2022ರ ಸಾಲಿನ ಐಪಿಲ್ ಆರಂಭಗೊಂಡಿದೆ. ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎಂಬ ಎರಡು ಹೊಸ ತಂಡಗಳ ಆಗಮನದೊಂದಿಗೆ ಕ್ರಿಕೆಟ್ ಮೆರಗು ಮತ್ತಷ್ಟು ಹೆಚ್ಚಿದೆ. ಲೀಗ್ ಹಂತದ 18 ಪಂದ್ಯಗಳು ಮುಕ್ತಾಯವಾಗಿದ್ದು, ಹಲವು ರೋಚಕ ಪಂದ್ಯಗಳನ್ನು ಅಭಿಮಾನಿಗಳು ಸವಿದಿದ್ದಾರೆ. ಈ ವರ್ಷದ ಐಪಿಎಲ್‌ನ ವಿಶೇಷತೆಯೆಂದರೆ ಹಲವು ಬಾರಿ ಚಾಂಪಿಯನ್ ಆಗಿರುವ ದಿಗ್ಗಜ ತಂಡಗಳು ಸತತವಾಗಿ ಮುಗ್ಗರಿಸುತ್ತಿದ್ದರೆ, ಹೊಸ ತಂಡಗಳು ಗೆಲುವಿನ ನಗೆ ಬೀರುತ್ತಿವೆ.
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಮತ್ತು ಹಾಲಿ ಚಾಂಪಿಯನ್ಸ್ ಹಾಗೂ ನಾಲ್ಕು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಚನ್ನೈ ಸೂಪರ್ ಸಿಂಗ್ಸ್ ಎರಡೂ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲಿಯೂ ಸೋಲೊಪ್ಪಿಕೊಂಡಿವೆ. ಇದಕ್ಕೆ ತದ್ವಿರುದ್ಧವಾಗಿ ಹೊಸದಾಗಿ ಆಗಮಿಸಿದ ಗುಜರಾತ್ ಟೈಟನ್ಸ್ ತಂಡ ತಾನಾಡಿದ ಮೂರು ಪಂದ್ಯಗಳಲ್ಲಿಯೂ ಜಯಗಳಿಸಿದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಜಯಿಸಿದೆ!.
ಸದ್ಯಕ್ಕೆ 4 ಪಂದ್ಯಗಳಲ್ಲಿ ಮೂರನ್ನು ಜಯಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲಿದ್ದರೆ, ಅಷ್ಟೇ ಅಂಕಗಳನ್ನು ಪಡೆದಿರುವ ಗುಜರಾತ್ ಟೈಟನ್ಸ್ ಎಡನೇ ಸ್ಥಾನ, ಆರ್‌ಸಿಬಿ ಮೂರನೇ ಸ್ಥಾನ ಮತ್ತು ಲಕ್ನೋ ನಾಲ್ಕನೇ ಸ್ಥಾನದಲ್ಲಿದೆ. ಎರಡು ಪಂದ್ಯ ಜಯಿಸಿರುವ ರಾಜಸ್ಥಾನ್ ರಾಯಲ್ಸ್ ಐದನೇ ಸ್ಥಾನ, ಪಂಜಾಬ್ ಕಿಂಗ್ಸ್ ಆರನೇ ಸ್ಥಾನ ಪಡೆದಿವೆ. ಒಂದು ಪಂದ್ಯ ಜಯಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಏಳನೇ ಸ್ಥಾನ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎಂಟನೇ ಸ್ಥಾನದಲ್ಲಿವೆ. ಒಂದೂ ಗೆಲುವು ಕಾಣದ ಮುಂಬೈ ಇಂಡಿಯನ್ಸ್ ಒಂಭತ್ತನೆ ಸ್ಥಾನದಲ್ಲಿದ್ದರೆ, ಚನ್ನೈ ಕೊನೆಯ ಸ್ಥಾನದಲ್ಲಿದೆ.
ಉತ್ತಮ ಆರಂಭ ಕಂಡ ಗುಜರಾತ್, ಲಕ್ನೋ
ಗುಜರಾತ್ ಟೈಟನ್ಸ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಉತ್ತಮ ಆರಂಭ ಕಂಡಿದೆ. ಮೊದಲ ಪಂದ್ಯದಲ್ಲಿ ಲಕ್ನೋವನ್ನು ಮಣಿಸಿ ಶುಭಾರಂಭ ಮಾಡಿದ ಅದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಅನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ತಿವಾಟಿಯ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಅದೇ ರೀತಿ ಮೊಹಮ್ಮದ್ ಶಮಿ, ರಶೀದ್ ಖಾನ್ ವಿಕೆಟ್ ಕಬಳಿಸುತ್ತಾ ತಂಡಕ್ಕೆ ಬೆನ್ನೆಲುಬಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಹೈದರಾಬಾದ್ ಅನ್ನು ಎದುರಿಸಲಿದ್ದಾರೆ.
ಲಕ್ನೋ ತಂಡವು ಮೊದಲ ಪಂದ್ಯ ಸೋತ ನಂತರ ಸತತ ಮೂರು ಪಂದ್ಯಗಳಲ್ಲಿ ಜಯಗಳಿಸಿದೆ. ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ತಂಡ ಅದ್ಭುತ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ಅವರೊಟ್ಟಿಗೆ ಕ್ವಿಂಟನ್ ಡಿ ಕಾಕ್, ಎವಿನ್ ಲೆವಿಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಆವೇಶ್ ಖಾನ್ ಮತ್ತು ರವಿ ಬಿಷ್ಣೋಯಿ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ. ಲಕ್ನೋ ಇಂದು ರಾತ್ರಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೆಣಸಲಿದೆ.
ಹೀನಾಯ ಸ್ಥಿತಿಯಲ್ಲಿ ಮುಂಬೈ ಮತ್ತು ಚನ್ನೈ
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಈ ಆವೃತ್ತಿಯಲ್ಲಿ ಗೆಲುವಿಗಾಗಿ ಪರಿತಪಿಸುತ್ತಿದೆ. ನಾಲ್ಕು ಪಂದ್ಯ ಆಡಿರುವ ಅದು ನಾಲ್ಕರಲ್ಲಿಯೂ ಸೋತಿದೆ. ಇಶಾಂತ್ ಕಿಶನ್, ಸೂರ್ಯಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ಆಡುತ್ತಿದ್ದರೂ, ಇಡೀ ತಂಡ ಸಾಂಘಿಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಜಸ್ಪ್ರಿತ್ ಬುಮ್ರ ಮತ್ತು ಪೊಲಾರ್ಡ್ ವಿಕೆಟ್ ಪಡೆಯುವಲ್ಲಿ ವಿಫಲವಾಗುತ್ತಿರುವುದು ತಂಡದ ಮೇಲೆ ಪರಿಣಾಮ ಬೀರಿದೆ. ಮುಂದಿನ ಪಂದ್ಯ ಏಪ್ರಿಲ್ 13 ರಂದು ಪಂಜಾಬ್ ಕಿಂಗ್ಸ್ ಎದುರು ಆಡಲಿದ್ದು, ಗೆಲುವಿನ ಲಯಕ್ಕೆ ಮರಳಬೇಕಿದೆ.
ಚನ್ನೈ ತಂಡವೂ ಒತ್ತಡದಲ್ಲಿದೆ. ತಂಡದ ಯಾವುದೇ ಬ್ಯಾಟ್ಸ್‌ಮನ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅನುಭವಿ ಆಟಗಾರರಿದ್ದರೂ ಉತ್ತರ ಪ್ರದರ್ಶನ ಬಾರದ ಕಾರಣ ಸತತ 4 ಸೋಲು ಕಂಡಿದೆ. ಮುಂದಿನ ಪಂದ್ಯ ಏಪ್ರಿಲ್ 12 ರಂದು ಆರ್‌ಸಿಬಿ ಎದುರು ಆಡಬೇಕಿದೆ. ಸತತ ಮೂರು ಗೆಲುವಿನೊಂದಿಗೆ ಆರ್‌ಸಿಬಿ ಆತ್ಮವಿಶ್ವಾಸದಲ್ಲಿದ್ದರೆ ಚನ್ನೈಗೆ ಗೆಲುವು ಬೇಕೆ ಬೇಕಿದೆ.
ಇದನ್ನೂ ಓದಿ: ಪಾಕ್ ಕ್ರಿಕೆಟ್ ನಾಯಕಿಯ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಪ್ರೀತಿಯ ಕ್ಷಣಗಳು: ಎಲ್ಲೆಡೆ ಅಭಿಮಾನದ ಮಹಾಪೂರ