Homeಮುಖಪುಟರೇಟಿಂಗ್ ಹೆಚ್ಚಿಸಲು ಅರ್ನಾಬ್ 12,000 ಡಾಲರ್ ಮತ್ತು 40 ಲಕ್ಷ ರೂ ಪಾವತಿಸಿದ್ದಾರೆ: ಪಾರ್ಥೋ ದಾಸ್‌ಗುಪ್ತಾ

ರೇಟಿಂಗ್ ಹೆಚ್ಚಿಸಲು ಅರ್ನಾಬ್ 12,000 ಡಾಲರ್ ಮತ್ತು 40 ಲಕ್ಷ ರೂ ಪಾವತಿಸಿದ್ದಾರೆ: ಪಾರ್ಥೋ ದಾಸ್‌ಗುಪ್ತಾ

- Advertisement -

ಎರಡು ರಜಾ ದಿನಗಳಲ್ಲಿ ರಿಪಬ್ಲಿಕ್‌ ಟಿವಿಯ ರೇಟಿಂಗ್‌ ಉತ್ತಮವಾಗಿರುವಂತೆ ಟಿಆರ್‌ಪಿಯನ್ನು‌ ಬದಲಾಯಿಸಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ 12,000 ಅಮೆರಿಕನ್‌ ಡಾಲರ್‌ ಮತ್ತು ಇಡೀ ವರ್ಷಕ್ಕೆ ಒಟ್ಟು 40 ಲಕ್ಷ ರೂಪಾಯಿಗಳನ್ನು ತಮಗೆ ಕೊಟ್ಟಿರುವುದಾಗಿ ಬಾರ್ಕ್‌‌ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಕೈಬರಹದಲ್ಲಿ ಹೇಳಿಕೆ ನೀಡಿದ್ದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ.

ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್)ನ ಫೋರೆನ್ಸಿಕ್ ಆಡಿಟ್ ವರದಿ, ದಾಸ್‌ಗುಪ್ತಾ ಮತ್ತು ಗೋಸ್ವಾಮಿ ನಡುವೆ ವಾಟ್ಸಾಪ್ ಚಾಟ್‌ಗಳು ಹಾಗೂ ಮಾಜಿ ಕೌನ್ಸಿಲ್ ನೌಕರರು ಮತ್ತು ಕೇಬಲ್ ಆಪರೇಟರ್‌ಗಳು ಸೇರಿದಂತೆ 59 ಜನರ ಹೇಳಿಕೆಗಳುಳ್ಳ 3,600 ಪುಟಗಳ ಟಿಆರ್‌ಪಿ ಹಗರಣ ಪ್ರಕರಣದ ಪೂರಕ ಚಾರ್ಜ್‌ಶೀಟ್‌ ಅನ್ನು ಜನವರಿ 11 ರಂದು ಮುಂಬೈ ಪೊಲೀಸರು ಸಲ್ಲಿಸಿದ್ದಾರೆ.

ಲೆಕ್ಕಪರಿಶೋಧನಾ (ಆಡಿಟ್‌) ವರದಿಯಲ್ಲಿ ರಿಪಬ್ಲಿಕ್ ಟಿವಿ, ಟೈಮ್ಸ್ ನೌ ಮತ್ತು ಆಜ್ ತಕ್ ಸೇರಿದಂತೆ ಹಲವಾರು ಸುದ್ದಿ ಚಾನೆಲ್‌ಗಳನ್ನು ಹೆಸರಿಸಲಾಗಿದೆ. ಅಲ್ಲದೆ, ಬಾರ್ಕ್‌ನ ಉನ್ನತ ಅಧಿಕಾರಿಗಳು ಚಾನೆಲ್‌ಗಳಿಗೆ ರೇಟಿಂಗ್‌ಗಳನ್ನು “ಮೊದಲೇ ನಿಗದಿ ಪಡಿಸಿದ್ದಾರೆ” ಎಂದೂ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಭಾರತೀಯ ಮಾಧ್ಯಮಗಳು; ಅನ್ನದಾತರನ್ನೇ ಭಯೋತ್ಪಾದಕರು-ದೇಶದ್ರೋಹಿಗಳು ಎನ್ನುತ್ತಿವೆ!

ಪೂರಕ ಚಾರ್ಜ್‌ಶೀಟ್ಅನ್ನು ದಾಸ್‌ಗುಪ್ತಾ, ಮಾಜಿ ಬಾರ್ಕ್ ಸಿಒಒ ರೊಮಿಲ್ ರಾಮ್‌ಗರ್ಹಿಯಾ ಮತ್ತು ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಸಿಇಒ ವಿಕಾಸ್ ಖನ್‌ಚಂದಾನಿ ವಿರುದ್ಧ ದಾಖಲಿಸಲಾಗಿದೆ. ಇದಕ್ಕೂ ಮೊದಲು 2020 ರ ನವೆಂಬರ್‌ನಲ್ಲಿ 12 ಜನರ ವಿರುದ್ಧ ಮೊದಲ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ದಾಸ್‌ಗುಪ್ತಾ ಅವರ ಹೇಳಿಕೆಯನ್ನು 2020 ರ ಡಿಸೆಂಬರ್ 27 ರಂದು ಸಂಜೆ 5.15 ಕ್ಕೆ ಅಪರಾಧ ಗುಪ್ತಚರ ಘಟಕದ ಕಚೇರಿಯಲ್ಲಿ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ದಾಖಲಿಸಲಾಗಿದೆ ಎಂದು ಎರಡನೇ (ಪೂರಕ) ಚಾರ್ಜ್‌ಶೀಟ್ನಲ್ಲಿ ಹೇಳಲಾಗಿದೆ.

ಅರ್ನಾಬ್
PC: News Laundry

ದಾಸ್‌ಗುಪ್ತಾ ಅವರ ಹೇಳಿಕೆಯು ಹೀಗಿದೆ: “ನನಗೆ ಅರ್ನಾಬ್ ಗೋಸ್ವಾಮಿ ಅವರು 2004 ರಿಂದ ಪರಿಚಿತರು. ನಾವು ಟೈಮ್ಸ್ ನೌನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ನಾನು 2013 ರಲ್ಲಿ BARCನ ಸಿಇಒ ಆಗಿ ಸೇರಿಕೊಂಡೆ. ಅರ್ನಾಬ್ ಗೋಸ್ವಾಮಿ ಅವರು 2017 ರಲ್ಲಿ ರಿಪಬ್ಲಿಕ್ ಅನ್ನು ಪ್ರಾರಂಭಿಸಿದರು. ರಿಪಬ್ಲಿಕ್ ಟಿವಿಯನ್ನು ಪ್ರಾರಂಭಿಸುವ ಮೊದಲೇ ಅವರು ನನ್ನೊಂದಿಗೆ ಬ್ರಾಡ್‌ಕಾಸ್ಟಿಂಗ್‌ (ಪ್ರಸಾರ) ಯೋಜನೆಗಳ ಬಗ್ಗೆ ಮಾತನಾಡಿದ್ದರು. ಟಿಆರ್‌ಪಿ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ತಿಳಿದಿದೆ ಎಂದು ಗೋಸ್ವಾಮಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಅವರ ಚಾನಲ್‌ಗೆ ಉತ್ತಮ ರೇಟಿಂಗ್ ಪಡೆಯಲು ಸಹಾಯ ಮಾಡಬೇಕು ಎಂಬುದರ ಬಗ್ಗೆ ಪರೋಕ್ಷವಾಗಿ ಸುಳಿವು ನೀಡುತ್ತಿದ್ದರು. ಭವಿಷ್ಯದಲ್ಲಿ ನನಗೆ ಸಹಾಯ ಮಾಡಲು ಅವರು ಪ್ರಸ್ತಾಪಿಸಿದ್ದರು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಿಕ್ಕೆಟ್ಟ ಕಾಲದ ನಿಜದನಿ ನವಮಾಧ್ಯಮ; ಇಂದು ಕಾವಲು ಕಾಯುತ್ತಿರುವ ಮಾಧ್ಯಮಗಳು ಯಾವುವು?

“ರಿಪಬ್ಲಿಕ್ ಟಿವಿಗೆ ನಂಬರ್ 1 ರೇಟಿಂಗ್ ಸಿಗುವಂತೆ ಮಾಡಿದ ಟಿಆರ್‌ಪಿ ರೇಟಿಂಗ್‌ಗಳ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ನಾನು ನನ್ನ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಈ ಕೆಲಸವು 2017 ರಿಂದ 2019 ರವರೆಗೆ ನಡೆದಿತ್ತು. ಈ ನಿಟ್ಟಿನಲ್ಲಿ, 2017 ರಲ್ಲಿ ಅರ್ನಾಬ್ ಗೋಸ್ವಾಮಿ ಅವರು ಲೋವರ್ ಪ್ಯಾರೆಲ್‌ನ ಸೇಂಟ್ ರೆಗಿಸ್ ಹೋಟೆಲ್‌ನಲ್ಲಿ ವೈಯಕ್ತಿಕವಾಗಿ ನನ್ನನ್ನು ಭೇಟಿಯಾದರು. ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್‌ಗೆ ನನ್ನ ಕುಟುಂಬದ ಪ್ರವಾಸಕ್ಕಾಗಿ 6000 ಡಾಲರ್ ಹಣವನ್ನು ನೀಡಿದರು…

ನಂತರ, 2019 ರಲ್ಲಿ ಅರ್ನಾಬ್ ಗೋಸ್ವಾಮಿ ಅವರು ನನ್ನನ್ನು ಮತ್ತೆ ಅದೇ ಹೋಟೆಲ್‌ನಲ್ಲಿ ಭೇಟಿಯಾಗಿ ಸ್ವೀಡನ್ ಮತ್ತು ಡೆನ್ಮಾರ್ಕ್‌ಗೆ ನನ್ನ ಕುಟುಂಬ ಪ್ರವಾಸಕ್ಕಾಗಿ ನನಗೆ 6000 ಡಾಲರ್‌ಗಳನ್ನು ನೀಡಿದರು. ಅಲ್ಲದೆ 2017 ರಲ್ಲಿ ಗೋಸ್ವಾಮಿ ನನ್ನನ್ನು ವೈಯಕ್ತಿಕವಾಗಿ ಐಟಿಸಿ ಪ್ಯಾರೆಲ್ ಹೋಟೆಲ್‌ನಲ್ಲಿ ಭೇಟಿಯಾಗಿ 20 ಲಕ್ಷ ರೂ. ನಗದು ನೀಡಿದ್ದರು… 2018 ಮತ್ತು 2019 ರಲ್ಲಿಯೂ ಸಹ ಗೋಸ್ವಾಮಿ ನನ್ನನ್ನು ಐಟಿಸಿ ಹೋಟೆಲ್ ಪ್ಯಾರೆಲ್‌ನಲ್ಲಿ ಭೇಟಿಯಾಗಿ ಎರಡು ಬಾರಿಯು 10 ಲಕ್ಷ ರೂಗಳನ್ನು ನೀಡಿದರು” ಎಂದು ದಾಸ್‌ಗುಪ್ತಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

“ಈ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ನಿರಾಕರಿಸುತ್ತೇವೆ. ಏಕೆಂದರೆ ಈ ಹೇಳಿಕೆಯನ್ನು ಪುರಾವೆ ಇಲ್ಲದೆ ದಾಖಲಿಸಲಾಗಿದೆ. ಇದು ನ್ಯಾಯಾಲಯದಲ್ಲಿ ಪರಿಗಣಗೆ ಬರುವಂತದ್ದಲ್ಲ” ಎಂದು ದಾಸ್‌ಗುಪ್ತಾ ಅವರ ವಕೀಲ ಅರ್ಜುನ್ ಸಿಂಗ್ ಹೇಳಿದ್ದಾರೆ. ಅರ್ನಾಬ್ ಕೂಡಾ ಆರೋಪವನ್ನು ವಿರೋಧಿಸಿದ್ದು, ಅವರನ್ನು ಗುರಿಯಾಗಿಸಿಕೊಂಡು ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಸೇನಾ ರಹಸ್ಯ ಬಹಿರಂಗ: ಅರ್ನಾಬ್‌ನನ್ನು ಮತ್ತೆ ಅರೆಸ್ಟ್ ಮಾಡುತ್ತಾ ಮಹಾಸರ್ಕಾರ?

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial