ಅರ್ನಾಬ್ ಚೀತ್ಕರಿಸುತಿದ್ದದ್ದು ಘಟನೆಯನ್ನು ಖಂಡಿಸುವುದಕ್ಕಲ್ಲ. ಸತ್ತುಹೋದ ಅಮಾಯಕ ವ್ಯಕ್ತಿಗಳ ಕುರಿತಾಗಿ ಮರುಕ ವ್ಯಕ್ತಪಡಿಸುವುದಕ್ಕಲ್ಲ. ಘಟನೆಯ ಹಿಂದಿರುವ ಅರಾಜಕತೆಯನ್ನು ವಿಶ್ಲೇಷಣೆ ನಡೆಸುವುದಕ್ಕಲ್ಲ. ಹಾಗಾದರೆ ಮತ್ಯಾಕೆ? ಅದ್ಹೇಗೋ ಅಂದು ಆ ವ್ಯ್ವಕ್ತಿಗಳನ್ನು ಸಾಯಬಡಿದ ಮಂದಿ ಮುಸ್ಲಿಮರು ಎಂಬ ಗಾಳಿ ಸುದ್ದಿಯೊಂದು ಘಟನೆ ನಡೆದ ತತ್ ಕ್ಷಣ ಹುಟ್ಟಿಕೊಂಡು ದೇಶಾದ್ಯಂತ ಹರಡಿತ್ತು. ಅರ್ನಾಬ್‍ಗೆ ಬೇಕಾದ ಸುದ್ದಿಯೊಂದು ಸಿಕ್ಕಿಬಿಟ್ಟಿತು. ಆ ಸುದ್ದಿಯನ್ನು ಅರ್ನಾಬ್‍ಗೆ ಇನ್ನೂ ಅಪ್ಯಾಯಮಾನಗೊಳಿಸಿದ್ದು ಏನು ಎಂದರೆ ಕೊಲ್ಲಲ್ಪಟ್ಟ ಮೂವರಲ್ಲಿ ಈರ್ವರು ಕಾವಿ ಪೋಷಾಕು ಧರಿಸಿದ ಹಿಂದೂ ಸಾಧುಗಳಾಗಿದ್ದರು ಎನ್ನುವುದು.
ರಿಪಬ್ಲಿಕ್ ಟಿವಿ ಹೋದ ವಾರ ಒಂದು ಸಾಯಂಕಾಲ ಈ ಚಾನೆಲ್‍ನ ಎಲ್ಲವೂ ಆಗಿರುವ ಅರ್ನಾಬ್ ಗೋಸ್ವಾಮಿಯವರ ಹಾರಾಟ ಚೀರಾಟ ಜೋರಾಗಿತ್ತು. ‘ಎಲ್ಲಿ ಹೋಗಿದ್ದಾರೆ ಈ ದೇಶದ ಬುದ್ಧಿ ಜೀವಿಗಳು? ಎಲ್ಲಿ ಅಡಗಿದ್ದಾರೆ ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿಗಳು? ಎಲ್ಲಿದ್ದಾರೆ ಪ್ರಗತಿಪರರು?’ ಎಂದು ತಾರಕಸ್ವರದಲ್ಲಿ ಅವರು ಕೂಗಾಡುತಿದ್ದರು. ಎಲ್ಲಾ ‘ಸಿಕ್ಯುಲರ್’ ಮಂದಿಯ ಬಣ್ಣ ಈಗ ಬಯಲಾಗಿದೆ ನೋಡಿ ಅಂತ ತೀರ್ಪು ನೀಡುತಿದ್ದರು. ಅವರು ಸ್ಟುಡಿಯೋದಲ್ಲಿ ಸಾಲುಸಾಲಾಗಿ ತಂದು ಕುಳ್ಳಿರಿಸಿದ್ದ ಬಹುತೇಕ ಪ್ಯಾನೆಲಿಸ್ಟ್‍ಗಳು ಒಪ್ಪಿ ತಲೆದೂಗುತ್ತಿದ್ದರು, ಅಥವಾ ಅರ್ನಾಬ್ ಹೇಳಿದ್ದನ್ನೇ ಬೇರೆ ಬೇರೆ ಪದಗಳನ್ನು ಬಳಸಿ ಪುನಾರಾವರ್ತಿಸುತಿದ್ದರು.
ಅರ್ನಾಬ್ ಗೋಸ್ವಾಮಿಯವರ ಚರ್ಚಾಪ್ರಕೋಪ ಸ್ಫೋಟಿಸಲು ಕಾರಣವಾದದ್ದು ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೂವರು ವ್ಯಕ್ತಿಗಳನ್ನು ಸ್ಥಳೀಯ ಮಂದಿ ಗುಂಪುಸೇರಿ ಥಳಿಸಿ ಕೊಂದು ಹಾಕಿದ ಧಾರುಣ ಘಟನೆ. ಮತ್ತೆ ಅದೇ ಹಳೆಯ ಕತೆ. ಅದ್ಯಾವುದೋ ಕಾರಣಕ್ಕೆ ಸ್ಥಳೀಯರು ಕಾರಿನಲ್ಲಿ ಆ ಹಳ್ಳಿಯ ಮೂಲಕ ಹಾದುಹೋಗುತಿದ್ದ ಈ ಮೂವರು ನತದೃಷ್ಟರನ್ನು ಮಕ್ಕಳ ಕಳ್ಳರು ಎಂದು ಶಂಕಿಸಿದ್ದರು. ‘ಜಾಗತಿಕ ಗುರು’ವಾಗಿ ಮೆರೆಯುತ್ತಿರುವ ಹೊಸ ಭಾರತದಲ್ಲಿ ಯಾರು ಯಾರನ್ನಾದರೂ ಹೀಗೆ ಕ್ರೂರವಾಗಿ ಕೊಂದು ಹಾಕಲು ಒಂದು ಸಣ್ಣ ಸಂಶಯದ ಎಳೆ ಸಾಕು. ಈ ರೀತಿಯ ಘಟನೆಗಳು ಭಾರತದ ಎಲ್ಲೆಡೆಗಳಿಂದಲೂ ವರದಿಯಾಗುತ್ತಿವೆ.
ಮನುಷ್ಯತ್ವ ಎನ್ನುವುದು ಇದ್ದ ಯಾರೇ ಆದರೂ ಮಮ್ಮಲ ಮರುಗಬೇಕಾಗಿರುವ ಇಂತಹ ಘಟನೆಗಳನ್ನು ಸತ್ತವರು ಯಾರು ಮತ್ತು ಕೊಂದವರು ಯಾರು ಎನ್ನುವ ಆಧಾರದಲ್ಲಿ ಖಂಡಿಸುವ ಅಥವಾ ಸಮರ್ಥಿಸುವ ಕೆಲಸ ಈಗ ಈ ದೇಶದಲ್ಲಿ ನಡೆಯುತ್ತಿದೆ. ಗುಂಪು ಹತ್ಯೆಯ ಘಟನೆಗಳು ಈ ದೇಶದ ಮಾನವೀಯ ಬಿಕ್ಕಟ್ಟನ್ನು (humanitarian crisis) ತೆರೆದಿರಿಸಿದರೆ, ಅವುಗಳ ಕುರಿತು ಬರುವ ಪ್ರತಿಕ್ರಿಯೆಗಳು ಈ ದೇಶದಲ್ಲಿ ಸೃಷ್ಟಿಯಾಗಿರುವ ಮಾನವೀಯತೆಯ ಬಿಕ್ಕಟ್ಟನ್ನು (crisis of humanity) ಸಾರುತ್ತವೆ.
ಅದಿರಲಿ. ಅಂದು ಸಂಜೆ ಅರ್ನಾಬ್ ಚೀತ್ಕರಿಸುತಿದ್ದದ್ದು ಘಟನೆಯನ್ನು ಖಂಡಿಸುವುದಕ್ಕಲ್ಲ. ಸತ್ತುಹೋದ ಅಮಾಯಕ ವ್ಯಕ್ತಿಗಳ ಕುರಿತಾಗಿ ಮರುಕ ವ್ಯಕ್ತಪಡಿಸುವುದಕ್ಕಲ್ಲ. ಘಟನೆಯ ಹಿಂದಿರುವ ಅರಾಜಕತೆಯನ್ನು ವಿಶ್ಲೇಷಣೆ ನಡೆಸುವುದಕ್ಕಲ್ಲ. ಹಾಗಾದರೆ ಮತ್ಯಾಕೆ? ಅದ್ಹೇಗೋ ಅಂದು ಆ ವ್ಯ್ವಕ್ತಿಗಳನ್ನು ಸಾಯಬಡಿದ ಮಂದಿ ಮುಸ್ಲಿಮರು ಎಂಬ ಗಾಳಿ ಸುದ್ದಿಯೊಂದು ಘಟನೆ ನಡೆದ ತತ್ ಕ್ಷಣ ಹುಟ್ಟಿಕೊಂಡು ದೇಶಾದ್ಯಂತ ಹರಡಿತ್ತು. ಅರ್ನಾಬ್‍ಗೆ ಬೇಕಾದ ಸುದ್ದಿಯೊಂದು ಸಿಕ್ಕಿಬಿಟ್ಟಿತು. ಆ ಸುದ್ದಿಯನ್ನು ಅರ್ನಾಬ್‍ಗೆ ಇನ್ನೂ ಅಪ್ಯಾಯಮಾನಗೊಳಿಸಿದ್ದು ಏನು ಎಂದರೆ ಕೊಲ್ಲಲ್ಪಟ್ಟ ಮೂವರಲ್ಲಿ ಈರ್ವರು ಕಾವಿ ಪೋಷಾಕು ಧರಿಸಿದ ಹಿಂದೂ ಸಾಧುಗಳಾಗಿದ್ದರು ಎನ್ನುವುದು. ಘಟನೆಯ ಉಳಿದ ಎಲ್ಲಾ ಆಯಾಮಗಳನ್ನು ಬದಿಗಿರಿಸಿ ಅರ್ನಾಬ್ ಇದನ್ನು ಮುಸ್ಲಿಮರು ಸೇರಿ ಹಿಂದೂ ಸನ್ಯಾಸಿಗಳನ್ನು ಥಳಿಸಿ ಕೊಂದ ಘಟನೆ ಎನ್ನುವಂತೆ ಚಿತ್ರಿಸಿದರು.
ಸಾಮಾನ್ಯವಾಗಿ ದೇಶದಲ್ಲಿ ನಡೆದ ಬಹುತೇಕ ಇಂತಹ ಗುಂಪು ಹತ್ಯಾ ಪ್ರಕರಣಗಳಲ್ಲಿ ಕೊಲ್ಲಲ್ಪಡುತ್ತಿದ್ದವರು ಮುಸ್ಲಿಮರು ಎನ್ನುವ ಅಂಶವನ್ನು ಮತ್ತು ಇಂತಹ ಒಂದಷ್ಟು ಘಟನೆಗಳ ಹಿಂದೆ ಹಿಂದೂ ಧರ್ಮದ ಹೆಸರು ಹೇಳಿ ಹುಟ್ಟಿಕೊಂಡ ಕೆಲ ಸಂಘಟನೆಗಳ ಕೈವಾಡ ಇತ್ತೆನ್ನುವ ಅಂಶವನ್ನು ಹಲವಾರು ಮಂದಿ ಆಗಾಗ ಎತ್ತಿ ತೋರಿಸಿದ್ದರು. ಈ ಬಗ್ಗೆ ದೇಶಾದ್ಯಂತ ಚರ್ಚೆ ಆಗಿ ಒಂದು ಹಂತದಲ್ಲಿ ಕೆಲವು ಹೆಸರಾಂತ ವ್ಯಕ್ತಿಗಳು ಒಟ್ಟು ಸೇರಿ ಪ್ರಧಾನ ಮತ್ರಿಯವರಿಗೆ ಒಂದು ಪತ್ರ ಬರೆದು ಇಂತಹ ಈ ಅಮಾನವೀಯ ಪ್ರವೃತ್ತಿಗೆ ಕಡಿವಾಣ ಹಾಕಿ ಎಂದು ಕೋರಿದ್ದರು. ಇಂತಹಾ ಘಟನೆಗಳು ದೇಶದಲ್ಲಿ ಅಸಹನೆ ಹೆಚ್ಚುತ್ತಿರುವುದರ ಲಕ್ಷಣ ಅಂತಲೂ, ಇದರ ಬಗ್ಗೆ ಸರಕಾರ ಗಂಭೀರವಾಗಿಲ್ಲ ಅಂತಲೂ ಹೇಳಿ ಹಲವಾರು ಪ್ರಸಿದ್ಧ ವ್ಯಕ್ತಿಗಳು ಸರಕಾರ ಅವರಿಗೆ ಆ ಹಿಂದೆ ನೀಡಿದ್ದ ವಿವಿಧ ರೀತಿಯ ಸಮ್ಮಾನ ಮತ್ತು ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದರು. ಮೊನ್ನೆ ಸತ್ತವರು ಹಿಂದೂ ಸಾಧುಗಳು ಎನ್ನುವುದು ಖಾತರಿಯಾಗಿ, ಅದರ ಕೊಂದವರು ಮುಸ್ಲಿಮರೆಂದೋ, ಕ್ರೈಸ್ತ ಮಿಷನರಿ ಗಳೆಂದೋ ಸುದ್ದಿ ಹುಟ್ಟಿದಾಕ್ಷಣ ಇದೇ ಅವಕಾಶಕ್ಕಾಗಿ ಕಾಯುತಿದ್ದರೋ ಎನ್ನುವಂತೆ ಅರ್ನಾಬ್ ಅಖಾಡಕ್ಕಿಳಿದುಬಿಟ್ಟರು.
ಮುಸ್ಲಿಮರು ಸಾಯುತಿದ್ದಾಗ ಖಂಡಿಸುತಿದ್ದ ಬುದ್ದಿ ಜೀವಿಗಳೇ ಎಲ್ಲಿದ್ದೀರಿ, ಈಗ ಹಿಂದೂಗಳ ಹೆಣ ಬಿದ್ದಿದೆ, ಬನ್ನಿ ಖಂಡಿಸಿ ಅಂತ ಅಣಕಿಸಿದರು. ಮುಂದುವರಿದು, ‘ಎಲ್ಲಿದ್ದೀರಿ? ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿಗಳು, ನಕಲಿ ಚಿಂತಕರು, ಉದಾರವಾದಿಗಳು… ಎಲ್ಲಿದ್ದೀರಿ? ಬನ್ನಿ ಖಂಡಿಸಿ, ಪ್ರಶಸ್ತಿ ಹಿಂತಿರುಗಿಸಿ, ಪತ್ರ ಬರೆಯಿರಿ’ ಎನ್ನುತ್ತಾ ಕೂಗಾಡಿದರು. ಹೀಗೆಲ್ಲಾ ಹಾರಾಡುವ, ಚೀರಾಡುವ ಮೂಲಕ ಈ ದೇಶದಲ್ಲಿ ಬುದ್ಧಿ ಜೀವಿಗಳು, ಚಿಂತಕರು, ಉದಾರವಾದಿಗಳೆಲ್ಲಾ ಹಿಂದೂ ವಿರೋಧಿಗಳು ಮತ್ತು ಮುಸ್ಲಿಂ ಪಕ್ಷಪಾತಿಗಳು ಎನ್ನುವ ರಾಜಕೀಯ ಪಕ್ಷವೊಂದರ ಅಭಿಪ್ರಾಯಕ್ಕೆ ಮಾಧ್ಯಮದ ಅಂಗೀಕಾರ ಮುದ್ರೆಯನ್ನು ಒತ್ತುವ ಅವರ ಮಾಮೂಲಿ ಪತ್ರಿಕೋದ್ಯಮ ಆ ಸಂಜೆ ಆ ರೂಪದಲ್ಲಿ ಪ್ರಕಟವಾಯಿತು. ಅರ್ನಾಬ್ ಬಗ್ಗೆ, ಅವರ ಪತ್ರಿಕೋದ್ಯಮದ ಮಟ್ಟ ಮತ್ತು ಉದ್ದೇಶದ ಬಗ್ಗೆ, ಅವರ ಬೆನ್ನಿಗೆ ನಿಂತಿರುವ ರಾಜಕೀಯ, ಧಾರ್ಮಿಕ ಮತ್ತು ಔದ್ಯೋಗಿಕ ರಂಗಗಳ ವ್ಯಕ್ತಿಗಳ ಬಗ್ಗೆ ಗೊತ್ತಿರುವ ಮಂದಿ ಎಂದಿನಂತೆ ಅಂದಿನ ಕಾರ್ಯಕ್ರಮವನ್ನು ಉಪೇಕ್ಷಿಸಿದರು. ಆದರೆ ಅರ್ನಾಬ್ ಅವರನ್ನು ದೇಶ ರಕ್ಷಕರಂತೆಯೂ, ಧರ್ಮ ರಕ್ಷಕರಂತೆಯೂ, ಪತ್ರಿಕೋದ್ಯಮದ ಅನಘ್ರ್ಯ ರತ್ನ ಎಂಬಂತೆಯೂ ಭಾವಿಸಿದ ಒಂದು ವರ್ಗದ ಮಂದಿ ಅವರ ಅಂದಿನ ಬೀಭತ್ಸ ಅವತರಣಿಕೆಯನ್ನು ಆಲಿಸಿ-ವೀಕ್ಷಿಸಿ ಎಂದಿನಂತೆ ಪುಳಕಿತರಾದರು.
ಒಂದು ಹಂತದಲ್ಲಿ, ಹೀಗೆ ಸುಮ್ಮನೆ ಬುದ್ದಿ ಜೀವಿಗಳು, ಸಾಹಿತಿಗಳು, ಉದಾರವಾದಿಗಳನ್ನು ಹಿಡಿದು ಜಗ್ಗಿದರೆ ತಮ್ಮ ಎಂದಿನ ಹಳೆಯ ವೀಕ್ಷಕರನ್ನು ಬಿಟ್ಟರೆ ಇನ್ಯಾರೂ ಈ ಘನಂದಾರಿ ಚರ್ಚೆಯತ್ತ ಗಮನ ಹರಿಸುವುದಿಲ್ಲ ಅಂತ ಅರ್ನಾಬ್‍ಗೆ ಅನ್ನಿಸಿತೋ ಏನೋ? ಇದಕ್ಕಿದ್ದಂತೆ ಅವರು ವರಸೆ ಬದಲಿಸಿದರು. ಈಗ ನಾನು ಇನ್ನೊಂದು ಪ್ರಶ್ನೆ ಕೇಳುತ್ತೇನೆ? ಎಲ್ಲಿ ಅಂತಾನಿಯೋ ಮಯನೋ, ಎಲ್ಲಿ ಅವರೆಲ್ಲಿ? ಆಕೆ ಯಾಕೆ ಸುಮ್ಮನೆ ಕುಳಿತಿದ್ದಾರೆ? ಆಕೆ ಯಾಕೆ ಹಿಂದೂ ಸಾಧುಗಳ ಸಾವನ್ನು ಖಂಡಿಸುತ್ತಿಲ್ಲ?” ಅಂತ ವಿಕಾರವಾಗಿ ಕೂಗಾಡಲು ಪ್ರಾರಂಭಿಸಿದರು. ಅಂತಾನಿಯೋ ಮಯನೋ ಎನ್ನುವುದು ಸೋನಿಯಾ ಗಾಂಧಿಯವರ ಹೆಸರು. ಅರ್ನಾಬ್ ಈ ಪ್ರಶ್ನೆ ಕೇಳಿದ್ದು ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಎನ್ನುವ ವಿಷಯ ಎಲ್ಲೆಡೆ ಹರಡುತ್ತಲೇ ಕಾಂಗ್ರೆಸ್ಸಿಗರು ವ್ಯಗ್ರರಾಗಿ ಬಿಟ್ಟರು. ಅನಾವಶ್ಯಕವಾಗಿ ಸೋನಿಯಾ ಗಾಂಧಿಯವರ ಹೆಸರನ್ನು ಇಲ್ಲಿ ಎಳೆ ತಂದದ್ದಕ್ಕೆ ವ್ಯಾಪಕ ಸಾರ್ವಜನಿಕ ಖಂಡನೆಯೂ ವ್ಯಕ್ತವಾಯಿತು. ಕಾಂಗ್ರೆಸ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ದೇಶದೆಲ್ಲೆಡೆ ಅರ್ನಾಬ್ ವಿರುದ್ಧ ಪೊಲೀಸ್ ದೂರು ನೀಡಿತು. ದ್ವೇಷ ಹರಡುವ ಸುಳ್ಳು ಸುದ್ದಿ ಪ್ರಸಾರ ಮಾಡಿದಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ಕೇಸು ದಾಖಲಾಗುತ್ತಿದ್ದಂತೆಯೇ ಅರ್ನಾಬ್ ಸುಪ್ರೀಂ ಕೋರ್ಟ್‍ಗೆ ಓಡಿದರು. ತನ್ನ ವಿರುದ್ಧ ಪೊಲೀಸ್ ವಿಚಾರಣೆಗೆ ತಡೆ ನೀಡಬೇಕೆಂದು ಕೋರಿದರು. ಸುಪ್ರೀಂ ಕೋರ್ಟ್ ಬಹಳ ಕಾಳಜಿಯಿಂದ ಕೇಸು ಕೈಗೆತ್ತಿಕೊಂಡಿತು. ಪೊಲೀಸ್ ವಿಚಾರಣೆಗೆ ತಡೆ ನಿರಾಕರಿಸಿತು. ಅವರಿಗೆ ನಿರೀಕ್ಷಣಾ ಜಾಮೀನು ಪಡೆಯಲು ಅನುಕೂಲವಾಗುವಂತೆ ಎರಡು ವಾರಗಳ ಕಾಲ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿತು.
ಈ ಮಧ್ಯೆ ಇನ್ನೊಂದು ಬೆಳವಣಿಗೆಯಲ್ಲಿ ಆ ಕಾರ್ಯಕ್ರಮ ಪ್ರಸಾರವಾದ ರಾತ್ರಿ ಅರ್ನಾಬ್ ಮತ್ತು ಅವರ ಪತ್ನಿಯ ಮೇಲೆ ಈರ್ವರು ಧಾಳಿ ಮಾಡಿದರೆಂದೂ, ಆ ಧಾಳಿ ಮಾಡಿದವರು ಯುವ ಕಾಂಗ್ರೆಸ್ ಕಾರ್ಯಕರ್ತರೆಂದೂ ಅರ್ನಾಬ್ ಆಪಾದಿಸಿದರು ಮತ್ತು ಸಂಬಂದಿಸಿದ ವಿಡಿಯೋ ಬಿಡುಗಡೆ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಈರ್ವರನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ. ಈ ಹಲ್ಲೆ ನಡೆದದ್ದರ ಬಗ್ಗೆ ಕೂಡಾ ಬೇರೆ ಬೇರೆ ರೀತಿಯ ಸಂಶಯಗಳಿವೆ. ಅದೇನೇ ಇರಲಿ. ಒಂದು ವೇಳೆ ಹಲ್ಲೆ ನಡೆದದ್ದು ನಿಜವೇ ಆಗಿದ್ದರೆ, ಅದನ್ನು ಯಾರೇ ನಡೆಸಿದ್ದರೂ ಅದು ತಪ್ಪು ಮತ್ತು ಅದರ ಬಗ್ಗೆ ಕಾನೂನು ತನ್ನ ಕೆಲಸ ಮಾಡಲೇಬೇಕು.
ಅದೇನೇ ಇರಲಿ, ಇಷ್ಟೆಲ್ಲಾ ಆಗುತ್ತಿರುವಾಗ ಇಡೀ ನಾಟಕದ ಬಹಳ ಪ್ರಮುಖ ಅಂಶ ಅನಾವರಣಗೊಳ್ಳುತ್ತದೆ. ಅದು ಏನೆಂದರೆ, ಮಹಾರಾಷ್ಟ್ರ ಸರಕಾರ ಗುಂಪುಹತ್ಯೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ ಅಷ್ಟೂ ಮಂದಿಯ ಹೆಸರನ್ನು ಬಹಿರಂಗ ಪಡಿಸುತ್ತದೆ. ಆಗ ತಿಳಿದದ್ದು ಏನು ಎಂದರೆ, ಘಟನೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಆಗಲೀ, ಇನ್ಯಾವುದೇ ಮತ-ಧರ್ಮಕ್ಕೆ ಸೇರಿದವರಾಗಲೀ ಭಾಗಿಯಾಗಿಲ್ಲ. ಘಟನೆ ನಡೆದ ಹಳ್ಳಿಯಲ್ಲಿ ಮುಸ್ಲಿಂ ವಾಸಿಗಳೇ ಇಲ್ಲ ಎನ್ನುವ ಅಂಶವೂ ಬಯಲಾಯಿತು.
ಅಂದರೆ, ಅರ್ನಾಬ್ ಗೋಸ್ವಾಮಿ ಘಟನೆಯ ಹಿನ್ನೆಲೆಯಲ್ಲಿ ದುರುದ್ದೇಶಪೂರ್ವಕವಾಗಿ ಸುಳ್ಳು ಹೇಳಿ ಮುಸ್ಲಿಮರ ವಿರುದ್ಧ ದ್ವೇಷ ಮೂಡಿಸಲು ಪ್ರಯತ್ನಿಸಿದ್ದಾರೆ ಎಂದಾಯಿತು. ಅಷ್ಟೇ ಅಲ್ಲದೆ ಬುದ್ಧಿ ಜೀವಿಗಳು, ಲೇಖಕರು, ಉದಾರವಾದಿ ಚಿಂತಕರು ಮತ್ತು ಸೋನಿಯಾ ಗಾಂಧೀ ಮುಸ್ಲಿಮರ ಪಕ್ಷಪಾತಿಯಾಗಿ ಹಿಂದೂ ವಿರೋಧಿಗಳಾಗಿ ವರ್ತಿಸುತ್ತಿದ್ದಾರೆ ಎನ್ನುವ ಅವರ ಹಳೆಯ ವಾದವನ್ನು ಸಮರ್ಥಿಸಲು ಈ ಸುಳ್ಳನ್ನು ಬಳಸಿಕೊಂಡಿದ್ದಾರೆ ಎಂದಾಯಿತು. ಬುದ್ಧಿ ಜೀವಿ ಚಿಂತಕರು ಸೆಕ್ಯುಲರ್ ವಾದಕ್ಕೆ ಬದ್ಧತೆ ತೋರಲು ಮತ್ತು ಕಾಂಗ್ರೆಸ್ ಪಕ್ಷದವರು ಮುಸ್ಲಿಮರ ವೋಟು ಗಳಿಸಲು ಮುಸ್ಲಿಮರ ಪರವಾಗಿ ನಿಂತು ಹಿಂದೂಗಳ ಹಿತ ಬಲಿಕೊಡುತಿದ್ದಾರೆ ಎನ್ನುವುದು ಅರ್ನಾಬ್ ಗೋಸ್ವಾಮಿ ಮತ್ತು ಅವರ ಬೆನ್ನಿಗೆ ನಿಂತಿರುವ ರಾಜಕೀಯ ಪಕ್ಷದವರ ನಿಲುವು. ಈ ನಿಲುವಿಗೆ ಯಾವುದೇ ಸಮರ್ಪಕ ಆಧಾರಗಳಿಲ್ಲದ ಕಾರಣ ವಿವಿಧ ರೀತಿಯ ಸುಳ್ಳುಗಳನ್ನು ಸೃಷ್ಟಿಸಿ ಜನರನ್ನು ನಂಬಿಸುವ ಅನಿವಾರ್ಯತೆ ಅವರಿಗಿದೆ.
ಹಾಗೆಂದು ಇಂತಹದ್ದೊಂದು ಅಪಾಯಕಾರಿಯಾದ ಸುಳ್ಳನ್ನು ಒಂದು ಮಾನವೀಯ ದುರಂತ ಘಟನೆಯ ಸುತ್ತ ಹೆಣೆಯುವಷ್ಟರ ಮಟ್ಟಕ್ಕೆ ಭೂಗತ ಜಗತ್ತಿನಲ್ಲಿ ಕೆಲಸ ಮಾಡುವವರು ಕೂಡಾ ಇಳಿಯಲಾರರು ಅನ್ನಿಸುತ್ತದೆ. ಆದರೆ ಈ ದೇಶದ ಒಂದು ಮಾಧ್ಯಮ ಸಂಸ್ಥೆ ಮತ್ತು ಅದನ್ನು ಮುನ್ನಡೆಸುತ್ತಿರುವ ಅರ್ನಾಬ್ ಗೋಸ್ವಾಮಿ ಎಂಬ ಪತ್ರಕರ್ತ ಇದನ್ನೆಲ್ಲಾ ಮಾಡುವುದು ಬಹಳ ಕಾಲದಿಂದ ನಡೆಯುತ್ತಲೇ ಇದೆ. ಇದಕ್ಕೆ ಲಕ್ಷಾಂತರ ದೇಶವಾಸಿಗಳ ಸಮ್ಮತಿ ಇದೆ. ಅವರ ಟಿವಿ ಚಾನೆಲ್‍ಗೆ ಅವರು ನಡೆಸುತ್ತಿರುವ ಕಾರ್ಯಕ್ರಮಗಳಿಗೆ ಗಣನೀಯ ಸಂಖ್ಯೆಯ ವೀಕ್ಷಕರಿದ್ದಾರೆ, ಅಭಿಮಾನಿಗಳಿದ್ದಾರೆ.
ಇದಕ್ಕೆಲ್ಲಾ ಏನು ಹೇಳುವುದು. ಯಾರನ್ನು ದೂಷಿಸುವುದು. ಇಷ್ಟೂ ಘಟನಾವಳಿಗಳನ್ನು ನೋಡಿ. ಇಲ್ಲಿ ಒಂದು ಮಾಧ್ಯಮ ಸಂಸ್ಥೆಗೆ ಯಾವುದು ಮುಖ್ಯವಾಗಬೇಕಿತ್ತು? ಮೂರು ಮಂದಿ ಅಮಾಯಕರ ಹತ್ಯೆ ತಾನೇ? ಅದರ ಹಿಂದಿನ ಅನಾಗರಿಕತೆ, ಬರ್ಬರತೆ ಮತ್ತು ಅರಾಜಕತೆ ತಾನೇ? ಅದನ್ನು ಬಿಟ್ಟು ಈ ದೇಶದ ದೊಡ್ಡ ಸಂಖ್ಯೆಯ ಜನ ವೀಕ್ಷಿಸುವ ಟಿವಿ ಚಾನೆಲ್ ಒಂದು ಘಟನೆಯ ಸುತ್ತ ಸುಳ್ಳುಗಳನ್ನು ಪೋಣಿಸಿ ಮುಸ್ಲಿಂ ದ್ವೇಷ ಹರಡಲು ಬಳಸಿಕೊಳ್ಳುತ್ತದೆ. ಸರಕಾರವನ್ನು ಪ್ರಶ್ನಿಸುವ ವರ್ಗಗಳ ಮೇಲೆ ಜನರನ್ನು ಎತ್ತಿಕಟ್ಟಲು ಬಳಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಒಂದು ಮಾಧ್ಯಮ ಸಂಸ್ಥೆ ಹೀಗೆಲ್ಲಾ ಮಾಡುತ್ತದೆ ಎನ್ನುವುದು ನಮ್ಮ ರಾಜಕೀಯ ಪಕ್ಷಗಳನ್ನು, ಸಾಂವಿಧಾನಿಕ ಸಂಸ್ಥೆಗಳನ್ನು ಕಾಡಬೇಕಿತ್ತಲ್ಲವೇ? ಇಲ್ಲ. ಹಾಗಾಗುವುದಿಲ್ಲ.
ಕಾಂಗ್ರೆಸ್ ಆಖಾಡಕ್ಕಿಳಿದದ್ದು ಸೋನಿಯಾ ಗಾಂಧಿಯ ಹೆಸರನ್ನು ಅರ್ನಾಬ್ ವಿನಾಕಾರಣ ಎಳೆದು ತಂದರು ಎನ್ನುವ ಕಾರಣಕ್ಕೆ, ಆಳುವ ಬಿಜೆಪಿಗೆ ಅರ್ನಾಬ್ ಮೇಲೆ ಹಲ್ಲೆ ನಡೆಯಿತು ಎನ್ನುವುದೇ ಮುಖ್ಯ. ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸಿ ದೇಶಕ್ಕೆ ನೀತಿ ಪಾಠ ಹೇಳುವ ಸುಪ್ರೀಂ ಕೋರ್ಟ್‍ಗೆ ಈ ಪ್ರಕರಣದಲ್ಲಿ ಅರ್ನಾಬ್‍ಗೆ ಜಾಮೀನು ಪಡೆಯಲು ಅವಕಾಶ ನೀಡುವುದಷ್ಟೇ ಮುಖ್ಯವಾಗುತ್ತದೆ. ಮಹಾರಾಷ್ಟ್ರದಲ್ಲಿ ಅರ್ನಾಬ್‍ಗೆ ಅನುಕೂಲಕರವಾದ ಸರಕಾರ ಇರುತ್ತಿದ್ದರೆ, ಅವರು ಸುಳ್ಳುಗಳನ್ನು ಪೋಣಿಸಿ ಘಟನೆಯನ್ನು ವರ್ಣಿಸಿದ ರೀತಿಯಲ್ಲೇ ಎಫ್‍ಐಆರ್ ಕೂಡಾ ದಾಖಲಾಗುತಿತ್ತೋ ಏನೋ? ಏನಾಗುತ್ತಿದೆ ಈ ದೇಶದಲ್ಲಿ?



ನೀವು ಮತ್ತು ನಿಮ್ಮ ಉದ್ದೇಶ 2 ಕೋಟ್ಯಂತರ ಜನ ಅ ಮಾಧ್ಯಮ ಇಷ್ಟಪಡುವವರು ನಿಮ್ಮ ದೃಷ್ಟಿಯಲ್ಲಿ ಬುದ್ಧಿ ಇಲ್ಲದೆ ಇರುವ ವ್ಯಕ್ತಿಗಳ ಇಲ್ಲ ನೀವು ಇ ಸಾಲಿಗೆ ಸೇರುವವರ ನೀವೇ ನಿರ್ಧಾರ ಮಾಡಿಕೊಳ್ಳಿ