Homeಚಳವಳಿಗಳಿಸಿಕೊಂಡಿದ್ದನ್ನೂ ಕಳೆದುಕೊಳ್ಳಬೇಕಿರುವ ಟ್ರಾನ್ಸ್-ಕ್ವಿಯರ್ ಸಮುದಾಯ : ಕಾರ್ತಿಕ್ ಬಿಟ್ಟು

ಗಳಿಸಿಕೊಂಡಿದ್ದನ್ನೂ ಕಳೆದುಕೊಳ್ಳಬೇಕಿರುವ ಟ್ರಾನ್ಸ್-ಕ್ವಿಯರ್ ಸಮುದಾಯ : ಕಾರ್ತಿಕ್ ಬಿಟ್ಟು

- Advertisement -
- Advertisement -

ಪಾದರಸದಂತಹ ವ್ಯಕ್ತಿತ್ವದ ಕಾರ್ತಿಕ್ ಬಿಟ್ಟು ಹುಟ್ಟಿದ್ದು ಬೆಂಗಳೂರಿನಲ್ಲಿ. ದೆಹಲಿಯಲ್ಲಿ ಬೆಳೆದು ಹಾರ್ವರ್ಡ್‍ನಲ್ಲಿ ನ್ಯೂರೋ ಬಿಹೇವಿಯರ್ ವಿಜ್ಞಾನದಲ್ಲಿ ಪಿಎಚ್‍ಡಿ ಮಾಡಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಸಿಡಿಯುವ ಸಂಗಾತಿ, ಸ್ಥಳೀಯ ದುರ್ಬಲ ಸಮುದಾಯಗಳ ಪರವಾಗಿ ಕೆಲಸ ಮಾಡಲು ಆದ್ಯತೆ. ರೋಹಿತ್ ವೇಮುಲಾ ಆತ್ಮಹತ್ಯೆಯಾದಾಗ ಅದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿದ್ದು, ದನಿಯೆತ್ತಿದ್ದರು. ಇದೀಗ ಅಶೋಕಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರು ಮತ್ತು ವಿಜ್ಞಾನಿ. ಕರ್ನಾಟಕ ಜನಶಕ್ತಿ, ಡಬ್ಲ್ಯುಎಸ್‍ಎಸ್ ಮತ್ತು ಟ್ರಾನ್ಸ್‍ಜೆಂಡರ್ ಸಂಘಟನೆಗಳ ಸದಸ್ಯರು. ಇವರ ಈ ಲೇಖನವನ್ನು ಕನ್ನಡಕ್ಕೆ ರಾಜಶೇಖರ್ ಅಕ್ಕಿಯವರು ಅನುವಾದ ಮಾಡಿದ್ದಾರೆ.

ಇಂದು ಭಾರತದ ಟ್ರಾನ್ಸ್‌ಜೆಂಡರ್ ಮತ್ತು ಕ್ವೀಯರ್ (ಲೈಂಗಿಕ ಅಲ್ಪಸಂಖ್ಯಾತ) ಸಮುದಾಯಗಳು ಸಂದಿಗ್ಧದಲ್ಲಿ ಇದ್ದಾರೆ. ಒಂದೆಡೆ ಭಾರತೀಯ ನ್ಯಾಯಾಲಯಗಳು ಎನ್‍ಎಎಲ್‍ಎಸ್‍ಏ ತೀರ್ಪಿನ ಅಡಿಯಲ್ಲಿ ನಮಗೆ ಹಿಂದೆಂದೂ ಇಲ್ಲದಂತಹ ನಮ್ಮನ್ನು ನಾವು ನಾವೇ ಇಚ್ಛಿಸಿದ ಲಿಂಗದೊಂದಿಗೆ ಗುರುತಿಸಿಕೊಳ್ಳುವ ಹಕ್ಕನ್ನು ನೀಡಿದ್ದಾರೆ. ಇದರಿಂದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ನಮ್ಮ ದೇಹಗಳು ಹೇಗೆ ಕಾಣಿಸಿಕೊಂಡರೂ ನಮ್ಮ ಗುರುತಿನ ದಾಖಲೆಗಳಲ್ಲಿಯೂ ನಮ್ಮ ಆಯ್ಕೆಯ ಲಿಂಗದೊಂದಿಗೆ ಗುರುತಿಸಕೊಳ್ಳಬಹುದಾಗಿದೆ. ಈ ತೀರ್ಪಿನ ಮುಖಾಂತರ ಉಚ್ಚ ನ್ಯಾಯಾಲಯವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಈ ದೇಶದಲ್ಲಿ ಆದ ಅನ್ಯಾಯವನ್ನು ಗುರುತಿಸಿದೆ ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಉಚಿತ ಆರೋಗ್ಯ ಸೇವೆ, ವಸತಿ ಮುಂತಾದ ಸವಲತ್ತುಗಳನ್ನು ನೀಡಬೇಕೆಂದು ಹೇಳಿದೆ. ಸೆಕ್ಷನ್ 377ಅನ್ನು ತೆಗೆದುಹಾಕುವುದರಿಂದ ನ್ಯಾಯಾಲಯಗಳು ಒಂದು ಬಲವಾದ ಸಂದೇಶವನ್ನೂ ನೀಡಿದಂತಾಗಿದೆ.

ಇದೇ ಹೊತ್ತಿನಲ್ಲಿ ಶಾಸಕಾಂಗವು ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಅಪರಾಧೀಕರಿಸುವ ಮಸೂದೆಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ಜಾರಿ ಮಾಡುತ್ತಿದೆ; ಇದರಿಂದ ಪರಿಸ್ಥಿತಿ ಮೊದಲಿಗಿಂತಲೂ ಹದಗೆಡಲಿದೆ. ಬಿಜೆಪಿ ಸರಕಾರವು 2015ರಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ರಕ್ಷಣೆ) ಮಸೂದೆ ರಚಿಸಿತು. ಈ ಮಸೂದೆಯ ಹೆಸರೇ ಅತ್ಯಂತ ಗೊಂದಲಮಯವಾಗಿದೆ; ಏಕೆಂದರೆ, ರಾಜ್ಯಸಭೆಯಲ್ಲಿ ಡಿಎಮ್‍ಕೆಯ ತಿರುಚಾ ಶಿವ ಅವರು, ಟ್ರಾನ್ಸ್‌ಜೆಂಡರ್ ಸಮುದಾಯ ಸಹಾಯದಿಂದ ಇದೇ ಹೆಸರಿನಲ್ಲಿ ರಚಿಸಲಾದ ಮಸೂದೆಯನ್ನು ಮಂಡಿಸಿದ್ದರು. ಆದರೆ ಲೋಕಸಭೆಯಲ್ಲಿ ಈ ಮಸೂದೆಯನ್ನು ತಂದಾಗ ಮೂಲ ಮಸೂದೆಯಲ್ಲಿದ್ದ ಎಲ್ಲಾ ಸಕಾರಾತ್ಮಕ ಅಂಶಗಳು ಕಣ್ಮರೆಯಾಗಿದ್ದವು. ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ತಾರತಮ್ಯ ಮಾಡಿದರೆ ಇರಬೇಕಾದ ದಂಡ ಇರಲಿಲ್ಲ ಹಾಗೂ ಈ ಕ್ಷೇತ್ರಗಳಲ್ಲಿ ಮೀಸಲಾತಿ ಅವಕಾಶವನ್ನು ಕಲ್ಪಿಸದೇ ಸಾಂಪ್ರದಾಯಿಕ ಭಿಕ್ಷಾಟನೆಯನ್ನು ಅಪರಾಧೀಕರಿಸಲಾಯಿತು. ಟ್ರಾನ್ಸ್‌ಜೆಂಡರ್ ಸಮುದಾಯವು ದೀರ್ಘಕಾಲಿಕ ಹೋರಾಟ ನಡೆಸಿದ ನಂತರ 2019ರ ಅವೃತ್ತಿಯಲ್ಲಿ ಆ ತಿದ್ದುಪಡಿಗಳನ್ನು ಹಿಂಪಡೆಯಲಾಯಿತು.

ಆದರೂ, ಸುಪ್ರೀಂಕೋರ್ಟಿನ ಎನ್‍ಏಎಲ್‍ಎಸ್‍ಏ ತೀರ್ಪಿನಲ್ಲಿ ಅಡಕವಾದ ಸ್ವ ಇಚ್ಛೆಯಿಂದ ತಮಗಿಷ್ಟವಾದ ಲಿಂಗವನ್ನು ಗುರುತಿಸುವ ಹಕ್ಕನ್ನು ಈ ಮಸೂದೆ ಉಲ್ಲಂಘಿಸುತ್ತದೆ. ಈಗ ಆ ವ್ಯಕ್ತಿಗಳು ಮೊದಲು ತಾವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳೆಂದು ಸರಕಾರಕ್ಕೆ ಬಹಿರಂಗಪಡಿಸಬೇಕು ಹಾಗೂ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತಮ್ಮ ಗುರುತಿನ ದಾಖಲೆಗಳನ್ನು ಪಡೆಯಲು ಮನವಿ ಸಲ್ಲಿಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಿದೆ. ಹಾಗೂ ನಮ್ಮ ಆಯ್ಕೆಯ ಯಾವುದೇ ಇತರ ಲಿಂಗದಲ್ಲಿ ಗುರುತಿನ ದಾಖಲೆಗಳನ್ನು ಪಡೆಯಬೇಕಾದರೆ ಶಸ್ತ್ರಚಿಕಿತ್ಸೆಯ ದಾಖಲೆಗಳನ್ನು ಸಲ್ಲಿಸಬೇಕು ಎಂತಲೂ ಹೇಳಿದೆ. ಇದರ ಅರ್ಥ, ಒಬ್ಬ ಟ್ರಾನ್ಸ್ ಪುರುಷ, ಹಾರ್ಮೋನುಗಳನ್ನು ಸೇವಿಸಿ, ಗಡ್ಡವನ್ನು ಬೆಳೆಸಿದರೂ, ಒಂದು ವೇಳೆ ಆತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಇಚ್ಛಿಸದಿದ್ದರೆ ತನ್ನ ಆಯ್ಕೆಯ ಲಿಂಗಕ್ಕೆ ವಿರುದ್ಧವಾದ ಲಿಂಗದ ಗುರುತಿನೊಂದಿಗೇ ಜೀವಿಸಬೇಕಾಗುತ್ತದೆ. ಈ ಮಸೂದೆಯು ಬೇರೆ ಬೇರೆ ರೀತಿಯ ಟ್ರಾನ್ಸ್ ವ್ಯಕ್ತಿಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಬೇರೆ ಬೇರೆ ಪ್ರಮಾಣದ ಶಿಕ್ಷೆ ನೀಡುವ ತಾರತಮ್ಯವನ್ನೂ ಹೊಂದಿದೆ.

ಬಹುಶಃ ನಮ್ಮ ಹಕ್ಕುಗಳ ಮೇಲೆ ಇಂತಹ ಕಾನೂನು ದಾಳಿಗೆ ಪ್ರತಿಕ್ರಿಯೆಯಾಗಿಯೇ, ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ಅವಶ್ಯಕತೆ ಎಲ್ಲರಿಗೂ ಕಾಣಿಸುವಂತಾಗಲಿ ಎಂದು ಟ್ರಾನ್ಸ್‌ಜೆಂಡರ್ ಸಮುದಾಯವು 2019ರ ಚುನಾವಣೆಗಳಲ್ಲಿ ಗಟ್ಟಿಯಾಗಿ ತೊಡಗಿಸಿಕೊಂಡಿತ್ತು. ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಚುನಾವಣೆಯಲ್ಲಿ ಬಹಳ ಹಿಂದಿನಿಂದ ಭಾಗವಹಿಸುತ್ತಿದ್ದರೂ, 2019ರ ಚುನಾವಣೆ ಮುಂಚೆಗಿಂತ ಭಿನ್ನವಾಗಿತ್ತು. ದೇಶದ ವಿವಿಧೆಡೆಯಲ್ಲಿ 2019ರ ಚುನಾವಣೆಯಲ್ಲಿ ಭಾಗವಹಿಸಿದ ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರ ಸಂಖ್ಯೆ ಗಣನೀಯವಾಗಿತ್ತು. ಹಾಗೂ ಅದಕ್ಕಿಂತ ಮುಖ್ಯವಾಗಿ ಟ್ರಾನ್ಸ್‌ಜೆಂಡರ್ ಸಮುದಾಯದ ವಿಷಯಗಳನ್ನು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ವಿವರವಾಗಿ ಉಲ್ಲೇಖಸಿದ್ದು 2019ರ ಚುನಾವಣೆಗಳಲ್ಲಿ.

ಪ್ರಸ್ತುತ ಮಸೂದೆಯ ವಿರುದ್ಧ ಹೋರಾಟ ಮಾಡುವ ಭರವಸೆಯನ್ನು ಕೆಲವು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಸ್ಪಷ್ಟವಾಗಿ ಹೇಳಿದವು; ಕಾಂಗ್ರೆಸ್ ಪಕ್ಷ, ಸಿಪಿಎಮ್ ಹಾಗೂ ಹೊಸದಾಗಿ ರಚಿತಗೊಂಡ ವಂಚಿತ್ ಬಹುಜನ್ ಅಘಾಡಿ ಪಕ್ಷದ ಪ್ರಣಾಳಿಕೆಗಳು ಈ ಭರವಸೆಯನ್ನು ಒಳಗೊಂಡ ಕೆಲವು ಪಕ್ಷಗಳು. ಅದರೊಂದಿಗೆ, ಹಲವಾರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಚುನಾವಣೆಗೂ ಸ್ಪರ್ಧಿಸಿದರು; ಅಲಹಾಬಾದ್‍ನಲ್ಲಿ ಭವಾನಿ ಸಿಂಗ್ ಆಪ್‍ನಿಂದ ಸ್ಪರ್ಧಿಸಿದರೆ, ಇತರ ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು; ಅವರೆಂದರೆ ಎರ್ನಾಕುಲಮ್‍ದಿಂದ ‘ಚಿಂಚು’ ಅಸ್ವಥಿ ರಾಜಪ್ಪನ್, ಅಹ್ಮದಾಬಾದ್‍ನಿಂದ ರಾಜು ಮಾತಾಜಿ, ಮುಂಬಯಿಯಲ್ಲಿ ಜತಿನ್ ರಂಗರಾವ್ ಹರ್ನೆ ಮತ್ತು ಸ್ನೇಹಾ ಕಾಳೆ ಹಾಗೂ ಚೆನ್ನೈನಿಂದ ಎಮ್.ರಾಧಾ.

ಬಿಜೆಪಿಯ ಗೆಲವು ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಇನ್ನಷ್ಟು ದುಗುಡವನ್ನು ತಂದಿದೆ. ಈ ಕಾರಣದಿಂದಲೇ ಅವರ ನೀತಿಗಳ ವಿರುದ್ಧ ಸಮುದಾಯದ ರಾಜಕೀಯ ಪಾಲ್ಗೊಳ್ಳುವಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು. ಬಿಜೆಪಿಯ ಪ್ರಣಾಳಿಕೆಯು ತುಂಬಾ ನಯವಾಗಿ ‘ಸೂಕ್ತ ಸಾಮಾಜಿಕ, ಆರ್ಥಿಕ ಮತ್ತು ನೀತಿಗಳ ಕ್ರಮಗಳ’ ಮೂಲಕ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು ಮುಖ್ಯವಾಹಿನಿ ತರಲಾಗುವುದು’, ‘ಸ್ವ-ಉದ್ಯೋಗ’ ಮತ್ತು ‘ಕೌಶಲ್ಯ ಅಭಿವೃದ್ಧಿ’ಯನ್ನು ಸುನಿಶ್ಚಿತಗೊಳಿಸಲಾಗುವುದು ಎಂದೂ ಹೇಳಿತು. ಆದರೆ, ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯ ರೂಪದಲ್ಲಿ ಸಮುದಾಯವು ಸ್ವ-ಉದ್ಯೋಗದಲ್ಲಿಯೇ ತೊಡಗಿದೆ, ಇವರೆಡೂ ಸಂಕಷ್ಟದಿಂದ ಹುಟ್ಟಿಕೊಂಡ ಸ್ವಯಂ-ಸಂಘಟಿತ ಜೀವನೋಪಾಯಗಳಾಗಿವೆ.

ಮುಂದಿನ ದಿನಗಳು ಅಷ್ಟು ಚೆನ್ನಾಗಿರುವುದಿಲ್ಲವೆಂಬುದು ಖಚಿತ. ಆರ್ಥಿಕ ಬಿಕ್ಕಟ್ಟಿನೆದುರು, ಫ್ಯಾಸಿಸ್ಟ್ ತತ್ವಾಧಾರಿತ ಹಿಂದೂ ಬಹುಸಂಖ್ಯಾತವಾದಿ ಸಂಘಟನೆಯಿಂದ ಆಳಲ್ಪಡುತ್ತಿರುವ ಈ ದೇಶವು ಒಂದು ದೀರ್ಘ ಸಾಮಾಜಿಕ ರಾಜಕೀಯ ಪ್ರಕ್ರಿಯೆಯ ಮೂಲಕ ಹಾದುಹೋಗಲೇಬೇಕಿದೆ ಎಂಬುದು ಸ್ಪಷ್ಟ.

ಅಂಕಿಅಂಶಗಳ ಪ್ರಕಾರ ಎಲ್‍ಜಿಬಿಟಿಕ್ಯುಐಏ (LGBTQIA) ಎಂದು ಗುರುತಿಸಿಕೊಂಡವರ ಸಂಖ್ಯೆ ಭಾರತದ ಜನಸಂಖ್ಯೆಯ ಶೇ.4-11ರಷ್ಟಿದೆ. ಅಂದರೆ, ಈ ಸಮುದಾಯ ವೋಟ್ ಬ್ಯಾಂಕ್ ಎಂದು ಪರಿಗಣಿಸುವಷ್ಟು ದೊಡ್ಡದಾಗಿದೆ. ಆದರೆ ನನ್ನ ಚಿಂತೆ LGBTQIA ಸಮುದಾಯದ ಸದಸ್ಯರ ಮತ್ತು ಅವರ ಹೆಚ್ಚುತ್ತಿರುವ ಸಾರ್ವಜನಿಕ ಅಸ್ತಿತ್ವ ಅಲ್ಲ; ತುಳಿತಕೊಳಪಟ್ಟ ಇತರ ಸಮುದಾಯಗಳೊಂದಿಗೆ ಈ ಸಮುದಾಯವು ಹೇಗೆ ಸಹ-ಸಂಬಂಧವನ್ನು ಸಾಧಿಸಬಹುದು ಎನ್ನುವುದು ನನ್ನ ಚಿಂತೆ. ಸ್ವ-ವಿಮೋಚನೆಯ ಒಂದು ಸಂಕುಚಿತ ರೂಪಕ್ಕಾಗಿ ಹೋರಾಡುವುದು ನಮ್ಮ ಗುರಿಯಾಗಬಾರದು. ಅದರ ಬದಲಿಗೆ ಇಂದು ಇರುವ ಕ್ರೂರ, ಅಸಮಾನ ಸಮಾಜದಿಂದ ಎಲ್ಲರನ್ನೂ ವಿಮೋಚನೆಗೊಳಿಸುವುದು ನಮ್ಮ ಗುರಿಯಾಗಿರಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...