ಪ್ರಸ್ತುತ ಇಡೀ ದೇಶದ ಗಮನ ಸೆಳೆದಿರುವ ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ಆಂಗ್ಲ ಸುದ್ದಿ ಮಾಧ್ಯಮವಾದ ರಿಪಬ್ಲಿಕ್ ಚಾನೆಲ್‌ನ ಸಂಪಾದಕ ಅರ್ನಾಬ್ ಗೋಸ್ವಾಮಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಂಬೆ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿರುವ ಮುಂಬೈ ಅಪರಾಧ ವಿಭಾಗದ ಪೊಲೀಸರು ವಿಚಾರಣೆ ಹಾಜರಾಗುವಂತೆ ಅರ್ನಾಬ್ ಗೋಸ್ವಾಮಿ ಅವರಿಗೆ ಸಮನ್ಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಹಿಂದೆ ರಿಪಬ್ಲಿಕ್ ಟಿವಿಯ ಸಿಇಓ ವಿಕಾಸ್ ಖಾಂಚಂದಾನಿ ಅವರನ್ನು ಸಹ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.
ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಈಗಾಗಲೇ ಅನೇಕರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ರಿಪಬ್ಲಿಕ್ ಟಿವಿ ಸಂಪಾದಕ 46 ವರ್ಷದ ಅರ್ನಾಬ್ ಗೋಸ್ವಾಮಿ ಸಹ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ತಮ್ಮನ್ನು ಪೊಲೀಸರು ಬಂಧಿಸದಂತೆ ಹಾಗೂ ಬಲವಂತದ ಯಾವುದೇ ಕ್ರಮಗಳನ್ನು ಜರುಗಿಸದಂತೆ ಆದೇಶಿಸಬೇಕು ಎಂದು ಒತ್ತಾಯಿಸಿ ಬಾಂಬೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇಂದು ವಿಚಾರಣೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ: TRP ಹಗರಣ: ಎಲ್ಲರಂತೆ ಹೈಕೋರ್ಟ್‌ಗೆ ಹೋಗಿ ಎಂದ ಸುಪ್ರೀಂ, ರಿಪಬ್ಲಿಕ್ ಅರ್ನಾಬ್‌ಗೆ ಮುಖಭಂಗ!
ಈ ವೇಳೆ ಮುಂಬೈ ಪೊಲೀಸರ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, “ಟಿಆರ್‌ಪಿ ತಿರುಚಿದ ಹಗರಣದಲ್ಲಿ ಅರ್ನಾಬ್ ಗೋಸ್ವಾಮಿ ಅವರೂ ಸಹ ಪ್ರಮುಖ ಆರೋಪಿ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಹೀಗಾಗಿ ಅರ್ನಾಬ್ ಗೋಸ್ವಾಮಿಗೆ ಅವರಿಗೆ ಯಾವುದೇ ವಿಶೇಷ ಅವಕಾಶಗಳನ್ನು ನೀಡುವುದು ಸಾಧ್ಯವಿಲ್ಲ. ಪೊಲೀಸರಿಗೆ ಅಗತ್ಯವಿದ್ದರೆ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಲಿದ್ದಾರೆ” ಎಂದು ತಿಳಿಸಿದ್ದಾರೆ. ಈ ಮೂಲಕ ಸಂಪಾದಕ ಅರ್ನಾಬ್ ಗೋಸ್ವಾಮಿ ಯಾವುದೇ ಸಂದರ್ಭದಲ್ಲಿ ಬಂಧಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೋರ್ಟ್ ವಿಚಾರಣೆ ವೇಳೆ ಅರ್ನಾಬ್ ಗೋಸ್ವಾಮಿ ಪರವಾಗಿ ಹಾಜರಾದ ಅವರ ಸಲಹೆಗಾರ ಹಾಗೂ ಹಿರಿಯ ವಕೀಲ ಹರೀಶ್ ಸಾಲ್ವೆ, “ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದರೆ ನಾವು ಅದನ್ನು ಗೌರವಿಸುತ್ತೇವೆ ಮತ್ತು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Explainer: ಏನಿದು ಟಿಆರ್‌ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?
ಟಿಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನೋಂದಾಯಿಸಿದ FIR ನ್ನು ರದ್ದುಪಡಿಸಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಮತ್ತು ಆರ್ ಭಾರತ್ ನ್ಯೂಸ್ ಚಾನೆಲ್‌ಗಳ ಮಾತೃಸಂಸ್ಥೆಯಾದ ARG ಔಟ್‌ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್‌ಎಸ್ ಶಿಂಧೆ ಮತ್ತು ಮಕರಂದ್ ಕಾರ್ನಿಕ್ ಅವರ ನ್ಯಾಯಪೀಠ ವಿಚಾರಣೆ ನಡೆಸಿತು.
ಟಿಆರ್‌ಪಿಗಳನ್ನು ಅಳೆಯುವ ಉದ್ದೇಶದಿಂದ ಅಳವಡಿಸಿದ ಬಾರೋಮೀಟರ್‌ಗಳನ್ನು ಇರಿಸಿದ ಮನೆಗಳಿಗೆ ಹಣ ನೀಡುವ ಮೂಲಕ ತಮ್ಮ ಚಾನೆಲ್‌ಗಳ ಟಿಆರ್‌ಪಿಯನ್ನು ಮೋಸದಿಂದ ಹೆಚ್ಚಿಸಿದ್ದಾರೆಂದು ಮುಂಬೈ ಅಪರಾಧ ವಿಭಾಗವು ಅಕ್ಟೋಬರ್ 7 ರಂದು ಕಂಡಿವಲಿ ಪೊಲೀಸ್ ಠಾಣೆಯಲ್ಲಿ FIR ನೋಂದಾಯಿಸಿತ್ತು.
ಮರುದಿನ ನಡೆದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಂಬೈ ಪೊಲೀಸ್ ಆಯುಕ್ತ (ಸಿಪಿ) ಪರಮ್ ಬಿರ್ ಸಿಂಗ್, ಬಂಧಿತ ಆರೋಪಿಗಳಲ್ಲಿ ಒಬ್ಬ ತಾನು ರಿಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುತ್ತಿರುವುದಾಗಿಯು ಮತ್ತು ವಾಹಿನಿಯ ಟಿಆರ್‌ಪಿಗಳನ್ನು ತಿರುಚಲು ಮನೆಗಳಿಗೆ ಹಣ ಪಾವತಿ ಮಾಡುತ್ತಿರುವುದಾಗಿ ಬಹಿರಂಗಪಡಿಸಿದ್ದಾನೆ ಎಂದು ಹೇಳಿದ್ದರು.
ಇದನ್ನೂ ಓದಿ: ಭಾರತ ವಿರೋಧಿ ಅರ್ನಬ್ ಗೋಸ್ವಾಮಿ ಬಂಧಿಸಿ: ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡಿಂಗ್


