Homeಬಹುಜನ ಭಾರತಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ

ಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ

‘ಹಸಿದ ಜನರಿಗೆ ಅನ್ನ ನೀಡುವಾಗ ನನ್ನನ್ನು ಸಂತನೆಂದು ಕರೆಯುತ್ತಾರೆ... ಇಷ್ಟೊಂದು ಮಂದಿ ಯಾಕೆ ಬಡವರಾಗಿದ್ದಾರೆ ಎಂದು ಕೇಳಿದಾಗ ನನಗೆ ಕಮ್ಯುನಿಸ್ಟ್ ಎಂಬ ಹಣೆಪಟ್ಟಿ ಹಚ್ಚುತ್ತಾರೆ’. - ಹೆಲ್ಡರ್ ಕಾಮರ

- Advertisement -
- Advertisement -

ಝಾರ್ಖಂಡದ ಆದಿವಾಸಿಗಳ ಹಕ್ಕುಗಳಿಗಾಗಿ ತಮ್ಮ ಬದುಕನ್ನು ಮುಡುಪಾಗಿಸಿ ಹೋರಾಟಗಳಲ್ಲಿ ತೊಡಗಿಕೊಂಡಿದ್ದವರು ಫಾದರ್ ಸ್ಟಾನ್ ಸ್ವಾಮಿ. ಅವರು ಕ್ರೈಸ್ತ ಧರ್ಮಗುರು ಕೂಡ. ಅವರಿಗೀಗ 83ರ ಇಳಿ ವಯಸ್ಸು. ಪಾರ್ಕಿನ್ಸನ್ ವ್ಯಾಧಿಯಿಂದ ಕೈಗಳು ನಡುಗುತ್ತವೆ. ಅವರ ಅಚ್ಚುಮೆಚ್ಚಿನ ಚಹಾವನ್ನು ಕೊಳವೆಯಿಂದ ಹೀರಿ ಸೇವಿಸುವ ಅನಿವಾರ್ಯ. ಕ್ಯಾನ್ಸರ್ ದಾಳಿಗೆ ಸಿಲುಕಿ ಮೂರು ಶಸ್ತ್ರಕಿತ್ಸಗಳ ನಂತರ ಬದುಕಿ ಉಳಿದಿದ್ದಾರೆ. ಮೆಲುದನಿಯ ಮಾತಿನ ಸ್ವಾಮಿ ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಯನ್ನು ನಂಬಿದವರು.

PC : Sanjevani

ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್.ಐ.ಎ) ಕೆಲ ದಿನಗಳ ಹಿಂದೆ ಅವರನ್ನು ಬಂಧಿಸಿದೆ. ಎಲ್ಗಾರ್ ಪರಿಷತ್ತಿನ ಭೀಮಾ ಕೋರೆಗಾಂವ್ ಕೇಸಿನಲ್ಲಿ ಅವರ ಪಾತ್ರವಿತ್ತೆಂಬ ಆಪಾದನೆ ಹೊರಿಸಲಾಗಿದೆ. ಸ್ವಾಮಿಯವರ ದಸ್ತಗಿರಿಯ ವಿರುದ್ಧ ಪ್ರತಿಭಟನೆಗಳು ಜರುಗಿವೆ. ಝಾರ್ಖಂಡದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಈ ದಸ್ತಗಿರಿಯನ್ನು ವಿರೋಧಿಸಿದ್ದಾರೆ. ತನ್ನ ವಿರುದ್ಧ ಎತ್ತಲಾಗುತ್ತಿರುವ ಎಲ್ಲ ದನಿಗಳನ್ನೂ ಕೇಂದ್ರ ಸರ್ಕಾರ ಅದುಮತೊಡಗಿದೆ ಎಂದು ಆಕ್ಷೇಪಿಸಿದ್ದಾರೆ.

ಸ್ವಾಮಿ ಒಬ್ಬ ಸಕ್ರಿಯ ಮಾವೋವಾದಿಯೆಂದೂ, ಆ ಸಂಘಟನೆಯಿಂದ ಹಣ ಪಡೆಯುತ್ತಿದ್ದಾರೆಂದೂ, ಈ ಸಂಬಂಧದ ಪ್ರಚಾರ ಸಾಮಗ್ರಿ ಮತ್ತು ಸಾಹಿತ್ಯವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆಯೆಂದೂ ಎನ್.ಐ.ಎ. ತನ್ನ ಆರೋಪಪಟ್ಟಿಯಲ್ಲಿ ನಮೂದಿಸಿದೆ.

ಮಾನವ ಹಕ್ಕುಗಳ ಹೋರಾಟಗಾರ ಕ್ಸೇವಿಯರ್ ಡಯಾಸ್ ಅವರ ಪ್ರಕಾರ ಸ್ವಾಮಿಯವರು ಮೂಲತಃ ತಮಿಳುನಾಡಿನ ತಿರುಚ್ಚಿಯವರು. ಕೆಲ ಕಾಲ ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್‍ಸ್ಟಿಟ್ಯೂಟ್‍ನ ನಿರ್ದೇಶಕರಾಗಿದ್ದರು. ಝಾರ್ಖಂಡದ ಆದಿವಾಸಿ ಸೀಮೆ ಅವರ ಕಾರ್ಯಕ್ಷೇತ್ರವಾಗಿತ್ತು. ಗ್ರಾಮಸಭೆಗಳಿಗೆ ಅಧಿಕಾರ ನೀಡುವ 1996ರ ಪಂಚಾಯತುಗಳ (ಷೆಡ್ಯೂಲ್ಡ್ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆಯನ್ನು ವಿಶ್ಲೇಷಿಸಿದರು. ಈ ಕಾಯಿದೆಯ ಜಾರಿಗಾಗಿ ಆಂದೋಲನ ನಡೆಸಿ ಗ್ರಾಮಸಭೆಗಳ ರಚನೆಯಲ್ಲಿ ತೊಡಗಿದರು. ಆದಿವಾಸಿಗಳಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿದರು. ಗಣಿಗಾರಿಕೆ, ಭಾರೀ ಜಲಾಶಯಗಳು, ಕೈಗಾರಿಕೆಗಳು ಹಾಗೂ ಟೌನ್‍ಶಿಪ್‍ಗಳ ನಿರ್ಮಾಣಕ್ಕಾಗಿ ಆದಿವಾಸಿಗಳನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ ಸ್ಥಳಾಂತರಗೊಳಿಸಿದ ಕುರಿತ ಅಂಕಿ ಅಂಶಗಳನ್ನು ಸಂಗ್ರಹಿಸಿದ್ದು ಅವರ ದೊಡ್ಡ ಕೊಡುಗೆಗಳಲ್ಲೊಂದು. ಸ್ವಾಮಿ ಅವರ ಭಿನ್ನಮತ ಕೇವಲ ಸರ್ಕಾರಕ್ಕೆ ಸೀಮಿತವಾಗಿರಲಿಲ್ಲ. ಚರ್ಚು ಕೂಡ ಬಲ್ಲಿದರು ಮತ್ತು ಗಣ್ಯರ ಜೊತೆಗೆ ನಿಲ್ಲುತ್ತದೆಂದು ತಕರಾರು ತೆಗೆದಿದ್ದರು. ಕ್ರೈಸ್ತ ಸಂಸ್ಥೆಗಳು ನಡೆಸುವ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆಯ ಮಾಧ್ಯಮ ಇಂಗ್ಲಿಷೇ ಆಗಿರುತ್ತದೆ. ಬಡವರಿಗೆ ಈ ಭಾಷೆ ಎಟುಕಿಲ್ಲ. ಹೀಗಾಗಿ ಈ ಶಾಲೆಗಳನ್ನು ಹಿಂದೀ ಮಾಧ್ಯಮಕ್ಕೆ ಪರಿವರ್ತಿಸಿ ಸಾಮಾನ್ಯ ಜನರಿಗೆ ಪ್ರಯೋಜನಕಾರಿಯಾಗಿ ಅವನ್ನು ಪರಿವರ್ತಿಸಬೇಕೆಂದು ವಾದಿಸಿದ್ದರು.

ಚರ್ಚಿನಿಂದ ಜಾಗ ಪಡೆದು ರಾಂಚಿಯಲ್ಲಿ ಸಾಮಾಜಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರವೊಂದನ್ನು 15 ವರ್ಷಗಳ ಹಿಂದೆ ತೆರೆದು ಅಲ್ಲಿಯೇ ಜೀವಿಸಿದ್ದರು.

ತಮ್ಮ ಬಂಧನಕ್ಕೆ ಮುನ್ನ ಸ್ವಾಮಿ ನೀಡಿದ್ದ ಈ ಹೇಳಿಕೆಯ ನೋಡಿರಿ- ‘ಘನತೆ-ಆತ್ಮಗೌರವದ ಬದುಕುಬೇಕೆಂದು ಆದಿವಾಸಿ ಜನರು ನಡೆಸಿರುವ ಆಂದೋಲನದೊಂದಿಗೆ ನಾನು ಕಳೆದ ಮೂವತ್ತು ವರ್ಷಗಳಿಂದ ಗುರುತಿಸಿಕೊಂಡಿದ್ದೇನೆ. ಬರೆಹಗಾರನಾಗಿ ಅವರು ಎದುರಿಸಿರುವ ನಾನಾ ಸಮಸ್ಯೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ. ಈ ಕ್ರಿಯೆಯಲ್ಲಿ ತೊಡಗಿಕೊಂಡೇ ಸರ್ಕಾರದ ಹಲವು ನೀತಿಗಳು ಮತ್ತು ಕಾಯಿದೆ ಕಾನೂನುಗಳ ಕುರಿತು ಸಂವಿಧಾನದ ಬೆಳಕಿನಲ್ಲಿ ಭಿನ್ನಾಭಿಪ್ರಾಯ ಪ್ರಕಟಿಸಿದ್ದೇನೆ. ಆಳುವ ವರ್ಗ ಮತ್ತು ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳ ಕಾನೂನುಬದ್ಧತೆ, ಸಿಂಧುತ್ವ ಹಾಗೂ ನ್ಯಾಯಪರತೆಯನ್ನು ಪ್ರಶ್ನಿಸಿದ್ದೇನೆ. ಆದಿವಾಸಿಗಳ ಜಮೀನುಗಳಲ್ಲಿ ಖನಿಜಗಳ ಗಣಿಗಾರಿಕೆಯನ್ನು ನಿಯಂತ್ರಿಸಲು ಆದಿವಾಸಿಗಳಿಗೆ ಕೆಲ ಹಕ್ಕುಗಳನ್ನು ನೀಡಿ ಆ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು. ಈ ಸಂಬಂಧ ಸುಪ್ರೀಮ್ ಕೋರ್ಟು 1977ರಲ್ಲಿ ನೀಡಿರುವ ಸಮತಾ ತೀರ್ಪಿನ ಕುರಿತು ಸರ್ಕಾರಗಳ ಮೌನ ನಿರಾಶಾದಾಯಕ. 2006ರ ಅರಣ್ಯ ಹಕ್ಕು ಕಾಯಿದೆಯನ್ನು ಅರೆಮನಸ್ಸಿನಿಂದ ಜಾರಿ ಮಾಡಲಾಗುತ್ತಿರುವುದು ಆದಿವಾಸಿಗಳು ಮತ್ತಿತರೆ ಅರಣ್ಯವಾಸಿಗಳಿಗೆ ಬಗೆಯಲಾಗುತ್ತಿರುವ ಐತಿಹಾಸಿಕ ಅನ್ಯಾಯ. ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಹಂಚಿಕೆ ಮಾಡಲು ಭೂ ಬ್ಯಾಂಕುಗಳನ್ನು ರಚಿಸಿರುವುದು ಆದಿವಾಸಿಗಳ ಸರ್ವನಾಶಕ್ಕೆ ದಾರಿ ಮಾಡಿಕೊಡಲಿದೆಯೆಂದು ದನಿ ಎತ್ತಿದ್ದೆ. ಈ ಕಾರಣಗಳಿಗಾಗಿ ನನ್ನನ್ನು ತನ್ನ ದಾರಿಯಿಂದ ನಿವಾರಿಸಿಕೊಳ್ಳಲು ಗಂಭೀರ ಕೇಸುಗಳನ್ನು ಹಾಕಿ ಬಂಧಿಸಲಾಗುತ್ತಿದೆ. ಬಡ ಆದಿವಾಸಿಗಳಿಗೆ ನ್ಯಾಯದಾನದ ಕ್ರಿಯೆಯನ್ನು ಸ್ಥಗಿತಗೊಳಿಸುವುದು ಸರ್ಕಾರದ ಉದ್ದೇಶ’ ಎಂದು ಸ್ವಾಮಿ ಹೇಳಿದ್ದಾರೆ.

PC : Prajavani

ಆದಿವಾಸಿಗಳ ಸಂರಕ್ಷಣೆ ಮತ್ತು ಅಭ್ಯುದಯಕ್ಕಾಗಿ ಆದಿವಾಸಿಗಳೇ ಇರುವ ಆದಿವಾಸಿ ಸಲಹಾ ಪರಿಷತ್ತನ್ನು ನೇಮಕ ಮಾಡಬೇಕೆಂದು ಸಂವಿಧಾನದ ಐದನೆಯ ಷೆಡ್ಯೂಲಿನಲ್ಲಿ ವಿಧಿಸಲಾಗಿದೆ. ಈ ಕ್ರಮವನ್ನು ಸರ್ಕಾರ ಜಾರಿ ಮಾಡಿಲ್ಲವೆಂದು ಅವರು ಪ್ರತಿಭಟಿಸಿದ್ದರು.

ಅಂದಾಜು ಮೂರು ಸಾವಿರದಷ್ಟು ಆದಿವಾಸಿ ಯುವಜನರು ಮತ್ತು ಮೂಲನಿವಾಸಿಗಳನ್ನು ವಿವೇಚನೆಯಿಲ್ಲದೆ ಬಂಧಿಸಿ ಅವರಿಗೆ ಮಾವೋವಾದಿಗಳೆಂಬ ಹಣೆಪಟ್ಟಿ ಹಚ್ಚಿ ಜೈಲಿಗೆ ತಳ್ಳಿರುವುದನ್ನು ಸ್ವಾಮಿಯವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಈ ವಿಚಾರಣಾಧೀನ ಯುವಕರನ್ನು ಸ್ವಂತ ಮುಚ್ಚಳಿಕೆಯ ಮೇಲೆ ಬಿಡುಗಡೆ ಮಾಡಿ ತ್ವರಿತ ವಿಚಾರಣೆ ನಡೆಸಬೇಕೆಂದೂ ಆಗ್ರಹಿಸಿದ್ದರು.

ಇದನ್ನೂ ಓದಿ: ಭೀಮಾ ಕೋರೆಗಾಂವ್: 83 ವರ್ಷದ ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧಿಸಿದ NIA

ದೇಶದ ಶೇ.40ರಷ್ಟು ಅಮೂಲ್ಯ ಖನಿಜಗಳ ತವರು ಝಾರ್ಖಂಡ್. ಇಲ್ಲಿನ ಅಷ್ಟಿಷ್ಟು ಅಭಿವೃದ್ಧಿಯೂ ಅಸಂತುಲಿತ. ಇದಕ್ಕೆ ಆದಿವಾಸಿಗಳು ತೆತ್ತಿರುವ ಬೆಲೆ ಅಪಾರ. ರಾಜ್ಯದ ಜನಸಂಖ್ಯೆ ಕಾಲು ಭಾಗದಷ್ಟಿರುವ ಆದಿವಾಸಿಗಳ ಸ್ಥಿತಿಗತಿಗಳು ಶೋಚನೀಯ.

ಬ್ರೆಜಿಲ್ ದೇಶದ ಬಡಜನರ ಕಷ್ಟ ಕಣ್ಣೀರುಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡು ಜನತಂತ್ರದ ಪರವಾಗಿ ಸರ್ವಾಧಿಕಾರಿ ಆಡಳಿತದ ವಿರುದ್ಧ ಎದೆ ಸೆಟೆಸಿದ್ದವರು ಕ್ರೈಸ್ತ ಧರ್ಮಗುರು ಹೆಲ್ಡರ್ ಕಾಮರ. ಸ್ವಾಮಿ ಅವರ ಬದುಕನ್ನು ಕಾಮರ ಅವರ ಆಚಾರ ವಿಚಾರಗಳು ತೀವ್ರವಾಗಿ ಪ್ರಭಾವಿಸಿವೆ ಎನ್ನಲಾಗಿದೆ.

ಚರ್ಚ್ ಎಂಬುದು ನತದೃಷ್ಟ ಜನಸಮುದಾಯಗಳ ಜೊತೆಗೆ ನಿಲ್ಲಬೇಕು ಎಂದ ಕಾಮರ, ತಮ್ಮ ಜೀವಿತದುದ್ದಕ್ಕೂ ಮಾನವಹಕ್ಕುಗಳಿಗಾಗಿ ದನಿ ಎತ್ತಿದ್ದರು ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ದವರು. ಸಾಮಾಜಿಕ ಪರಿವರ್ತನೆ ಅವರ ಧ್ಯೇಯವಾಗಿತ್ತು. ಧರ್ಮಗುರುಗಳಿಗೆ ಲಭಿಸುವ ಆಡಂಬರದ ಬದುಕನ್ನು ತಿರಸ್ಕರಿಸಿದ್ದರು. ಕಾರ್ಮಿಕರ ಕ್ಯಾಂಟೀನುಗಳಲ್ಲಿ ಊಟ ಮಾಡುತ್ತಿದ್ದರು. ಧರ್ಮಗುರುಗಳ ಪಟ್ಟು ಪೀತಾಂಬರಗಳ ನಿಲುವಂಗಿಗಳನ್ನು ಚಿನ್ನದ ಶಿಲುಬೆಗಳು ಅಲಂಕರಿಸಿರುತ್ತವೆ. ಆದರೆ ಸವೆದು ಹೋದ ಕಂದು ಬಣ್ಣದ ನೂಲಿನ ನಿಲುವಂಗಿಯನ್ನು ಧರಿಸುತ್ತಿದ್ದ ಕಾಮರ ಚಿನ್ನದ ಶಿಲುಬೆಯ ಬದಲಿಗೆ ಮರದ ಶಿಲುಬೆಯನ್ನು ಅದಕ್ಕೆ ಅಳವಡಿಸಿಕೊಂಡಿದ್ದರು. ಬಡವರ ಬಂಧು, ದನಿ ಸತ್ತವರ ದನಿ ಎಂದೇ ಯೂರೋಪಿನಲ್ಲಿ ಅವರನ್ನು ಕರೆಯಲಾಗುತ್ತಿತ್ತು. ತಮ್ಮ ದೇಶದ ಜಮೀನು ಮತ್ತು ಇತರೆ ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂದು ಅವರು ಆಗ್ರಹಿಸಿದ್ದರು.

ಕಾಮರ ಆಡಿದ್ದ ಈ ಕೆಳಕಂಡ ಮಾತು ಸ್ಟಾನ್ ಸ್ವಾಮಿಯವರಿಗೂ ಅನ್ವಯ ಆದೀತು-

‘ಹಸಿದ ಜನರಿಗೆ ಅನ್ನ ನೀಡುವಾಗ ನನ್ನನ್ನು ಸಂತನೆಂದು ಕರೆಯುತ್ತಾರೆ… ಇಷ್ಟೊಂದು ಮಂದಿ ಯಾಕೆ ಬಡವರಾಗಿದ್ದಾರೆ ಎಂದು ಕೇಳಿದಾಗ ನನಗೆ ಕಮ್ಯುನಿಸ್ಟ್ ಎಂಬ ಹಣೆಪಟ್ಟಿ ಹಚ್ಚುತ್ತಾರೆ’.

ನಗರಪ್ರದೇಶಗಳ ಬಡವರ ಹೋರಾಟಗಳಿಗೆ ಹೆಗಲು ನೀಡಿದ್ದ ಕಾರಣ ಕೊಳೆಗೇರಿಗಳ ಧರ್ಮಗುರು ಎಂಬ ಅಭಿದಾನ ಅವರ ಹೆಸರಿಗೆ ಅಂಟಿಕೊಂಡಿತ್ತು.

PC : teleSUR Englisg (ಹೆಲ್ಡರ್ ಕಾಮರ)

ಧರ್ಮಗುರುಗಳಿಗೆ ದೊರೆಯುವ ವಿಶೇಷ ಹಕ್ಕುಗಳು, ಬಿರುದುಬಾವಲಿಗಳು, ವೈಭೋಗಗಳನ್ನು ತೊರೆದು ಬಡತನದ ಬದುಕನ್ನು ಬದುಕುವಂತೆ ಕಾಮರ ನೇತೃತ್ವದ ನಲವತ್ತು ಮಂದಿ ಬಿಶಪ್‍ಗಳ ಸಂಘಟನೆಯು ಉಳಿದ ಧರ್ಮಗುರುಗಳಿಗೆ ಸವಾಲೆಸೆದಿತ್ತು. 1964ರಿಂದ 1985ರ ನಡುವಣ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಬ್ರೆಜಿಲ್‍ನ ರೋಮನ್ ಕೆಥೋಲಿಕ್ ಚರ್ಚ್ ದಿಟ್ಟವಾಗಿ ದನಿ ತೆರೆದು ವಿರೋಧಿಸಿತ್ತು. ಸಾಮಾಜಿಕ ಪರಿವರ್ತನೆಯ ಆಂದೋಲನವೇ ಅದಾಗಿತ್ತು. ಭೂಸುಧಾರಣೆಗೆ ಬೆಂಬಲ ನೀಡಿದ್ದ ಕಾಮರ ಅವರನ್ನು ಬಂಧಿಸುವಂತೆ ಸಂಪ್ರದಾಯವಾದಿ ಕೆಥೋಲಿಕರು ಮಿಲಿಟರಿ ಸರ್ಕಾರವನ್ನು ಆಗ್ರಹಿಸಿದ್ದುಂಟು. ಕಾಮರ ಅವರ ಸಹೋದ್ಯೋಗಿ ಫಾದರ್ ಆಂಟೋನಿಯೋ ಹೆನ್ರಿಕ್ ಪರೀರ ನೆಟೋ ಅವರನ್ನು ಸಂಪ್ರದಾಯವಾದಿ ಶಕ್ತಿಗಳು ಕೊಂದು ಹಾಕಿದವು.

ಮಾರ್ಕ್ಸ್‌ವಾದಿಯೆಂದು ಗುರುತಿಸಿಕೊಳ್ಳಲು ನಿರಾಕರಿಸಿದ್ದ ಅವರು, ತಮ್ಮನ್ನು ಸಮಾಜವಾದಿ ಎಂದು ಕರೆದುಕೊಂಡಿದ್ದರು. ಮಾರ್ಕ್ಸ್‌ವಾದದ ಕುರಿತು ಭಿನ್ನಾಭಿಪ್ರಾಯದ ಜೊತೆಗೆ ಸಹಾನುಭೂತಿಯೂ ಇತ್ತು. ನಾಲ್ಕು ಬಾರಿ ನೊಬೆಲ್ ಶಾಂತಿ ಪಾರಿತೋಷಕಕ್ಕೆ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ ಅವರ ದೇಶದ ಮಿಲಿಟರಿ ಆಡಳಿತ ನಾಲ್ಕು ಬಾರಿಯೂ ಅದಕ್ಕೆ ಅಡ್ಡಗಾಲು ಹಾಕಿತ್ತು.

‘ಅಯ್ಯನ ಮನೆಯಲ್ಲಿ ಬೌದ್ಧರು, ಯಹೂದಿಗಳು, ಮುಸಲ್ಮಾನರು, ಪ್ರಾಟೆಸ್ಟೆಂಟ್‍ಗಳು ನಮಗೆ ಎದುರಾಗಬಹುದು. ಅಷ್ಟೇ ಯಾಕೆ, ಕೆಲ ಮಂದಿ ಕೆಥೋಲಿಕ್ಕರೂ ಕಂಡುಬಂದಾರು. ಏಸುಕ್ರಿಸ್ತನ ಹೆಸರನ್ನೇ ಕೇಳದವರು ಎದುರಾದರೂ ನಾವು ಅವರ ಮುಂದೆ ವಿನಮ್ರರಾಗಿರಬೇಕು, ಯಾಕೆಂದರೆ ಅವರು ನಮಗಿಂತಲೂ ಹೆಚ್ಚು ಕ್ರೈಸ್ತರಾಗಿರುವ ಸಾಧ್ಯತೆ ಇದೆ’ ಎಂದಿದ್ದ ಮಾನವತಾವಾದಿ ಕಾಮರ.

1999ರಲ್ಲಿ ತಮ್ಮ 90ನೆಯ ವಯಸ್ಸಿನಲ್ಲಿ ಕಾಮರಾ ತೀರಿ ಹೋದರು.

ಭಿನ್ನಮತವು ಜನತಂತ್ರದ ಸುರಕ್ಷಾ ಬಿರಟೆ. ಅದಕ್ಕೆ ಅವಕಾಶವಿಲ್ಲದೆ ಹೋದರೆ ಪ್ರೆಶರ್ ಕುಕರ್ ಸಿಡಿದು ಹೋಗುತ್ತದೆ ಎಂದು ಭಾರತದ ಸುಪ್ರೀಮ್ ಕೋರ್ಟು ವರ್ಷದೊಪ್ಪತ್ತಿನ ಹಿಂದೆ ಹೇಳಿದ್ದುಂಟು.


ಇದನ್ನೂ ಓದಿ: ’ಬಿಜೆಪಿಯದ್ದು ಕೊಳಕು ರಾಜಕೀಯ’-ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನಕ್ಕೆ ದೇಶದಾದ್ಯಂತ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...