Homeಅಂಕಣಗಳುನಿಷ್ಠುರತೆಯೊಳಗಿಂದ ಹೊಮ್ಮುವ ಲೋಕದ ಅರಿವು - ವೋಲೆ ಸೋಯಿಂಕಾ

ನಿಷ್ಠುರತೆಯೊಳಗಿಂದ ಹೊಮ್ಮುವ ಲೋಕದ ಅರಿವು – ವೋಲೆ ಸೋಯಿಂಕಾ

- Advertisement -
- Advertisement -

ಅಕಿನ್‌ವಾಂಡೆ ಒಲುವೋಲೆ ಸೋಯಿಂಕಾ- ಇದು ವೋಲೆ ಸೋಯಿಂಕಾನ ಪೂರ್ಣ ಹೆಸರು. ಸೋಯಿಂಕಾ ಹುಟ್ಟಿದಾಗ (ಜುಲೈ 13, 1934) ಅಬಿಯೊಕುಟ ಪಟ್ಟಣವು (ನೈಜೀರಿಯಾದ ಒಗುನ್ ರಾಜ್ಯದಲ್ಲಿದೆ) ಬ್ರಿಟಿಷರ ಅಧಿಪತ್ಯದಲ್ಲಿತ್ತು. ತನ್ನ ಬಾಲ್ಯಕಾಲದ ಕಥನವಾದ ’ಅಕೆ’ಯಲ್ಲಿ ಸೋಯಿಂಕಾ ’ಎಸ್ಸೆ’ (ಎಸ್.ಎ.) ಎಂಬ ಕಿರು ಹೆಸರಿನಿಂದ ಕರೆಯುವ ಸ್ಯಾಮುಯೆಲ್ (ಎಸ್) ಅಯೊಡೆಲಾ (ಎ) ಸೋಯಿಂಕಾನ ತಂದೆ. ಈತ ಇಂಗ್ಲೆಂಡ್ ಚರ್ಚಿನ ಸದಸ್ಯನಾಗಿದ್ದ. ಸ್ಥಳೀಯ ಪಾದ್ರಿ ಮತ್ತು ತನ್ನ ಸ್ನೇಹಿತರ ಜೊತೆ ಧರ್ಮ, ನಂಬಿಕೆ, ತತ್ವಶಾಸ್ತ್ರ ಇತ್ಯಾದಿ ವಿಷಯಗಳ ಬಗ್ಗೆ ನಿರಂತರ ಚರ್ಚೆಯಲ್ಲಿ ತೊಡಗಿರುತ್ತಿದ್ದ. ’ಎಸ್ಸೆ’ಯು ಒಳ್ಳೆಯ ಕೈಬರಹವನ್ನು ಕಲಿಯಲು ಮಗನಿಗೆ ಒತ್ತಾಯ ಮಾಡುತ್ತಿದ್ದ. ಎಷ್ಟು ಪ್ರಯತ್ನಿಸಿದರೂ ಸೋಯಿಂಕಾಗೆ ಅದು ಸಾಧ್ಯವಾಗುತ್ತಿರಲಿಲ್ಲ. ಅಪ್ಪನ ಸಂಕೀರ್ಣ ವ್ಯಕ್ತಿತ್ವ ಕೂಡ ಅವನ ಕೈಬರಹದ ಹಾಗೆ ಅರ್ಥವಾಗದೆ ನುಣುಚಿಕೊಳ್ಳುತ್ತದೆ ಎಂದು ಮಗನಿಗೆ ಅನ್ನಿಸುತ್ತಿತ್ತು. ಅಪ್ಪ ಮನೆಯಲ್ಲಿ ಇಲ್ಲದಾಗ ಅವನ ಕೋಣೆಯಲ್ಲಿಟ್ಟಿದ್ದ ಪುಸ್ತಕದ ಕಪಾಟಿನೊಳಗೆ ಹುದುಗಿ, ಪುಸ್ತಕಗಳನ್ನು ’ನುಂಗುವುದು’ ಸೋಯಿಂಕಾಗೆ ಬಲು ಇಷ್ಟದ ಕೆಲಸವಾಗಿತ್ತು.

ಅಬಿಯೊಕುಟದ ಮಾರುಕಟ್ಟೆಯಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದ ಗ್ರೇಸ್ ಎನಿಯೋಲ ಸೋಯಿಂಕಾನ ತಾಯಿ. ಈಕೆ ಸ್ಥಳೀಯ ಸಮುದಾಯದಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಟ ನಡೆಸುವ ರಾಜಕೀಯ
ಕಾರ್ಯಕರ್ತೆಯೂ ಆಗಿದ್ದಳು. ಈಕೆ ಕೂಡ ಇಂಗ್ಲೆಂಡ್ ಚರ್ಚಿನ ಸದಸ್ಯೆಯಾಗಿದ್ದಳು. ಸೋಯಿಂಕಾ ತನ್ನ ಆತ್ಮಕಥೆಯಲ್ಲಿ ಗ್ರೇಸ್‌ಳನ್ನು ’ವೈಲ್ಡ್ ಕ್ರಿಶ್ಚಿಯನ್’ ಎಂದು ಕರೆಯುತ್ತಾನೆ. ಹೀಗೆ ಕರೆಯಲು, ಅವನ ತಾಯಿಗೆ ಕ್ರೈಸ್ತ ಧರ್ಮದ ಬಗೆಗಿದ್ದ ಅತೀವ ನಂಬಿಕೆ, ಶಿಸ್ತುಗಳ ಜೊತೆಗೆ ಅಲೌಕಿಕ ಶಕ್ತಿಗಳ ಕುರಿತಾದ ಅವಳ ಭಯಮಿಶ್ರಿತ ನಂಬಿಕೆ ಕಾರಣವಾಗಿತ್ತು.

’ಎಸ್ಸೆ’ ಕುಟುಂಬವು ಸ್ಥಳೀಯ ಯೊರೂಬಾ ಬುಡಕಟ್ಟಿನ ಧಾರ್ಮಿಕ ಸಂಪ್ರದಾಯಗಳ ಜೊತೆಗೆ ಕ್ರೈಸ್ತ ಧರ್ಮದ ಆಚರಣೆಗಳನ್ನೂ ಪಾಲಿಸುತ್ತಿತ್ತು. ಆದ್ದರಿಂದ, ಸೋಯಿಂಕಾ ಧಾರ್ಮಿಕ, ಸಾಂಸ್ಕೃತಿಕ ಸಾಮರಸ್ಯದ ವಾತಾವರಣದಲ್ಲಿ ಬೆಳೆಯುವಂತಾಯಿತು. ನಂಬಿಕೆ, ಧರ್ಮ, ಆಚಾರ, ಅಲೌಕಿಕ ಶಕ್ತಿಗಳು ಇತ್ಯಾದಿಗಳ ಬಗೆಗೆ ತನ್ನ ತಂದೆ-ತಾಯಿಯಿಂದ ಬಾಲ್ಯದಲ್ಲಿಯೇ ಒದಗಿದ ಭಿನ್ನ ಅನುಭವಗಳು ಸೋಯಿಂಕಾನಲ್ಲಿ ಪ್ರಶ್ನಿಸುವ ಗುಣವನ್ನು ಸಹಜವಾಗಿ ಬೆಳೆಸಿದವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಬಿಯೊಕುಟ ಊರಿನ ಮಿಶನರಿ ಶಾಲೆಯಲ್ಲಿ ಸೋಯಿಂಕಾ ತಂದೆ ಕಟ್ಟುನಿಟ್ಟಿನ ಮುಖ್ಯೋಪಾಧ್ಯಾಯನಾಗಿ ಇದ್ದುದರ ಜೊತೆಗೆ ತಾನು ಹಾಕುತ್ತಿದ್ದ ಬಟ್ಟೆಯಿಂದ ಹಿಡಿದು ಊಟ, ಮನೆಯ ತನ್ನ ಇಷ್ಟದ ಹೂದೋಟದಲ್ಲಿ ಗಿಡಗಳ ಆರೈಕೆ ಇತ್ಯಾದಿ ಎಲ್ಲ ಸಂಗತಿಗಳಲ್ಲಿ ಠಾಕುಠೀಕಾಗಿ ಇರುತ್ತಿದ್ದ. ಈ ಸಂಗತಿಗಳ ಹಿನ್ನೆಲೆಯಲ್ಲಿ ಸೋಯಿಂಕಾಗೆ ಶಾಲೆಯಲ್ಲಿ ಟೀಚರ್ ಬರೆಯಲು ಕೊಡುತ್ತಿದ್ದ ಪ್ರಬಂಧದ ಹೋಂವರ್ಕ್ ನಿರೀಕ್ಷಿಸುತ್ತಿದ್ದ ಕಟ್ಟುನಿಟ್ಟಿನ ನಿಯಮಗಳ ಮತ್ತೊಂದು ರೂಪವಾಗಿ ತನ್ನ ಅಪ್ಪ ಕಾಣುತ್ತಿದ್ದ. ಇದರ ಜೊತೆಗೆ ಅಪ್ಪನಲ್ಲಿದ್ದ ಅಪಾರ ಪುಸ್ತಕಗಳು ಅವನ ಬಗೆಗಿನ ಅವನ ಆಸಕ್ತಿ, ಗೌರವ ಮತ್ತು ಕುತೂಹಲವನ್ನು ಹೆಚ್ಚಿಸುತ್ತಿದ್ದವು. ಬಾಲ್ಯದಿಂದಲೂ ಸದಾ ತನ್ನನ್ನು ಮೀರಿದ ಯಾವುದೋ ’ಕನಸಿನ ಲೋಕ’ದಲ್ಲಿ ತಾನು ಮುಳುಗಿರುವಂತೆನಿಸುತ್ತಿದ್ದ ಸೋಯಿಂಕಾನಿಗೆ, ತನ್ನ ಇಂತಹ ಸ್ಥಿತಿಯು ’ಹುಚ್ಚುತನದ ಬಗೆ’ಯಾಗಿ ಅನಿಸುತ್ತಿದ್ದುದಾಗಿ ಮತ್ತು ತನ್ನ ಈ ಹುಚ್ಚುತನವನ್ನು ಅಪ್ಪ ಅವನದ್ದೆ ರೀತಿಯಲ್ಲಿ ಕಾಪಿಡುತ್ತಿದ್ದುದರ ಬಗ್ಗೆ ಆತ್ಮಕಥೆಯಲ್ಲಿ ಹೇಳಿಕೊಳ್ಳುತ್ತಾನೆ.

ತಾಯಿಯ ’ನಂಬಿಕೆ’ ಯಾವ ಬಗೆಯದ್ದೆಂದು ಹೇಳುತ್ತ ಸೋಯಿಂಕಾ ನೀಡುವ ಹಲವು ಉದಾಹರಣೆಗಳಲ್ಲಿ ಒಂದು ಕುತೂಹಲಕಾರಿಯಾಗಿದೆ: ಅಗಲ ಬಾಯಿಯುಳ್ಳ ಪಾತ್ರೆಯಿಂದ ಖಾಲಿ ಬಾಟಲಿನೊಳಗೆ ಕಡಲೆಕಾಯಿ ಎಣ್ಣೆಯನ್ನು ಸುರಿಯುವ ಸಂದರ್ಭಗಳಲ್ಲಿ ಒಂದು ತೊಟ್ಟು ಎಣ್ಣೆಯೂ ಹೊರಚೆಲ್ಲದಂತೆ ಸುರಿಯಬೇಕೆನ್ನುವುದು ತಾಯಿಯ ’ಶಿಸ್ತು’. ಈ ಕೆಲಸವನ್ನು ಮಾಡಿ ಮುಗಿಸಿದಾಗೆಲ್ಲ ಅವಳು ಒಂದು ಬಗೆಯ ವಿಚಿತ್ರ ನಿಟ್ಟುಸಿರಿಡುವ ಅಭ್ಯಾಸ ಮಾಡಿಕೊಂಡಿದ್ದಳಂತೆ. ಆ ನಿಟ್ಟುಸಿರು ಎಣ್ಣೆಯನ್ನು ಹೊರಕ್ಕೆ ಚೆಲ್ಲದಂತೆ ಸುರಿಯುವ ಅವಳ ಕೈಗಳನ್ನು ’ನಂಬಿಕೆ’ಯ ಪ್ರತೀಕವಾಗಿಸಿ ಆಕೆ ದೇವರಿಗೆ ಕೃತಜ್ಞತೆ ಸಲ್ಲಿಸುವ ಬಗೆಯಾಗಿತ್ತಂತೆ. ಒಂದು ವೇಳೆ ಪಾತ್ರೆಯೇನಾದರೂ ಕೈಜಾರಿ ಎಣ್ಣೆಯ ಹನಿಗಳು ಹೊರಕ್ಕೆ ಚೆಲ್ಲಿಬಿಟ್ಟರೆ ಅವಳು ತನ್ನ ’ಪಾಪ’ಗಳ ಸಂಖ್ಯೆ ಹೆಚ್ಚಿದೆಯೆಂದೂ, ತಾನು ಇನ್ನೂ ಹೆಚ್ಚೆಚ್ಚು ಪ್ರಾರ್ಥನೆ ಮಾಡಬೇಕಾಗಿದೆಯೆಂದು ಗೊಣಗಿಕೊಳ್ಳುತ್ತಿದ್ದಳಂತೆ. ಅವಳ ಈ ’ನಂಬಿಕೆ’ಯ ಪರಿಯನ್ನು ನೋಡುತ್ತಿದ್ದ ಸೋಯಿಂಕಾ ’ಇದು ನಮಗೆ ಹೇಳುತ್ತಿದ್ದ ಕತೆಗಳಲ್ಲಿ ಬೆಟ್ಟವನ್ನು ಚಲಿಸುವಂತೆ ಮಾಡುತ್ತಿದ್ದ ಶಕ್ತಿಗಳ ಬಗೆಗಿನ ನಮ್ಮ ’ನಂಬಿಕೆ’ಯಂತೆ ನನಗೆ ಕಾಣುತ್ತಿತ್ತು’ ಎಂದು ಬರೆಯುತ್ತಾನೆ.

ಬಾಲ್ಯದಿಂದಲೂ ಸೋಯಿಂಕಾ ಪ್ರಶ್ನೆ ಕೇಳುವುದರಲ್ಲಿ ನಿಸ್ಸೀಮನೆಂದು ಹೆಸರಾದವನು. ಅವನು ಕೇಳುತ್ತಿದ್ದ ಎಲ್ಲ ಪ್ರಶ್ನೆಗಳಿಗೆ ಸ್ಪಂದಿಸುತ್ತಿದ್ದ ಅಪ್ಪ ತಾಳ್ಮೆಯ ಬೆಟ್ಟದ ಹಾಗಿದ್ದವನು. ಶಾಲೆಯ ರಜಾದಿನಗಳಲ್ಲಿ ತಾಯಿಯ ಜೊತೆಗೆ ಅಂಗಡಿಗೆ ಕೆಲವೊಮ್ಮೆ ಹೋಗುತ್ತಿದ್ದ ಸೋಯಿಂಕಾ ತನ್ನ ಮುಗ್ಧ ಪ್ರಶ್ನೆಗಳಿಂದ ಅವಳನ್ನು ಬೇಸ್ತು ಬೀಳಿಸುತ್ತಿದ್ದನಂತೆ. ಹೀಗೆ ಒಂದು ದಿನ ಅಂಗಡಿಯಿಂದ ಮನೆಗೆ ಬಂದಾಗ ಆಕೆ ಗಂಡನ ಜೊತೆ ಮಗ ’ಪೆದ್ದುತನ’ದ ಪ್ರಶ್ನೆಗಳನ್ನು ಕೇಳಿ ತನ್ನನ್ನು ’ಮುಜುಗರ’ ಮಾಡುತ್ತಿದ್ದುದಾಗಿ ದೂಷಿಸುತ್ತಾಳೆ. ಅದೇನು ಅಂತಹ ಪ್ರಶ್ನೆ ಎಂದು ವಿಚಾರಿಸಿದಾಗ ಸೋಯಿಂಕಾ ತಾಯಿಯನ್ನು ಕೇಳಿದ್ದ ಕೆಲವು ಪ್ರಶ್ನೆಗಳಿವು, ’ನಿನ್ನ ಹೊಟ್ಟೆ ಅಪ್ಪನ ಹೊಟ್ಟೆಗಿಂತ ಯಾಕೆ ದಪ್ಪಗಿದೆ? ಆ ಹೆಂಗಸಿನ ಹಾಗೆ ನೀನೂ ಗರ್ಭಿಣಿಯ?’ ಇತ್ಯಾದಿ ಇತ್ಯಾದಿ. ಇದನ್ನು ಕೇಳಿ ಅಪ್ಪ ನಕ್ಕು ಸುಮ್ಮನಾಗುತ್ತಾನೆ. ಸೋಯಿಂಕಾನ ಕೊನೆಮೊದಲಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ’ಎಸ್ಸೆ’ಯ ತಾಳ್ಮೆಯನ್ನು ’ವೈಲ್ಡ್ ಕ್ರಿಶ್ಚಿಯನ್’ ಅಚ್ಚರಿಯಲ್ಲಿ ನೋಡುತ್ತಾಳೆ ಮತ್ತು ಅವನು ಕೇಳುವ ’ತರಲೆ ಪ್ರಶ್ನೆ’ಗಳಿಗೆ ದಂಡಿಸದಿರುವುದು ಅವನನ್ನು ತಪ್ಪುದಾರಿಗೆ ಕೊಂಡೊಯ್ಯುವುದೆಂದು ಗಂಡನನ್ನು ವ್ಯರ್ಥ ಎಚ್ಚರಿಸುತ್ತಾಳೆ.

ಅಬಿಯೊಕುಟ, ಇಬದನ್‌ನ ಶಾಲೆಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪೂರೈಸಿದ ಸೋಯಿಂಕಾ ಇಬದನ್‌ನ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ, ಗ್ರೀಕ್ ಮತ್ತು ಪಾಶ್ಚಾತ್ಯ ಇತಿಹಾಸ ವಿಷಯಗಳಲ್ಲಿ ಪರಿಣತಿ ಪಡೆದ. ವಿಶ್ವವಿದ್ಯಾಲಯದಲ್ಲಿದ್ದಾಗಲೇ ಅವನು ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವ ಮತ್ತು ನ್ಯಾಯಕ್ಕಾಗಿ ಹೋರಾಡುವ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಿ ಕೆಲಸಮಾಡಿದ. ಇಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡಲು ಇಂಗ್ಲೆಂಡ್‌ಗೆ ಬಂದನು. ಅಲ್ಲಿ ಅನೇಕ ಪ್ರತಿಭಾವಂತ ಬ್ರಿಟಿಷ್ ಲೇಖಕರೊಡನೆ ಒಡನಾಡುವ ಅವಕಾಶ ಅವನಿಗೆ ದೊರೆಯಿತು. ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುವಾಗ ಯೂರೋಪಿನ ರಂಗಭೂಮಿ ಪರಂಪರೆಯ ಜೊತೆಗೆ, ಯೊರೂಬಾ ಸಾಂಸ್ಕೃತಿಕ ಪರಂಪರೆಯನ್ನು ಹೆಣೆದು ಹೊಸತೇನಾದರೂ ಮಾಡಬೇಕೆನ್ನುವ ಆಕಾಂಕ್ಷೆ ಸೋಯಿಂಕಾನಲ್ಲಿ ಮೂಡಿತು. ಇದರ ಫಲವಾಗಿ ’ದಿ ಸ್ವ್ಯಾಂಪ್ ಡ್ವೆಲ್ಲರ್ಸ್’, ’ದಿ ಲಯನ್ ಅಂಡ್ ದಿ ಜುವೆಲ್’ ಮುಂತಾದ ನಾಟಕಗಳು ಮೂಡಿಬಂದವು. ಈ ನಾಟಕಗಳು ಪ್ರಸಿದ್ಧವಾದ ಲಂಡನ್‌ನ ’ರಾಯಲ್ ಕೋರ್ಟ್ ಥಿಯೇಟರ್’ನ ಹಲವರ ಗಮನ ಸೆಳೆದವು. ಈ ನಾಟಕಗಳು ಇಬದನ್‌ನಲ್ಲೂ ಪ್ರದರ್ಶನಗೊಂಡು, ಅಲ್ಲಿನವರ ಗಮನವನ್ನೂ ಸೆಳೆದವು. ಆಗ ಇಬದನ್ ವಿಶ್ವವಿದ್ಯಾಲಯವು ಅವನಿಗೆ ’ರಾಕ್‌ಫೆಲ್ಲರ್ ರಿಸರ್ಚ್ ಫೆಲೋಶಿಪ್’ ನೀಡಿ, ಆಫ್ರಿಕಾದ ರಂಗಭೂಮಿಯ ಬಗೆಗೆ ಸಂಶೋಧನೆ ಮಾಡುವಂತೆ ಅನುವು ಮಾಡಿಕೊಟ್ಟಿತು. ನೈಜೀರಿಯಾಕ್ಕೆ ವಾಪಸಾದ ಸೋಯಿಂಕಾ ’1960 ಮಾಸ್ಕ್ಸ್’ ಎನ್ನುವ ರಂಗತಂಡವನ್ನು ಕಟ್ಟಿ ಹಲವಾರು ನಾಟಕಗಳನ್ನು ಆಡಿಸಿದ. ಅವುಗಳಲ್ಲಿ ಅವನೇ ರಚಿಸಿದ ’ದಿ ಟ್ರಯಲ್ಸ್ ಆಫ್ ಬ್ರದರ್ ಜಿರೋ’ ಮತ್ತು ’ಎ ಡ್ಯಾನ್ಸ್ ಆಫ್ ದಿ ಫಾರೆಸ್ಟ್’ ನಾಟಕಗಳೂ ಸೇರಿದ್ದವು.

ತನ್ನ ನಾಟಕಗಳಲ್ಲಿ ನೈಜೀರಿಯಾದ ರಾಜಕೀಯ ಗಣ್ಯರನ್ನು ಗೇಲಿಮಾಡುವುದು, ಟೀಕಿಸುವುದು ಸೋಯಿಂಕಾಗೆ ಸಹಜವಾಗಿತ್ತು. ತನ್ನ ತಾಯಿನಾಡಾದ ಯೊರೂಬಾವು ನೈಜೀರಿಯಾದ ಸಂಯುಕ್ತ ಸರ್ಕಾರದಿಂದ ಅತಿಯಾಗಿ ನಿರ್ಬಂಧಕ್ಕೆ ಒಳಗಾಗಿದ್ದರ ಬಗ್ಗೆ ಸೋಯಿಂಕಾ ವಿಡಂಬಿಸಿ ಬರೆದ. ಈ ಸಂದರ್ಭದಲ್ಲಿಯೇ ಸೆನೆಗಾಲ್‌ನ ಪ್ರಸಿದ್ಧ ಕವಿ ಮತ್ತು ರಾಜಕಾರಣಿಯಾದ ಲಿಯೋಪಾಲ್ಡ್ ಸೆನ್‌ಘೊರ್ ಹುಟ್ಟುಹಾಕಿದ, ನೀಗ್ರೋಗಳ ಆತ್ಮಗೌರವವನ್ನು ಎತ್ತಿಹಿಡಿಯುವ ಆಶಯ ಹೊಂದಿದ್ದ ’ನೆಗ್ರಿಟ್ಯೂಡ್’ ಚಳವಳಿಯನ್ನು ಖಂಡಿಸಿ ಸೋಯಿಂಕಾ ಒಂದು ಲೇಖನವನ್ನು ಬರೆದದ್ದು. ಅದರಲ್ಲಿ, ಆಫ್ರಿಕನ್ನರ ’ಕಪ್ಪು’ ಗುಣವನ್ನು ಸುಮ್ಮನೆ ವೈಭವೀಕರಿಸುತ್ತ ಆಧುನಿಕತೆಯ ಸತ್ವವನ್ನು ಅಲ್ಲಗಳೆಯುವ ಮನೋಧರ್ಮವನ್ನು ಅವನು ನಿರಾಕರಿಸಿದ. ’ಹುಲಿಯು ತನ್ನ ಹುಲಿತನದ ಬಗ್ಗೆ ಕಿರುಚುವುದಿಲ್ಲ, ಕ್ರಿಯೆಯಲ್ಲಿ ತನ್ನತನವನ್ನು ತೋರಿಸುತ್ತದೆ’ ಎಂದು ಲೇವಡಿ ಮಾಡುವ ಮೂಲಕ ಸೋಯಿಂಕಾ, ’ನೆಗ್ರಿಟ್ಯೂಡ್’ ಕವಿಗಳು ಬರೆದ ಕಾವ್ಯವು ಹೇಗೆ ತನ್ನನ್ನೆ ತಾನು ಮೋಹಿಸಿಕೊಳ್ಳುವ ಚಾಳಿಗೆ ಬಿದ್ದಿದೆ ಎಂಬುದನ್ನು ವಿವರಿಸಿದ. ಆದರೆ ಆ ಚಳವಳಿಯ ಹಲವು ಲಕ್ಷಣಗಳ ಬಗ್ಗೆ ಅವನಿಗೆ ಗೌರವವೂ ಇತ್ತು. ಈ ಹೊತ್ತಿಗಾಗಲೆ ವಸಹಾತೋತ್ತರ ನೈಜೀರಿಯಾದ ರಾಜಕೀಯದಲ್ಲಿ ವಿಚಿತ್ರ ಬೆಳವಣಿಗೆಗಳು ನಡೆದಿದ್ದವು. ಕ್ಷಿಪ್ರ ಮಿಲಿಟರಿ ಕ್ರಾಂತಿಗಳು ಮತ್ತು ಒಳಯುದ್ಧಗಳು ಮತ್ತೆಮತ್ತೆ ನಡೆಯುತ್ತಿದ್ದವು.

ಈ ಸಂದರ್ಭದಲ್ಲಿ ನೈಜೀರಿಯಾದ ರಾಜಕೀಯದ ಬಗ್ಗೆ ಸೋಯಿಂಕಾನ ಆಸಕ್ತಿ ಹೆಚ್ಚಿತು. 1966ರಲ್ಲಿ ಆಗಿನ ಸಂಯುಕ್ತ ಸರ್ಕಾರ ಮತ್ತು ಬಯಾಫ್ರನ್ನರ ನಡುವೆ ’ಸಿವಿಲ್ ವಾರ್’ (ಅಂತಃಕಲಹ) ಆರಂಭವಾದಾಗ, ಬಯಾಫ್ರಾ ಪ್ರತ್ಯೇಕತಾವಾದಿ ಹೋರಾಟದ ಪರವಾಗಿ ಸೋಯಿಂಕಾ ಲೇಖನ ಬರೆದ. ಸರ್ಕಾರ ಸೋಯಿಂಕಾನನ್ನು ’ದೇಶದ್ರೋಹಿ’ಯೆಂದು ಕರೆದು ಇಪ್ಪತ್ತೆರಡು ತಿಂಗಳುಗಳ ಕಾಲ ರಾಜಕೀಯ ಕೈದಿಯಾಗಿ ಜೈಲಿನಲ್ಲಿರಿಸಿತು. ಸರ್ಕಾರವೇನೋ ಅವನನ್ನು ನಾಲ್ಕುಗೋಡೆಗಳ ನಡುವೆ ಬಂಧಿಸಿತು. ಕೂಡಿಹಾಕಲು, ಕಟ್ಟಿಹಾಕಲು ಸುಲಭಕ್ಕೆ ಕೈಗೆ ಸಿಕ್ಕುವ ಚೈತನ್ಯವೆ ಅವನದ್ದು? ಜೈಲಿನಲ್ಲಿ ಅವನಿಗೆ ಓದಲು ಪುಸ್ತಕ, ಬರೆಯಲು ಪೆನ್ನು, ಹಾಳೆಗಳನ್ನು ಕೊಡಲು ನಿರಾಕರಿಸಿದರು. ಆದರೆ ಸೋಯಿಂಕಾಗೆ ’ಬಂಧನ’ದಲ್ಲಿ ಬಿಡುಗಡೆಯ ಉಸಿರಾಡುವ ಶಕ್ತಿಯಿತ್ತು, ಕುಶಲತೆಯಿತ್ತು ಎಂಬುದಕ್ಕೆ ಜೈಲಿನವರು ಒದಗಿಸುತ್ತಿದ್ದ ಟಾಯ್ಲೆಟ್ ಪೇಪರ್ ರೋಲ್‌ನ ಮೇಲೆ ಕದ್ದುಮುಚ್ಚಿ ಬರೆಯತೊಡಗಿದ್ದೇ ಈ ಮಾತಿಗೆ ಸಾಕ್ಷಿ. ಹೀಗೆ ಅವನು ಬರೆದದ್ದು ಹಲವಾರು ಕವನಗಳನ್ನು ಮತ್ತು ಅಂದಿನ ಸರ್ಕಾರದ ಸರ್ವಾಧಿಕಾರಿ ಧೋರಣೆಗಳನ್ನು ಖಂಡಿಸುವ ಟಿಪ್ಪಣಿಗಳನ್ನು. ಮುಂದೆ ಈ ಟಿಪ್ಪಣಿಗಳು ’ದ ಮ್ಯಾನ್ ಡೈಡ್: ಪ್ರಿಸನ್ ಡೈರಿ’ ಎನ್ನುವ ಹೆಸರಿನಲ್ಲಿ ಪ್ರಕಟವಾದವು.

*****

ಅನಿಸುತ್ತಿದೆ ನನಗೆ, ಮಳೆ ಬರಲಿದೆಯೆಂದು…

ಅನಿಸುತ್ತಿದೆ ನನಗೆ, ಮಳೆ ಬರಲಿದೆಯೆಂದು
ಒಣಗಿ ಗಾರಾಗಿ ಅಂಗುಳಿಗಂಟಿಕೊಂಡ,
ಜ್ಞಾನಭಾರದಿಂದ ಜಡವಾದ,
ನಾಲಿಗೆಯ ಬಂಧನ ಬಿಡಿಸಿಕೊಳ್ಳಬಹುದೆಂದು.

ಕಂಡೆ ನಾನು
ಅದು ಬೂದಿರಾಶಿಯಿಂದ ಇದ್ದಕ್ಕಿದ್ದಂತೆ ಮೋಡಗಳ ಮೇಲೆಬ್ಬಿಸುವುದನ್ನು.
ಮತ್ತೆ ಅದು ಕೆಳಗಿಳಿದು ಬೂದು ವರ್ತುಲವಾಯ್ತು;
ಅದರ ಸುತ್ತ ಚೈತನ್ಯದ ಪಹರೆ.
ಓಹೋ ಬರಲೇಬೇಕು ಮಳೆ
ಕಂಡುಕೇಳರಿಯದ ಹತಾಶೆಗಳಲ್ಲಿ
ನಮ್ಮನ್ನು ಕುರುಡಾಗಿಸಿರುವ,
ಈ ಮನಮುಚ್ಚಿಕೆಗಳನ್ನು ತೊಳೆದುಬಿಡುವ,
ದುಃಖದ ಶುದ್ಧತೆಯ ಕಲಿಸುವ
ಆ ಮಳೆ
ಬರಲೇಬೇಕಿದೆ ಈಗ

ಹೇಗೆ ಜಡಿಯುತ್ತಿದೆ ಮಳೆ…
ಸುರುಳಿಸುರುಳಿಯಾಗಿ ಪಾರದರ್ಶಕವಾಗಿ
ಒಳಕತ್ತಲ ಹಂಬಲಗಳಿಗೆ ಸುಡುಬರೆಗಳ ಕೊಳ್ಳಿಯಿಟ್ಟು
ಕಾಮನೆಗಳ ರೆಕ್ಕೆ ಮೇಲೆ ಕಾಮರೂಪಿಯಾಗಿ ಕುಳಿತು
ಜಡಿಯುತ್ತಿದೆ ಮಳೆ.
ಬಾಗದೆಯೂ ನೀಡುವಂಥ ಘನತೆಯ ಮೆರೆವಂಥ
ಮೇಲಿನಿಂದ ಇಳಿವ ಮಳೆ-ಕೊಳವೆಯ ಲಾವಣ್ಯವೇ,
ನನ್ನ ಇಳೆಯೊಡನೆ ನಿನ್ನ ಈ ಮಿಲನ
ನೆಲವನವುಚಿಕೊಂಡ ಬಂಡೆಗಳನ್ನು ಕೂಡ
ಬತ್ತಲಾಗಿಸುತ್ತದೆ.

(ಮೂಲ ಶೀರ್ಷಿಕೆ think it rains )

(ಜ ನಾ ತೇಜಶ್ರೀಯವರು ಸಂಪಾದಿಸಿ ಅನಿವಾದಿಸಿರುವ ’ವೋಲೆ ಸೋಯಿಂಕಾ ವಾಚಿಕೆ’ ಏಪ್ರಿಲ್ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ.)

ಜ ನಾ ತೇಜಶ್ರೀ

ಜ ನಾ ತೇಜಶ್ರೀ
ಕವಿ, ಲೇಖಕಿ, ಅನುವಾದಕಿ. ’ಲಯ, ತಿಳಿಗೊಳ’, ’ಕತ್ತಲೆಯ ಬೆಳಗು’, ’ಅವನರಿವಲ್ಲಿ, ಉಸುಬುಂಡೆ’, ’ಮಾಗಿಕಾಲದ ಸಾಲುಗಳು’ ತೇಜಶ್ರೀಯವರ ಕವನ ಸಂಕಲನಗಳು. ’ಬೆಳ್ಳಿ ಮೈಹುಳ’ ಕಥಾಸಂಕಲನ. ಪಾಬ್ಲೋ ನೆರೂಡಾ ಪದ್ಯಗಳು ಸೇರಿದಂತೆ ಜಗತ್ತಿನ ಹಲವರ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಮಾತು ಮರೆತ ಭಾರತ ; ಮಧ್ಯಕಾಲೀನ ಭಾರತದಲ್ಲಿ ಅಸ್ಪೃಶ್ಯತೆಯ ಬೆಳವಣಿಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...