HomeಮುಖಪುಟExplainer: ಏನಿದು ಟಿಆರ್‌ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?

Explainer: ಏನಿದು ಟಿಆರ್‌ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?

NDTV ಯೂಟ್ಯೂಬ್ ವೀಕ್ಷಕರು 80 ಲಕ್ಷ, ರಿಪಬ್ಲಿಕ್ ಟಿವಿ ಯೂಟ್ಯೂಬ್ ವೀಕ್ಷಕರು ಕೇವಲ 35 ಲಕ್ಷ ಮಾತ್ರ. ಇನ್ನು NDTV app ಡೌನಲೋಡ್ ಮಾಡಿಕೊಂದವರ ಸಂಖ್ಯೆ 5 ಮಿಲಿಯನ್‌ಗೂ ಹೆಚ್ಚು, ರಿಪಬ್ಲಿಕ್ ಟಿವಿ app ಡೌನಲೋಡ್ ಮಾದಿಕೊಂಡವರ ಸಂಖ್ಯೆ 1 ಮಿಲಿಯನ್ ಮಾತ್ರ.

- Advertisement -
- Advertisement -

ಪ್ರಸಕ್ತವಾಗಿ ದೇಶದಲ್ಲಿ ಅತಿಹೆಚ್ಚು ಚರ್ಚೆಗೆ ಮತ್ತು ಸುದ್ದಿಗೆ ಗ್ರಾಸವಾಗುತ್ತಿರುವ ವಿಚಾರ ಟಿಆರ್‌ಪಿ (TRP) ಅಂದರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್. ಮತ್ತು ಈ ವಿಚಾರ ಈ ಪ್ರಮಾಣದಲ್ಲಿ ಸದ್ದು ಮಾಡಲು ಕಾರಣ ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ಇಂಗ್ಲಿಷ್ ಸುದ್ದಿ ಮಾಧ್ಯಮ “ರಿಪಬ್ಲಿಕ್ ಟಿವಿ”.

ಸುದ್ದಿ ಮಾಧ್ಯಮಗಳು ಕನ್ನಡವೇ ಇರಲಿ ಅಥವಾ ಯಾವ ಭಾಷೆಯದ್ದೇ ಇರಲಿ ಜಾಹೀರಾತುಗಳಿಲ್ಲದೆ ಉಳಿಯುವುದು ಕಷ್ಟ. ಜಾಹೀರಾತುಗಳು ಸಾಮಾನ್ಯವಾಗಿ ಆಯಾ ಸುದ್ದಿ ವಾಹಿನಿ ಪ್ರತಿವಾರ ಗಳಿಸುವ ಟಿಆರ್‌ಪಿ ಆಧಾರದಲ್ಲೇ ಲಭ್ಯವಾಗುತ್ತವೆೆ. ಅಲ್ಲದೆ, ಟಿಆರ್‌ಪಿ ಆಧಾರದಲ್ಲೇ ಆ ಜಾಹೀರಾತುಗಳಿಗೆ ಬೆಲೆಯೂ ನಿಗದಿಯಾಗುತ್ತದೆ ಎಂಬುದು ಮಾಧ್ಯಮ ಜಗತ್ತಿನ ಸಾಮಾನ್ಯ ಜ್ಞಾನ.

ಇದೇ ಕಾರಣಕ್ಕೆ ಎಲ್ಲಾ ಮಾಧ್ಯಮಗಳೂ ಟಿಆರ್‌ಪಿ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುವುದು ಮತ್ತು ಅದೇ ಕಾರಣಕ್ಕೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಕೆಲವು ಮಾಧ್ಯಮಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟಿಆರ್‌ಪಿ ರೇಟಿಂಗ್ ಅನ್ನೇ ತಿರುಚುವ ಕೆಲಸಕ್ಕೂ ಮುಂದಾಗಿವೆ! ಇದೀಗ ಇಂತಹದ್ದೇ ಒಂದು ಕೆಲಸಕ್ಕೆ ಕೈಹಾಕುವ ಮೂಲಕ ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿ ಇದೀಗ ಪೇಚಿಗೆ ಸಿಲುಕಿದೆ.

ಹೌದು ಇಂಗ್ಲಿಷ್ ಮಾಧ್ಯಮವಾದ ರಿಪಬ್ಲಿಕ್ ಟಿವಿ ತನ್ನ ಟಿಆರ್‌ಪಿ ರೇಟಿಂಗ್‌ನಲ್ಲಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವ ಸಲುವಾಗಿ ಟಿಆರ್‌ಪಿ ರೇಟಿಂಗ್‌ಅನ್ನೇ ತಿರುಚುವ ಕೆಲಸಕ್ಕೆ ಮುಂದಾಗಿದೆ ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ. ಕೇವಲ ರಿಪಬ್ಲಿಕ್ ಟಿವಿ ಅಲ್ಲ 2 ಮರಾಠಿ ಚಾನೆಲ್‌ಗಳು ಇದೇ ಕಳ್ಳ ದಾರಿಯಲ್ಲಿದ್ದವು, ಹಾಗೆಂದು ಟಿಆರ್‌ಪಿ ಸಂಗ್ರಹಿಸುವ ಹನ್ಸ್ ಸಂಸ್ಥೆ ದೂರು ನೀಡಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಮರಾಠಿ ಚಾನಲ್‌ಗಳಿಗೆ ಸಂಬಂಧಪಟ್ಟಂತೆ ಕೆಲವರನ್ನು ಅರೆಸ್ಟ್ ಮಾಡಲಾಗಿದೆ. ಮುಂದುವರಿದ ತನಿಖೆಯಲ್ಲಿ ಮುಂಬೈ ಪೊಲೀಸರು ಮಂಗಳವಾರ ರಿಪಬ್ಲಿಕ್ ಟಿವಿಯ ಸಿಇಓ ವಿಕಾಸ್ ಖಾಂಚಂದಾನಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಳ್ಳ ವ್ಯವಹಾರದ ಒಂದೊಂದೇ ಸತ್ಯಗಳು ಹೊರಬರಬೇಕಿದೆ. ಅಲ್ಲದೆ, ರಿಪಬ್ಲಿಕ್ ಟಿವಿಯ ಸಿಎಫಓ ಶಿವ ಸುಬ್ರಮಣಿಯನ್ ಸುಂದರಮ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

ಅಸಲಿಗೆ ಈ ಟಿಆರ್‌ಪಿ ಎಂದರೆ ಏನು? ಇದನ್ನು ಹೇಗೆ ಲೆಕ್ಕ ಮಾಡಲಾಗುತ್ತದೆ? ಯಾವ ಆಧಾರದಲ್ಲಿ ಜಾಹೀರಾತು ನೀಡಲಾಗುತ್ತದೆ? ಭಾರತದ ಮಾಧ್ಯಮಗಳ ಜಾಹೀರಾತು ಮೌಲ್ಯ ಎಷ್ಟು? ಮತ್ತು ಜಾಹೀರಾತುಗಳಿಗಾಗಿ ಈ ಟಿಆರ್‌ಪಿ ರೇಟಿಂಗ್ ಅನ್ನು ಹೇಗೆ ತಿರುಚಲಾಗುತ್ತದೆ? ಎಂಬ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.

ಏನಿದು ಟಿಆರ್‌ಪಿ?
ನ್ಯೂಸ್ ಪೇಪರ್‌ಗಳ ಪ್ರಸಾರ ಸಂಖ್ಯೆಯ ಆಧಾರದ ಮೇಲೆ ಜಾಹೀರಾತು ದರ ನಿಗದಿಯಾಗುವಂತೆ ಟಿವಿ ಚಾನಲ್‌ಗಳಲ್ಲಿ ಟಿಆರ್‌ಪಿ ಆಧಾರದ ಮೇಲೆ ಜಾಹೀರಾತು ಮತ್ತು ಅದರ ದರ ನಿಗದಿಯಾಗುತ್ತದೆ.

ಟೆಲಿವಿಷನ್ ರೇಟಿಂಗ್ ಪಾಯಿಂಟ್ ಎಂಬ ಪರಿಕಲ್ಪನೆಯು ಜಗತ್ತಿನ ಬಹುಮುಖ್ಯವಾದ ಸಾಂಸ್ಥಿತ ವಿಚಾರಧಾರೆ. ದೃಶ್ಯಮಾಧ್ಯಮದ ಬಹುಸ್ತರಗಳಾದ ಸುದ್ದಿವಾಹಿನಿ ಹಾಗೂ ಮನರಂಜನಾವಾಹಿನಿಗಳ ಏರಿಳಿತವನ್ನು ಪ್ರೇಕ್ಷಕರ ವೀಕ್ಷಣೆಯ ಆಧಾರದಿಂದ ನಿರ್ಧರಿಸಲಾಗುತ್ತದೆ. ಈ ಮೌಲ್ಯಮಾಪನವನ್ನು ಟಾರ್ಗೆಟ್ ಅಥವಾ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಎಂದು ಕರೆಯುತ್ತಾರೆ.

ಟಿಆರ್‌ಪಿ ಹೇಗೆ ಲೆಕ್ಕ ಹಾಕಲಾಗುತ್ತದೆ?
ಟಿಆರ್‌ಪಿಯನ್ನು ಲೆಕ್ಕ ಹಾಕಲು ಬಾರ್ಕ್ ಬಾರೋ ಮೀಟರ್ ಅಥವಾ ಪೀಪಲ್ಸ್ ಮೀಟರ್ ಎಂಬ ಉಪಕರಣದಿಂದ ಅಳೆಯುತ್ತಾರೆ. ಮೈಸೂರು, ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಹಾಗೂ ದೇಶದ ಎಲ್ಲಾ ಪ್ರಮುಖ ನಗರ ಪ್ರದೇಶಗಳಲ್ಲಿ ಆಯ್ದು ಕೆಲವು ಮನೆಗಳಲ್ಲಿ ಬಾರೋ ಮೀಟರ್ ಅಥವಾ ಪಿಪಲ್ಸ್ ಮೀಟರ್ ಅಳವಡಿಸಲಾಗಿರುತ್ತದೆ. ಒಟ್ಟಾರೆ ದೇಶದಲ್ಲಿ ೪೪ ಸಾವಿರ ಬಾರೋ ಮೀಟರ್ ಅಥವಾ ಪೀಪಲ್ಸ್ ಮೀಟರ್ ಅಳವಡಿಸಲಾಗಿದ್ದು, ಅದರಲ್ಲಿ ೪೦ ಸಾವಿರ ಉಪಕರಣಗಳಿಂದ ಡಾಟಾ ಸಂಗ್ರಹಿಸಲಾಗುತ್ತದೆ. ಟಿಆರ್‌ಪಿ ಲೆಕ್ಕ ಹಾಕಲು ಆಯ್ಕೆ ಮಾಡಿದ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಐಡಿ ನೀಡಲಾಗಿರುತ್ತದೆ. ಅವರು ಟಿವಿ ವೀಕ್ಷಿಸುವಾಗ ತಮ್ಮ ಐಡಿ ಬಟನ್ ಒತ್ತಬೇಕು. ಯಾರ ಮನೆಯಲ್ಲಿ ಉಪಕರಣ ಇಡಲಾಗುತ್ತದೆ ಅನ್ನುವುದನ್ನು ಗೌಪ್ಯವಾಗಿಡಲಾಗುತ್ತದೆ. ಟಿಆರ್‌ಪಿ ಸಂಗ್ರಹಿಸಿ ಪ್ರಕಟಿಸುವ ಜವಾಬ್ದಾರಿ BARC ಸಂಸ್ಥೆಯದ್ದಾದರೆ, ಈ ಸಂಸ್ಥೆಗಾಗಿ ದತ್ತಾಂಶ ಸಂಗ್ರಹಿಸುವ ಕಾರ್ಯ ಹನ್ಸ್ ಸಂಸ್ಥೆಯದ್ದು.
ಪ್ರತ್ಯೇಕ ಐಡಿಗಳ ಮೂಲಕ ಅವರು ವೀಕ್ಷಿಸಿದ ಕಾರ್ಯಕ್ರಮಗಳು ಮತ್ತು ವೀಕ್ಷಣೆಯ ಸಮಯವನ್ನು ಬಾರ್ಕ್ ಬಾರೋ ಮೀಟರ್ ಎಂಬ ಉಪಕರಣದ ಮೂಲಕ ಸಂಗ್ರಹಿಸಲಾಗುತ್ತದೆ. ವಿವಿಧ ವಯೋಮಾನ, ವಿವಿಧ ಸಾಮಾಜಿಕ ಮತ್ತು ಆರ್ಥಿಕ ವಿಭಾಗಗಳ ಜನರು ಯಾವ ಟಿವಿ ಮತ್ತು ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಎಂಬುದರ ಮಾಹಿತಿ ಸಂಗ್ರಹಿಸಿ ಅದರ ಆಧಾರದ ಮೇಲೆ ವಾರಕ್ಕೊಮ್ಮೆ ಟಿಆರ್‌ಪಿಯನ್ನು ಲೆಕ್ಕ ಹಾಕಲಾಗುತ್ತದೆ.
ಈ ಮಾಪನವು ಯಾವ ಮನೆಯಲ್ಲಿ ಯಾವ ವಾಹಿನಿ ಅಥವಾ ಯಾವ ಕಾರ್ಯಕ್ರಮವನ್ನು ಎಷ್ಟು ಹೊತ್ತು ವೀಕ್ಷಿಸಲ್ಪಟ್ಟಿದೆ ಎಂಬುದನ್ನು ಸಂಖ್ಯೆಗಳ ಮೂಲಕ ನಿರ್ಧರಿಸುತ್ತದೆ.

ಈ ಎಲ್ಲಾ ಅಂಕಿಅಂಶಗಳನ್ನಾಧರಿಸಿ ವಾಹಿನಿಗಳು ಮಾಧ್ಯಮ ಪ್ರಭುತ್ವದ ಚುಕ್ಕಾಣಿ ಹಿಡಿಯುವುದರೊಂದಿಗೆ ಜಾಹೀರಾತುದಾರರನ್ನು ತನ್ನತ್ತ ಸೆಳೆದುಕೊಳುತ್ತವೆ. ಇದರ ಆಧಾರದಲ್ಲಿ ಜಾಹೀರಾತು ನೀಡುವವರು ಯಾವ ಚಾನಲ್‌ನ ಯಾವ ಕಾರ್ಯಕ್ರಮಕ್ಕೆ ಜಾಹೀರಾತು ನೀಡಬಹುದು ಎಂಬುದನ್ನು ನಿರ್ಧರಿಸುತ್ತವೆ. ಟಿವಿ ಚಾನಲ್‌ಗಳು ಇದರ ಆಧಾರದ ಮೇಲೆಯೇ ಜಾಹೀರಾತು ದರಗಳನ್ನೂ ಪರಿಷ್ಕರಿಸುತ್ತವೆ.
ಆದರೆ, ಈ ಟಿಆರ್‌ಪಿಯಲ್ಲಿ ಇಡೀ ದೇಶದ ವೀಕ್ಷಕರು ಯಾವ ಟಿವಿ ಚಾನಲ್‌ಅನ್ನು ಮತ್ತು ಯಾವ ಕಾರ್ಯಕ್ರಮವನ್ನು ನೋಡುತ್ತಾರೆ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಕೇವಲ ಬಾರೋಮೀಟರ್ ಅಳವಡಿಸಿರುವ ಮನೆಗಳಲ್ಲಿ ಯಾವ ಕಾರ್ಯಕ್ರಮ ನೋಡುತ್ತಾರೆ ಎಂಬುದು ಮಾತ್ರ ಲೆಕ್ಕಕ್ಕೆ ಬರುತ್ತದೆ. ಹಾಗಾಗಿಯೇ ಟಿಆರ್‌ಪಿಯನ್ನು ತಿರುಚಲು ಮಾಡಿದ ಇಂತಹ ಹಲವು ಪ್ರಯತ್ನಗಳು ಹಲವು ಬಾರಿ ವರದಿಯಾಗುತ್ತಲೇ ಇವೆ.

ಟಿಆರ್‌ಪಿ ಲೆಕ್ಕ ಹಾಕುವವರು ಯಾರು?
ಅಡ್ವರ್ಟೈಸಿಂಗ್ ಏಜೆನ್ಸೀಸ್ ಅಸೋಸಿಯೇಷನ್ ಆಫ್ ಇಂಡಿಯಾ (AAAI), ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೆಡರೇಷನ್ (IBF) ಮತ್ತು ಇಡಿಯನ್ ಸೊಸೈಟಿ ಆಫ್ ಅಡ್ವರ್ಟೈಸರ್ಸ್ (ISA) ಪ್ರತಿನಿಧಿಗಳು, ಜಾಹೀರಾತುದಾರರು, ಬ್ರಾಡ್‌ಕಾಸ್ಟಿಂಗ್ ಕಂಪನಿಗಳ ಪ್ರತಿನಿಧಿಗಳನ್ನು ಒಳಗೊಂಡ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್  (BARC) ಎಂಬ ಸಂಸ್ಥೆಯನ್ನು 2010ರಲ್ಲಿ ಸ್ಥಾಪಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ 2014ರ ಜನವರಿ 10ರಂದು ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳಿಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆ ಬಳಿಕ 2015ರ ಜುಲೈನಲ್ಲಿ ಬಾರ್ಕ್ಅನ್ನು ನೋಂದಣಿ ಮಾಡಲಾಗಿದೆ.
ಈ ಬಾರ್ಕ್ ಎಂಬ ಸಂಸ್ಥೆಯೇ ಇದೀಗ ಪ್ರತಿ ವಾರ ಎಲ್ಲಾ ಮಾಧ್ಯಮಗಳ ಒಟ್ಟಾರೆ ರೇಟಿಂಗ್ ಪಾಯಿಂಟ್‌ಅನ್ನು ಲೆಕ್ಕಹಾಕಿ ಪ್ರಚುರಪಡಿಸುತ್ತಿದೆ.

ಟಿಆರ್‌ಪಿಯನ್ನು ಹೇಗೆ ತಿರುಚಲಾಗುತ್ತದೆ?
ಬಾರೋಮೀಟರ್ ಅಳವಡಿಸಿರುವ ಮನೆಗಳ ಸಂಖ್ಯೆ ಹೆಚ್ಚಿದ್ದಷ್ಟೂ ಟಿಆರ್‌ಪಿಯನ್ನು ತಿರುಚುವುದು ಕಷ್ಟ. ಆದರೆ ಮನೆಗಳ ಸಂಖ್ಯೆ ಕಡಿಮೆ ಇದ್ದರೆ ಇದನ್ನು ತಡೆಯುವುದು ಹೆಚ್ಚು ಸವಾಲಿನ ಕೆಲಸವಾಗಲಿದೆ ಎಂದು ಟ್ರಾಯ್ ಈ ಹಿಂದೆಯೇ ತಿಳಿಸಿತ್ತು. ಅದರಂತೆಯೇ ಬಾರ್ಕ್ನೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಹನ್ಸ್ ರಿಸರ್ಚ್ ಎಂಬ ಕಂಪನಿಯ ಮಾಜಿ ಉದ್ಯೋಗಿಗಳು ಟಿಆರ್‌ಪಿ ತಿರುಚುವಲ್ಲಿ ನಿರತರಾಗಿದ್ದರು ಎಂಬುದು ಬಹಿರಂಗವಾಗಿದೆ.

ಇವರು ರಿಪಬ್ಲಿಕ್ ಟಿವಿ, ಮರಾಠಿಯ ಫಕ್ಟ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳ ಪರವಾಗಿ ಬಾರೋ ಮೀಟರ್ ಅಳವಡಿಸಿರುವವರ ಮನೆಗೆ ತೆರಳಿ ಅವರಿಗೆ ಹಣದ ಆಮಿಷ ಒಡ್ಡಿ ನಿರ್ದಿಷ್ಟ ಚಾನಲ್ ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ ಮನವೊಲಿಸುತ್ತಿದ್ದರು. ಇದೇ ರೀತಿ ಅವರು ಮುಂಬೈನಲ್ಲಿ ಟಿಆರ್‌ಪಿಯನ್ನು ತಿರುಚಲು 2000 ಬಾರೋ ಮೀಟರ್ ಅಳವಡಿಸಿರುವ ಮನೆಗಳನ್ನು ಬಳಸಿಕೊಂಡಿದ್ದರು. ಈ ಸಂಬಂಧ ತನಿಖೆ ನಡೆಸಿದಾಗ ಬಾರೋಮೀಟರ್ ಅಳವಡಿಸಿರುವ ಕೆಲವು ಮನೆಯವರು ಆರೋಪಿಗಳು ತಮಗೆ ಹಣ ನೀಡುತ್ತಿದ್ದ ಕುರಿತು ಮಾಹಿತಿ ನೀಡಿದ್ದ ವಿಚಾರವೂ ಬಹಿರಂಗವಾಗಿದೆ.

ಉದಾಹರಣೆಗೆ ದೇಶಾದ್ಯಂತ ಇಂಗ್ಲಿಷ್ ನ್ಯೂಸ್ ಚಾನಲ್ ನೋಡುವವರ ಪ್ರಮಾಣ ಶೇ.1.5ರಷ್ಟಿದೆ. 45 ಸಾವಿರ ಮನೆಗಳ ಪೈಕಿ ಸುಮಾರು 700 ಮನೆಗಳಲ್ಲಿ ಮಾತ್ರ ಇಂಗ್ಲಿಷ್ ನ್ಯೂಸ್ ಚಾನಲ್ ನೋಡುತ್ತಾರೆ. ಅದರಲ್ಲೂ ಕೇವಲ 350 ಮನೆಗಳಲ್ಲಿ ಮಾತ್ರ ದಿನವೂ ಇಂಗ್ಲಿಷ್ ನ್ಯೂಸ್ ಚಾನಲ್ ನೋಡುತ್ತಾರೆ. ಇದರಲ್ಲಿ ಅತಿ ಹೆಚ್ಚಿನ ಸಮಯ ಇಂಗ್ಲಿಷ್ ನ್ಯೂಸ್ ಚಾನಲ್ ನೋಡುವ ಕೇವಲ 10 ಮನೆಗಳಲ್ಲಿ ಟಿಆರ್‌ಪಿ ತಿರುಚಿದರೆ ಇಂಗ್ಲಿಷ್ ನ್ಯೂಸ್ ಚಾನಲ್‌ಗಳ ಒಟ್ಟಾರೆ ಟಿಆರ್‌ಪಿ ರೇಟಿಂಗ್‌ನಲ್ಲಿ ಭಾರಿ ವ್ಯತ್ಯಾಸ ಉಂಟಾಗುತ್ತದೆ.

ಕೇವಲ 50 ಮನೆಗಳಲ್ಲಿ ಟಿಆರ್‌ಪಿಯನ್ನು ತಿರುಚಿದರೆ ಚಾನೆಲ್‌ಗಳು ಆಗುವ ಬದಲಾವಣೆಯ ಉದಾಹರಣೆಯೊಂದಿಗೆ ನೋಡೋಣ. 20 ಟಿಆರ್‌ಪಿ ರೇಟಿಂಗ್ ಪಡೆಯುತ್ತಿದ್ದ ಹಿಂದಿ ಮನರಂಜನಾ ಚಾನೆಲ್ ತಿರುಚಿದ ಟಿಆರ್‌ಪಿಯಲ್ಲಿ 21.5 ಪ್ರತಿಶತ ಪಡೆಯುತ್ತದೆ. 20  ಟಿಆರ್‌ಪಿ ರೇಟಿಂಗ್ ಪಡೆಯುತ್ತಿದ್ದ ಹಿಂದಿ ನ್ಯೂಸ್ ಚಾನಲ್ 25.8% ಪಡೆಯುತ್ತದೆ. ಈ ಬದಲಾವಣೆ ರ‍್ಯಾಕಿಂಗ್ ಪಟ್ಟಿಯಲ್ಲಿ ಅದರ ಸ್ಥಾನವನ್ನು ಬಹಳಷ್ಟು ಬದಲಾವಣೆ ಮಾಡುತ್ತದೆ. ಜೊತೆಗೆ ವಾರ್ಷಿಕ 40 ರಿಂದ 50 ಕೋಟಿ ರೂಪಾಯಿ ಹೆಚ್ಚಿನ ಆದಾಯ ತಂದುಕೊಡುತ್ತದೆ. ಇನ್ನು 20 ಟಿಆರ್‌ಪಿ ರೇಟಿಂಗ್ ಪಡೆಯುತ್ತಿದ್ದ ಇಂಗ್ಲೀಷ ನ್ಯೂಸ್ ಚಾನಲ್ ಅನ್ನು ೫೦ ಮನೆಗಳಲ್ಲಿ ಪ್ರತಿ ದಿನ 5 ಗಂಟೆಯಂತೆ ಮನೆಯಲ್ಲಿನ 4 ಸದಸ್ಯರು ಒಂದೆ ಚಾನಲ್ ನೋಡಿದರೆ ಅದರ ಟಿಆರ್‌ಪಿಯಲ್ಲಿ ಆಗುವ ಬದಲಾವಣೆ ಅಷ್ಟಿಷ್ಟಲ್ಲ – ಅದು 70.4% ಅಲ್ಲಿಗೆ ಅದು ಇಂಗ್ಲಿಷ್ ನ್ಯೂಸ್ ವಿಭಾಗದ ಬಹುತೇಕ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುತ್ತೆ. ಉಳದೆಲ್ಲ ವಾಹಿನಿಗಳು ಕೇವಲ 20%ನಲ್ಲಿ ಸೆಣಸಾಡಬೇಕು.

ಈ ಟಿಆರ್‌ಪಿ ಲೆಕ್ಕಾಚಾರ ಚುನಾವಣೆ ಸಮೀಕ್ಷೆ ಇದ್ದ ಹಾಗೆ. ಇದು ಸೈಂಟಿಫಿಕ್ ಅಲ್ಲ, ಆದರೆ ಇದಕ್ಕೆ ಪರ್ಯಾಯವೂ ಇಲ್ಲ. ಇದು ಎಷ್ಟು ಅವೈಜ್ಞಾನಿಕ ಅನ್ನುವುದಕ್ಕೂ ಉದಾಹರಣೆಯೆಂದರೆ NDTV ಯೂಟ್ಯೂಬ್ ವೀಕ್ಷಕರು 80 ಲಕ್ಷ, ರಿಪಬ್ಲಿಕ್ ಟಿವಿ ಯೂಟ್ಯೂಬ್ ವೀಕ್ಷಕರು ಕೇವಲ 35 ಲಕ್ಷ ಮಾತ್ರ. ಇನ್ನು NDTV app ಡೌನಲೋಡ್ ಮಾಡಿಕೊಂದವರ ಸಂಖ್ಯೆ 5 ಮಿಲಿಯನ್‌ಗೂ ಹೆಚ್ಚು, ರಿಪಬ್ಲಿಕ್ ಟಿವಿ app ಡೌನಲೋಡ್ ಮಾದಿಕೊಂಡವರ ಸಂಖ್ಯೆ 1 ಮಿಲಿಯನ್ ಮಾತ್ರ. NDTV website ವೀಕ್ಷಕರ ಸಂಖ್ಯೆ 80 ಮಿಲಿಯನ್ ಆದರೆ ರಿಪಬ್ಲಿಕ್ ಟಿವಿ website ವೀಕ್ಷಕರ ಸಂಖ್ಯೆ ಕೇವಲ 15 ಮಿಲಿಯನ್.

ಡಿಜಿಟಲ್ ದುನಿಯಾದಲ್ಲಿ ಇಷ್ಟೆಲ್ಲ ಮುಂದಿರುವ NDTV, TRP ಹೋರಾಟದಲ್ಲಿ ಅದರ ಪಾಲು ಕೇವಲ 1%, ರಿಪಬ್ಲಿಕ್ ಟಿವಿಯದ್ದು 77 ಪ್ರತಿಶತ. ಟಿಆರ್‌ಪಿಯಲ್ಲಿ ಮುಂದಿರುವುದು ಕೇವಲ ಜಾಹೀರಾತುಗಳ ಮೂಲಕ ಹಣ ಗಳಿಸಲು ಮಾತ್ರ ಬಳಕೆಯಾಗುವುದಿಲ್ಲ, ಇದು ನರೇಶನ್ ಸೆಟ್ ಮಾಡಲು False ಪ್ರಪಗಾಂಡಾ ಹರಡಲು ಬಳಕೆಯಾಗುತ್ತದೆ. ಇನ್ನು ಉಳಿದ ವಾಹಿನಿಗಳು ಟಿಆರ್‌ಪಿ ಯುದ್ಧದಲ್ಲಿ ಅಗ್ರ ಚಾನಲ್‌ನನ್ನೆ ಅನುಕರಣೆ ಮಾಡುವುದರಿಂದ ಆಗುವ ಹಾನಿ ಅಷ್ಟಿಷ್ಟಲ್ಲ.

ಎಫ್‌ಐಸಿಸಿಐಇವೈ ವರದಿಯ ಪ್ರಕಾರ ಭಾರತದಲ್ಲಿ ಟಿವಿ ಉದ್ಯಮದ ಒಟ್ಟು ಜಾಹೀರಾತು ಮಾರುಕಟ್ಟೆ 2019 ರಲ್ಲಿ 78,700 ಕೋಟಿ ರೂ ಇತ್ತು. ಪ್ರಸ್ತುತ ಈ ಪ್ರಮಾಣ ಇನ್ನೂ ಅಧಿಕವಾಗಿರುವ ಸಾಧ್ಯತೆ ಇದೆ. ಹಾಗಾಗಿಯೇ ಟಿವಿ ಚಾನಲ್‌ಗಳು ಹೆಚ್ಚಿನ ಟಿಆರ್‌ಪಿ ಪಡೆಯಲು ಹಾಗೂ ಆ ಮೂಲಕ ಹೆಚ್ಚಿನ ಆದಾಯ ಗಳಿಸಲು ಒಂದಲ್ಲಾ ಒಂದು ಅಡ್ಡ ದಾರಿಗೆ ಮುಂದಾಗುತ್ತಲೇ ಇರುತ್ತವೆ. ಭಾರತದ ಮಾಧ್ಯಮ ಲೋಕದ ಮಟ್ಟಿಗೆ ಹೀಗೆ ಟಿಆರ್‌ಪಿ ತಿರುಚಲು ಮುಂದಾಗಿರುವ ಪ್ರಕರಣ ಇದೇ ಮೊದಲೇನಲ್ಲ. ಬಹುಶಃ ಇದು ಕೊನೆಯೂ ಅಲ್ಲ.
ಆದರೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅ ನಿಟ್ಟಿನಲ್ಲಿ ಟಿಆರ್‌ಪಿ ತಿರುಚಿರುವ ಪ್ರಕರಣ ಇದೀಗ ರಿಪಬ್ಲಿಕ್ ಟಿವಿ ಕೊರಳಿಗೆ ಉರುಳಾಗಿ ಪರಿಣಮಿಸಿದೆ. ಅದರ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಇತರೆ ಮಾಧ್ಯಮದವರು ಕೆಂಡಕಾರುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ನಡುವೆ ಬಜಾಜ್, ಪಾರ್ಲೆಜಿಯಂತಹ ಕೆಲವು ಕಂಪೆನಿಗಳು ಸಮಾಜದಲ್ಲಿ ಕೋಮು ದ್ವೇಷ ಬಿತ್ತುವವರಿಗೆ ತಾವು ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಅಲ್ಲದೆ, ಬಾಲಿವುಡ್‌ನ ಹಲವು ಸ್ಟಾರ್ ನಟ ನಟಿಯರು ಇಂಗ್ಲಿಷ್ ಮಾದ್ಯಮಗಳು ತಮ್ಮದೇ ಅಜೆಂಡಾವನ್ನು ಮುಂದಿಟ್ಟು ಬಾಲಿವುಡ್‌ಅನ್ನು ಗುರಿ ಮಾಡುತ್ತಿವೆ ಎಂದು ಮಾಧ್ಯಮಗಳ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಎಲ್ಲಾ ಬಾಣಗಳು ಇದೀಗ ನೇರವಾಗಿ ರಿಪಬ್ಲಿಕ್ ಟಿವಿಯನ್ನೇ ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ.

ಈ ನಿಟ್ಟಿನಲ್ಲಿ ಟಿಆರ್‌ಪಿ ತಿರುಚಲಾಗಿರುವ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ? ರಿಪಬ್ಲಿಕ್ ಟಿವಿಯ ಸ್ಥಿತಿ ಏನಾಗಲಿದೆ? ಎಂಬುದನ್ನು ಕಾದುನೋಡಬೇಕಿದೆ.

  • ಗೌತಮ್ ಮತ್ತು ಸುನೀಲ್ ಸಿರಸಂಗಿ

ಇದನ್ನೂ ಓದಿ: TRP ಹಗರಣ: ಎಲ್ಲರಂತೆ ಹೈಕೋರ್ಟ್‌ಗೆ ಹೋಗಿ ಎಂದ ಸುಪ್ರೀಂ, ರಿಪಬ್ಲಿಕ್ ಅರ್ನಾಬ್‌ಗೆ ಮುಖಭಂಗ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...