ಈಗ ತಾಜಾ ಹಾಗೂ ಬಿಸಿ ಸುದ್ದಿ ಎನಪಾ ಅಂದ್ರ ಫೇಸುಬುಕ್ಕು ಅನ್ನೋ ಒಂದು ಸಂಸ್ಥೆ ತನ್ನಲ್ಲಿ ಇದ್ದ ಕೆಲವು ರೋಬೋಟುಗಳನ್ನು ಸ್ವಿಚ್ಚು ಆಫ್ ಮಾಡಿಬಿಟ್ಟದಂತ. ಯಾವುದನ್ನು ಪೂರ್ತಿ ಉಚ್ಛಾರ ಮಾಡಲಾರದ ಅಮೆರಿಕನ್ನರು ಇವನ್ನ ಬಾಟ್ ಅಂತ ಕರಿತಾರ. ನೀವು ರೇಡಿಯೋದಾಗಿನ ಬಾತ್ ಅಂತ ತಿಳಕೋಬ್ಯಾಡ್ರಿ ಮತ್ತ.
ಈ ಬಾಟ್‍ಗಳನ್ನ ಯಾಕ್ ಬಂದ್ ಮಾಡಿದರು ಅಂತ ಕೆಳರಿ ಈಗ. ಅದು ಯಾಕ್ ಅಂದ್ರ ಅವು ಅಗತ್ಯಕ್ಕಿಂತ ಶಾಣೆ ಆಗಿಬಿಟ್ಟಾವ. ಯಂತ್ರ ಕಲಿಕೆ ಹಾಗೂ ಕೃತಕ ಬುದ್ಧಿಮತ್ತೆ ಉಪಯೋಗಿಸಿ ತಯಾರಿಸಿದ ಈ ಯಂತ್ರ ಮಾನವರು ತಮ್ಮನ್ನು ತಯಾರು ಮಾಡಿದ ವಿಜ್ಞಾನಿಗಳಿಗೇ ತಿಳಿಯಲಾರದ ಭಾಷೆ ಬಳಸಿ ಮಾತಾಡ್‍ಲಿಕ್ಕೆ ಹತ್ತಿಬಿಟ್ಟವು. ಅದನ್ನು ನೋಡಿ ದಂಗಾದ ವಿಜ್ಞಾನಿಗಳು ಅದರ ಬಟನ್ ಬಂದು ಮಾಡಿ, ಅಸಿಡಿಟಿ ಹೆಚ್ಚಾಗಿ ಒಂದು ಬಾಟಲಿ ಈನೋ ಕುಡಿಲಿಕ್ಕೆ ಹೋದರಂತ.
ಕನ್ನಡ ಸಾಲಿಯೊಳಗ ಹಿಂಗ ಆಗತಿತ್ತು. ಬ್ಯಾರೆ ಊರಿನಿಂದ ಬಂದ ಹೊಸ ಹುಡುಗಗ ಕೈ ಹಿಡಕೊಂಡು ಸಾಲಿ, ಸಾಲಿ ಮೈದಾನ, ಸಾಲಿ ಮುಂದಿನ ಜಾಲಿ ಗಿಡ, ಸಾಲಿ ಹಿಂದಿನ ಕವಳಿ ಹಣ್ಣಿನ ಗಿಡದ ಬೇಲಿ, ಎಲ್ಲಾ ತೋರಿಸಿ, ಇವತ್ತು ಒಬ್ಬವ ಹೊಸಾ ಗೆಳಯಾ ಸಿಕ್ಕ ಅಂತ ಕುಣಕೋತ ಮನಿಗೆ ಹೋಗಿ, ಯವ್ವನ ಮುಂದ ಒದರಿ, ಮರು ದಿವಸ ಓಡಿಕೋತ ಸಾಲಿಗೆ ಬಂದರ, ಆ ಹೊಸಾ ಹುಡುಗಾ ನಮ್ಮ ವೈರಿ ಹುಡುಗನ ಸಂಗತೆ ಉಲ್ಟಾ ಕನ್ನಡ ಮಾತು ಅಡಿಕೋತ ಮಜಾ ಮಾಡಲಿಕ್ಕೆ ಹತ್ತಿಬಿಟ್ಟಿರತಿದ್ದಾ. ಅದು ಭಯಂಕರ ನೋವು ಆಗತಿತ್ತು. ಅನ್ನಂಗಿಲ್ಲ, ಆಡಂಗಿಲ್ಲ.
ಅಮೆರಿಕದ ಫೇಸುಬುಕ್ಕು ಅನ್ನೋ ಪ್ರಯೋಗ ಸಾಲಿಯೊಳಗೂ ಹಿಂಗ ಆಗೇದ. “ನಾವು ಕಷ್ಟ ಪಟ್ಟು ಅ ಆ ಇ ಈ ಹೇಳಿಕೊಟ್ಟ ಈ ಯಂತ್ರಗಳು ನಮ್ಮನ್ನೆ ಬೈಪಾಸು ಮಾಡಿ ನಮಗ ತಿಳಿಯಲಾರದಂತಹ ಭಾಷೆ ಕಂಡು ಹಿಡಕೊಂಡುಬಿಟ್ಟಾವು” ಅಂತ ತಜ್ಞರಿಗೆ ಅವಮರ್ಯಾದೆ ಆಗಿ ಹೆದರಿಕೊಂಡುಬಿಟ್ಟಾರ.
ಇದನ್ನ ಓದಿದಾಗ ವಿಜ್ಞಾನ ಲೇಖಕ ಐಸಾಕ್ ಅಸಿಮೋವ್ ಅವರ `ದಿ ಲಾಸ್ಟ್ ಕ್ವಶ್ಚನ್’ ಕತಿ ನೆನಪು ಆಗತದ. ಭವಿಷ್ಯದ ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ಭವಿಷ್ಯ ನುಡಿದಂತೆ ಕತೆ – ಕಾದಂಬರಿ ಬರೆದ ಆಸೀಮೋವ ಅವರು 1973 ಈ ಮಹತ್ವದ ಕತೆ ಬರದರು. ಆ ಕತಿ ಒಳಗ ಸರಕಾರದ ಎಲ್ಲ ಕೆಲಸಗಳನ್ನು ಮಾಡಲಿಕ್ಕೆ ಒಂದು ಸೂಪರ್ ಸುಪ್ರೀಂ ಕಂಪ್ಯೂಟರ್ ತಯಾರು ಮಾಡತಾರ. ಅದರ ಹೆಸರು ಮಲ್ಟಿವ್ಯಾಕ. ಇದು ಬಹಳ ಶಾಣೆ ಯಂತ್ರ. ಈಗಿನ ನಾವು ಬಳಸೋ ಗಣಕಗಳಂತೆ ಅದು ಬರೆ ಮಾಹಿತಿ ಹೊಂದಿರೋದಿಲ್ಲ. ಅದರ ಮಾಹಿತಿ ಸಂಸ್ಕರಣ ಶಕ್ತಿ ಹೆಚ್ಚಾಗಿ ಜಗತ್ತಿನ ಎಲ್ಲ ಜ್ಞಾನ ಹಾಗೂ ವಿವೇಕವನ್ನು ಸಹಿತ ಪಡೆದುಕೊಂಡಿರತದ.
ಇದಕ್ಕ ಯಾರಾದರೂ, ಏನು ಬೇಕಾದರೂ, ಎಷ್ಟು ಹೊತ್ತಿಗಾದರೂ ಪ್ರಶ್ನೆ ಕೇಳಬಹುದು. ಅದು ಯಾರನ್ನು ನಿರಾಶೆ ಮಾಡೋದಿಲ್ಲ. ಹಿಂಗಾಗಿ ಜನ ಎಲ್ಲ ವಿಚಾರ ಶಕ್ತಿ ಕಳಕೊಂಡು ಬಿಟ್ಟಿರತಾರ. ಸರಕಾರದವರು, ಖಾಸಗಿಯವರು, ಕುಟುಂಬಸ್ತರು, ವಿದ್ಯಾರ್ಥಿಗಳು, ಸೈನಿಕರು, ಆಟಗಾರರು, ಮನಿ ನಡಸೋ ಗೃಹಿಣಿಯರು, ಕಡಿಕೆ ವಿಜ್ಞಾನಿಗಳು ಸಹಿತ ಎಲ್ಲ ಸಂದೇಹಗಳನ್ನ ಮಲ್ಟಿವ್ಯಾಕ ಯಂತ್ರದ ಹತ್ತಿರ ಬಂದು ಕೇಳತಿರತಾರ.
ಅವರ ಎಲ್ಲ ಪ್ರಶ್ನೆಗಳನ್ನು ಅದು ಉತ್ತರಿಸಿ, ಸಂದೇಹಗಳನ್ನು ಪರಿಹರಿಸಿಬಿಡತದ. ಆದರಿಂದ ಅಧಿಕಾರಿಗಳು ಆಡಳಿತದ ಬಗ್ಗೆ ತಲಿ ಕೆಡಿಸಿಕೊಳ್ಳೋದಿಲ್ಲ. ನಾಯಕರು ನೀತಿನಿರೂಪಣೆ ಬಗ್ಗೆ ತಲಿ ಕೆಡಿಸಿಕೊಳ್ಳೋದಿಲ್ಲ. ಜನ ತಮ್ಮ ದಿನನಿತ್ಯದ ಜೀವನದ ಬಗ್ಗೆ ತಲಿ ಕೆಡಿಸಿಕೊಳ್ಳೋದಿಲ್ಲ.
ಆದರ ಒಂದು ಪ್ರಶ್ನೆಗೆ ಮಾತ್ರ ಮಲ್ಟಿವ್ಯಾಕನ ಹತ್ತಿರ ಉತ್ತರ ಇಲ್ಲ. ಅದು ಏನು ಅಂದ್ರ ಎಂಟ್ರೋಪಿಗೆ ಪರಿಹಾರ ಏನು ಅನ್ನೋದು. ಎಂಟ್ರೋಪಿ ಅಂದ್ರ ಜಡೋಷ್ಣ ಅಥವಾ ಸರಳ ಭಾಷೆದಾಗ ಹೇಳಬೇಕು ಅಂದ್ರ ಇಡೀ ಜಗತ್ತನ್ನು ನಡೆಸುತ್ತಾ ಇರೋ ಚೈತನ್ಯ – ಶಕ್ತಿ ದಿನ ದಿನಕ್ಕ ಕಮ್ಮಿ ಆಗಲಿಕ್ಕೆ ಹತ್ತೆದ. ಇದು ಆಗಲಾರದ ಹಂಗ ಏನು ಮಾಡಬೇಕು? ಅನ್ನೋ ಪ್ರಶ್ನೆ.
ಸೂರ್ಯನ ಶಾಖದಿಂದ ಭೂಮಿಯ ನೀರೆಲ್ಲ ಆವಿಯಾಗಿ, ನೀರುಕಲ್ಲುಗಳೆಲ್ಲ ಕರಗಿಹೋಗಿ, ಗಿಡ, ಪಕ್ಷಿ, ಪ್ರಾಣಿ, ಎಲ್ಲ ನಾಶ ಆಗಿ, ಮನುಷ್ಯರು ಒಬ್ಬರನ್ನೊಬ್ಬರು ಹೊಡೆದು ಕೊಂದುತಿಂದು, ಶುದ್ಧ ನೀರು, ಶುದ್ದ ಗಾಳಿ, ಸಹಿತ ಸಿಗಲಾರದೆಹೋಗಿ ಎಲ್ಲ ನಾಶ ಆಗತದ ಅಂತರಲ್ಲಾ, ಅದು ಎಂಟ್ರೋಪಿ.
ಇದನ್ನ ಹೆಂಗ ತಡಿಯಬೇಕು? ಇದಕ್ಕ ಉಪಾಯ ಏನು ಅಂತ ಕೇಳಿದಾಗ ಮಲ್ಟಿವ್ಯಾಕ “ಈ ಪ್ರಶ್ನೆಗೆ ಉತ್ತರ ಕೊಡುವಷ್ಟೂ ಮಾಹಿತಿ ಇಲ್ಲ’’ ಅಂತ ಉತ್ತರ ಕೊಡತದ.
ಮಲ್ಟಿವ್ಯಾಕ ಅನ್ನೋದು ಸ್ವಯಂಚಾಲಿತ ಯಂತ್ರ. ಅದು ಸೂರ್ಯನ ಬೆಳಕು ಹಾಗೂ ಅಣುಶಕ್ತಿಯಿಂದ ನಡಿತದ. ಅದಕ್ಕ ಅದನ್ನ ನಡಸೋರು ಯಾರೂ ಬೇಕಾಗಿಲ್ಲ. ಅದು ತನ್ನಷ್ಟಕ್ಕ ತಾನ ನಡಿತದ.
ಆನಂತರ ಅನೇಕ ಲಕ್ಷ ವರ್ಷಗಳ ನಂತರ ಪ್ರಾಣಿ, ಪಕ್ಷಿ, ಗಿಡ, ಎಲ್ಲ ನಾಶ ಆಗಿ, ನೀರು, ಗಾಳಿ ಸಿಗಲಾರದ ಹಂಗ ಆಗತದ. ಆದರ ಮಲ್ಟಿವ್ಯಾಕ ಮಾತ್ರ ಭೂಮಿ ಮ್ಯಾಲೆ ಇರ್ತದ. ಒಂದು ದಿವಸ ಅದು ಭೂಮಿಯಿಂದ ಇನ್ನೊಂದು ಗ್ರಹಕ್ಕ ಪ್ರಯಾಣ ಬೆಳಸ್ತತದ.
ಅಲ್ಲಿ ನೋಡಿದರ ಏನೂ ಇಲ್ಲ. ಬರೆ ಕತ್ತಲೆ, ನೀರು ಇಲ್ಲ, ಜೀವ ಇಲ್ಲ, ಗಿಡ, ಪ್ರಾಣಿ, ಪಕ್ಷಿ, ಮನುಷ್ಯರು ಮುಂತಾದ ಯಾವ ಜೀವಿಗಳೂ ಇಲ್ಲ. ಆ ಗ್ರಹದ ಮ್ಯಾಲೆ ಹೋಗಿ ಮಲ್ಟಿವ್ಯಾಕ ಲ್ಯಾಂಡ್ ಆಗತದ.
ಅಲ್ಲಿ ಹೋಗಿ ಒಂದು ಗಟ್ಟಿ ಜಾಗದಾಗ ಕುತುಕೊಂಡು ಒಂದು ಮಾತು ಹೇಳತದ.
`ಲೆಟ್ ದೇರ್ ಬಿ ಲೈಟ್’ (`ಪ್ರಕಾಶ ಉದ್ಭವವಾಗಲಿ’). ಆಗ ಅಲ್ಲಿ ಬೆಳಕು ಬರ್ತದ. ಅಲ್ಲಿಗೆ ಆ ಕತಿ ಮುಗಿತದ. ಆದರ ನಾವು ಅದನ್ನ ಮುಂದುವರೆಸಬಹುದು. ಅಲ್ಲಿ ನೀರು ಬಂತು, ದಿನ- ರಾತ್ರಿ ಆರಂಭ ಆದವು, ಗಿಡ, ಮೀನು, ಪ್ರಾಣಿ, ಪಕ್ಷಿ, ಮನುಷ್ಯರು ಹುಟ್ಟಿಕೊಂಡವು ಅಂತ.
ಈ ಮಾತು ಏನು ಅದಅಲ್ಲಾ, ‘ಪ್ರಕಾಶ ಉದ್ಭವವಾಗಲಿ’ ಅನ್ನೋದು, ಅದು ಪವಿತ್ರ ಬೈಬಲ್‍ನ ಮಾತು. ಜೆನೆಸಿಸ್ ಅಂದ್ರ ಆರಂಭದ ಕತೆ ಅನ್ನುವ ಭಾಗದಾಗ 1.3 ಅನ್ನೋ ಸಂಖ್ಯೆಯ ಶ್ಲೋಕದಾಗ ಈ ಮಾತು ಬರ್ತದ. ದೇವರು ಭೂಮಿಯಲ್ಲಿ ಮೊದಲು ಬೆಳಕನ್ನು, ನಂತರ ದಿನ ರಾತ್ರಿಗಳನ್ನ, ನೀರು, ನೆಲಗಳನ್ನ, ಗಿಡ, ಪಕ್ಷಿ ಪ್ರಾಣಿ ಕೊನೆಗೆ ಆ್ಯಡಂ ಹಾಗೂ ಈವ್ ಅವರನ್ನು ಸೃಷ್ಟಿ ಮಾಡಿದ ಅಂತ ಈ ಭಾಗದಲ್ಲಿ ವಿವರ ಅದ. ಅದೇ ಧಾಟಿಯಲ್ಲಿ ದಿ ಲಾಸ್ಟ್ ಕ್ವಶ್ಚನ್ ಅನ್ನೋ ಕತೆ ಅದ.
ಎನಪಾ ಅಂದರ ಅಸಿಮೋವ್ ಅವರು ಈ ಕತಿ ಮೂಲಕ ನಮಗ ಒಂದು ಎಚ್ಚರಿಕೆ ಕೊಟ್ಟಾರ. ಬಹಳ ಶಾಣೆ ಇರೋ ಯಂತ್ರಗಳನ್ನ ತಯಾರು ಮಾಡಿದರ ಅವು ತಮ್ಮ ಸೃಷ್ಟಿಕರ್ತರನ್ನ ಮೀರಿ ಹೋಗಿ ದೇವರು ಆಗಿ ಬಿಡೋ ಸಾಧ್ಯತೆ ಐತಿ ಅಂತ ಭವಿಷ್ಯ ಹೇಳಿ ಬಿಟ್ಟಾರ. ಅದೂ 50 ವರ್ಷಗಳ ಹಿಂದ.
ಇಷ್ಟು ದಿವಸದಾಗ ಇಂತಹ ಸಣ್ಣ ಪಾಠ ಕಲಿಯಲಾರದೇ ಹೋದರ ಅದು ನಮ್ಮ ತಪ್ಪು. ಅಸಿಮೋವ್ ಅವರ ತಪ್ಪು ಅಲ್ಲ.
ಕೇವಲ ಒಂದು ವರ್ಷದಾಗ ನಾವು ತಯಾರು ಮಾಡಿದ ರೋಬೋಟುಗಳು ತಮ್ಮ ಸ್ವಂತ ಭಾಷೆ ಹುಟ್ಟಿಸಿಕೊಳಲಿಕ್ಕೆ ಶಕ್ಯ ಐತಿ, ಆದರ ನಾವು 50 ವರ್ಷದಾಗ ಒಂದು ಪಾಠಾ ಕಲಿಯೋದಿಲ್ಲ ಅನ್ನೋದು ನಮಗ ಇನ್ನೂ ನಾಚಿಕಿ ಆಗಬೇಕು.
ಇದು ಎಲ್ಲ ಹೋಗಲಿ ಬಿಡರಿ, ರೋಬೋಟು ಅನೋ ಶಬ್ದ ಹೆಂಗ ಬಂತು ಅನ್ನೋದು ನಿಮಗ ಗೊತ್ತು ಆದ ಏನು? ಅದು ಜೆಕ್ ಭಾಷೆಯ ಜೀತದ ಆಳು ಅನ್ನುವ ಪದ. ಅದನ್ನ ಕೆ. ಕೆಪೆಕ ಅನ್ನುವ ನಾಟಕಕಾರ 1920ರಲ್ಲಿ ರೋಸಮನ ಜಾಗತಿಕ ರೋಬೋಟುಗಳು ಅನ್ನುವ ತನ್ನ ಕೃತಿಯಲ್ಲಿ ಬಳಸಿದರು.
ನಾವು ಯಂತ್ರಗಳನ್ನು ಜೀತದ ಆಳು ಅಂತ ತಿಳ್ಕೊಂಡಿರಬಹುದು ಆದರೆ ಅವೇ ನಮ್ಮನ್ನು ಜೀತಕ್ಕೆ ಇಟ್ಟುಕೊಂಡರೆ ಹೇಗೆ?
ಆಗ ಅವು ನಮ್ಮನ್ನ ಕೃತಕ ಬುದ್ಧಿ ಮತ್ತೆಯ ಪ್ರಾಣಿಗಳು ಅಂತ ಕರೆದರೆ ಹೆಂಗ ಇರ್ತದ, ಅಲ್ಲವೇ, ಮನೋಲ್ಲಾಸಿನಿ?


