ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಇನ್ನೂ ಅಧಿಕಾರದಲ್ಲಿದ್ದರೆ ತಕ್ಷಣ ಧಾರವಾಡದ ಮುಸ್ಲಿಂ ವರ್ತಕರ ಮೇಲೆ ದೌಜ್ಯನ್ಯವೆಸಗಿದ್ದ ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ ಆದೇಶ ನೀಡಬೇಕು, ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪತ್ರಿಕಾ ವರದಿಗಳನ್ನು ಲಗತ್ತಿಸಿ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಅವರು, “ಭಾರತೀಯ ಜನತಾ ಪಕ್ಷ ಹೇಳಿಕೊಂಡು ಬರುತ್ತಿರುವ ‘ರಾಮ ರಾಜ್ಯ’ದ ಒಂದು ಚಿತ್ರವನ್ನು ರಾಮ ನವಮಿಯ ಹಿನ್ನೆಲೆಯಲ್ಲಿ ಧಾರವಾಡದ ಶ್ರೀರಾಮಸೇನೆಯ ಗೂಂಡಾಗಳು ಜಗತ್ತಿನ ಮುಂದೆ ಇಟ್ಟಿದ್ದಾರೆ. ಇಂತಹ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆ ಇದೆ?” ಎಂದು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಧಾರವಾಡದಲ್ಲಿ ನಡೆದ ಹಲ್ಲೆ ಕೇವಲ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದದ್ದಲ್ಲ, ಅದು ಅವರು ಮಾರಾಟ ನಡೆಸುತ್ತಿದ್ದ ಕಲ್ಲಂಗಡಿ ಬೆಳೆಯುವ ರೈತರ ಮೇಲೆ ನಡೆದಿರುವ ದೌರ್ಜನ್ಯವೂ ಆಗಿದೆ. ಈ ಗೂಂಡಾಗಳನ್ನು ಹೀಗೆ ಸ್ವತಂತ್ರವಾಗಿ ಬಿಟ್ಟರೆ ಇವರು ಎಲ್ಲರ ಮನೆ ಬಾಗಿಲು ತಟ್ಟಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜನರ ಗಮನವನ್ನು ಬೇರೆಡೆ ಸೆಳೆದು, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸರ್ಕಾರವನ್ನೇ ಸಂಘ ಪರಿವಾರಕ್ಕೆ ಔಟ್ ಸೋರ್ಸ್ ಮಾಡಿ, ಅಲ್ಲಿನ ಪುಂಡರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ಹಾಗೆ ಕಾಣುತ್ತಿದೆ. ರಾಜ್ಯದ ಇತಿಹಾಸದಲ್ಲಿ ಇದೊಂದು ಶಾಶ್ವತ ಕಳಂಕ.
ಮುಖ್ಯಮಂತ್ರಿ ಅವರಿಗೆ ತಮ್ಮ ಸಂಪುಟ ಇಲ್ಲವೇ ಪಕ್ಷದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಸರ್ಕಾರವನ್ನು ಸಂಘಪರಿವಾರಕ್ಕೆ ಅಡವಿಟ್ಟರೆ ತಮ್ಮ ಕುರ್ಚಿ ಉಳಿಸಿಕೊಳ್ಳಬಹುದು ಎಂದು ಕನಸುಕಾಣುತ್ತಿದ್ದಾರೆ. ಈ ಪುಂಡಾಟಿಕೆ ಅವರ ಕುರ್ಚಿಯನ್ನೂ ಕಿತ್ತುಕೊಳ್ಳಲಿದೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದಿದ್ದಾರೆ.
ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಹೇಳಿಕೆಯನ್ನು ಧಿಕ್ಕರಿಸುತ್ತಿರುವ ಈ ಸಿ.ಟಿ.ರವಿ, ರವಿಕುಮಾರ್ ಮೊದಲಾದ ಕೂಗುಮಾರಿಗಳ ಬಾಯಿಮುಚ್ಚಿಸಲಾಗದಷ್ಟು ಮುಖ್ಯಮಂತ್ರಿ ಬೊಮ್ಮಾಯಿಯವರು ಮೂಕ ಬಸವಣ್ಣನಾಗಿದ್ದಾರೆ. ಇಂತಹ ತಂಟೆಕೋರರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಇಡೀ ಪೊಲೀಸ್ ಇಲಾಖೆ ನೈತಿಕವಾಗಿ ಕುಸಿದುಹೋಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ದುರುದ್ದೇಶದಿಂದ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಮತ್ತು ಸಂಘ ಪರಿವಾರ ನಡೆಸುತ್ತಿರುವ ಪುಂಡಾಟಿಕಗಳಿಗಳಿಂದಾಗಿ ಹೊರರಾಜ್ಯ ಮತ್ತು ಹೊರದೇಶಗಳ ಎದುರು ಕೂಡುಬಾಳ್ವೆಗೆ ಹೆಸರಾದ ಶಾಂತಿ ಮತ್ತು ಸೌಹಾರ್ದ ಪ್ರಿಯ ಕನ್ನಡಿಗರು ತಲೆತಗ್ಗಿಸುವಂತಾಗಿದೆ. ಇದನ್ನು ಕನ್ನಡಿಗರು ಎಂದೂ ಕ್ಷಮಿಸರು ಎಂದು ಎಚ್ಚರಿಸಿದ್ದಾರೆ.
ಇದು ಮುಖ್ಯಮಂತ್ರಿಗಳೇ ಮಾಡಿರುವ ಪಾಪದ ಫಲ. ಬೀದಿಗೂಂಡಾಗಳ ಪುಂಡಾಟಿಕೆಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸಿಕೊಂಡ ನಂತರವೇ ಕೊಲೆ, ಹಿಂಸಾಚಾರ, ಗಲಾಟೆ, ದೌರ್ಜನ್ಯಗಳ ಹೊಸ ಸರಣಿ ರಾಜ್ಯದಲ್ಲಿ ಪ್ರಾರಂಭವಾಗಿದ್ದು. ಇದರಿಂದ ಕಾನೂನು ವ್ಯವಸ್ಥೆಯೇ ಕುಸಿದುಬಿದ್ದು ನಾಗರಿಕ ಯುದ್ಧಕ್ಕೆ ದಾರಿಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
ರಾಜ್ಯ ಬೇಡದ ಕೂಸು, ಅಳುವ ಕೂಸುಗಳನ್ನು ನೋಡಿಯಾಗಿದೆ. ಈಗಿನದ್ದು ಆಡುವ ಗೊಂಬೆಯ ಸರ್ಕಾರ. ಆ ಕೂಸುಗಳಿಗೆ ಜೀವವಾದರೂ ಇತ್ತು, ಈಗಿನದ್ದು ಸಂಪೂರ್ಣ ನಿರ್ಜೀವ ಆಟದ ಗೊಂಬೆ. ಮುಖ್ಯಮಂತ್ರಿಗಳು ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆಯಂತಾಗಿದ್ದಾರೆ ಎಂದು ಟೀಕಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಬಡಪಾಯಿ ಮುಸ್ಲಿಮನ ಮೇಲೆ ಶ್ರೀರಾಮಸೇನೆಯ ಗೂಂಡಾಗಿರಿ: ಅನ್ಯಾಯದ ವಿರುದ್ಧ ಮಿಡಿದ ಮನಸ್ಸುಗಳು


