ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಜಗಮೋಹನ್ ಸಿಂಗ್, ಹುತಾತ್ಮ ಭಗತ್‍ಸಿಂಗ್‍ರ ಕುಟುಂಬಕ್ಕೆ ಸೇರಿದವರು. ಭಗತ್‍ಸಿಂಗರ ಚಿಂತನೆಗಳ ಪ್ರಸಾರಕ್ಕೆ ಬದ್ಧರಾಗಿದ್ದು, ಅವರ ಬಹುತೇಕ ಬರಹಗಳನ್ನು ಡಿಜಿಟೈಸ್ ಮಾಡಿದ್ದಾರೆ. ಪಂಜಾಬಿನ ಜಮೂರಿ ಅಧಿಕಾರಿ ಸಭಾ ಮತ್ತು ಪ್ರಜಾತಾಂತ್ರಿಕ ಹಕ್ಕುಗಳ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರು. ಜನಪರ ಚಳವಳಿಗಳ ಸಕ್ರಿಯ ಸಂಗಾತಿ ಪ್ರೊ.ಜಗಮೋಹನ್ ಸಿಂಗ್. ಈ ಲೇಖನವನ್ನು ಕನ್ನಡಕ್ಕೆ ನಿಖಿಲ್ ಕೋಲ್ಪೆಯವರು ಅನುವಾದಿಸಿದ್ದಾರೆ.

ನಮಗಿಂದು ಅತ್ಯಂತ ಸವಾಲಿನ ಕಾಲ ಎದುರಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಬರ್ಬರ ಬಲಪ್ರಯೋಗವೇ ಅತ್ಯಂತ ಮುಖ್ಯ ಎನಿಸಿರುವ ಕಾಲವಿದು – ಸರಕಾರಿ ವ್ಯವಸ್ಥೆಯಲ್ಲಿ ಇರುವವರಿಗೂ, ಭಕ್ತರಿಗೂ. ಆದರೆ, ಇದು ಹೊಸದಾಗಿ ಚಿಂತಿಸಿ, ಹೊಸ ಚಿಂತನೆಗಳ ಜೊತೆಯಲ್ಲಿ ಧೈರ್ಯದಿಂದ ನಿಲ್ಲುವ ಅವಕಾಶ ಮತ್ತು ಶಕ್ತಿ ನೀಡುವಂತಹ ಸವಾಲು ಕೂಡಾ ಹೌದು. ಆದರೆ, ನಮಗೆ ರಾಷ್ಟ್ರವಾದ ಮತ್ತು ದೇಶಪ್ರೇಮದ ನಡುವಿನ ವ್ಯತ್ಯಾಸ ತಿಳಿಯುವ ಮೂಲಭೂತ ವಿಷಯದ ಬಗ್ಗೆ ಸ್ಪಷ್ಟತೆ ಬೇಕು.
ಈಗ ಬೋಧಿಸಲಾಗುತ್ತಿರುವ ರಾಷ್ಟ್ರವಾದವು ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ಪಶ್ಚಿಮದಿಂದ ಎರವಲು ಪಡೆದದ್ದಾಗಿದೆ. ಈ ಪರಿಕಲ್ಪನೆಯನ್ನು ಜಪಾನ್, ಸ್ಪೇನ್, ಇಟಲಿ ಮತ್ತು ಜರ್ಮನಿಯಲ್ಲಿ ಅಧಿಕಾರ ಕಬಳಿಕೆಯ ಉದ್ದೇಶದಿಂದ ಹರಡಲಾಗಿತ್ತು. ಆದುದರಿಂದ, ಅಧಿಕಾರವೇ ಅದರ ಮೂಲ ಉದ್ದೇಶ. ಅದಕ್ಕೆ ತನ್ನೆಲ್ಲಾ ವೈಫಲ್ಯ ಮತ್ತು ಕೆಡುಕಿಗೆ ಹೊಣೆಮಾಡಲು ಒಂದು ಶತ್ರುವನ್ನು ಹುಟ್ಟುಹಾಕುವ ಅಗತ್ಯವಿರುತ್ತದೆ. ಅದೇ ಹೊತ್ತಿಗೆ ದೇಶಪ್ರೇಮ ಎಂಬುದು ಸಾಮಾನ್ಯವಾಗಿ ಪ್ರಜೆಗಳ ಸಮಸ್ಯೆಗಳನ್ನು ಪರಿಹರಿಸುವುದರ ಮೇಲೆ ಕೇಂದ್ರಿತವಾಗಿದೆ. ರಾಷ್ಟ್ರವಾದದ ಪ್ರೇರಕಶಕ್ತಿ ಎಂದರೆ ದ್ವೇಷ ಮತ್ತು ದೇಶಪ್ರೇಮದ ಪ್ರೇರಕಶಕ್ತಿ ಪ್ರೇಮ.
ಜಾರ್ಜ್ ಆರ್ವೆಲ್ ಗುರುತಿಸಿರುವಂತೆ, “ಋಣಾತ್ಮಕ ರಾಷ್ಟ್ರವಾದಿಯು ಇತಿಹಾಸವನ್ನು ಮಹಾನ್ ಶಕ್ತಿ ಘಟಕಗಳ ಕೊನೆಯಿಲ್ಲದ ಉನ್ನತಿ ಮತ್ತು ಅವನತಿಯನ್ನಾಗಿ ನೋಡುತ್ತಾನೆ ಮತ್ತು ಪ್ರತಿಯೊಂದು ಘಟನೆಯು ಅವನಿಗೆ ತನ್ನ ಪಕ್ಷವು ಉತ್ಕೃಷ್ಟ ಮತ್ತು ಎದುರಾಳಿಯು ನಿಕೃಷ್ಟ ಎಂದು ತೋರಿಸುತ್ತದೆ… ತನ್ನ ಪಕ್ಷವನ್ನು ಆಯ್ಕೆ ಮಾಡಿದ ಬಳಿಕ ಅವನು ಅದುವೇ ಬಲಶಾಲಿ ಎಂದು ತನಗೆ ತಾನೇ ಮನವರಿಕೆ ಮಾಡಿಕೊಳ್ಳುತ್ತಾನೆ. ರಾಷ್ಟ್ರವಾದವು ಆತ್ಮವಂಚನೆಯಿಂದ ಬಲಗೊಂಡಂತಹ ಅಧಿಕಾರದಾಹವಾಗಿರುತ್ತದೆ. ರಾಷ್ಟ್ರವಾದಿಯು ವಾಸ್ತವಕ್ಕೆ ಕುರುಡಾಗಿರುತ್ತಾನೆ. ಆತ ತನ್ನ ಪಕ್ಷವು ನಡೆಸಿದ ದೌರ್ಜನ್ಯವನ್ನು ನಿರಾಕರಿಸುತ್ತಾನೆ ಮತ್ತು ಅದರ ಕುರಿತು ಏನನ್ನೂ ಕೇಳಿಸಿಕೊಳ್ಳದೆ ಕಿವುಡಾಗಿರುವಂತಹ ಅಸಾಧಾರಣ ಸಾಮರ್ಥ್ಯವನ್ನೂ ಹೊಂದಿರುತ್ತಾನೆ. ಗತಕಾಲದಲ್ಲಿ ನಡೆದಿರುವುದನ್ನು ಬದಲಿಸಬಹುದು ಎಂಬ ನಂಬಿಕೆ ಅಥವಾ ಭ್ರಮೆಯಿಂದ ಆತ ಪೀಡಿತನಾಗಿರುತ್ತಾನೆ. ಘಟನೆಗಳು ಅವು ನಡೆಯಬೇಕಾದ ರೀತಿಯಲ್ಲಿಯೇ ನಡೆಯುವ ಭ್ರಮಾಲೋಕದಲ್ಲಿ ಆತ ಬದುಕುತ್ತಿರುತ್ತಾನೆ.” ಇಂದಿನ ಇಂಥಾ ಪರಿಸ್ಥಿತಿಯು ಎಂತಹ ಸವಾಲುಗಳನ್ನು ನಮ್ಮ ಮುಂದೆ ಒಡ್ಡುತ್ತಿದೆ ಎಂಬುದನ್ನು ನಮಗೆ ಸ್ಪಷ್ಟಪಡಿಸುವಂತಹ ಕೆಲವು ರೋಗಲಕ್ಷಣಗಳಿವು.
ಜಲಿಯನ್‍ವಾಲಾಬಾಗ್ ಹತ್ಯಾಕಾಂಡದ ನೂರನೆಯ ವರ್ಷದಲ್ಲಿ ನಾವು ಕೆಲವು ವಿಷಯಗಳನ್ನು ಮರೆಯದಿರೋಣ. ಅವೆಂದರೆ, ಮೈಕೆಲ್ ಓ’ಡ್ವಾಯರ್ ಮತ್ತು ಜನರಲ್ ಡಯರ್ ಬ್ರಿಟಿಷ್ ರಾಷ್ಟ್ರವಾದಿಗಳಾಗಿ ಕಾರ್ಯಾಚರಿಸಿದ್ದರೆ, ಭಾರತೀಯ ದೇಶಪ್ರೇಮಿಗಳು ಎಲ್ಲಾ ಜಾತಿ, ಧರ್ಮಗಳವರಿಗೆ ತೆರೆದಿರುವಂತಹ ಸಾರ್ವಜನಿಕ ಅಡುಗೆಮನೆ (ಲಂಗರ್)ಯನ್ನು ನಡೆಸಿ, ಆಹಾರ ವಸ್ತುಗಳ ಬೆಲೆ ಏರಿಕೆಯ ಸಮಸ್ಯೆಯನ್ನು ನಿವಾರಿಸುವ ಮೂಲಕ ದೇಶಪ್ರೇಮವನ್ನು ಗಟ್ಟಿಗೊಳಿಸಲು ಯತ್ನಿಸಿದ್ದರು. ಆ ಮೂಲಕ ಹಿಂದೂ ಮುಸ್ಲಿಂ ಏಕತೆಯನ್ನು ಸಾಧಿಸಿದ್ದರು – ಎಲ್ಲಿಯತನಕ ಎಂದರೆ, ಏಪ್ರಿಲ್ 9ರಂದು ಬಂದಿದ್ದ ರಾಮನವಮಿಯನ್ನು ಹಿಂದೂ-ಮುಸ್ಲಿಮರು ಜೊತೆಯಲ್ಲಿ ಆಚರಿಸಿದ್ದರು. ರಾಮನವಮಿ ಮೆರವಣಿಗೆಯ ನೇತೃತ್ವ ವಹಿಸಿದ್ದವರು ಡಾ. ಬಶೀರ್. ಈ ರೀತಿಯ ಒಗ್ಗಟ್ಟು ಬ್ರಿಟಿಷ್ ಆಡಳಿತಗಾರರಿಗೆ 1857ನ್ನು ನೆನಪಿಸಿತ್ತು ಮತ್ತು ಅದಕ್ಕಾಗಿಯೇ ಅವರು ಅಷ್ಟೊಂದು ಕ್ರೂರವಾಗಿ ವರ್ತಿಸಿದರು.
ಶಹೀದ್ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತರು 1929ರ ಡಿಸೆಂಬರ್‍ನಲ್ಲಿ ‘ಮಾಡರ್ನ್ ರಿವ್ಯೂ’ ಪತ್ರಿಕಾ ಸಂಪಾದಕರಿಗೆ ಬರೆದ ಪತ್ರದಲ್ಲಿ ಏನು ಹೇಳಿದ್ದರೆಂದು ನೆನಪಿಸಿಕೊಳ್ಳೋಣ.
“ಕ್ರಾಂತಿ…ಒಂದು ಚೈತನ್ಯ, ಒಳ್ಳೆಯದರತ್ತ ಬದಲಾವಣೆಯ ತುಡಿತ. ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಒಗ್ಗಿಕೊಂಡುಬಿಡುತ್ತಾರೆ ಮತ್ತು ಬದಲಾವಣೆಯ ಕಲ್ಪನೆ ಮಾತ್ರಕ್ಕೇ ನಡುಗಲಾರಂಭಿಸುತ್ತಾರೆ. ಈ ಜಡಚೇತನವನ್ನೇ ಕ್ರಾಂತಿಕಾರಿ ಚೈತನ್ಯದಿಂದ ಬದಲಿಸಬೇಕಾಗಿರುವುದು. ಇಲ್ಲವಾದಲ್ಲಿ ಈ ಅವನತಿಯು ಮೇಲುಗೈ ಪಡೆಯುತ್ತದೆ ಮತ್ತು ಇಡೀ ಮಾನವೀಯತೆಯನ್ನೇ ಪ್ರತಿಗಾಮಿ ಶಕ್ತಿಗಳು ಅಡ್ಡದಾರಿಗೆಳೆಯುತ್ತವೆ. ಇಂತಹ ಪರಿಸ್ಥಿತಿಯು ಸ್ಥಗಿತತೆಗೆ ದಾರಿಮಾಡಿಕೊಟ್ಟು, ಮಾನವ ಪ್ರಗತಿಗೇ ಲಕ್ವಾ ಹೊಡೆದಂತಾಗುತ್ತದೆ. ಕ್ರಾಂತಿಕಾರಿ ಚೈತನ್ಯವು ಯಾವತ್ತೂ ಮಾನವೀಯ ಆತ್ಮವನ್ನು ಉನ್ನತಿಗೊಳಿಸಬೇಕು. ಈ ನಿರಂತರ ಚೈತನ್ಯ ಯಾತ್ರೆಯನ್ನು ತಡೆಯಲಿಕ್ಕಾಗಿ ಪ್ರತಿಗಾಮಿ ಶಕ್ತಿಗಳು ತಮ್ಮ ಶಕ್ತಿ ಸಂಚಯ ಮಾಡುವುದನ್ನು ತಡೆಯಲು ಸಾಧ್ಯವಾಗುತ್ತದೆ. ಹಳೆಯ ವ್ಯವಸ್ಥೆ ಯಾವತ್ತೂ ನಿರಂತರವಾಗಿ ಬದಲಾಗುತ್ತಾ ಹೊಸದಕ್ಕೆ ಜಾಗಮಾಡಿಕೊಡಬೇಕು. ಒಂದು ‘ಒಳ್ಳೆಯ’ ವ್ಯವಸ್ಥೆ ಪ್ರಪಂಚವನ್ನು ಭ್ರಷ್ಟಗೊಳಿಸದಂತೆ ತಡೆಯಲು ಈ ಚೈತನ್ಯ ಅತ್ಯಗತ್ಯ. ಈ ದೃಷ್ಟಿಯಿಂದಲೇ ನಾವು “ಕ್ರಾಂತಿ ಚಿರಾಯುವಾಗಲಿ” ಎಂಬ ಘೋಷಣೆ ಹಾಕುತ್ತೇವೆ.
ಈ ಚೈತನ್ಯವನ್ನೇ ನಮ್ಮ ಪ್ರೀತಿಯ ಗೌರಿ ಲಂಕೇಶ್ ಪ್ರೇರೇಪಿಸುತ್ತಿದ್ದುದು. ಭಗತ್ ಸಿಂಗ್ ಹೇಳಿದಂತೆ, ಅವರು ವ್ಯಕ್ತಿಯನ್ನು ಕೊಲ್ಲಬಹುದು; ಆದರೆ ವಿಚಾರಗಳು ಚಿರಂತನವಾಗಿರುತ್ತವೆ.
ಕ್ರಾಂತಿಕಾರಿ ವಿಚಾರಗಳ ಮೂಲಕ ಯುವಜನರು ಮತ್ತು ಜನಸಾಮಾನ್ಯರನ್ನು ಸಶಕ್ತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಭಗತ್ ಸಿಂಗ್ ಅವರ ಈ ಮಾತುಗಳು ನಮಗೆ ದಾರಿ ತೋರಿಸಲಿ.
“ನಾಯಕರು ಲೋಕೋಪಕಾರಿ ಕಾರ್ಯಗಳನ್ನು ಮಾಡಬಹುದು. ಆದರೆ, ಅದು ಸಾಮಾಜಿಕ ಬದಲಾವಣೆಯನ್ನು ತರುವುದಿಲ್ಲ. ಸಾಮಾಜಿಕ ಬದಲಾವಣೆಗೆ ವೈಜ್ಞಾನಿಕತೆ ಕೇಂದ್ರಿತವಾದ, ಸಾಮಾಜಿಕವಾಗಿ ಚಲನಶೀಲವಾದ ಶಕ್ತಿಯನ್ನು ಹುಟ್ಟುಹಾಕುವ ಅಗತ್ಯವಿದೆ”. ಇದು ನಮ್ಮ ಮುಂದಿರುವ ಹಾದಿ. ಒಂದು ಚಾರಿತ್ರಿಕ ಕಾಲಘಟ್ಟದ ಜನರ ಅಗತ್ಯಗಳಿಗೆ ಪೂರಕವಾದ ಮಾನವ ಪ್ರಗತಿಯನ್ನು ವಿಚ್ಛಿದ್ರಕಾರಿ ಶಕ್ತಿಗಳು ವಿಳಂಬಿಸಬಹುದು; ಆದರೆ, ಮಾನವ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದುದರಿಂದ ನಾವು ದೃಢವಾಗಿ ಮುಂದುವರಿಯೋಣ ಮತ್ತು ನಮ್ಮ ವಿಚಾರಗಳಲ್ಲಿ ಸ್ಪಷ್ಟತೆ ತಂದುಕೊಳ್ಳೋಣ.


