Homeಮುಖಪುಟಸಮಗ್ರತೆಗೆ ಮಾರಕವಾದ ಒಳಮೀಸಲಾತಿ ಅನಿವಾರ್ಯವಾದದ್ದು ದುರಂತ: ಕೆ.ಎಫ್. ಅಂಕಲಗಿ

ಸಮಗ್ರತೆಗೆ ಮಾರಕವಾದ ಒಳಮೀಸಲಾತಿ ಅನಿವಾರ್ಯವಾದದ್ದು ದುರಂತ: ಕೆ.ಎಫ್. ಅಂಕಲಗಿ

ಈ ನಿಟ್ಟಿನಲ್ಲಿ ಒಳ ಮೀಸಲಾತಿ ಡಾ. ಬಾಬಾಸಾಹೇಬರ ಕನಸಿನ ಸಮಗ್ರತೆಗೆ ಮಾರಕವಾದರೂ ಕೂಡ ಪ್ರಸ್ತುತ ಬೆಳವಣಿಗೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿದೆ ಎಂದು ಭಾರವಾದ ಹೃದಯದಿಂದ ಹೇಳಬೇಕಾಗಿದೆ.

- Advertisement -
- Advertisement -

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ಅವಶ್ಯ. ಅದಕ್ಕಾಗಿ ಶತಮಾನಗಳಿಂದ ಅವಕಾಶವಂಚಿತ ಜಾತಿಗಳನ್ನು ಗುರುತಿಸಿ ಅವರಿಗೆ ಮೀಸಲಾತಿ ಕೊಡುವ ಕಾರ್ಯನಿಮಿತ್ತ ಕಾಕಾ ಕಾಲೇಲಕರ ಆಯೋಗ ನೇಮಿಸಲಾಗಿತ್ತು. ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಹಿಂದಿನ ಬ್ರಿಟಿಷ್ ಸರಕಾರವೇ ಕುಲಶಾಸ್ತ್ರೀಯ ಅಧ್ಯಯನದ ವಿಸ್ತೃತ ತಳಹದಿಯ ಮೇಲೆ ಸಿದ್ಧಗೊಳಿಸಿದ್ದರಿಂದ ಆ ಎರಡು ವರ್ಗಗಳ ಪಟ್ಟಿ ಸಂವಿಧಾನಕ್ಕೆ ಸರ್ವಾನುಮತದಿಂದ ಸೇರಿಸಲ್ಪಟ್ಟಿತ್ತು. ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಕಾಕಾ ಕಾಲೇಲಕರ ವರದಿ ತಯಾರಿಸಿತಾದರೂ ಅಂದಿನ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದ ಅದು ಜಾರಿಗೆ ಬರಲೇ ಇಲ್ಲ. ನಂತರ ರಚಿತವಾದ ಮಂಡಲ್ ಆಯೋಗದ ವರದಿ ಜಾರಿಗೆ ಬರುವಲ್ಲಿ ಆದ ವಿಳಂಬ ಮತ್ತು ಅದರ ಹಿಂದಿನ ರಾಜಕೀಯ ಎಲ್ಲರಿಗೂ ಗೊತ್ತು.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡಾ ಬ್ರಿಟಿಷರು ತಯಾರಿಸಿದ ಪಟ್ಟಿಗಳನ್ನು ಯಥಾವತ್ತಾಗಿ ಒಪ್ಪಿಕೊಂಡಿದ್ದರು ಮತ್ತು ಇಂತಹುದೇ ಕಾರ್ಯ ಇತರ ಹಿಂದುಳಿದ ವರ್ಗಗಳನ್ನು ಗುರುತಿಸುವಲ್ಲಿ ನಡೆಯಲಿ ಎಂಬ ಸದಾಶಯ ಹೊಂದಿದ್ದರು. ಡಾ.ಅಂಬೇಡ್ಕರ್ ಅವರು ಜಾತಿಗಳು ಇರುವವರೆಗೆ ಮೀಸಲಾತಿ ಇರಬೇಕು ಎನ್ನುವದರೊಂದಿಗೆ, ಜಾತಿ ವ್ಯವಸ್ಥೆ ನಿರ್ಮೂಲನೆ ಆಗಬೇಕು ಎಂದು ಬಯಸಿದ್ದರು. ಜಾತಿ ವ್ಯವಸ್ಥೆ ನಿರ್ಮೂಲನೆಯ ಯಾವದೇ ಕಾರ್ಯಕ್ರಮವನ್ನು ಸ್ವತಂತ್ರ ಭಾರತ ಇತಿಹಾಸದಲ್ಲಿ ಯಾವದೇ ಸರಕಾರ ಕೈಗೊಳ್ಳಲಿಲ್ಲ. ಜಾತಿಗಳು ಅಳಿದು, ಎಲ್ಲರೂ ಒಂದಾಗುವ ಬದಲಾಗಿ ಜಾತಿಗಳ ವಿಂಗಡನೆ ಮತ್ತು ಅವುಗಳನ್ನು ದ್ವೀಪಗಳಾಗಿ ಉಳಿಸಿಕೊಳ್ಳುವ ವ್ಯವಸ್ಥೆ ಮುಂದುವರೆದು ಇಂದು ಜಾತಿಗಳ ನಡುಗಡ್ಡೆಗಳ ಪ್ರದೇಶವಾಗಿ ದೇಶ ಮಾರ್ಪಾಡಾಗಿದೆ ಎಂದು ಹೇಳಬಹುದು.

ಸಾಮಾಜಿಕ, ಶೈಕ್ಷಣಿಕ ಮಾನದಂಡದಿಂದ ಸರಾಸರಿ ಮುನ್ನಡೆ ಪಡೆದ ಜಾತಿಗಳನ್ನು ಮೀಸಲಾತಿಯಿಂದ ಕೈಬಿಡುವ ಕೆಲಸ ನಡೆಯಲೇ ಇಲ್ಲ. ಯಾರನ್ನೂ ಬಿಡುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಯಿತು. ಅಲ್ಲದೇ ಪ್ರತಿ ಸಂಘಟಿತ ಪ್ರಭಾವಿ ಜಾತಿಯೂ ಮೀಸಲಾತಿ ಒತ್ತಾಯದ ಪ್ರತಿಭಟನೆ ನಡೆಸಿ ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ತಾವೂ ಮೀಸಲಾತಿ ಪಡೆಯುವಲ್ಲಿ ಯಶಸ್ವಿಯಾದವು. ಇದರಿಂದ ಸಣ್ಣ, ಅತಿ ಸಣ್ಣ ಅವಕಾಶ ವಂಚಿತ ನೂರಾರು ಜಾತಿಗಳು ಸಂಕಷ್ಟಕ್ಕೆ ಸಿಲುಕಿ ನಲುಗುವ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ.

ಸದ್ಯ ಪ್ರಸ್ತುತ ಒಳಮೀಸಲಾತಿ ಧ್ವನಿ ಜೋರಾಗಿದೆ. ಅವಕಾಶ ವಂಚಿತ ಜನ ಆಳುವ ವರ್ಗವಾಗಬೇಕು ಎನ್ನುವದು ಡಾ.ಅಂಬೇಡ್ಕರ್ ಅವರ ಆಶಯವಾಗಿತ್ತು. ಅದಕ್ಕಾಗಿ ಈ ಜನವೆಲ್ಲಾ ಒಂದು ಶಕ್ತಿಯಾಗಿ ಸಂಘಟಿತರಾಗುವ ಅವಶ್ಯಕತೆ ಇತ್ತು. ಆದರೆ ಇವರಿವರೇ ಒಳಮೀಸಲಾತಿಗಾಗಿ ಕಿತ್ತಾಡುವ ಸ್ಥಿತಿ ನಿರ್ಮಾಣವಾದದ್ದು ದುರ್ದೈವ. ಓಟ್‍ಬ್ಯಾಂಕ್ ರಾಜಕೀಯವೂ ಇದಕ್ಕೆ ಒಂದು ಕಾರಣ.

photo courtesy : Dailyhunt

ಒಳ ಮೀಸಲಾತಿ ಧ್ವನಿ ಪ್ರಥಮವಾಗಿ ಪ್ರಾರಂಭವಾದದ್ದು ಆಂಧ್ರಪ್ರದೇಶದಿಂದ. ದಲಿತ ವರ್ಗವೆಲ್ಲಾ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದರಿಂದ ಅವರಲ್ಲಿಯ ಎಡಗೈ ಬಲಗೈಯವರಲ್ಲಿ ಪೈಪೋಟಿ ಹುಟ್ಟು ಹಾಕಿದರು. ಮಾದಿಗ ದಂಡೋರ ಚಳುವಳಿ ಪ್ರಾರಂಭವಾಗಿ ಅದು ದೇಶದುದ್ದಕ್ಕೂ ಹಬ್ಬತೊಡಗಿದೆ.

ಅದೇ ರೀತಿ ಸದ್ಯ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳಲ್ಲಿ ಕೂಡ ಅಂತಹದೇ ಸ್ಥಿತಿ ನಿರ್ಮಾಣವಾಗಿದೆ. ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ ಮಾತ್ರ ನಾನು ಕೆಲವು ವಿವರಣೆಗಳನ್ನು ಬರೆಯುವೆ. ಯಾಕೆಂದರೆ ಇಂದು ಕರ್ನಾಟಕದಲ್ಲಿ ಬುಡಕಟ್ಟುಗಳು ತಮ್ಮ ತಮ್ಮಲ್ಲೇ ಕಚ್ಚಾಡುವ ಸ್ಥಿತಿ ದೂರವಿಲ್ಲ ಎಂದು ಕಂಡುಬರುತ್ತಿದೆ. ತಳವಾರ, ಪರಿವಾರ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆ ಮಾಡಿ ಸಂಸತ್ತು ಅಂಗೀಕರಿಸಿದೆ. ಘನತೆವೆತ್ತ ರಾಷ್ಟ್ರಪತಿಗಳು ಸಹಿ ಮಾಡಿದ ತೀರ್ಮಾನವನ್ನು ಕರ್ನಾಟಕ ಸರಕಾರ ಜಾರಿಗೆ ತಂದಿಲ್ಲ. ಕರ್ನಾಟಕದಲ್ಲಿ ಈ ಬೆಳವಣಿಗೆಗೆ ಕಾರಣವೇನು? ಇದರ ಹಿಂದೆ ಯಾವ ಹಿತಾಸಕ್ತಿಗಳು ಇವೆ ಎಂಬುದನ್ನು ಗಮನಿಸಿದಾಗ ಇಂತಹವೇ ಕಾರಣಗಳಿಂದ ದೇಶದ ವಿವಿಧೆಡೆ ಕೆಲವು ಜಾತಿಗಳನ್ನು ದಮನಿಸುವ ಮತ್ತು ಸೌಲಭ್ಯ ವಂಚಿತರನ್ನಾಗಿ ಮಾಡುವ ಕಾರ್ಯಗಳು ಯಾವ ರೀತಿ ನಡೆಯುತ್ತಿವೆ ಎಂದು ಗೊತ್ತಾಗುತ್ತದೆ. ಅದರಿಂದ ಆಗಬಹುದಾದ ಅನಾಹುತ ಊಹಿಸಲೂ ಅಸಾಧ್ಯ. ತೀವ್ರ ಹಿಂಸೆಗೆ ಒಳಗಾದ ಜನ ತಾವಾಗಿಯೇ ಯಾರಿಗೂ ಮೀಸಲಾತಿ ಬೇಡ ಎಂದು ಹತಾಶರಾಗಿ ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗಬಹುದು.

ಕರ್ನಾಟಕದಲ್ಲಿ ಒಟ್ಟು 50 ಬುಡಕಟ್ಟು ಜನಾಂಗಗಳಿವೆ (ಎಸ್.ಟಿ.). ಅವುಗಳಲ್ಲಿ ಒಂದು ಬುಡಕಟ್ಟಿನ ಸ್ಥಿತಿಗತಿ ಕುರಿತು ವಿವರಿಸಿದಲ್ಲಿ ಒಟ್ಟಾರೆ ಸ್ಥಿತಿಯ ಚಿತ್ರಣ ಸಿಗುತ್ತದೆ.

ಕೋಳಿಢೋರ, ಟೋಕ್ರೆಕೋಳಿ ಜನಾಂಗ ಪರಿಶಿಷ್ಟ ಪಂಗಡದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಗುರುತಿಸಲ್ಪಟ್ಟ ಬುಡಕಟ್ಟು. ಭಾರತ ಸರಕಾರದ ಪ್ರಾವಿನ್ಸಿಯಲ್ ಅಸೆಂಬ್ಲಿಯು ಪರಿಶಿಷ್ಟ ಜಾತಿ, ಜನಾಂಗ ಆರ್ಡರ್ 1936 ಘನತೆವೆತ್ತ ರಾಣಿ ಎಲಿಝಬೆತ್ ಇಂಗ್ಲೆಡ್ ಅವರು 1935ರಲ್ಲಿ ಅಂಕಿತ ಹಾಕಿದ ಮೇಲೆ ಮುಂಬೈ ಕರ್ನಾಟಕಕ್ಕೆ ಸೇರಿದ ರಾಜಪತ್ರದಲ್ಲಿ ಅನುಕ್ರಮ ನಂ.13ರಲ್ಲಿ ಈ ಪಂಗಡಗಳ ಸೇರ್ಪಡೆ ಇದೆ. ಅಲ್ಲಿಂದ ಮುಂಬೈ ಪ್ರಾಂತದಲ್ಲಿ, ಅದರಂತೆ ಹೈದರಾಬಾದ್ ಪ್ರಾಂತದಲ್ಲಿ ಕೋಯಾ, ಬಿನೆಕೋಯಾ, ರಾಜಕೋಯಾ ಪಂಗಡಗಳು ಇರುವುದು ನಿರ್ವಿವಾದ. ಭಾರತ ಸ್ವತಂತ್ರವಾದ ಬಳಿಕ ಈ ಪಂಗಡಗಳು ಆಯಾ ರಾಜ್ಯದ ಪರಿಶಿಷ್ಟ ಜನಾಂಗದ ಪಟ್ಟಿಯಲ್ಲಿ ಮುಂದುವರೆದವು. 1956ರಲ್ಲಿ ಭಾಷಾವಾರು ಪ್ರಾಂತ ರಚನೆಯಾದ ನಂತರ ಅಂದಿನ ಮೈಸೂರು ರಾಜ್ಯ ಇಂದಿನ ಕರ್ನಾಟಕ ರಾಜ್ಯದಲ್ಲಿ ಅನುಕ್ರಮ ನಂ.22ರಲ್ಲಿ ಇವು ಸ್ಥಾನ ಪಡೆದಿವೆ. ಈ ರೀತಿ ಈ ಪಂಗಡಗಳು ಪರಿಶಿಷ್ಟ ಪಂಗಡದಲ್ಲಿ ಇರುವದು ನಿರ್ವಿವಾದ ಸಂಗತಿ.

ಹೀಗಿರಲು 1994ರಲ್ಲಿ ಕರ್ನಾಟಕದಲ್ಲಿ ರಾಜಕೀಯ ಲಾಭಕ್ಕಾಗಿ ಸನ್ಮಾನ್ಯ ಶ್ರೀ ದೇವೇಗೌಡರು ಅಂದಿನ ಪ್ರಧಾನಿ ದಿ.ಚಂದ್ರಶೇಖರ್ ಅವರ ಸರಕಾರದಿಂದ ಸುಗ್ರೀವಾಜ್ಞೆ ಮುಖಾಂತರ ಬೇಡ, ವಾಲ್ಮೀಕಿ ಜನಾಂಗವನ್ನು ಪರಿಶಿಷ್ಟ ಪಂಗಡದ ಅ.ನ. 38ರ ನಾಯ್ಕಡಾ, ನಾಯಕ ಪಂಗಡಗಳ ಪರ್ಯಾಯ ಪದಗಳೆಂದು ಆಜ್ಞೆ ಮಾಡಿಸಿದರು. ಯಾವುದೇ ಪಂಗಡವನ್ನು ಸೇರಿಸಬೇಕಾದರೆ ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದು ಸೇರಿಸಬೇಕು. ಆದರೆ ರಾಜಕೀಯ ಉದ್ದೇಶಕ್ಕಾಗಿ ಆತುರದಲ್ಲಿ ಈ ಪಂಗಡಗಳನ್ನು ಸೇರಿಸಲಾಯಿತು. ಈ ಮೊದಲು ಈ ಪಂಗಡಗಳು ಅಪರಾಧಿ ಜನಾಂಗ (ನೋಟಿಫೈಡ್ ಟ್ರೈಬ್ಸ್). ಸ್ವಾತಂತ್ರ್ಯ ನಂತರ ವಿಮುಕ್ತ ಜನಾಂಗ (ಡಿನೋಟಿಫೈಡ್) ಪಂಗಡವೆಂದು ಗುರುತಿಸಲ್ಪಟ್ಟವುಗಳು. ಇವುಗಳ ಸೇರ್ಪಡೆಯೊಂದಿಗೆ ಕರ್ನಾಟಕದಲ್ಲಿ ಹೊಸ ಸಮಸ್ಯೆಯೊಂದು ಹುಟ್ಟಿಕೊಂಡಿತು.

ಸ್ಥಳೀಯವಾಗಿ ಅಂಬಿಗ, ಕೋಳೀ, ಕಬ್ಬಲಿಗ ಎಂದು ಕರೆಯಲ್ಪಡುವ ಕೋಳಿಢೋರ, ಟೋಕ್ರೆಕೋಳಿ ಜನಾಂಗಕ್ಕೆ ಕಿರುಕುಳ ಪ್ರಾರಂಭವಾಯಿತು. ಈ ಜನಾಂಗದ ನೌಕರರ ಮೇಲೆ ಖೊಟ್ಟಿ ಪ್ರಮಾಣ ಪತ್ರ ಪಡೆದವರು ಎಂದು ಕ್ರಿಮಿನಲ್ ಮೊಕದ್ದಮೆ ಹೂಡುವ ಪ್ರಕ್ರಿಯೆ ಪ್ರಾರಂಭವಾಯಿತು. ಪ್ರಮಾಣ ಪತ್ರ ನೀಡುವದನ್ನು ನಿಲ್ಲಿಸಲಾಯಿತು.

photo courtesy : Prajavani

ಈ ಹಿನ್ನೆಲೆಯಲ್ಲಿ ಈ ಜನರಿಗೆ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊಯಿಲಿ ಸರಕಾರ ಒಂದು ಸುತ್ತೋಲೆ ಹೊರಡಿಸಿ ಎಸ್.ಡಬ್ಲ್ಯು.ಎಲ್ 168 ಎಸ್.ಎ.ಡಿ 93 ದಿನಾಂಕ: 04/02/1994 ರ ಪ್ರಕಾರ ಶಾಲಾ ದಾಖಲೆಗಳನ್ನು ಪ್ರಬಲ ಸಾಕ್ಷಿ ಎಂದು ಪರಿಗಣಿಸಿ 1981 ಮತ್ತು ಅದಕ್ಕೂ ಮುಂಚೆ ದಾಖಲೆಯಲ್ಲಿದ್ದವರಿಗೆ ತಡಮಾಡದೇ 3 ದಿನಗಳಲ್ಲಿ ಪ್ರಮಾಣ ಪತ್ರ ನೀಡಬೇಕು. ದಾಖಲೆ ಇಲ್ಲದಿದ್ದಲ್ಲಿ ಸೂಕ್ತ ತನಿಖೆ ಮಾಡಿಸಿ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಿದರು. ಆದರೆ ವಿಮುಕ್ತ ಜನಾಂಗದಿಂದ ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಯಾದ ಬೇಡ, ವಾಲ್ಮೀಕಿ ಜನರು ಎಲ್ಲಾ ಸವಲತ್ತುಗಳನ್ನು ತಾವೇ ಪಡೆದುಕೊಳ್ಳುವ ಇರಾದೆಯಿಂದ ವಿವಿಧ ಸಂಘಟನೆಗಳ ಮುಖಾಂತರ ಕೋಳಿಢೋರ, ಟೋಕ್ರೆಕೋಳಿ ಜನಾಂಗದವರ ವಿರುದ್ಧ ಫಿರ್ಯಾದಿ ಕೊಟ್ಟು ನಾಗರಿಕ ಹಕ್ಕು ಜಾರಿ ಇಲಾಖೆಯ ಮುಖಾಂತರ ತೀವ್ರ ಕಿರುಕುಳ ಕೊಡಲಾರಂಭಿಸಿದರು. ಇದರಿಂದ ತೀವ್ರ ಸಂಕಷ್ಟಕ್ಕೆ ಒಳಗಾದ ಈ ಜನ ಸರಕಾರದ ಮೊರೆ ಹೋದರು. ಸರಕಾರ ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಪರಿಹಾರ ಕೊಡುವ ಬದಲಾಗಿ ಆ ರೀತಿ ಪ್ರಮಾಣ ಪತ್ರ ಪಡೆದವರು ಅವರ ಪ್ರಮಾಣ ಪತ್ರಗಳನ್ನು ಸಕ್ಷಮ ಅಧಿಕಾರಿಗಳಿಗೆ ಹಿಂದಿರುಗಿಸಬೇಕು ಮತ್ತು ಅವರನ್ನು ಸಾಮಾನ್ಯ ವರ್ಗದಲ್ಲಿ ಮುಂದುವರೆಸಲಾಗುವದು ಹಾಗೂ ಅವರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಕೈಬಿಡಲಾಗುವುದು ಎಂದು ಆದೇಶ ಮಾಡಿತು. ಬೀಸುವ ದೊಣ್ಣೆಯಿಂದ ತಪ್ಪಿದರೆ ಸಾಕು ಎಂದು ಬಹಳಷ್ಟು ಜನ ತಮ್ಮ ಪ್ರಮಾಣ ಪತ್ರ ಹಿಂದಿರುಗಿಸಿದರು.

ಕರ್ನಾಟಕ ರಾಜ್ಯದಲ್ಲಿ 50 ಬುಡಕಟ್ಟು ಜನಾಂಗಗಳನ್ನು ಸೇರಿಸಿ 16 ಶಾಸಕ ಸ್ಥಾನ, 2 ಸಂಸದ ಸದಸ್ಯ ಸ್ಥಾನ ಮೀಸಲಾಗಿವೆ. ಈ ಎಲ್ಲಾ ಸ್ಥಾನಗಳನ್ನು ಬೇಡ, ವಾಲ್ಮೀಕಿ ಜನಾಂಗದವರೇ ಪಡೆದಿದ್ದಾರೆ. ಬೇರೆ ಜನಾಂಗದವರು ಪ್ರಮಾಣ ಪತ್ರ ಪಡೆಯುವುದಕ್ಕೂ ಸಾಧ್ಯವಿಲ್ಲದಂತಹ ಒಂದು ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ನಾಗರಿಕ ಹಕ್ಕು ರಕ್ಷಣಾ ಇಲಾಖೆಯ ಅಧಿಕಾರಿಗಳನ್ನು ದಾಳವಾಗಿ ಉಪಯೋಗಿಸಿಕೊಂಡು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಹೆದರಿಸಿ ಕೋಳಿಡೋರ, ಟೋಕ್ರೆಕೋಳಿ ಜನಾಂಗ ಇಲ್ಲಿ ಇಲ್ಲವೇ ಇಲ್ಲ. ಅಂಬಿಗ, ಕಬ್ಬಲಿಗ, ಕೋಳಿ ಜನಾಂಗ ಖೊಟ್ಟಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಬಿಂಬಿಸಿ ಈ ಇಡೀ ಜನಾಂಗವನ್ನು ಸಂವಿಧಾನದ ಸವಲತ್ತುಗಳಿಂದ ವಂಚಿತಗೊಳಿಸಲಾಗಿದೆ.

ಕೋಳಿ ಜನಾಂಗದ ಮೇಲೆ ಹೂಡಲಾದ ಬಹುತೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಫಿರ್ಯಾದಿದಾರರು ಯಾರು ಎಂಬುದನ್ನು ಪರಿಶೀಲಿಸಿದರೆ ಈ ಸತ್ಯ ಬಯಲಾಗುವದು.

ವಿಮುಕ್ತ ಜನಾಂಗದವರಾದ ಬೇಡ, ವಾಲ್ಮೀಕಿ ಇವರು ನಾಯ್ಕಡ ಜನಾಂಗದ ಪರ್ಯಾಯವೆಂದು ಸೇರ್ಪಡೆಯಾಗಿದ್ದಾರೆ. ಆದರೆ ಸಮಾಜ ಶಾಸ್ತ್ರಜ್ಞರಾದ ಆರ್.ವಿ.ಎಂಥವಿನ್, ಎಡ್ಗರ ಥರ್ಸನ್ ಅವರ ಪ್ರಕಾರ ನಾಯ್ಕಡ ಇದು ಕೋಳಿ ಜನಾಂಗದ ಪರ್ಯಾಯಪದವಾಗಿದೆ. ಅವಸರದಲ್ಲಿ ಮಾಡಿದ ಆಜ್ಞೆಯ ದುಷ್ಪರಿಣಾಮದಿಂದ ಒಂದು ಇಡೀ ಜನಾಂಗ ಸೌಲಭ್ಯ ವಂಚಿತರಾದ ಉದಾಹರಣೆ ಬಹುತೇಕ ಸ್ವತಂತ್ರ ಭಾರತದಲ್ಲಿ ಬೇರೆ ಇರಲಿಕ್ಕಿಲ್ಲ.

ಇಷ್ಟಾಗಿ ಸಂವಿಧಾನದ ಕೊಡುಗೆಯಾಗಿ ಬುಡಕಟ್ಟುಗಳಿಗೆ ಒಟ್ಟು ಮೀಸಲಾತಿ 7.5% ಇದ್ದು ಅದು ಕೇವಲ ತಮ್ಮ ಜನಾಂಗಕ್ಕೆ ಮಾತ್ರ ಎನ್ನುವ ರೀತಿಯಲ್ಲಿ ಗುರುಪೀಠದಿಂದ ಸರಕಾರಕ್ಕೆ ಎಚ್ಚರಿಕೆ ಕೊಡುವಂತೆ ಹೇಳಿಕೆ ಕೊಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಒಂದು ಇಡೀ ಜನಾಂಗ ಹತಾಶೆಯಿಂದ ಯಾರಿಗೂ ಮೀಸಲಾತಿ ಬೇಡ ಎಂದು ಹೇಳಬಹುದು. ದಂಗೆ ಏಳಬಹುದು, ಹಾಗೊಂದು ವೇಳೆ ಆದಲ್ಲಿ ಅದು ಮೀಸಲಾತಿ ವಿರೋಧಿ ಪುರೋಹಿತಶಾಹಿಗಳಿಗೆ ಒಂದು ಅನಾಯಾಸ ಅಸ್ತ್ರವಾಗಿ ಉಪಯೋಗವಾಗಬಹುದು. ಹತಾಶೆಯ ಹಂತವನ್ನು ಈ ಜನ ಈಗಾಗಲೇ ತಲುಪಿದ್ದಾರೆ. ಸರಕಾರಿ ಸೇವೆಯಿಂದ ನಿವೃತ್ತರಾದವರ ಮೇಲೂ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಕೆಲವು ಆತ್ಮಹತ್ಯೆಗಳಾಗಿವೆ; ಕೆಲವು ಕುಟುಂಬಗಳು ಬೀದಿ ಪಾಲಾಗಿವೆ.

ಈ ಪರಿಸ್ಥಿತಿಯಲ್ಲಿ ಇರುವ ಈ ಜನಾಂಗ ಮತ್ತು ಇಂತಹದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇತರರು ಒಳಮೀಸಲಾತಿ ಕೇಳಿದರೆ ತಪ್ಪೇನಿದೆ. ಅದು ನ್ಯಾಯಯುತವಾದ ಬೇಡಿಕೆಯಲ್ಲವೇ?

ಇಂತಹ ಪರಿಸ್ಥಿತಿ ಉಂಟಾಗಬಹುದು ಎಂದು ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಊಹಿಸಿದ್ದರು ಎಂದೆನಿಸುತ್ತಿದೆ. ಯಾಕೆಂದರೆ ರಾಜಕೀಯ ಮೀಸಲಾತಿಯನ್ನು ಅವರು ಕೇವಲ ಎರಡು ಅವಧಿಗೆ ಕೇಳಿದ್ದರು. ಅಂದರೆ 10 ವರ್ಷಕ್ಕೆ ಮಾತ್ರ. ಉದ್ದೇಶ ಇಷ್ಟೇ – ರಾಜಕೀಯದಲ್ಲಿ ಅಧಿಕಾರದ ರುಚಿ ಉಂಡ ಈ ಜನ ಅದನ್ನು ಪಡೆಯುವವರೆಗೆ ವಿಶ್ರಮಿಸುವದಿಲ್ಲ. ಅದನ್ನು ಸಂಘಟಿತರಾಗಿ ಪಡೆದು ಆಳುವ ಜನಾಂಗವಾಗುತ್ತಾರೆ ಎಂದು ಭಾವಿಸಿದ್ದರು. ಆದರೆ ಮೀಸಲಾತಿ ಇಂದು ವಿಶಿಷ್ಟ ಹಿತಾಸಕ್ತಿಯ ಅಸ್ತ್ರವಾಗಿ ಕೆಲವೇ ಕುಟುಂಬಗಳ ಅನುಭವದ ಲಾಭದಾಯಕ ವ್ಯವಹಾರವಾಗಿದೆ. ಡಾ. ಬಾಬಾಸಾಹೇಬರ ಕನಸಿಗೆ ಮಾರಕವಾಗಿದೆ.

ಈ ನಿಟ್ಟಿನಲ್ಲಿ ಒಳ ಮೀಸಲಾತಿ ಡಾ. ಬಾಬಾಸಾಹೇಬರ ಕನಸಿನ ಸಮಗ್ರತೆಗೆ ಮಾರಕವಾದರೂ ಕೂಡ ಪ್ರಸ್ತುತ ಬೆಳವಣಿಗೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿದೆ ಎಂದು ಭಾರವಾದ ಹೃದಯದಿಂದ ಹೇಳಬೇಕಾಗಿದೆ.

ಇನ್ನೂ ಕಾಲ ಮಿಂಚಿಲ್ಲ. ಡಾ. ಬಾಬಾಸಾಹೇಬರ ಸಂದೇಶದ, ಚಿಂತನೆಯ, ವಿಚಾರಗಳ ಬಗ್ಗೆ ಗಂಭೀರವಾಗಿ ಯೋಚಿಸುತ್ತಿರುವ ಚಿಂತಕರು ಅವರ ಮೂಲ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯೋಜನೆಗಳನ್ನು ರೂಪಿಸಿ ಕಾರ್ಯಕ್ರಮ ಹಾಕಿಕೊಂಡು ತಪ್ಪುಗಳನ್ನು ಸರಿಪಡಿಸಿಕೊಂಡು ಸಮಸ್ತ ತುಳಿತಕ್ಕೆ ಒಳಗಾದ ಜನ ಒಂದು ಸಂಘಟನೆಯಾಗಿ ಆಳುವವರ್ಗವಾಗುವ ಕಡೆ ಮುನ್ನಡೆಸಲಿ ಎಂದು ಹಾರೈಸುವೆ.

  • ಕೆ.ಎಫ್. ಅಂಕಲಗಿ

ಬಿಜಾಪುರ ಜಿಲ್ಲೆಯಲ್ಲಿ ಸುಮಾರು 45 ವರ್ಷಗಳಿಂದ ವಕೀಲಿ ವೃತ್ತಿ ಮಾಡುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಅಂಕಲಗಿ ಅವರು ಬಿಜಾಪುರ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ಕೂಡ. ಹಿಂದುಳಿದ ವರ್ಗಗಳ ಹಿತರಕ್ಷಣೆಗೆ ಹಲವು ಹೋರಾಟಗಳನ್ನು ನಡೆಸಿರುವ ಇವರು ಪ್ರಸ್ತುತ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರು.


ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬದ ಭೇಟಿ: ಭೀಮ್ ಆರ್ಮಿ ಮುಖ್ಯಸ್ಥ ಆಜಾದ್‌ ಮೇಲೆ FIR
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...