Homeಮುಖಪುಟರಾಗಿ ಋಷಿಯ ಜನ್ಮ ಶತಮಾನೋತ್ಸವ: ಜನಪರ ವಿಜ್ಞಾನಿ ರಾಗಿ ಲಕ್ಷ್ಮಣಯ್ಯನವರ ಸ್ಮರಣೆ

ರಾಗಿ ಋಷಿಯ ಜನ್ಮ ಶತಮಾನೋತ್ಸವ: ಜನಪರ ವಿಜ್ಞಾನಿ ರಾಗಿ ಲಕ್ಷ್ಮಣಯ್ಯನವರ ಸ್ಮರಣೆ

ಜೀವಮಾನವಿಡಿ ರಾಗಿ ಬೆಳೆಯ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಹತ್ತಾರು ತಳಿಗಳನ್ನು ಕಂಡುಹಿಡಿದ ರಾಗಿ ಲಕ್ಷ್ಮಣಯ್ಯನವರ ಕುರಿತು ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿಯವರು ಬರೆದಿದ್ದಾರೆ.

- Advertisement -
- Advertisement -

ಮೇ 15, 2021 ರಂದು ರಾಗಿ ಲಕ್ಷ್ಮಣಯ್ಯನವರ ಜನ್ಮ ಶತಮಾನೋತ್ಸವ. ಪ್ರತಿ ವರ್ಷ ಅವರ ಜನ್ಮದಿನದಂದು ಮಂಡ್ಯದಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ವತಿಯಿಂದ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿತ್ತು. ಈ ಬಾರಿ ಸಾಂಕ್ರಾಮಿಕದ ಕಾರಣದಿಂದ ನಡೆಯುತ್ತಿಲ್ಲ. ಹೀಗಾಗಿ ಅವರ ನೆನಪಿನಲ್ಲಿ ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿಯವರ ಪ್ರಕಟಿತ ಲೇಖನವನ್ನು ನಾನುಗೌರಿ ಓದುಗರಿಗಾಗಿ ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ.

ಮೈಸೂರು ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಮೇ 15, 1921ರಲ್ಲಿ ಜನಿಸಿದ ಲಕ್ಷ್ಮಣಯ್ಯನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ 1941ರಲ್ಲಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳೊಂದಿಗೆ ಬಿಎಸ್ಸಿ ಪದವಿಯನ್ನು ಪಡೆದರು. ರೈಲ್ವೆಯಲ್ಲಿ ಗುಮಾಸ್ತರಾಗಿ ಕೆಲಕಾಲ ಸೇವೆ. ಅಲ್ಲಿಯ ಕೆಲಸಕ್ಕೆ ರಾಜೀನಾಮೆ. ಬುದ್ದ, ಅಂಬೇಡ್ಕರ್, ಟಾಲ್ಸ್ಟಾಯ್ ಮತ್ತು ಐನ್ ಸ್ಟೀನ್ ಚಿಂತನೆಗಳು ಇವರಿಗೆ ಮಾರ್ಗದರ್ಶನ. ಬೀರೂರಿನಲ್ಲಿ ಕೃಷಿ ಇಲಾಖೆಯಲ್ಲಿ ಸೇವೆ, ತದನಂತರ 1949 ರಲ್ಲಿ ಮಂಡ್ಯದ ವಿಸಿ ಫಾರಂನಲ್ಲಿ ‘ಕಿರಿಯ ಸಹಾಯಕ ಸಸ್ಯಶಾಸ್ತ್ರಜ್ಞ’ರಾಗಿ ಸೇರಿಕೊಂಡರು. ರಾಗಿ ಸ್ವಕೀಯ ಪರಾಗಸ್ಪರ್ಶ ಬೆಳೆ. ಅದರಲ್ಲಿ ತಳಿಸಂಕರಣ ಸಾಧ್ಯವಿಲ್ಲ ಎಂದು ಜಗತ್ತಿನ ಎಲ್ಲ ವಿಜ್ಞಾನಿಗಳೂ ಕೈಚೆಲ್ಲಿದ್ದ ಕಾಲವದು. ಆದರೆ, ಲಕ್ಷ್ಮಣಯ್ಯನವರ ಪ್ರಬುದ್ಧ ಆಲೋಚನೆಗಳು ಫಲಕೊಟ್ಟವು. ಬಡವರ ಆಹಾರ ರಾಗಿ. ಬಡವರಿಗೆ ರಾಗಿಮುದ್ದೆ, ರಾಗಿ ರೊಟ್ಟಿಯೇ ನಿತ್ಯದ ಆಹಾರ. ಕಾಯಿಲೆ ಕಸಾಲೆಗೆ ರಾಗಿಯ ಅಂಬಲಿಯೇ ಬಡವರಿಗೆ ಗತಿ. ಆ ದಿನಗಳಲ್ಲಿ ಅನ್ನ ಕಾಣುವುದು ಹಬ್ಬ ಹರಿದಿನಗಳಿಗೆ ಮಾತ್ರ ಎಂಬತ್ತಿತ್ತು.

ರಾಗಿ ತಳಿಗಳ ಸಂಕರಣದ ವಿಧಾನ ಕುರಿತು ಲಕ್ಷ್ಮಣಯ್ಯನವರು ಬುದ್ದನಂತೆ ಧ್ಯಾನ ಮಾಡಿದರು. ತಾವೇ ಆವಿಷ್ಕರಿಸಿದ ‘ವಿಶೇಷ ಸಂಪರ್ಕ ಪದ್ದತಿ’ಯ ಮೂಲಕ ರಾಗಿಯಲ್ಲಿ ಸಂಕರಣ ತಳಿಗಳನ್ನು ಕಂಡುಹಿಡಿದ ಜಗತ್ತಿನ ಮೊಟ್ಟ ಮೊದಲ ವಿಜ್ಞಾನಿಯಾದರು. 1913 ರಲ್ಲಿ ಮೈಸೂರು ವ್ಯವಸಾಯ ಇಲಾಖೆಯ ಮೊದಲ ನಿರ್ದೇಶಕರಾದ ವಿದೇಶಿ ಅಧಿಕಾರಿ ಲೆಸ್ಲಿ ಕೋಲ್ಮನ್ ಅವರು ರಾಗಿಯನ್ನು ಸಂಕರಣಗೊಳಿಸಲು ಪ್ರಯತ್ನಿಸಿ ಸೋತವರು. ಲೆಸ್ಲಿ ಕೋಲ್ಮನ್ ಸೇರಿದಂತೆ ಬೇರಾರೂ ಸಾಧಿಸಲಾಗದ್ದನ್ನು ಲಕ್ಷ್ಮಣಯ್ಯನವರು ಸಾಧಿಸಿದರು. ಸರ್ಕಾರದ ದಾಖಲೆಗಳಲ್ಲಿ ಸಿ. ಎಚ್. ಲಕ್ಷ್ಮಣಯ್ಯನವರು ರಾಗಿ ಬ್ರೀಡರ್. ಆದರೆ ಜನಮಾನಸದಲ್ಲಿ ಅವರು ರಾಗಿಬ್ರಹ್ಮ.

ದೇಸಿ ರಾಗಿ ತಳಿಗಳ ಹೆಸರುಗಳೆಂದರೆ, ಕರಿಕಡ್ಡಿರಾಗಿ, ಬಿಳಿಕಡ್ಡಿರಾಗಿ, ಗಿಡ್ಡ ರಾಗಿ, ಹಸಿರುಕೊಂಬು ರಾಗಿ, ಮಾದಯ್ಯನಗಿರಿ -1, ಮಾದಯ್ಯನಗಿರಿ-2, ದೊಡ್ಡ ರಾಗಿ, ಗೌಬಿಲ್ಲೆ ರಾಗಿ, ಮಜ್ಜಿಗೆ ರಾಗಿ, ಜೇನುಮುದ್ದೆ ರಾಗಿ, ಬೆಣ್ಣೆಮುದ್ದೆ ರಾಗಿ, ರುದ್ರಜಡೆ ರಾಗಿ, ಜಡೆಸಂಗ ರಾಗಿ ಇತ್ಯಾದಿ. ಇವೆಲ್ಲವೂ ಎಕರೆಗೆ ಸರಾಸರಿ 5 ರಿಂದ 10 ಕ್ವಿಂಟಾಲ್ ವರೆಗೆ ಇಳುವರಿ ಕೊಡುತ್ತವೆಯೆಂದು 1920 ರ ಹೊತ್ತಿಗೇ ಲೆಸ್ಲೀ ಕೋಲ್ಮನ್ ಅವರು ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ.

ಲಕ್ಷ್ಮಣಯ್ಯನವರು 1951 ರಿಂದ 1964 ರವರೆಗೆ ಸ್ಥಳೀಯ ರಾಗಿ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ ರಾಗಿ ತಳಿಗಳನ್ನು ಬಿಡುಗಡೆ ಮಾಡಿದರು. ಇದರಿಂದ ಶೇ. 50 ರಷ್ಟು ಅಧಿಕ ಇಳುವರಿ ಸಾಧ್ಯವಾಯಿತು. ಇವರ ಸಾಧನೆಯನ್ನು ಮೊಟ್ಟಮೊದಲಿಗೆ ಖೋಡೆ ಕಂಪನಿ ಗುರುತಿಸಿತು. 1968ರಲ್ಲಿ ‘ಕಾವೇರಿ’ ರಾಗಿತಳಿಯಿಂದ ಅಧಿಕ ಇಳುವರಿ ಪಡೆದ ಹರಿಖೋಡೆಯವರು ನಗದು ಬಹುಮಾನದೊಡನೆ ಲಕ್ಷ್ಮಣಯ್ಯನವರನ್ನು ಸನ್ಮಾನಿಸಿದರು. ಮಂಜಪ್ಪನೆಂಬ ಕೃಷಿಕ ಖೋಡೆಯವರ ಜಮೀನಿನಲ್ಲಿ ‘ಕಾವೇರಿ’ ತಳಿಯಿಂದ ಉತ್ತಮ ಫಸಲು ಪಡೆದಿದ್ದರು. ತದನಂತರ, ಕರ್ನಾಟಕ ಸರ್ಕಾರದಿಂದ 1968 ಮತ್ತು 1982 ರಲ್ಲಿ ಎರಡು ಬಾರಿ ಲಕ್ಷ್ಮಣಯ್ಯನವರಿಗೆ ರಾಜ್ಯ ಪ್ರಶಸ್ತಿ ದಕ್ಕಿತು. ಕರ್ನಾಟಕ ಕೃಷಿಕ ಸಮಾಜದ ವತಿಯಿಂದ 1975ರಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಂದ ಸನ್ಮಾನವಾಯಿತು.

1964 ರಿಂದ 1984 ರವರೆಗೆ ದೇಸಿ ರಾಗಿತಳಿಗಳನ್ನು ಆಫ್ರಿಕಾದ ರಾಗಿತಳಿಗಳೊಂದಿಗೆ ಸಂಕರಣ ಮಾಡಿ ಇಂಡಾಫ್ 1 ರಿಂದ ಇಂಡಾಫ್ 15 (ಇಂಡಿಯಾ + ಆಫ್ರಿಕಾ = ಇಂಡಾಫ್) ರವರೆಗಿನ ತಳಿಗಳನ್ನು ಬಿಡುಗಡೆ ಮಾಡಿದರು. ಇದರಿಂದ ಎಕರೆಗೆ ಐದಾರು ಕ್ವಿಂಟಾಲ್ ಬದಲಿಗೆ 15 ರಿಂದ 20 ಕ್ವಿಂಟಾಲ್ ರಾಗಿಯ ಇಳುವರಿ ಬಂತು. ಇದು ಕನಿಷ್ಟ ಶೇ. 250 ರಷ್ಟು ಅಧಿಕ ಉತ್ಪಾದನೆ. ಪರಿಣಾಮವಾಗಿ ಕೋಟ್ಯಾಂತರ ಜನರ ಹಸಿವು ನೀಗಿತು. ಇದನ್ನು “ಕರ್ನಾಟಕದ ಹಸಿರು ಕ್ರಾಂತಿ”ಯೆನ್ನಬಹುದು. ಅವರ ರಾಗಿ ತಳಿಗಳು ರಾಗಿ ಧಾನ್ಯದ ಜತೆಗೆ ಅಧಿಕ ರಾಗಿಹುಲ್ಲನ್ನೂ ಒದಗಿಸಿದವು. ಇದರಿಂದ ಜಾನುವಾರುಗಳಿಗೆ ಮೇವು ಸಿಕ್ಕಿತು. ಬರಗಾಲದಲ್ಲಿ ತತ್ತರಿಸಿಹೋಗಿದ್ದ ಜಾನುವಾರುಗಳು ಬದುಕಿ ಉಳಿಯುವಂತಾಯಿತು. ಜನಮನ್ನಣೆ, ಎರಡು ವರ್ಷಗಳ ಸೇವಾವಧಿ ವಿಸ್ತರಣೆ ಹಾಗೂ ಹಲವು ಪ್ರಶಸ್ತಿ ಪುರಸ್ಕಾರಗಳ ನಂತರ ಲಕ್ಷ್ಮಣಯ್ಯನವರು 1984ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸೇವೆಯಿಂದ ನಿವೃತ್ತಿಯಾದರು. ‘ನಾನು ಆಳವಾಗಿ ಯೋಚಿಸಿದ್ದರ ಒಟ್ಟು ಮೊತ್ತವೇ ನನಗೊದಗಿದ ಉನ್ನತಿಗೆ ಕಾರಣ’ ಎಂದರು ಲಕ್ಷ್ಮಣಯ್ಯನವರು. ಇದನ್ನೇ ಗೌತಮ ಬುದ್ದ ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ್ದಾರೆ- ‘ನಾವು ಏನು ಯೋಚಿಸುತ್ತೇವೋ ಅದಾಗುತ್ತೇವೆ. ನಮ್ಮ ಯೋಚನೆಗಳಿಂದಲೇ ಜಗತ್ತನ್ನು ಕಟ್ಟುತ್ತೇವೆ’.

ರಾಗಿ ಋಷಿಗೆ ಜನಮನ್ನಣೆ

ಕರ್ನಾಟಕ ಸರ್ಕಾರದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ. ಎಂ. ಪಿ. ಪ್ರಕಾಶ್ ರವರ ಆಸ್ತೆಯಿಂದ 1985ರಲ್ಲಿ ರಾಗಿ ಲಕ್ಷ್ಮಣಯ್ಯನವರ ಹೆಸರು ಪದ್ಮ ಪ್ರಶಸ್ತಿಗೆ ಶಿಫಾರಸ್ಸಾಯಿತು. ಅವರ ಹೆಸರಿನ ಜತೆಗೆ ಡಾ. ಎಚ್. ನರಸಿಂಹಯ್ಯನವರ ಹೆಸರೂ ಇತ್ತು. ಅವರಿಗೆ ಆ ಪ್ರಶಸ್ತಿ ಸಂದಿತು. ಲಕ್ಷ್ಮಣಯ್ಯನವರಿಗೆ ಸಿಗಲಿಲ್ಲ. ಈ ಮಧ್ಯೆ, ರೈತಸಂಘದ ವತಿಯಿಂದ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರು ಲಕ್ಷ್ಮಣಯ್ಯನವರನ್ನು ಸನ್ಮಾನಿಸಿದರು. ಎಚ್. ಎಲ್. ಕೇಶವಮೂರ್ತಿ ಮತ್ತು ಕೆ. ಪುಟ್ಟಸ್ವಾಮಿ ಬರೆದ ಲೇಖನಗಳು ಕ್ರಮವಾಗಿ ಲಂಕೇಶ್ ಪತ್ರಿಕೆಯ ದೀಪಾವಳಿ ವಿಶೇಷಾಂಕ (1982) ಮತ್ತು ‘ಸುದ್ದಿ ಸಂಗಾತಿ’ (1987) ಯಲ್ಲಿ ಪ್ರಕಟವಾದವು. 1988ರಲ್ಲಿ ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಅಂಬೇಡ್ಕರ್ ಸಂಘದ ವಿದ್ಯಾರ್ಥಿಗಳು ಪಿ. ಲಂಕೇಶ್ ಅವರಿಂದ ಲಕ್ಷ್ಮಣಯ್ಯನವರನ್ನು ಸನ್ಮಾನಿಸಿದರು. ಅದೇ ಸಂದರ್ಭಕ್ಕೆ ಅವರಿಗೆ ಗೌರವ ಡಾಕ್ಟ್ಟೊರೇಟ್ ಕೊಡಬೇಕೆಂಬ ಒತ್ತಾಯಗಳು ಕೇಳಿಬಂದವು. 1989ರಲ್ಲಿ ಬೆಂಗಳೂರು ಕೃಷಿವಿವಿಯಿಂದ ಆಗಿನ ಕುಲಪತಿಗಳಾದ ಡಾ. ಕೆ. ಕೃಷ್ಣಮೂರ್ತಿ ಮತ್ತು ಕುಲಸಚಿವರಾದ ಡಾ. ಎಸ್. ಬಿಸಲಯ್ಯನವರ ಸ್ಪಂದನೆಯಿಂದ ಗೌರವ ಡಾಕ್ಟೊರೇಟ್ ಪ್ರಾಪ್ತಿಯಾಯಿತು. ನಿವೃತ್ತಿಯ ನಂತರ 1990 ರಿಂದ 1992 ರವರೆಗೆ ಎರಡು ವರ್ಷಗಳ ಕಾಲ ಬೆಂಗಳೂರು ಕೃಷಿವಿವಿಯಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ಮತ್ತೊಂದು ಅಧಿಕ ಇಳುವರಿಯ ಎಲ್-5 ರಾಗಿ ತಳಿಯನ್ನು ಕೊಟ್ಟರು. 1993 ರಲ್ಲಿ ಅಪಾರ ಸಾಮಾಜಿಕ ಕಾಳಜಿಯ ಕೃಷಿ ವಿಜ್ಞಾನಿ ಡಾ. ಸಿ. ಎಚ್. ಲಕ್ಷ್ಮಣಯ್ಯ ಇಹಲೋಕ ತ್ಯಜಿಸಿದರು.

ಮಂಡ್ಯದ ಕೃಷಿ ಕಾಲೇಜಿನ ‘ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ’ ಪ್ರತಿ ವರ್ಷ ಅವರ ಹುಟ್ಟು ಹಬ್ಬವಾದ ಮೇ 15 ರಂದು ಕೃಷಿ ವಿಷಯಕ್ಕೆ ಸಂಬಂಧಿಸಿದ ಒಂದು ಉಪನ್ಯಾಸದ ಆಯೋಜನೆ ಮಾಡುತ್ತಿದೆ. ಮೈಸೂರಿನ ಬಳಿಯ ನಾಗೇನಹಳ್ಳಿ ಕೃಷಿ ಸಂಶೋಧನಾ ಕೇಂದ್ರದಲ್ಲಿನ ಸಭಾಂಗಣಕ್ಕೆ ‘ಡಾ. ಸಿ. ಎಚ್. ಲಕ್ಷ್ಮಣಯ್ಯ ಸಭಾಂಗಣ’ ಎಂದು ನಾಮಕರಣ ಮಾಡಲಾಗಿದೆ. ಮಂಡ್ಯ ನಗರದಿಂದ ವಿ.ಸಿ. ಫಾರಂನ ಕೃಷಿ ಸಂಶೋಧನಾ ಕೇಂದ್ರಕ್ಕೆ ಹೋಗುವ ರಸ್ತೆಗೆ ‘ರಾಗಿ ಲಕ್ಷ್ಮಣಯ್ಯ ರಸ್ತೆ’ ಎಂದು ಹೆಸರಿಡಲಾಗಿದೆ.

ಅಂದಿನ ಕೃಷಿ ಸಚಿವರಾದ ಶ್ರೀ ಕೆ. ಶ್ರೀನಿವಾಸಗೌಡರ ಪ್ರಯತ್ನದಿಂದಾಗಿ ಭಾರತ ರತ್ನ ಪ್ರಶಸ್ತಿಗೆ ಲಕ್ಷ್ಮಣಯ್ಯನವರ ಹೆಸರನ್ನು 2005-06ರಲ್ಲಿ ಸೂಚಿಸಲಾಗಿತ್ತಂತೆ. ಆದರೆ, ರಾಗಿಯು ಕೆಲವೇ ಕೆಲವು ರಾಜ್ಯಗಳ ಬೆಳೆ ಎಂಬ ತಪ್ಪು ಕಲ್ಪನೆಯಿಂದಾಗಿ ಅವರಿಗೆ ಪ್ರಶಸ್ತಿ ಸಿಗಲಿಲ್ಲ. ಅಮೇರಿಕಾದ ಬೇಸಾಯ ಶಾಸ್ತ್ರದ ವಿಜ್ಞಾನಿಯಾದ ಡಾ. ನಾರ್ಮನ್ ಬೋರ್ಲಾಗ್ ಅವರು ಅಧಿಕ ಇಳುವರಿಯ ಗೋದಿ ತಳಿಗಳನ್ನು ಕಂಡುಹಿಡಿದಿದ್ದಕ್ಕಾಗಿ 1970ರಲ್ಲಿ ನೋಬಲ್ ಶಾಂತಿ ಪ್ರಶಸ್ತಿ ಮತ್ತು 2006 ರಲ್ಲಿ ಭಾರತ ಸರ್ಕಾರದ ಪದ್ಮ ವಿಭೂಷಣ ಪ್ರಶಸ್ತಿ ಪಡೆದುಕೊಂಡರು. ಈ ನೆಲದ ವಿಜ್ಞಾನಿ ರಾಗಿ ಲಕ್ಷ್ಮಣಯ್ಯನವರಿಗೆ ಅಂತಹ ಯಾವ ಭಾಗ್ಯವೂ ಒಲಿದು ಬರಲೇ ಇಲ್ಲ.

ಕೃಷಿ ಸಚಿವರಾಗಿದ್ದ ಶ್ರೀನಿವಾಸಗೌಡರ ಒತ್ತಾಯದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 2005ರಲ್ಲಿ ಅವರ ಪ್ರತಿಮೆಯ ಅನಾವರಣವಾಗಿದೆ. ‘ಅವರ ಪ್ರತಿಮೆ ಸ್ಥಾಪಿಸದಿದ್ದರೆ ಸಹಕುಲಾಧಿಪತಿಯಾಗಿ ತಾವು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಬರುವುದಿಲ್ಲ’ ಎಂಬ ತಾಕೀತನ್ನು ಮಾಡಿದ ಶ್ರೀನಿವಾಸಗೌಡರು ಲಕ್ಷ್ಮಣಯ್ಯನವರ ಪ್ರತಿಮೆ ಸ್ಥಾಪಿಸುವಂತೆ ನೋಡಿಕೊಂಡಿದ್ದಾರೆ. ‘ನಮ್ಮ ಕಣದ ತುಂಬ ರಾಶಿ ರಾಶಿ ರಾಗಿ, ಅಷ್ಟೊಂದು ರಾಗಿಯನ್ನು ಶೇಖರಿಸಿಟ್ಟುಕೊಳ್ಳುವುದು ನಮಗೆ ಕಷ್ಟದ ಕೆಲಸವಾಯಿತು, ಇದಕ್ಕೆ ಕಾರಣರಾದ ಲಕ್ಷ್ಮಣಯ್ಯನವರನ್ನು ನಾವು ಮರೆಯೋದುಂಟೆ? ಅವರು ಬದುಕಿದ್ದಾಗ ನಾನು ಮೈಸೂರಿಗೆ ಹೋಗಿ ಅವರನ್ನು ಆಗಾಗ ಮಾತನಾಡಿಸಿಕೊಂಡು ಬರುತ್ತಿದ್ದೆ’ ಎನ್ನುತ್ತಾರೆ, ಕೋಲಾರದ ಶ್ರೀನಿವಾಸಗೌಡರು, ತುಂಬು ಅಭಿಮಾನದಿಂದ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ 2010 ರಲ್ಲಿ ದೇವನೂರ ಮಹಾದೇವರಿಗೆ ಕೊಡಬೇಕೆಂದಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ದೇವನೂರರ ಕೋರಿಕೆಯಂತೆ ರಾಗಿ ಲಕ್ಷ್ಮಣಯ್ಯನವರಿಗೆ ಮರಣೋತ್ತರವಾಗಿ ನೀಡಲಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು ‘ಕೃಷಿ ಪತ್ರಿಕೋದ್ಯಮ’ ಎಂಬ ಕೋರ್ಸಿನಲ್ಲಿ ರಾಗಿ ಲಕ್ಷ್ಮಣಯ್ಯನವರ ಕುರಿತು ತಿಳಿಯಬೇಕಿದೆ. ಅದು ಸಿಲಬಸ್ ನಲ್ಲಿದೆ.

ದೇಶದಲ್ಲಿ ರಾಗಿ ಬೆಳೆಯುವ ಪ್ರದೇಶಗಳು

ಭಾರತದಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ್ರಪ್ರದೇಶ ರಾಜ್ಯಗಳು ಹೆಚ್ಚು ರಾಗಿ ಬೆಳೆಯುವ ಪ್ರದೇಶಗಳು. ಕರ್ನಾಟಕದಲ್ಲಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ರಾಗಿ ಬೆಳೆ ಅಧಿಕ. ಆಂಧ್ರ್ರಪ್ರದೇಶದ ಚಿತ್ತೂರು, ಅನಂತಪುರ, ನೆಲ್ಲೂರು, ಕರ್ನೂಲು, ಕಡಪ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ರಾಗಿ ಬೆಳೆಯುತ್ತಾರೆ. ತಮಿಳುನಾಡಿನಲ್ಲಿ ಸೇಲಂ, ಕೊಯಮತ್ತೂರು, ಉತ್ತರ ಆರ್ಕಾಟ್, ದಕ್ಷಿಣ ಆರ್ಕಾಟ್, ಚಂಗಲ್ಪೇಟೆ ಮತ್ತು ರಾಮನಾಥಪುರಂ ಜಿಲ್ಲೆಗಳು ರಾಗಿ ಬೆಳೆಗೆ ಹೆಸರುವಾಸಿ. ಹಿಮಾಲಯದ ತಪ್ಪಲು, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದಲ್ಲೂ ರಾಗಿಯನ್ನು ಅತ್ಯಲ್ಪ ಪ್ರಮಾಣದಲ್ಲಾದರೂ ಬೆಳೆಯುತ್ತಾರೆ.

ಭಾರತ ಮತ್ತು ಪೂರ್ವ ಆಫ್ರಿಕಾ ದೇಶಗಳಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಜತೆಗೆ ಚೀನಾ, ಜಪಾನ್, ನೇಪಾಳ, ಬರ್ಮಾ, ಶ್ರೀಲಂಕಾ, ಥೈಲ್ಯಾಂಡ್, ಮಲೇಶಿಯಾ ದೇಶಗಳಲ್ಲಿ ಕೊಂಚ ಮಟ್ಟಿಗೆ ರಾಗಿಯನ್ನು ಬೆಳೆಯಲಾಗುತ್ತಿದೆ. ಅಮೇರಿಕಾದ ಮಾರುಕಟ್ಟೆಯಲ್ಲಿ ರಾಗಿಯ ಹಸಿಹಿಟ್ಟು ಲಭ್ಯವಿದೆ. ಲಕ್ಷ್ಮಣಯ್ಯನವರ ಇಂಡಾಫ್ ರಾಗಿ ತಳಿಗಳ ಹಿಟ್ಟು ಅಲ್ಲಿರಲೇಬೇಕಲ್ಲ? ಪಂಚತಾರಾ ಹೋಟೆಲ್ಲುಗಳಲ್ಲೂ ರಾಗಿ ತಿನಿಸುಗಳಿಗೆ ಬೇಡಿಕೆಯಿದೆ. ರಾಗಿ ಜಗದ ಆಹಾರವಾಗುತ್ತಿದೆ.

ಲಕ್ಷ್ಮಣಯ್ಯನವರು ಕಂಡುಹಿಡಿದ ಅಧಿಕ ಇಳುವರಿಯ ರಾಗಿ ತಳಿಗಳು ದೇಶದ ಇತರೆ ರಾಜ್ಯಗಳಿಗೂ ಹಾಗೂ ವಿದೇಶಗಳಿಗೂ ಹೋಗಿವೆ, ಅರ್ಥಾತ್ ಖಂಡಾಂತರಗೊಂಡಿವೆ. ಇದರಿಂದ ಮಾನವ ಕುಲಕ್ಕೆ ಬಹುದುಪಕಾರವಾಗಿದೆ. ಅವರು ಎಲೆಮರೆಯ ಕಾಯಿಯ ರೀತಿಯಲ್ಲಿ ತೆನೆಮರೆಯಲ್ಲೇ ಸಂಶೋಧನೆ ಕೈಗೊಂಡವರು.

ರಾಗಿಯ ದಾನ ಬಳ್ಳ ಬಳ್ಳ

ಸ್ಪೋಟಗೊಂಡ ಜನಸಂಖ್ಯೆಯ ತುತ್ತಿನ ಚೀಲ ತುಂಬಿಸುವಲ್ಲಿ ಲಕ್ಷ್ಮಣಯ್ಯನವರ ಕೊಡುಗೆ ಅಪಾರ. ‘ಇಂಡಾಫ್ ತಳಿಗಳು ಬರಲಿಲ್ಲ ಎಂದರೆ ಹೊಟ್ಟೆಗೆ ಹಿಟ್ಟು ಸಿಕ್ತಿರಲಿಲ್ಲ’ ಅಂತ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆಗಳ ಬಹುತೇಕ ರೈತರು ಇಂದಿಗೂ ಹೇಳುತ್ತಾರೆ. ಈಗಲೂ ಅವರು ಹೆಚ್ಚಾಗಿ ಬಿತ್ತುವುದು ಇಂಡಾಫ್ ರಾಗಿ ತಳಿಗಳನ್ನೇ. ಇಂಡಾಫ್ ತಳಿಗಳಿಂದ ರಾಗಿ ಇಳುವರಿ ಜಾಸ್ತಿಯಾದ್ದರಿಂದ ಕಣದಲ್ಲಿನ ರಾಗಿಯ ದೊಡ್ಡ ದೊಡ್ಡ ರಾಶಿಗಳಿಂದ ಪಡಿ, ಅಚ್ಚೇರು, ಸೇರು ರಾಗಿ ದಾನ ಮಾಡುವ ಬದಲು ದೊಡ್ಡರೈತರು ಬಳ್ಳ ಬಳ್ಳ ಮೊಗೆದು ಕೃಷಿಕಾರ್ಮಿಕರಿಗೆ, ಕೂಲಿಯಾಳುಗಳಿಗೆ ಕೊಟ್ಟರು.

ಲಕ್ಷ್ಮಣಯ್ಯನವರ ಇಂಡಾಫ್ ತಳಿಗಳನ್ನೇ ರೈತರು ಇಂದಿಗೂ ಬೆಳೆಯುತ್ತಿದ್ದಾರೆ. ಎಲ್ಲ ಋತುಮಾನಗಳಲ್ಲೂ ಬೆಳೆಯಬಹುದಾದ, ಜತೆಗೆ ಮಳೆಯಾಶ್ರಯ ಹಾಗೂ ನೀರಾವರಿಗೂ ಒಗ್ಗುವ ಇಂಡಾಫ್ ತಳಿಗಳಿವೆ. ಕೃಷಿ ವಿವಿಯು ಬಿಡುಗಡೆ ಮಾಡಿರುವ ಜಿಪಿಯು ಎಂಬ ಸಂಕರಣ ಸರಮಾಲೆಯ ಹೊಸ ರಾಗಿ ತಳಿಗಳಿಗೆ ಲಕ್ಷ್ಮಣಯ್ಯನವರ ಇಂಡಾಫ್ ತಳಿಗಳೇ ಮೂಲಾಧಾರ. ಇಂತಹ ಕೊಡುಗೆಗೆ ಕಾರಣವಾದ ಅಪ್ರತಿಮ ವಿಜ್ಞಾನಿಯನ್ನು ನಾವು ಕೊಂಡಾಡಿದ್ದೇವೆಯೇ? ಅವರಿಗೆ ಸಲ್ಲ್ಲಬೇಕಿದ್ದ ಗೌರವ, ಪ್ರಶಸ್ತಿಗಳನ್ನು ಕೊಡಲಾಗಿದೆಯೇ?

ನೆನಪಿನ ಕಾರ್ಯಕ್ರಮಗಳು ಬೇಕು

ರಾಗಿಯನ್ನು ‘ತೃಣಧಾನ್ಯ’ ಎಂದು ಕರೆಯಲಾಗಿದೆ. ಅದರ ಸಂಶೋಧನೆಯ ವಿಜ್ಞಾನಿಗಳನ್ನು ‘ತೃಣ’ವಾಗಿ ಕಾಣಲಾಗುತ್ತಿದೆಯೇ? ಲಕ್ಷ್ಮಣಯ್ಯನವರಿಗೆ ಬಡ್ತಿ ನೀಡಿ ‘ಮೆಣಸು ಅಭಿವೃದ್ಧಿ ಅಧಿಕಾರಿ’ಯಾಗಿ ನೇಮಿಸಿದಾಗ, ಅವರು ಬಡ್ತಿ ತಿರಸ್ಕರಿಸಿ ರಾಗಿ ಬೆಳೆಯ ಸಂಶೋಧನೆಗೆ ಅಂಟಿಕೊಂಡಿದ್ದರ ಹಿಂದೆ ಅಪಾರ ಸಾಮಾಜಿಕ ಕಳಕಳಿಯಿದೆ. ಅವರು ಜನಪರ ವಿಜ್ಞಾನಿ. ‘ಹೊಟ್ಟೆ ತುಂಬ ಮುದ್ದೆ ತಿಂದು, ಬಾಯಿ ತುಂಬ ಅನ್ನ ಉಣ್ಣಬೇಕು’ ಎನ್ನುವುದು ಅವರು ಹೇಳುತ್ತಿದ್ದ ಮಾತು. ‘ಸಂಕ್ರಾಂತಿಯ ದಿನ ದನಗಳ ಕೊಂಬಿಗೆ ಬಣ್ಣ ಬಳಿದು, ಬೆಂಕಿಯ ಮೇಲೆ ಹಾರಿಸುತ್ತಾರೆ. ದನಗಳಿಗೆ ಬೇಕಿರುವುದು ಹೊಟ್ಟೆ ತುಂಬಾ ಮೇವು, ಹಿಂಡಿ, ಬೂಸಾ’ ಎಂದಿರುವ ಲಕ್ಷಣಯ್ಯನವರು ತಾವು ಕಂಡುಹಿಡಿದ ರಾಗಿ ತಳಿಗಳಿಂದ ದನಗಳಿಗೆ ಹೆಚ್ಚಿನ ಪ್ರಮಾಣದ ಮೇವೂ ಸಿಗುವಂತೆ ಮಾಡಿದ್ದಾರೆ. ಕನಕದಾಸರ ‘ರಾಮಧಾನ್ಯ ಚರಿತೆ’ಯಲ್ಲಿ ಅಕ್ಕಿ ಮತ್ತು ರಾಗಿಗೆ ನಡೆದ ಸಂವಾದದಲ್ಲಿ ರಾಗಿಗೇ ಗೆಲುವು.

‘ನನ್ನ ಮದುವೆ ರಾಗಿಯೊಂದಿಗೆ ನಡೆದುಹೋಗಿದೆ’ ಎಂದು ತಮ್ಮ ಸೇವಾವಧಿ ಮತ್ತು ತದನಂತರವೂ ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಹಗಲಿರುಳೆನ್ನದೆ ರಾಗಿ ಹೊಲದಲ್ಲೇ ಕಾಲವ್ಯಯಿಸಿ, ತಮ್ಮ ಕುಟುಂಬ ಸದಸ್ಯರ ಶ್ರಮದಾನವನ್ನು ಸಂಜೆಮುಂಜಾವೆನ್ನದೆ ಸಂಶೋಧನೆಗೆ ಬಳಸಿಕೊಂಡ, ಬಡಬೋರೇಗೌಡನ ಹೊಟ್ಟೆ ತುಂಬಲು ಮಹತ್ತರ ಸಂಶೋಧನೆ ನಡೆಸಿದ ಲಕ್ಷ್ಮಣಯ್ಯನವರನ್ನು ಕನ್ನಡಿಗರು ಮರೆಯಕೂಡದು. ‘ನನಗೆ ಎಂತಹ ದೊಡ್ಡ ಹುದ್ದೆ ಕೊಟ್ಟರೂ, ರಾಗಿ ಸಂಶೋಧನೆಯಲ್ಲೇ ನನಗೆ ಅತ್ಯಂತ ಖುಷಿ’ ಎನ್ನುತ್ತಿದ್ದರವರು. ತಮ್ಮ ಅಂತ್ಯ ಸಂಸ್ಕಾರದ ವೇಳೆ ‘ತನ್ನ ದೇಹದ ಮೇಲೆ ಕೇವಲ ಹಿಡಿ ರಾಗಿ ಹಾಕಿ, ಅಷ್ಟೇ ಸಾಕು’ ಎಂದು ಮರಣಕ್ಕೂ ಮೊದಲು ತಮ್ಮ ಶ್ರೀಮತಿಯವರಲ್ಲಿ ನಿವೇದಿಸಿಕೊಂಡರು. ರಾಗಿ ವಿಜ್ಞಾನಿಗಳು ಅವರ ತನ್ಮಯತೆ ಹಾಗೂ ಬದ್ದತೆಯನ್ನು ಮೈಗೂಡಿಸಿಕೊಳ್ಳಬೇಕು. ಅವರ ಅಸಾಧಾರಣ ಸಾಧನೆಗೆ ಸರ್ಕಾರ ಈಗಲಾದರೂ ಮನ್ನಣೆ ನೀಡಬೇಕು. ರಾಗಿ ವಿಜ್ಞಾನಿಯೊಬ್ಬರಿಗೆ ಪ್ರತಿವರ್ಷ ‘ರಾಗಿ ಲಕ್ಷ್ಮಣಯ್ಯ ಪ್ರಶಸ್ತಿ’ ನೀಡಬೇಕು. ರಾಗಿ ಲಕ್ಷ್ಮಣಯ್ಯನವರ ಹೆಸರಿನಲ್ಲಿ ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕೇಂದ್ರವೊಂದನ್ನು ತೆರೆಯಲಾಗುವುದು ಎಂಬುದು ಮಂತ್ರಿಗಳ ಭಾಷಣದ ಮಾತು ಭರವಸೆಯಾಗಿಯೇ ಉಳಿದಿದೆ. ಅದನ್ನು ಸಾಕಾರಗೊಳಿಸಬೇಕು. ದೇಶದ ಯಾವುದಾದರೊಂದು ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ಲಕ್ಷ್ಮಣಯ್ಯನವರಿಗೆ ಮರಣೋತ್ತರವಾಗಿ ನೀಡಬೇಕು. ಇವರು ಕರ್ನಾಟಕದ ಹೆಮ್ಮೆಯ ಪುತ್ರರಷ್ಟೇ ಅಲ್ಲ, ಭಾರತ ಮಾತೆಯ ಹೆಮ್ಮೆಯ ಪುತ್ರ ಎಂಬ ಗೌರವಕ್ಕೆ ಭಾಜನರಾಗಬೇಕು.


ಇದನ್ನೂ ಓದಿ: ನೈಸರ್ಗಿಕ ಕೃಷಿ ಸಂವಾದ: ಭಾರತದ ಹಸಿವು ನೀಗಿಸಿದ ಶ್ರೇಯ ಕೃಷಿ ವಿವಿಗಳಿಗೂ ಸಲ್ಲಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...