಯಲ್ಲಿ ಸಮುದಾಯದ ಪಾಲಿದೆ. ನಾವು ಅಭಿವೃದ್ಧಿಪಡಿಸಿದ್ದು ಸಮುದಾಯಕ್ಕೂ ದೊರೆಯಬೇಕು ಎಂಬುದು ಅವರ ಗುಣ. ಅರವಿಂದ ಕೂಡಾ ಹೀಗೆಯೇ ನಡೆದುಕೊಂಡಿದ್ದಾರೆ. ಅವರ ಕನ್ವರ್ಷನ್ ವೆಬ್ ಆಪ್‌ನ ಸಂಪೂರ್ಣ ಸೋರ್ಸ್ ಕೋಡ್ ಉಚಿತವಾಗಿ ಮತ್ತು ಮುಕ್ತವಾಗಿ ಲಭ್ಯವಿದೆ. ಜ್ಞಾನವನ್ನು ಹಂಚಿಕೊಳ್ಳುತ್ತಾ ಅದನ್ನು ಹೆಚ್ಚಿಸುವ ಪ್ರಯತ್ನ ಇದು. ಸರಳವಾಗಿ ಹೇಳುವುದಾದರೆ ಚಕ್ರವನ್ನು ಕಂಡುಹಿಡಿದವರು ಅದಕ್ಕೆ ಕಾಪಿರೈಟ್ ಅಥವಾ ಪೇಟೆಂಟ್ ಮಾಡಿ ರಾಯಲ್ಟಿ ಪಡೆಯುತ್ತಿದ್ದರೆ ತಂತ್ರಜ್ಞಾನ ಇಷ್ಟೊಂದು ಅಭಿವೃದ್ಧಿಯಾಗುತ್ತಿತ್ತೇ? ಅರವಿಂದ್ ತಮ್ಮ ಜ್ಞಾನವನ್ನು ಬಳಸಿ ಏನನ್ನೇ ಮಾಡಿದರೂ, ಅದನ್ನವರು ಮುಕ್ತವಾಗಿ ಇಡುವ ಮೂಲಕ ಮತ್ತಷ್ಟು ಅಭಿವೃದ್ಧಿಯನ್ನು ಸಮುದಾಯ ಮಾಡಲಿ ಎಂದು ಭಾವಿಸಿದವರು. ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಒಬ್ಬರು ಸಮಾಜಕ್ಕೆ ಹಿಂದಿರುಗಿಸುವ ಬಗೆಯಿದು’ ಎನ್ನುತ್ತಾರೆ.
Linux ಮುಕ್ತ ತಂತ್ರಾಂಶ ಜತೆಗೆ ಟ್ರೆಕಿಂಗ್, ವೆಬ್ ಡೆವೆಲಪ್ಮೆಂಟ್, ಬ್ಲಾಗಿಂಗ್, ಫೋಟೋಗ್ರಫಿಯಂತಹ ಇಷ್ಟದ ಹವ್ಯಾಸಗಳ ಜತೆಗೆ ಸಂಗಾತಿ ಚಿನ್ಮಯಿ ಮಗಳು ಇಂಪನಾ ಜತೆ ಬೆಂಗಳೂರಿನಲ್ಲಿ ನೆಲೆಸಿದ ಅರವಿಂದ ವಿ.ಕೆ ಅವರಿಗೆ ಕನ್ನಡಿಗರ ಪರವಾಗಿ ಪತ್ರಿಕೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ನುಡಿ/ಬರಹ-ಯುನಿಕೋಡ್ ಬದಲಾಯಿಸುವ ತಂತ್ರಾಂಶದ ಲಿಂಕ್: https://aravindavk.in/sanka/
ಅರವಿಂದ ವಿ.ಕೆ ಅವರನ್ನು ಸಂಪರ್ಕಿಸುವ ಇಮೇಲ್: [email protected]
ಇದನ್ನೂ ಓದಿ: ಮಾದರಿ ಪಿಡಿಓ ಡಾ. ಶೋಭಾರಾಣಿ : ಅರುಣ್ ಜೋಳದ ಕೂಡ್ಲಿಗಿ



ನುಡಿ/ಬರಹ-ಯುನಿಕೋಡ್ ಬದಲಾಯಿಸುವ ಉಚಿತ/ಮುಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ ಅರವಿಂದ ವಿ.ಕೆ. ಅವರ ಕೊಡುಗೆ ಪ್ರಶಂಸಾರ್ಹ. ಅವರ ಪರಿಚಯ ನೀಡಿದ ತಮಗೆ ಧನ್ಯವಾದಗಳು.
Aravind mobile no plz
ಅರವಿಂದ್ ಅವರಿಗೆ ವಿಶ್ವದ ಸಮಸ್ತ ಕನ್ನಡಿಗರು ಸದಾ ಕೃತಜ್ಞರಾಗಿರುತ್ತಾರೆ.
– 9148391546
ಶ್ರೀಯುತ ಅರವಿಂದ್ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು, ತಾವು ಸೃಷ್ಟಿಸಿದ ಅದ್ಬುತ ಈ-ಬರವಣಿಗೆ ಇಂದ ನನಗೆ ಕಛೇರಿ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗಿದೆ.