ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನಿನ ವಿರುದ್ದ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ದೆಹಲಿಯಲ್ಲಿ ಟ್ರಾಕ್ಟರ್ ರ್‍ಯಾಲಿ ನಡೆಸಲು ಈಗಾಗಲೇ ಪೊಲೀಸರು ಅನುಮತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲೂ ರೈತರು ಟ್ರಾಕ್ಟರ್ ರ್‍ಯಾಲಿ ಆಯೋಜಿಸಿದ್ದಾರೆ. ಆದರೆ ರ್‍ಯಾಲಿಗೆ ಆಗಮಿಸುತ್ತಿರುವ ಟ್ರಾಕ್ಟರ್‌ಗಳನ್ನು ರಾಜ್ಯ ಪೊಲೀಸರು ಅಲ್ಲಲ್ಲೇ ತೆಡೆದು ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸುವ ರೈತರು ಟ್ರಾಕ್ಟರ್‌ನಲ್ಲಿ ಬಂದರೆ ಟ್ರಾಫಿಕ್ ಜಾಂ ಆಗುತ್ತದೆ, ಆದ್ದರಿಂದ ಟ್ರ್ಯಾಕ್ಟರ್ ಮೂಲಕ ಬರಬಾರದು ಎಂದಿರುವ ರಾಜ್ಯ ಡಿಜಿ ಅಂಡ್ ಐಜಿಪಿ ಪ್ರವೀಣ್ ಸೂದ್ ಜಿಲ್ಲಾ ಗಡಿಗಳಲ್ಲೇ ಟ್ರಾಕ್ಟರ್ ತಡೆಯಲು ಸೂಚನೆ ನೀಡಿದ್ದಾರೆ. ಭಾನುವಾರ ಬೆಂಗಳೂರಿಗೆ ಹೊರಟಿದ್ದ ರೈತರನ್ನು ಬೆಳಗಾವಿಯಲ್ಲಿ ತಡೆದು ನಿಲ್ಲಿಸಿದ್ದ ಪೊಲೀಸರು, ಟ್ರಾಕ್ಟರ್ ಬಿಟ್ಟು ಬೇರೆ ಯಾವುದೆ ವಾಹನಗಳಲ್ಲಿ ಹೊರಡಿ ಎಂದು ಹೇಳಿದ್ದರು.
ಇದನ್ನೂ ಓದಿ: ರ್‍ಯಾಲಿಗೆ ಟ್ರಾಕ್ಟರ್ ತರಬೇಡಿ ಎಂದ ಬೆಂಗಳೂರು ಪೊಲೀಸರು: ತಂದೇ ತರುತ್ತೇವೆ ಎಂದ ರೈತರು!
ರೈತರ ಗಣರಾಜ್ಯೋತ್ಸವಕ್ಕೆ ಇನ್ನು ಕಲವೇ ಗಂಟೆಗಳಿರುವಾಗ ಪೊಲೀಸರು ತಮ್ಮ ಕೆಲಸವನ್ನು ಚುರುಕುಗೊಳಿಸಿದ್ದಾರೆ. ಟ್ರಾಕ್ಟರ್‌ಗಳನ್ನು ಹೋರಾಟಕ್ಕೆ ತರಬಾರದು ಎಂದು ಪೊಲೀಸರು ವಿನಂತಿಸುತ್ತಿದ್ದು, ರೈತ ಮುಖಂಡರು ನಾವು ಟ್ರಾಕ್ಟರ್ ರ್‍ಯಾಲಿ ನಡೆಸಿಯೆ ತೀರುತ್ತೇವೆ ಎಂದು ಹೇಳಿದ್ದಾರೆ. ಹುಣಸೂರು, ಚಿಕ್ಕಬಳ್ಳಾಪುರ, ಮಡಿಕೇರಿ, ತುಮಕೂರಿನಲ್ಲಿ ಪೊಲೀಸರು ಟ್ರಾಕ್ಟರ್‌ಗಳನ್ನು ಈಗಾಗಲೇ ತಡೆಹಿಡಿದಿದ್ದಾರೆ.
ಭಾನುವಾರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಪೊಲೀಸರ ಕ್ರಮವನ್ನು ವಿರೋಧಿಸಿದ್ದು, “ರಾಜ್ಯದಲ್ಲಿ ರೈತರು, ಕಾರ್ಮಿಕರು ದಲಿತರು ಸೇರಿ ಬೆಂಗಳೂರಲ್ಲಿ ಟ್ರಾಕ್ಟರ್ ಪೆರೇಡ್ ಮೂಲಕ ಗಣರಾಜ್ಯೋತ್ಸವ ಆಚರಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಟ್ರಾಕ್ಟರ್ ರೈತರ ಸಂಕೇತ. ಈ ಕಾರ್ಯಕ್ರಮ ಟ್ರಾಕ್ಟರ್ ವರ್ಸರ್ಸ್ ಟ್ಯಾಂಕರ್ ಆಗಿದೆ. ಟ್ರಾಕ್ಟರ್‌ಗಳಿಗೆ ಅಡ್ಡಿಪಡಿಸಬೇಡಿ, ನಮ್ಮನ್ನು ಗೌರವಯುತವಾಗಿ ಬೆಂಗಳೂರಿಗೆ ಬರ ಮಾಡಿಕೊಂಡು ಅಷ್ಟೇ ಗೌರವವಾಗಿ ಬಿಳ್ಕೊಡಿ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬೊಮ್ಮಯಿ ಅವರಿಗೆ ವಿನಂತಿ ಮಾಡಿದ್ದರು.
ರೈತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿದರೆ, ಅವನ್ನು ಬಿಡಿಸಿಕೊಡಲು ನಾವೇ ಹೋಗುತ್ತೇವೆ ಎಂದು ಕಾಂಗ್ರೇಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಹೇಳಿದ್ದಾರೆ.
ಇದನ್ನೂ ಓದಿ: ರೈತರ ಗಣರಾಜ್ಯೋತ್ಸವ: ತುಮಕೂರಿನಲ್ಲಿ ಟ್ರಾಕ್ಟರ್ ತಡೆದ ಪೊಲೀಸರು
ಇಂದು ಪತ್ರಿಕಾಗೋಷ್ಠಯಲ್ಲಿ ಮಾತನಾಡಿದ್ದ ’ಸಂಯುಕ್ತ ಹೋರಾಟ ಕರ್ನಾಟ’ ಮುಖಂಡರು, “ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ರೈತರು ಸೇರಿದಂತೆ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರಿನಿಂದ ಅತಿ ಹೆಚ್ಚಿನ ರೈತರು ನಾಳೆಯ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಆದರೆ ಟ್ರ್ಯಾಕ್ಟರ್‌ಗಳನ್ನು ಎಲ್ಲೆಡೆ ಪೊಲೀಸರು ತಡೆಯುತ್ತಿದ್ದು ಇದನ್ನು ನಾವು ಖಂಡಿಸುತ್ತೇವೆ. ಏನೇ ಸಮಸ್ಯೆಗಳಿದ್ದರೆ ಪೊಲೀಸ್ ಅಧಿಕಾರಿಗಳು ನಮ್ಮೊಂದಿಗೆ ಚರ್ಚೆ ಮಾಡಲಿ. ಆದರೆ ನಿರ್ಬಂಧ ಹಾಕಲು ಪೊಲೀಸರು ಮುಂದಾದರೆ ಪರಿಸ್ಥಿತಿ ಕೈಮೀರುತ್ತದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ಜವಾಬ್ದಾರಿ” ಎಂದು ಎಚ್ಚರಿಸಿದ್ದಾರೆ.
ಈ ನಡುವೆ ಟ್ರ್ಯಾಕ್ಟರ್ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ನಗರ ಪೋಲಿಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ. ಇದಕ್ಕೆ ರೈತ ಮುಖಂಡರು ಕಿಡಿಕಾರಿದ್ದು, ಕೇಂದ್ರ ಸರ್ಕಾರವೇ ಟ್ರ್ಯಾಕ್ಟರ್ ಪೆರೇಡ್‌ಗೆ ಅವಕಾಶ ಕೊಟ್ಟಿದೆ. ದೆಹಲಿಯಲ್ಲಿಯೇ ಟ್ರ್ಯಾಕ್ಟರ್ ಪರೇಡ್ ನಡೆಯುತ್ತೆ ಅಂದ ಮೇಲೆ ರಾಜ್ಯ ಸರ್ಕಾರ ಏಕೆ ಅನುಮತಿ ಕೊಡಲ್ಲಾ? ನಾವು ನಾಳೆ ಟ್ರ್ಯಾಕ್ಟರ್ ಪೆರೇಡ್ ಮಾಡೇ ಮಾಡುತ್ತೇವೆ. ಟ್ಯಾಕ್ಟರ್ ಪೆರೇಡ್ ಇಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮನ್ನು ತಡೆದರೆ ಉಗ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟ್ರಾಕ್ಟರ್ ರ್‍ಯಾಲಿ: ರೈತರು ತಮಗೆ ತಾವೇ ಅಳವಡಿಸಿಕೊಂಡ ಮಾರ್ಗಸೂಚಿಗಳು ಇಲ್ಲಿವೆ!
