ಉತ್ತರ ಕರ್ನಾಟಕದ 12 ಮತ್ತು ಮಧ್ಯ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಆರಂಭಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ 4 ಸಾವಿರ ದರವಿತ್ತು, ಬೆಂಬಲ ಬೆಲೆಯಲ್ಲಿ 4,875 ರೂ ದರ ನಿಗದಿ ಮಾಡಿದ್ದಾರೆ. ಎಕರೆಗೆ 3 ಕ್ವಿಂಟಾಲ್ ಮತ್ತು ಗರಿಷ್ಠ 10 ಕ್ವಿಂಟಾಲ್ ಕಡಲೆಯನ್ನಷ್ಟೇ ಒಂದು ರೈತ ಕುಟುಂಬ ಮಾರಲು ಅವಕಾಶವಿದೆ. ಪಹಣಿ, ಬ್ಯಾಂಕ್ ಖಾತೆ ಇತ್ಯಾದಿ ರಗಳೆ ಇದ್ದೇ ಇವೆ.
ಕನಿಷ್ಠ ಬೆಂಬಲ ಬೆಲೆ ಕೊಡುವುದೇ ರೈತರ ಬೆಳೆಗಳಿಗೆ ನ್ಯಾಯಯುತ ದರ ಒದಗಿಸುವ ಮಾರ್ಗ ಎಂಬಂತೆ ಎಲ್ಲ ಸರ್ಕಾರಗಳೂ ಬಿಂಬಿಸುತ್ತ ಬಂದಿವೆ. ಸದ್ಯ 23 ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡುತ್ತಿದೆ.
ಯಾವುದೇ ಒಂದು ಬೆಳೆಗೆ ಇಂತಿಷ್ಟು ಎಂದು ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಉದ್ದೇಶ, ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಬೇಕಾದ ಅನಿವಾರ್ಯ ಸ್ಥಿತಿಯಿಂದ ರೈತರನ್ನು ಪಾರು ಮಾಡುವುದು.
ಎಪಿಎಂಸಿ ವರ್ತಕರ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶವನ್ನೇನೋ ಕನಿಷ್ಠ ಬೆಂಬಲ ಬೆಲೆ ಸೂತ್ರ ಹೊಂದಿದೆ. ಆದರೆ, ಮಾರುಕಟ್ಟೆ ಬೆಲೆಗಿಂತ ಕೊಂಚ ಅಂದರೆ ಗಣನೀಯವಲ್ಲದಷ್ಟು ಹೆಚ್ಚಳದಿಂದ ರೈತರಿಗೆ ಅಂತಹ ಹೇಳಿಕೊಳ್ಳುವ ಲಾಭ ಸಿಗುತ್ತಿಲ್ಲ, ಆದರೆ ರೈತರಿಗೆ ನ್ಯಾಯ ಕೊಟ್ಟೆವು ಎಂದು ಬೀಗುವುದು ತಪ್ಪುವುದೇ ಇಲ್ಲ.
ಸದ್ಯಕ್ಕೆ ಉದಾಹರಣೆಯಾಗಿ, ಬೆಳಗಾವಿ ಬಿಟ್ಟು, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆ ಮತ್ತು ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುವ ಹಿಂಗಾರಿ ಹಂಗಾಮಿನ ಕಡಲೆಯನ್ನೇ ತೆಗೆದುಕೊಳ್ಳಿ. ಕಳೆದ ವಾರ ಕ್ವಿಂಟಾಲ್‌ಗೆ 3,500-4,000 ರೂ. ದರವಿತ್ತು. ಇನ್ನೊಂದೆರಡು ದಿನದಲ್ಲಿ ಅದು 4,200 ರೂ ತಲುಪುವ ಸಾಧ್ಯತೆ ಇತ್ತು. ಎರಡು ದಿನದ ಹಿಂದೆ ಕಡಲೆಗೆ ಬೆಂಬಲ ಬೆಲೆಯಲ್ಲಿ ಖರೀದಿಸಲು ಆದೇಶ ಹೊರ ಬಿದ್ದಿದೆ. ಇದರ ಪ್ರಕಾರ, ತೇವಾಂಶ ಇಲ್ಲದ, ಗುಣಮಟ್ಟದ ಕಡಲೆಗೆ 4,875 ರೂ ದರ ನಿಗದಿ ಮಾಡಲಾಗಿದೆ. ಒಂದು ಕುಟಂಬಕ್ಕೆ ಅಥವಾ ಒಂದು ಪಹಣಿಗೆ ಗರಿಷ್ಠ 10 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತಿದೆ. ಪ್ರತಿ ಎಕರೆಗೆ 3 ಕ್ವಿಂಟಾಲ್ ಖರೀದಿಯಷ್ಟೇ.
ರಾಜ್ಯದ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆ ಮತ್ತು ಮಧ್ಯ ಕರ್ನಾಟಕದ ಎರಡು ಜಿಲ್ಲೆ ಸೇರಿ ಗರಿಷ್ಠ 1,43,390 ಮೆಟ್ರಿಕ್ ಟನ್ ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಹೀಗಾಗಿ, ಎಕರೆಗೆ 3 ಕ್ವಿಂಟಾಲ್ ನಿಗದಿ ಮಾಡಿದ್ದಾರೆ. ಸರ್ಕಾರದ ಪರಿಭಾಷೆಯಲ್ಲೇ ಹೇಳುವುದಾದರೆ, ಐದು ಎಕರೆ ಮತ್ತು ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವವರನ್ನು ಸಣ್ಣ ಹಿಡುವಳಿದಾರ ಎನ್ನುತ್ತಾರೆ.
ಐದು ಎಕರೆ ಹೊಂದಿರುವ ಸಣ್ಣ ಹಿಡುವಳಿದಾರ ಸರಾಸರಿ 30-35 ಕ್ವಿಂಟಾಲ್ ಕಡಲೆ ಉತ್ಪಾದಿಸುತ್ತಾನೆ. ಅದರಲ್ಲಿ ಸರ್ಕಾರ ಖರೀದಿಸುವುದು 10 ಕ್ವಿಂಟಾಲ್ ಮಾತ್ರ. ಹೀಗಾಗಿ ಬೆಂಬಲ ಬೆಲೆ ಖರೀದಿ ರೈತನ ವಿಷಯದಲ್ಲಿ ಹಿನ್ನಡೆಯಾಗುತ್ತದೆ.

ಅದಕ್ಕಿಂತ ಮುಖ್ಯವಾದ ಅಂಶ, ಕ್ವಿಂಟಾಲ್‌ಗೆ 4,875 ರೂ ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ ಎಕರೆಗೆ 5-10 ಕ್ವಿಂಟಾಲ್‌ವರೆಗೂ ಕಡಲೆ ಬೆಳೆಯುತ್ತಾರೆ. ಸರಾಸರಿ ಏಳು ಕ್ವಿಂಟಾಲ್ ಎಂದು ಹಿಡಿದರೂ, ರೈತನಿಗೆ 34,125 ರೂ ಸಿಗುತ್ತದೆ. (ಒಂದೇ ಎಕರೆ ಇದ್ದರೆ, 3 ಕ್ವಿಂಟಾಲ್ ಮಾತ್ರ ಖರೀದಿ) ಬೀಜ, ಗೊಬ್ಬರ, ಕ್ರಮಿನಾಶಕ, ಗಳೆ, ಕಸ ತೆಗೆಯುವುದು, ರಾಶಿ ಮಾಡುವುದು, ಸಾಗಿಸುವುದು-ಈ ಎಲ್ಲದರ ಖರ್ಚು ಎಕರೆಗೆ 23 ಸಾವಿರದವರೆಗೂ ಬರುತ್ತದೆ. 3-4 ತಿಂಗಳು ಹೆಣಗಾಡಿದ ಮೇಲೆ ಉಳಿಯುವುದೆಷ್ಟು? 10-11 ಸಾವಿರ. ಅಂದರೆ 4 ತಿಂಗಳ ಕಾಲ ಒಂದು ಕುಟುಂಬ ಹಾಕಿದ ಶ್ರಮಕ್ಕೆ ಸಿಗುವುದಿಷ್ಟೇ.
ತಜ್ಞರು ಹೇಳುವ ಪ್ರಕಾರ, ಬೆಂಬಲ ಬೆಲೆಯ ಪ್ರಯೋಜನ ಶೇ. 5ರಷ್ಟು ರೈತರನ್ನು ತಲುಪುತ್ತಿಲ್ಲ. ಇದಕ್ಕೆ ಸರ್ಕಾರದ ವಿಳಂಬ ನಿರ್ಧಾರ, ತಾಂತ್ರಿಕ ನೆಪಗಳು ಕಾರಣ. ಅದಕ್ಕಿಂತ ಮುಖ್ಯವಾಗಿ, ಕನಿಷ್ಠ ಬೆಂಬಲ ಬೆಲೆ ಲೆಕ್ಕಾಚಾರ ಹಾಕುವ ಮಾನದಂಡದಲ್ಲೇ ದೋಷಗಳಿವೆ. ಈ ಎಲ್ಲದಕ್ಕೂ ಪರಿಹಾರ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವುದೇ ಆಗಿದೆ.
ಎಂಎಸ್‌ಪಿ ಲೆಕ್ಕಚಾರವೇ ಮೋಸ: ದೇವೇಂದರ್ ಶರ್ಮಾ
ಕನಿಷ್ಠ ಬೆಂಬಲ ಬೆಲೆ ಲೆಕ್ಕಾಚಾರ ಮಾಡುವ ವಿಧಾನದಲ್ಲೇ ದೋಷವಿದೆ. ರೈತರ ಇನ್ ಪುಟ್ ವೆಚ್ಚವನ್ನು ಕನಿಷ್ಠ ಮಟ್ಟದಲ್ಲಿ ಪರಿಗಣಿಸುತ್ತಾರೆ. ಇಡೀ ಕುಟುಂಬದ ಶ್ರಮಕ್ಕೆ ತಕ್ಕ ವೇತನವನ್ನು ಪರಿಗಣಿಸುವುದಿಲ್ಲ ಎಂದು ವಿಶ್ಲೇಷಿಸುತ್ತಾರೆ ಖ್ಯಾತ ಕೃಷಿ-ಆರ್ಥಿಕ ತಜ್ಞ ದೇವೇಂದರ್ ಶರ್ಮಾ.

ಸರ್ಕಾರಿ ನೌಕರರ ಸಂಬಳ, ಸವಲತ್ತು ನಿರ್ಧರಿಸುವ 7ನೇ ವೇತನ ಆಯೋಗದಲ್ಲಿ 108 ವಿವಿಧ ಬಗೆಯ ಭತ್ಯೆಗಳ ಉಲ್ಲೇಖವಿದೆ. ರೈತರಿಗೆ ಇವೆಲ್ಲ ಲಾಗೂ ಆಗುವುದಿಲ್ಲವೇಕೆ? ಬೆಳೆಗೆ ಎಂಎಸ್‌ಪಿ ಲೆಕ್ಕಾಚಾರ ಮಾಡುವಾಗ ವಸತಿ ಭತ್ಯೆ, ವೈದ್ಯಕೀಯ ಭತ್ಯೆ, ಶಿಕ್ಷಣ ಭತ್ಯೆ ಮತ್ತು ಪ್ರಯಾಣ ಭತ್ಯೆ (ರೈತಾಪಿ ಕೆಲಸಕ್ಕಾಗಿ ಓಡಾಟ)- ಕನಿಷ್ಠ ಈ ನಾಲ್ಕು ಭತ್ಯೆಗಳನ್ನು ಎಂಎಸ್‌ಪಿ ಲೆಕ್ಕಾಚಾರ ಮಾಡುವಾಗ ಪರಿಗಣಿಸಬೇಕು. ರೈತರ ಶ್ರಮಕ್ಕೆ ಸರಿಯಾದ ವೇತನ ಸಿಗುವಂತೆಯೂ ನೋಡಿಕೊಳ್ಳಬೇಕು.
ರೈತರ ಆಯೋಗವನ್ನು ಸ್ಥಾಪಿಸಿ ರೈತರಿಗೆ ಕನಿಷ್ಠ ಖಾತ್ರಿ ದರ ದೊರೆಯುವ ವ್ಯವಸ್ಥೆ ಮಾಡಬೇಕು. ಕೃಷಿಯಲ್ಲಿ ಸರ್ಕಾರದ ಹೂಡಿಕೆ ಜಿಡಿಪಿಯ ಶೇ. 0.4ರಷ್ಟು ಮಾತ್ರ ಎಂಬ ವಿಷಯವೇ ಕೃಷಿಯನ್ನು ಎಷ್ಟು ತಾತ್ಸಾರ ಮಾಡಲಾಗಿದೆ ಎಂಬುದಕ್ಕೆ ಸಾಕ್ಷಿಯಂತಿದೆ. ಕೃಷಿ ನೀತಿಯಲ್ಲಿ ಸಮಗ್ರ ಬದಲಾವಣೆ ಆದರಷ್ಟೇ ಭಾರತದಲ್ಲಿ ಕೃಷಿಗೆ ಉಳಿಗಾಲ ಎನ್ನುತ್ತಾರೆ ದೇವಿಂದರ್ ಶರ್ಮಾ.


