ದೇಶದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಮತ್ತು ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ಯಾವ ಪಕ್ಷ ಮೇಲುಗೈ ಸಾಧಿಸಲಿದೆ ಎನ್ನುವ ಲೆಕ್ಕಾಚಾರಗಳು ಆರಂಭವಾಗಿವೆ. ಕೊರೊನಾ ಸಾಂಕ್ರಾಮಿಕ ರೋಗ, ದೇಶದ ಆರ್ಥಿಕ ಕುಸಿತ, ಪಕ್ಷಾಂತರ, ಧಾರ್ಮಿಕತೆ ಮುಂತಾದ ವಿಷಯಗಳು ಈ ಚುನಾವಣೆಯಲ್ಲಿ ಪ್ರಮುಖ ನಿರ್ಣಾಯಕ ಅಂಶಗಳಾಗಲಿವೆ.

ಆದರೆ ಉತ್ತರ ಪ್ರದೇಶದ ಉಪಚುನಾವಣೆಗೆ ಸಂಬಂಧಿಸಿದಂತೆ ಕುತೂಹಲ ಇನ್ನೂ ಹೆಚ್ಚಾಗಿದೆ. ಏಕೆಂದರೆ ಇತ್ತೀಚಿನ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿದಂತೆ ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು, ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಮತ್ತು ರಾಮಮಂದಿರ ನಿರ್ಮಾಣದಂತಹ ಧಾರ್ಮಿಕತೆಯ ಅಂಶಗಳು ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿವೆಯೇ ಎಂಬ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದೆ.

ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದ್ದು, ಇವುಗಳ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಭಾವ ಹೆಚ್ಚು ಬೀರಬಹುದು. ಇವುಗಳ ಪೈಕಿ ‘ಬಂಗರ್ಮವು’ ಕ್ಷೇತ್ರದಲ್ಲಿ ಬಿಜೆಪಿ ಶಾಸಕಾರಾಗಿದ್ದ ಕುಲದೀಪ್ ಸೆಂಗಾರ್‌ ಮೇಲೆ ಅತ್ಯಾಚಾರ ಆರೋಪವಿದ್ದುದರಿಂದ ಅವರು ಈ ಸ್ಥಾನದಿಂದ ಅಮಾನತುಗೊಂಡಿದ್ದರು. ತೆರವಾದ ಈ ಸ್ಥಾನಕ್ಕೆ ಈಗ ಚುನಾವಣೆ ನಡೆಯಲಿದೆ.

ಈ ಎಲ್ಲಾ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಮತ್ತು ಸಿಎಂ ಆದಿತ್ಯನಾಥ್ ಆರೋಪಿಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದರಿಂದ ದೊಡ್ಡ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಹಾಗಾಗಿ ಈ ಉಪ ಚುನಾವಣೆಗಳು ಮುಖ್ಯಮಂತ್ರಿ ಮತ್ತು ಪ್ರತಿಷ್ಠೆಯ ಯುದ್ಧವಾಗಿ ಮಾರ್ಪಟ್ಟಿದೆ.

ಇನ್ನು ಹತ್ರಾಸ್ ಪ್ರಕರಣ, ವಿವಾದಾತ್ಮಕ ಕೃಷಿ ಕಾನೂನುಗಳು ಮತ್ತು ಉದ್ಯೋಗ ಬಿಕ್ಕಟ್ಟುಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿರುವ ಪ್ರತಿಪಕ್ಷಗಳಿಗೂ ಈ ಉಪಚುನಾವಣೆಗಳು ನಿರ್ಣಾಯಕವಾಗಿವೆ.

ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌.ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಇವುಗಳಲ್ಲಿ ಯಾವುದು ಜನಾಧರಣೆಯನ್ನು ಪಡೆಯಲಿವೆ ಎಂಬುದು ಕುತೂಹಲಕಾರಿಯಾಗಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಅಧಿಕಾರಿಗಳ ಎದುರೇ ಗುಂಡು ಹಾರಿಸಿ ಹತ್ಯೆಗೈದ ಬಿಜೆಪಿ ಶಾಸಕನ ಆಪ್ತ!

ಪ್ರತಿ ಪಕ್ಷಕ್ಕೂ ಕಾರ್ಯತಂತ್ರವೇನು?

ಬಿಜೆಪಿ;

ಬಿಜೆಪಿ ಠಾಕೂರ್ ಪ್ರಾಬಲ್ಯವನ್ನು ಬಳಸಿಕೊಳ್ಳಲು ಠಾಕೂರ್ ಜಾತಿಯವರನ್ನು ಕಣಕ್ಕಿಳಿಸಿದೆ. ಎರಡು ಕ್ಷೇತ್ರದಲ್ಲಿ ಬ್ರಾಹ್ಮಣರು ಮತ್ತು ಕುರ್ಮಿ ಜಾತಿಯವರನ್ನು ಕಣಕ್ಕಿಳಿಸಿದೆ. ಜಾತಿ ಸಂಯೋಜನೆಯ ವಿಷಯದಲ್ಲಿ, ಬಿಜೆಪಿ ಇಬ್ಬರು ಠಾಕೂರ್, ಇಬ್ಬರು ದಲಿತರು, ಓರ್ವ ಬ್ರಾಹ್ಮಣ, ಓರ್ವ ಜಾಟ್ ಮತ್ತು ಓರ್ವ ಕುರ್ಮಿ ಜಾತಿಯವರನ್ನು ಕಣಕ್ಕಿಳಿಸಿದೆ. ಎರಡು ಸ್ಥಾನಗಳಲ್ಲಿ ಬಿಜೆಪಿ ಮೃತ ಶಾಸಕರ ಪತ್ನಿಯರನ್ನು ಕಣಕ್ಕಿಳಿಸಿದೆ:

ಎಸ್‌ಪಿ ಮತ್ತು ಆರ್‌ಎಲ್‌ಡಿ;

ಸಮಾಜವಾದಿ ಪಕ್ಷವು ಈವರೆಗೆ ತನ್ನ ಪಾತ್ರವನ್ನು ಚೆನ್ನಾಗಿ ದಾಖಲಿಸಿದೆ. ಈ ಸಂದರ್ಭದಲ್ಲಿ ಆರ್‌ಎಲ್‌ಡಿಯೊಂದಿಗಿನ ಮೈತ್ರಿ ಕೂಡ ಮುಖ್ಯವಾದ ವಷಯವಾಗಿದ್ದು, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರು ಬಿಜೆಪಿಯ ವಿರುದ್ಧ ಕೃಷಿ ಶಾಸನಗಳು ಮತ್ತು ಹತ್ರಾಸ್ ಪ್ರಕರಣದ ಬಗ್ಗೆ ತೀವ್ರವಾಗಿ ಟೀಕಿಸುತ್ತಿದ್ದಾರೆ ಮಾಡುತ್ತಿದ್ದಾರೆ. ಇವರು ಈ ಸಂಬಂಧ ಲಾಠಿ ಏಟು ತಿಂದಿದ್ದು, ಇದು ಬಿಜೆಪಿ ಸರ್ಕಾರಕ್ಕೆ ಸಾಕಷ್ಟು ಹಿನ್ನಡೆಯನ್ನುಂಟುಮಾಡಿದೆ.

ಆರ್‌ಎಲ್‌ಡಿ ಬುಲಂದ್‌ಶಹರ್ ಸ್ಥಾನದಲ್ಲಿ ಎಸ್‌ಪಿ ಬೆಂಬಲದೊಂದಿಗೆ ಸ್ಪರ್ಧಿಸಲಿದ್ದು, ಉಳಿದ ಎಲ್ಲಾ ಸ್ಥಾನಗಳಲ್ಲಿಯೂ ಎಸ್‌ಪಿಗೆ ಬೆಂಬಲ ನೀಡಲಿದೆ. ಎಸ್‌ಪಿ ಸ್ಪರ್ಧಿಸುತ್ತಿರುವ ಸ್ಥಾನಗಳಲ್ಲಿ, ಆರ್‌ಎಲ್‌ಡಿ ನೌಗವಾನ್ ಸದಾತ್ ಮತ್ತು ತುಂಡ್ಲಾದಲ್ಲಿ ಸ್ವಲ್ಪ ಪ್ರಭಾವ ಬೀರಿದ್ದು, ಮೈತ್ರಿಕೂಟವು ಎಸ್‌ಪಿಗೆ ಪ್ರಯೋಜನವನ್ನು ನೀಡುತ್ತದೆ.

ಇಬ್ಬರು ದಲಿತರು, ಓರ್ವ ಮುಸ್ಲಿಂ, ಓರ್ವ ಬ್ರಾಹ್ಮಣ, ಓರ್ವ ಯಾದವ್, ಮತ್ತು ಒಬಿಸಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಎಸ್‌ಪಿ ಜಾತಿ ಮತ್ತು ಸಮುದಾಯ ಸಮೀಕರಣಗಳನ್ನು ಉತ್ತಮವಾಗಿ ಸಮತೋಲನಗೊಳಿಸಿಕೊಂಡಿದೆ.

ಬಿಎಸ್‌ಪಿ;

ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕಬಾರದು ಎಂಬ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಿಂದ ಬಿಎಸ್‌ಪಿಗೆ ಹಿನ್ನಡೆಯಾಗಿದೆ.
ಪಕ್ಷವು ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇತರ ಪ್ರಮುಖ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನದಲ್ಲಿ ಮುಸ್ಲಿಂರನ್ನು ಕಣಕ್ಕಿಳಿಸಿದೆ. ಎಸ್‌ಪಿ ಒಬ್ಬರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿ ಯಾರನ್ನೂ ಕಣಕ್ಕಿಳಿಸಿಲ್ಲ. ಹಾಗಾಗಿ, ಇದು ಮುಸ್ಲಿಂ ಮತಗಳನ್ನು ಗೆಲ್ಲುವ ಬಿಎಸ್‌ಪಿಯ ತಂತ್ರದಂತೆ ತೋರುತ್ತದೆ.

ಇದನ್ನೂ ಓದಿ: ಲಾಕಪ್ ಡೆತ್: ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಪ್ರಕರಣ ದಾಖಲು!

ಕಾಂಗ್ರೆಸ್;

ಇತರ ಮೂರು ಪಕ್ಷಗಳಿಗಿಂತ ಹೆಚ್ಚು, ಕಾಂಗ್ರೆಸ್ ಮೂರು ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 1980 ರ ದಶಕದ ಉತ್ತರಾರ್ಧದಲ್ಲಿ ಕಳೆದುಹೋದ ಈ ಮತ ಬ್ಯಾಂಕ್ ಅನ್ನು ಮರಳಿ ಪಡೆಯುವ ಪಕ್ಷದ ಪ್ರಯತ್ನಗಳ ಭಾಗವಾಗಿ ಇದನ್ನು ನೋಡಬೇಕಾಗಿದೆ.

ವಿಶೇಷವೆಂದರೆ, ಪಕ್ಷವು ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ (ಬಂಗರ್ಮೌ ಮತ್ತು ತುಂಡ್ಲಾ). ಅತ್ಯಾಚಾರ ಅಪರಾಧಿ ಕುಲದೀಪ್ ಸೆಂಗಾರ್ ಖಾಲಿ ಇರುವ ಸ್ಥಾನದಲ್ಲಿ ಮಹಿಳಾ ಅಭ್ಯರ್ಥಿಯನ್ನು ಹಾಕುವುದು ಯೋಗಿ ಸರ್ಕಾರವನ್ನು ಬಗ್ಗುಬಡಿಯುವ ಕಾರ್ಯತಂತ್ರದಂತೆ ಕಾಣುತ್ತಿದೆ.

ಹತ್ರಾಸ್ ಅತ್ಯಾಚಾರ ಪ್ರಕರಣದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರ ಹತ್ರಾಸ್ ಭೇಟಿಗಳು ಹೆಚ್ಚಿನ ಸಂಚಲನವನ್ನು ಉಂಟುಮಾಡಿವೆ. ಇದು ಉಪ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಲಿದೆ ಎಂದು ಪಕ್ಷವು ನಂಬಿದೆ.

ಉತ್ತರ ಪ್ರದೇಶದದಲ್ಲಿ ಪ್ರಮುಖ ಪಕ್ಷಗಳ ಲೆಕ್ಕಾಚಾರ ಇದರ ಮೇಲೆ ಅವಲಂಬಿತವಾಗಿದೆ. ಇದರಲ್ಲಿ ಯಾರ ಭವಿಷ್ಯ ಪೂರ್ವ ನಿರ್ಧಾರಗಳು ಮೇಲುಗೈ ಸಾಧಿಸುತ್ತದೆ ಎಂದು ಕಾದುನೋಡಬೇಕಿದೆ.

ಉಪಚುನಾವಣೆಯ 7 ಪ್ರಮುಖ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು:

1. ಬಂಗರ್ಮವು
ಜಿಲ್ಲೆ: ಉನ್ನಾವೊ. ಪ್ರಮುಖ ಅಭ್ಯರ್ಥಿಗಳು: ಬಿಜೆಪಿ: ಶ್ರೀಕಾಂತ್ ಕಟಿಯಾರ್, ಎಸ್ಪಿ: ಸುರೇಶ್ ಕುಮಾರ್ ಪಾಲ್, ಬಿಎಸ್ಪಿ: ಮಹೇಶ್ ಪ್ರಸಾದ್, ಕಾಂಗ್ರೆಸ್: ಆರತಿ ಬಾಜ್ಪೈ (ಕುಲದೀಪ್ ಸೆಂಗಾರ್ ಪಕ್ಷಾಂತರಗೊಂಡು 2017 ರಲ್ಲಿ ಗೆಲ್ಲುವವರೆಗೂ ಬಿಜೆಪಿ ಈ ಸ್ಥಾನವನ್ನು ಗೆದ್ದಿರಲಿಲ್ಲ. ಜನ ಸಂಘವು 50 ವರ್ಷಗಳ ಹಿಂದೆ 1967 ರಲ್ಲಿ ಈ ಸ್ಥಾನವನ್ನು ಗೆದ್ದಿತ್ತು)

2. ಘಟಂಪೂರ್ (ಎಸ್‌ಸಿ)
ಜಿಲ್ಲೆ: ಕಾನ್ಪುರ. ಪ್ರಮುಖ ಅಭ್ಯರ್ಥಿಗಳು: ಬಿಜೆಪಿ: ಉಪೇಂದ್ರ ಪಾಸ್ವಾನ್, ಎಸ್ಪಿ: ಇಂದ್ರಜಿತ್ ಕೋರಿ, ಬಿಎಸ್ಪಿ: ಕುಲದೀಪ್ ಕುಮಾರ್, ಕಾಂಗ್ರೆಸ್: ಕೃಪಾ ಶಂಕರ್ (ಬಂಗರ್ಮವು ಕ್ಷೇತ್ರದಂತೆ, 2017 ರವರೆಗೂ ಬಿಜೆಪಿ ಎಂದಿಗೂ ಘಟಂಪೂರ್ ಸ್ಥಾನವನ್ನು ಗೆದ್ದಿರಲಿಲ್ಲ)

3. ಮಲ್ಹಾನಿ
ಜಿಲ್ಲೆ: ಜಾನ್‌ಪುರ. ಪ್ರಮುಖ ಅಭ್ಯರ್ಥಿಗಳು: ಬಿಜೆಪಿ: ಮನೋಜ್ ಸಿಂಗ್, ಎಸ್ಪಿ: ಲಕ್ಕಿ ಯಾದವ್, ಬಿಎಸ್ಪಿ: ಜೈ ಪ್ರಕಾಶ್, ಕಾಂಗ್ರೆಸ್: ರಾಕೇಶ್ ಮಿಶ್ರಾ. (ಉಪಚುನಾವಣೆಯಲ್ಲಿ ಮತ ಚಲಾಯಿಸುವ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಇಲ್ಲದ ಏಕೈಕ ಸ್ಥಾನ ಇದು. ಈ ಸ್ಥಾನವನ್ನು ಜೂನ್‌ನಲ್ಲಿ ನಿಧನ ಹೊಂದಿದ ಹಿರಿಯ ಸಮಾಜವಾದಿ ಪಕ್ಷದ ಮುಖಂಡ ಮತ್ತು ಶಾಸಕ ಪಾರಸ್‌ನಾಥ್ ಯಾದವ್ ಹೊಂದಿದ್ದರು. ಇವರ ಮಗ ಲಕ್ಕಿ ಯಾದವ್ ಅವರನ್ನು ಎಸ್‌ಪಿ ಣಕ್ಕಕಿಳಿಸಿದೆ)

4. ಡಿಯೋರಿಯಾ
ಜಿಲ್ಲೆ: ಡಿಯೋರಿಯಾ. ಪ್ರಮುಖ ಅಭ್ಯರ್ಥಿಗಳು: ಬಿಜೆಪಿ: ಸತ್ಯ ಪ್ರಕಾಶ್ ಮಣಿ, ಎಸ್ಪಿ: ಬ್ರಹ್ಮಶಂಕರ್ ತ್ರಿಪಾಠಿ, ಬಿಎಸ್ಪಿ: ಅಭಯನಾಥ ತ್ರಿಪಾಠಿ, ಕಾಂಗ್ರೆಸ್: ಮುಕುಂದ ಭಾಸ್ಕರ್ ಮಣಿ ತ್ರಿಪಾಠಿ. (ನಾಲ್ಕು ಪ್ರಮುಖ ಪಕ್ಷಗಳು ಡಿಯೋರಿಯಾದಿಂದ ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 1991 ಮತ್ತು 1993 ರಲ್ಲಿ, 2012 ಮತ್ತು 2017 ರಲ್ಲಿ ಬಿಜೆಪಿ ಗೆದ್ದಿರುವ ಕಾರಣ ಇದನ್ನು ಬಿಜೆಪಿಯ ಬಲವಾದ ಸ್ಥಾನವೆಂದು ಪರಿಗಣಿಸಲಾಗಿದೆ.

5. ನೌಗವಾನ್ ಸದಾತ್
ಜಿಲ್ಲೆ: ಅಮ್ರೋಹಾ. ಪ್ರಮುಖ ಅಭ್ಯರ್ಥಿಗಳು: ಬಿಜೆಪಿ: ಸಂಗೀತ ಚೌಹಾಣ್, ಎಸ್ಪಿ: ಸೈಯದ್ ಜಾವೇದ್ ಅಬ್ಬಾಸ್, ಬಿಎಸ್ಪಿ: ಫುರ್ಕಾನ್ ಅಹ್ಮದ್, ಕಾಂಗ್ರೆಸ್: ಕಮಲೇಶ್ ಸಿಂಗ್. (ಬಿಜೆಪಿ ನಾಯಕ ಮತ್ತು ಮಾಜಿ ಕ್ರಿಕೆಟಿಗ ಚೇತನ್ ಚೌಹಾನ್ ಅವರ ನಿಧನದ ನಂತರ ಈ ಸ್ಥಾನ ತೆರವಾಗಿತ್ತು. ಶಿಯಾ ಮುಸ್ಲಿಮರು ಸಾಕಷ್ಟು ಇರುವ ಸ್ಥಾನಗಳಲ್ಲಿ ಇದೂ ಒಂದು)

6. ತುಂಡ್ಲಾ (ಎಸ್‌ಸಿ)
ಜಿಲ್ಲೆ: ಫಿರೋಜಾಬಾದ್. ಪ್ರಮುಖ ಅಭ್ಯರ್ಥಿಗಳು: ಬಿಜೆಪಿ: ಪ್ರೇಂಪಲ್ ಧಂಗರ್, ಎಸ್ಪಿ: ಮಹಾರಾಜ್ ಸಿಂಗ್ ಧಂಗರ್, ಬಿಎಸ್ಪಿ: ಸಂಜೀವ್ ಕುಮಾರ್ ಚಕ್, ಕಾಂಗ್ರೆಸ್: ಸ್ನೇಹಲತಾ. (ಹಾಲಿ ಶಾಸಕರಾಗಿದ್ದ ಎಸ್‌ಪಿ ಸಿಂಗ್ ಬಾಗೇಲ್ ಆಗ್ರಾದಿಂದ ಲೋಕಸಭೆಗೆ ಆಯ್ಕೆಯಾದ ನಂತರ ಈ ಸ್ಥಾನ ಖಾಲಿ ಬಿದ್ದಿದೆ. ಬಿಜೆಪಿ ಮತ್ತು ಎಸ್‌ಪಿ ಅಭ್ಯರ್ಥಿಗಳು ಇಬ್ಬರೂ ಧಂಗರ್/ಗಡ್ಡೇರಿಯಾ ಅಥವಾ ಕುರುಬ ಸಮುದಾಯದವರು)

7. ಬುಲಂದ್‌ಶಹರ್
ಜಿಲ್ಲೆ: ಬುಲಂದ್‌ಶಹರ್. ಪ್ರಮುಖ ಅಭ್ಯರ್ಥಿಗಳು: ಬಿಜೆಪಿ: ಉಷಾ ಸಿರೋಹಿ, ಬಿಎಸ್ಪಿ: ಮೊಹಮ್ಮದ್ ಯೂನುಸ್, ಕಾಂಗ್ರೆಸ್: ಸುಶೀಲ್ ಚೌಧರಿ, ಆರ್‌ಎಲ್‌ಡಿ: ಪ್ರವೀಣ್ ಸಿಂಗ್. (ಎಸ್‌ಪಿ ಈ ಸ್ಥಾನದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಅದು ಆರ್‌ಎಲ್‌ಡಿಯನ್ನು ಬೆಂಬಲಿಸುತ್ತಿದೆ. ಇಲ್ಲಿ ಬಿಜೆಪಿ ಮೃತ ಶಾಸಕರ ಪತ್ನಿಯನ್ನು ಈ ಸ್ಥಾನದಲ್ಲಿ ಕಣಕ್ಕಿಳಿಸಿದೆ)


ಇದನ್ನೂ ಓದಿ: ಉತ್ತರ ಪ್ರದೇಶ: ಬ್ರಾಹ್ಮಣರ ಬಗ್ಗೆ ಸದನಕ್ಕೆ ಪ್ರಶ್ನೆ ಕೇಳಿ ತಮ್ಮದೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಜೆಪಿ ಶಾಸಕ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here