Homeಅಂಕಣಗಳುಬೆಂಗಳೂರು ಭೇಲ್1: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್ 

ಬೆಂಗಳೂರು ಭೇಲ್1: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್ 

ಸಿಲಿಕಾನ್ ಸಿಟಿಯ ಶ್ರೀಮಂತರಿಗೆ ಅವರ ಧ್ವನಿ ಏರಿಸಲು ಟ್ವಿಟರ್ ಇದೆ, ಅವರ ಪರ ವಾದ ಮಾಡಲು ದೊಡ್ಡ ವಕೀಲರಿದ್ದಾರೆ, ಅರಚುವ ಮಾಧ್ಯಮಗಳು ಇವೆ. ತಂತ್ರಜ್ಞಾನದಿಂದ ಸಮಸ್ಯೆಗೆ ಸಿಲುಕಿರುವ ದುಡಿಯುವ ವರ್ಗದ ಧ್ವನಿ ಕೇಳುವವರಾರು?

- Advertisement -
- Advertisement -

ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ #righttolearn ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಅದನ್ನು ಟ್ರೆಂಡ್ ಮಾಡಿದವರು ಶಿಕ್ಷಣದ ಹಕ್ಕಿನ ವಿಷಯಕ್ಕೆ ಬಂದಾಗ ಅವರು ಎಲ್ಲರ ಶಿಕ್ಷಣದ ಬಗ್ಗೆ ಮಾತುನಾಡುತ್ತಿದ್ದಾರೆ ಅಂದುಕೊಂಡಿರಾ, ಹುಷಾರ್.

ಈ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಹಿಂದೆ ಕತೆ ಹೀಗಿದೆ. ಕೋವಿಡ್ ಸೋಂಕಿನಿಂದಾಗಿ ಯಾವ ಶಾಲೆಯು ತೆಗೆದಿಲ್ಲ. ಹಾಗಂದ ಮಾತ್ರಕ್ಕೆ ಪಾಠ ಮಾಡುತ್ತಿಲ್ಲ ಅಂತಲ್ಲ, ಶುಲ್ಕ ಪಾವತಿಸಿಕೊಂಡಿಲ್ಲ ಅಂತಲ್ಲ! ಶಾಲೆಗಳನ್ನು ವರ್ಚುವಲ್ ಮೋಡ್ ನಲ್ಲಿ ಪ್ರಾರಂಭ ಮಾಡಿ, ಶುಲ್ಕ ಪಾವತಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದರು. ಎಲ್.ಕೆ.ಜಿ, ಯು.ಕೆ.ಜಿಗು ಸಹ ಆನ್ ಲೈನ್ ಪಾಠ ಮಾಡುತಿದ್ದರು. ಈ ಆನ್ ಲೈನ್ ಪಾಠಗಳಿಂದ ಮಕ್ಕಳ  ಆರೋಗ್ಯಕ್ಕೆ ತೊಂದರೆ ಆಗುತ್ತಿದೆ ಎಂದು ಕೆಲವು ಪೋಷಕರು ಸರ್ಕಾರಕ್ಕೆ ದೂರು ನೀಡಿದ್ದರು ಹಾಗು ಆನ್ ಲೈನ್ ಪಾಠದ ಹೆಸರಿನಲ್ಲಿ ಹೆಚ್ಚು ಶುಲ್ಕವನ್ನು ಪಾವತಿಸಿಕೊಳ್ಳುತಿದ್ದಾರೆ ಎಂದು ಸಹ ದೂರಿದ್ದರು. ಈ ದೂರುಗಳನ್ನು ಪರಿಶೀಲಿಸಿದ ಸರ್ಕಾರ ಕೆಲ ಪೋಷಕರೊಂದಿಗೆ, ಶಿಕ್ಷಣದ ತಜ್ಞರೊಂದಿಗೆ ಹಾಗು ಖಾಸಗಿ ಶಾಲಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ, ಎಲ್ ಕೆ ಜಿ ಯಿಂದ 5ನೇ ತರಗತಿಯವರೆಗೆ ಆನ್ ಲೈನ್ ಪಾಠ ನಿಷೇಧಿಸಿ, 6ನೇ ತರಗತಿಯಿಂದ 10ನೇ ತರಗತಿಯವರಿಗೆ ತಂತ್ರಜ್ಞಾನ ಸೂಕ್ತವಾಗಿ ಅಳವಡಿಸಿಕೊಂಡು ಹೇಗೆ ಪಾಠ ಮಾಡಬಹುದು ಎಂದು ಶಿಫಾರಸ್ಸುಗಳನ್ನು ನೀಡಲು ಒಂದು ತಜ್ಞರ ಸಮಿತಿ ರಚಿಸಿತು.

ಈ ನಿಷೇಧದಿಂದ ರೋಷಗೊಂಡ ಅನೇಕ ಮೇಲ್ವರ್ಗದ ಪೋಷಕರು, ಸರ್ಕಾರದ ಈ ಆದೇಶ ವಿರುದ್ಧ ಉಚ್ಛ ನ್ಯಾಯಾಲಯದ ಮೆಟ್ಟಲೇರಿದರು. ಟ್ವಿಟ್ಟರ್ ನಲ್ಲಿ #righttolearn ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿದರು. ನಮ್ಮ ಹಕ್ಕನ್ನು ಏಕೆ ಕಿತ್ತುಕೊಳ್ಳುತಿದ್ದಿರಿ ಎಂದು ವಾದಿಸಿದರು. ಮಾಧ್ಯಮಗಳಲ್ಲೂ ಇದೇ ದೊಡ್ಡ ವಿಷಯವಾಯಿತು.

ಇದೆಲ್ಲರ ಮಧ್ಯೆ ಆನ್ ಲೈನ್ ಪಾಠದಿಂದ ಬಡವರಿಗೆ ಯಾವ ರೀತಿಯ ತೊಂದರೆಯಾಗುತ್ತದೆ ಎಂದು ಸರ್ಕಾರ ಅಥವಾ ಈ ಮೇಲ್ವರ್ಗದ  ಪೋಷಕರು ಯೋಚಿಸಿಲ್ಲ. ಸರ್ಕಾರಿ ಶಾಲೆಗಳಲ್ಲಿ ಏನಾಗುತ್ತಿದೆ ಎಂದು ಯಾರು ಯೋಚಿಸಿಲ್ಲ.

ಆನ್  ಲೈನ್ ನಿಷೇಧದ ಪರ ವಿರೋಧದ ಗದ್ದಲದ ಮಧ್ಯೆ ಶಿಕ್ಷಣ ಕ್ಷೇತ್ರದ ಮೂಲ ಸಮಸ್ಯೆ  ಬಗ್ಗೆ ಯಾರೂ ಯೋಚಿಸುತ್ತಿಲ್ಲ.  ಈ ಆನ್ ಲೈನ್ ಪಾಠಗಳಿಂದ ನಮ್ಮ ಸಮಾಜದಲ್ಲಿದ್ದ ಅಸಮಾನತೆ ಇನ್ನೂ ಹೆಚ್ಚುತ್ತಿದೆ. ಅದು ಹೇಗೆ ಎಂದು ಕೇಳುತ್ತೀರಾ? ವಿಷಯ ಹೀಗಿದೆ ನೋಡಿ:

ಆನ್ ಲೈನ್ ಕ್ಲಾಸ್ ಅಂದರೆ ಜೂಮ್  ಆಪ್ ಅಥವಾ ಮೈಕ್ರೋಸಾಫ್ಟ್ ಕಂಪನಿಯ ಕೆಲ ಆಪ್ ಗಳು ಅಥವಾ  ಇನ್ಯಾವುದೋ ಆಪ್ ಗಳ  ಮೂಲಕ ಶಿಕ್ಷಕರು ಹಾಗು ಮಕ್ಕಳು ಒಂದೇ ವರ್ಚುವಲ್ ತರಗತಿಗೆ ಬಂದು ಅಲ್ಲಿ ಪಾಠ ಮಾಡಲಾಗುವುದು.  ಈ ರೀತಿಯ ಬೋಧನೆಯಲ್ಲಿ  ಬಡ ಕುಟುಂಬದ ಮಕ್ಕಳು ಭಾಗವಹಿಸಿಕೆ ಕಡಿಮೆ ಇದೆ. ಅದಕ್ಕೆ ಹಲವಾರು ಕಾರಣಗಳಿವೆ.

ಇದರ ಬಗ್ಗೆ ಕಳೆದ ಕೆಲವು ದಿವಸಗಳಿಂದ, ಅನೇಕ ಪೋಷಕರೊಂದಿಗೆ ಮಾತನಾಡಿದೆ. ಅವರು ಎದುರಿಸತ್ತಿರುವ ಸಮಸ್ಯೆಗಳನ್ನು ಕೇಳಿ ಬಹಳ ನೋವಾಗಿದೆ. ಇದು ಡಿಜಿಟಿಲ್ ಇಂಡಿಯಾ –  ಸಿಲಿಕಾನ್ ಸಿಟಿ ಆಗಿರಬಹುದು ಆದರೆ ಇಲ್ಲಿ  ತಂತ್ರಜ್ಞಾನ  ಬಳಿಕೆ ಕೆಲವರಿಗೆ  ಮಾತ್ರ ಸೀಮಿತವಾಗಿದೆ. ಬಡ ಕುಟುಂಬಗಳು ಎಂದಿಗೂ ಲ್ಯಾಪ್ ಟಾಪ್ ಹೊಂದಿರಲಿಲ್ಲ. ಕೆಲವರ ಬಳಿ ಸ್ಮಾರ್ಟ್ ಫೋನ್ ಇದೆ. ಆದರೆ ಅದು ಸಹ ಹಲವರ ಬಳಿ ಇಲ್ಲ. ಎಷ್ಟೋ ಜನ ಬಡವರು ಬಳಿ ಸ್ಮಾರ್ಟ್ ಫೋನ್ ಸಹ ಇಲ್ಲದೆ, ಆನ್ ಲೈನ್ ಕ್ಲಾಸ್ ಅಲ್ಲಿ ಭಾಗವಹಿಸಲು ಸಾಧ್ಯವಿಲ್ಲವೆಂದು ಮಕ್ಕಳನ್ನು ಶಾಲೆಗೆ ಸೇರಿಸಿಯೇ ಇಲ್ಲ. ಇದರಿಂದ ಡ್ರಾಪ್ ಔಟ್ ಸಂಖ್ಯೆ ಜಾಸ್ತಿ ಆಗುತ್ತಿದೆ.

ಸ್ಮಾರ್ಟ್ ಫೋನ್ ಇರುವ ಕುಟುಂಬಗಳಿಗೆ ಸಮಸ್ಯೆ ಇಲ್ಲ ಎಂದು ಊಹಿಸಿಬೇಡಿ, ಅವರಿಗೂ ಹಲವಾರು ಸಮಸ್ಯೆಗಳಿವೆ. ಕೆಲ ಕುಟುಂಬಗಳಲ್ಲಿ  ಒಂದೇ ಸ್ಮಾರ್ಟ್ ಫೋನ್ ಇದೆ ಆದರೆ ಇಬ್ಬರು ಮಕ್ಕಳಿದ್ದಾರೆ. ಹಾಗಾಗಿ ಒಂದೇ ಮಗುವಿಗೆ ಕ್ಲಾಸ್ ಅಲ್ಲಿ ಭಾಗವಹಿಸಲು ಸಾಧ್ಯ . ಕೆಲ  ಕುಟುಂಬದಲ್ಲಿ ಪೋಷಕರಿಬ್ಬರು ಕೆಲಸಕ್ಕೆ ಹೋಗಬೇಕು,  ಆಗ ಫೋನ್ ಮನೇಲೆ ಬಿಟ್ಟು ಕೆಲಸಕ್ಕೆ ಹೋಗಲು  ಕಷ್ಟ – ಎರಡನೇ ಫೋನ್ ಇರುವುದಿಲ್ಲ. ಮತ್ತೊಂದು ಸಮಸ್ಯೆ ಮೇಲ್ವಿಚಾರಣೆ ಇಲ್ಲದೆ ಮಕ್ಕಳನ್ನು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡು ಎನ್ನಲಿಕ್ಕೆ ಹಿಂಜರಿಕೆ – ಅವರು ಬೇರೆ ಏನೇನೋ ನೋಡಬಹುದು, ಅಥವಾ ಅವರಿಗೆ ಅರ್ಥ ಆಗದೆ ಇರಬಹುದು ಎಂಬ ಆತಂಕಗಳು.

ಮತ್ತೆ ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ; ಕೋವಿಡ್ ಹಾಗು ಲಾಕ್ ಡೌನ್ ನ ನಂತರ, ದುಡಿಯುವ ವರ್ಗದ  ಹಲವಾರು ಜನರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಒಂದು ಸ್ಮಾರ್ಟ್ ಫೋನ್ ಕೊಳ್ಳಲು ಸಾಧ್ಯವಿಲ್ಲ, ಶಾಲೆ ಶುಲ್ಕ ಪಾವತಿಸಲು ಕೂಡ ಸಾಧ್ಯವಾಗುತ್ತಿಲ್ಲ.

ಹೋಗಲಿ ಇಷ್ಟೆಲ್ಲಾ ಸಮಸ್ಯೆ ದಾಟಿ ಸ್ಮಾರ್ಟ್ ಫೋನ್ ಒಂದನ್ನು ಮಕ್ಕಳ ಕೈಯಿಗೆ ತಲುಪಿಸಿದರೆ ಅಲ್ಲಿಗೆ ಕಥೆ ಮುಗಿಯಿತೇ? ಇಲ್ಲ. ಅವರ ಎದುರು ಇರುವ ಮುಂದಿನ ಸವಾಲು – ಇಂಟರ್ನೆಟ್.  ಕೆಲವು ಪ್ರದೇಶದಲ್ಲಿ ನೆಟ್ ವರ್ಕ್ ಸರಿಯಿಲ್ಲ, ಹಾಗಾಗಿ ಕ್ಲಾಸ್ ಅಟೆಂಡ್ ಮಾಡಲು ಆಗುತ್ತಿಲ್ಲ. ಡ್ಯಾಟಾ ಪ್ಯಾಕ್ ಗೆ ಸಹ ಸುಮಾರು ಹಣ ವೆಚ್ಚುವಾಗುತಿದೆ.  ಇದು ಸಹ ಸಮಸ್ಯೆ ಏಕೆಂದರೆ ಆಗಲೇ ಹೇಳಿದ ಹಾಗೆ ಊಟಕ್ಕೆ, ಬಾಡಿಗೆಗೆ ಸಮಸ್ಯೆ ಇರುವಾಗ ಇನ್ನು ಡ್ಯಾಟಾ  ಪ್ಯಾಕ್ ಗೆ ಎಲ್ಲಿ ದುಡ್ಡು ಇರುತ್ತದೆ?

ಈ ಸವಾಲನ್ನು ಎದುರಿಸಿ, ಇಂಟರ್ ನೆಟ್ ಸಹ ಪಡೆದು ಪಾಠ ಕೇಳೋಣಾ ಎಂದು ಕುಳಿತರೆ ಅಲ್ಲಿಗೆ ಸಮಸ್ಯೆ ಮುಗಿಯದು.   ಎಷ್ಟೋ ಪೋಷಕರಿಗೆ  ತಂತ್ರಜ್ಞಾನ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ. ಜೂಮ್ ಆಪ್ ಅಥವಾ ಇತರೆ ಆಪ್ ಗಳಲ್ಲಿ ಸಮಸ್ಯೆ ಆದಾಗ ಅದನ್ನು ನಿವಾರಿಸಲು ಗೊತ್ತಾಗುತ್ತಿಲ್ಲ. ಕೆಲವು ಮಕ್ಕಳಿಗೆ ಆನ್ ಲೈನ್ ಪಾಠ ಹೆಚ್ಚು ಅರ್ಥವಾಗುತ್ತಿಲ್ಲ  ಹಾಗು ಅವರ ಪ್ರಶ್ನೆಗೆ ಉತ್ತರ ಕೊಡಲು ಶಿಕ್ಷಕರನ್ನು ಪ್ರತ್ಯೇಕವಾಗಿ ಮಾತನಾಡಿಸಲು ಆಗುತ್ತಿಲ್ಲ.

ಒಟ್ಟಾರೆ ಈ ಆನ್ ಲೈನ್ ಬೋಧನೆ, ಕಲಿಕೆಗೆ ದೊಡ್ಡ ಸಮಸ್ಯೆಯಾಗಿದೆ. ದುಡಿಯುವ ವರ್ಗದ  ಮಕ್ಕಳು ಶಿಕ್ಷಣದಲ್ಲಿ ಹಿಂದೆ ಬೀಳುತ್ತಿದ್ದಾರೆ.

ಈ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಮಾತು ನೆನಪಾಗುತ್ತದೆ

“The growth of education if it is confined to one class, will not necessarily  lead to liberalism. It may lead to the justification and conservation of
class interest; and instead of creating the liberators of the down-trodden,  it may create champions of the past and the supporters of the status
quo.”

– Dr. B.R. Ambedkar, 1919

ಶಿಕ್ಷಣದ ಅಭಿವೃದ್ಧಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾದರೆ, ಅದು ಉದಾರೀಕರಣಕ್ಕೆ ದಾರಿ ಮಾಡಿಕೊಡದೆ ಹೋಗಬಹುದು. ಅದು ವರ್ಗ ಹಿತಾಸಕ್ತಿಯನ್ನು ಸಂರಕ್ಷಿಸಲು ಮತ್ತು ಸಮರ್ಥಿಸಿಕೊಳ್ಳಲು ಬಳಕೆಯಾಗುತ್ತದೆ; ಶೋಷಿತರ ಮುಕ್ತಿ ಗಳಿಸುವ ಬದಲು  ಈಗಾಗಲೇ ಇರುವ ಅಸಾಮಾನತೆಯನ್ನು ಹಾಗು ವರ್ಗ ತಾರತಮ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು.

ಇದಕ್ಕೆ ನಾವು ಅವಕಾಶ ಮಾಡಬಾರದು. ಸರ್ಕಾರ ಕೂಡಲೇ ಎಲ್ಲರಿಗು ಶಿಕ್ಷಣ ತಲುಪುವಂತೆ,  ಅಸಮಾನತೆ ಕಡಿಮೆಯಾಗುವಂತೆ ಮಾಡುವುದು ಹೇಗೆ ಎಂದು ನೋಡಬೇಕು. ಪಕ್ಕದ ರಾಜ್ಯವಾದ  ಕೇರಳದಲ್ಲಿ ಟಿ.ವಿ ಮೂಲಕ ಪಾಠ ಮಾಡುತ್ತಿದ್ದಾರೆ. ಆ ರೀತಿಯ ಪರಿಹಾರಗಳನ್ನು ನಾವು ಗುರುತಿಸಬಹುದೇ?

ಸಿಲಿಕಾನ್ ಸಿಟಿಯ ಶ್ರೀಮಂತರಿಗೆ ಅವರ ಧ್ವನಿ ಏರಿಸಲು ಟ್ವಿಟರ್ ಇದೆ, ಅವರ ಪರ ವಾದ ಮಾಡಲು ದೊಡ್ಡ ವಕೀಲರಿದ್ದಾರೆ, ಅರಚುವ ಮಾಧ್ಯಮಗಳು ಇವೆ. ತಂತ್ರಜ್ಞಾನದಿಂದ ಸಮಸ್ಯೆಗೆ ಸಿಲುಕಿರುವ ದುಡಿಯುವ ವರ್ಗದ ಧ್ವನಿ ಕೇಳುವವರಾರು?

– ಈ ಅಂಕಣದ ಲೇಖಕರಾದ ವಿನಯ್ ಕೂರಗಾಯಲ ಶ್ರೀನಿವಾಸ,ರವರು ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು


ಇದನ್ನೂ ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ನಾವು ಬ್ಯಾಲೆಟ್‌ ಪೇಪರ್‌ಗೆ ಹಿಂತಿರುಗಬಹುದು..’: ಸುಪ್ರೀಂ ಮುಂದೆ ವಾದಿಸಿದ ಪ್ರಶಾಂತ್ ಭೂಷಣ್

0
ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವವರಿಗೆ ಯಾವುದೇ ಕಠಿಣ ಶಿಕ್ಷೆಗೆ ಅವಕಾಶವಿಲ್ಲ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಖನ್ನಾ, "ಇದು ಗಂಭೀರವಾಗಿದೆ; ಶಿಕ್ಷೆಯ ಭಯ ಇರಬೇಕು" ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದರು. ವಿವಿಪ್ಯಾಟ್ ವ್ಯವಸ್ಥೆಯ ಮೂಲಕ ರಚಿಸಲಾದ...