Homeಚಳವಳಿನೈಸರ್ಗಿಕ ಕೃಷಿ ಸಂವಾದ: ಭಾರತದ ಹಸಿವು ನೀಗಿಸಿದ ಶ್ರೇಯ ಕೃಷಿ ವಿವಿಗಳಿಗೂ ಸಲ್ಲಬೇಕು

ನೈಸರ್ಗಿಕ ಕೃಷಿ ಸಂವಾದ: ಭಾರತದ ಹಸಿವು ನೀಗಿಸಿದ ಶ್ರೇಯ ಕೃಷಿ ವಿವಿಗಳಿಗೂ ಸಲ್ಲಬೇಕು

- Advertisement -
- Advertisement -

ಕಳೆದ ವಾರ ‘ನಾನು ಗೌರಿ’ ಪತ್ರಿಕೆಯಲ್ಲಿ ಶೂನ್ಯ ಬಂಡವಾಳ ಕೃಷಿ ಕುರಿತು ಸರಣಿ ಲೇಖನಗಳು ಪ್ರಕಟಗೊಂಡಿದ್ದವು. ಚುಕ್ಕಿ ನಂಜುಂಡಸ್ವಾಮಿ ಅವರು ಶೂನ್ಯ ಬಂಡವಾಳ ಕೃಷಿ ಓಲೈಸುವ ದಿಸೆಯಲ್ಲಿ ಕೃಷಿ ವಿವಿಗಳ ಅಸ್ತಿತ್ವನ್ನು ಪ್ರಶ್ನಿಸಿದ್ದಾರೆ. ಬದಲಾದ ಕೃಷಿ ನೀತಿಯಿಂದ ಶ್ರೀಮಂತ ದೇಶಗಳ ಕೃಷಿ ಉತ್ಪನ್ನಗಳು, ಸಲಕರಣೆಗಳು, ರಾಸಾಯನಿಕಗಳು, ರಸ ಗೊಬ್ಬರಗಳು ಭಾರತಕ್ಕೆ ಬಂದಿದ್ದು, ಇವುಗಳನ್ನು ತಡೆಯಲು ಕೃಷಿ ವಿವಿಗಳಿಗೆ ಹೇಗೆ ಸಾಧ್ಯ? ವಿ.ರಮೇಶ್ ಅವರ ಲೇಖನದ ಸಾರಾಂಶ ಶೂನ್ಯ ಬಂಡವಾಳ ಕೃಷಿಯನ್ನು ಸಂಶೋಧನೆಗೆ ಒಳಪಡಿಸಿ ರೈತರ ಹೊಲಗಳಿಗೆ ವಿಸ್ತರಿಸಬೇಕೆಂಬುದು.

ಚುಕ್ಕಿ ಅವರು ಹೇಳಿದಂತೆ ಕೃಷಿ ವಿವಿಗಳು ಕೇವಲ ಹಸಿರು ಕ್ರಾಂತಿಯನ್ನು ಪ್ರಚಾರ ಪಡಿಸಲಿಲ್ಲ. ಬದಲಿಗೆ ಇಲ್ಲಿನ ಸಮಸ್ಯೆಗಳನ್ನು ಅರಿತು ಅದಕ್ಕೆ ಬೇಕಾದ ಪರಿಹಾರಕ್ಕೆ ಕೈ ಹಾಕಿದರು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ಇಡೀ ಭಾರತವೇ ಹಸಿವಿನಿಂದ ಸಾಯುತ್ತಿತ್ತು. ಅಮೇರಿಕಾದಂಥ ಅನೇಕ ಮುಂದುವರೆದ ದೇಶಗಳಿಂದ ಆಹಾರವನ್ನು ಆಮದು ಮಾಡಿಕೊಂಡು ಜನತೆಗೆ ಅನ್ನ ಒದಗಿಸುವ ಸಂಕಷ್ಟಗಳಲ್ಲಿ ದೇಶವಿತ್ತು. ಜನರನ್ನು ಹಸಿವಿನಿಂದ ಮುಕ್ತಗೊಳಿಸಲು ಸರ್ಕಾರದ ಮುಂದಿದ್ದ ಆಯ್ಕೆಯೆಂದರೆ ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ಅಭಿವೃದ್ಧಿಗೊಳಿಸಬೇಕಾದದ್ದು. ಅಷ್ಟೊತ್ತಿಗಾಗಲೇ ನಾರ್ಮನ್ ಬೋರ್ಲಾಗ್ ಗೋಧಿಯಲ್ಲಿ ಹೊಸ ತಳಿಗಳನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಪರಿಚಯಿಸಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಾಗಿತ್ತು.

ಇದೇ ದಾರಿಯಲ್ಲಿ ನಡೆದ ಡಾ.ಸ್ವಾಮಿನಾಥನ್ ಭತ್ತ, ಗೋಧಿಗಳಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿಗೊಳಿಸಿ ದೇಶದಲ್ಲಿ ನಡೆದ ಹಸಿರು ಕ್ರಾಂತಿಗೆ ಚಾಲನೆ ಕೊಟ್ಟರು. 1950ರಲ್ಲಿ ಕೇವಲ 50 ಮಿಲಿಯನ್ ಟನ್‍ಗಳಷ್ಟಿದ್ದ ಆಹಾರ ಉತ್ಪಾದನೆ ಇಂದು 270 ಮಿಲಿಯನ್ ಟನ್‍ಗಳಷ್ಟು ಉತ್ಪಾದನೆಯಾಗಿದೆ ಎಂದರೆ ಕುತೂಹಲವೆನ್ನಿಸಬಹುದಲ್ಲವೇ. ಕೃಷಿ ವಿಜ್ಞಾನಿಗಳ ಅವಿರತ ಶ್ರಮ, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಬೇಳೆ ಕ್ರಾಂತಿ ಈ ಎಲ್ಲಾ ಕ್ರಾಂತಿಗಳು ಕೃಷಿ ವಿಜ್ಞಾನಿಗಳು ಅಭಿವೃದ್ಧಿಗೊಳಿಸಿದ ಹೈಬ್ರಿಡ್ ತಳಿಗಳಿಂದ ಸಾಧ್ಯವಾಯಿತು. ಪ್ರಸ್ತುತ ಕೃಷಿಯಲ್ಲಿ ಯಾಂತ್ರಿಕತೆ, ಸಸ್ಯ ಸಂರಕ್ಷಣೆ, ಮಣ್ಣಿನ ಆರೋಗ್ಯ, ಕೋಯ್ಲಿನೋತ್ತರ ಸಂಸ್ಕರಣೆ ಇಂತಹ ವಿವಿಧ ತಾಂತ್ರಿಕತೆಯನ್ನು ರೂಪಿಸಿದ್ದು ಕೃಷಿ ವಿವಿಗಳು.

ಎಂ.ಎಸ್ ಸ್ವಾಮಿನಾಥನ್

ಡಾ. ಲಕ್ಷ್ಮಣ್ಣಯ್ಯನವರು ರಾಗಿಯಲ್ಲಿ ಸಂಪರ್ಕ ಪರಾಗ ಸ್ಪರ್ಶಕ್ರಿಯ ನಡೆಸಿ ಇಂಡಾಫ್ ಸರಣಿ ತಳಿಗಳನ್ನು ಅಭಿವೃದ್ಧಿ ಪಡಿಸಿ ರಾಗಿಯಲ್ಲಿ ಹೊಸ ಕ್ರಾಂತಿಯನ್ನೆ ಮಾಡಿದರು. ರಾಗಿ ಬೆಳೆಯಲ್ಲಿ ಹೈಬ್ರಿಡ್ ತಳಿ ಅಭಿವೃದ್ಧಿಗೊಳಿಸುವುದು ಅಸಾಧ್ಯವೆಂದು ಪ್ರಪಂಚದ ಅನೇಕರು ನಂಬಿದ್ದಾಗ ಈ ವಿಜ್ಞಾನಿ ಚಮತ್ಕಾರವನ್ನೆ ಮಾಡಿದ್ದರು. ಈ ತಳಿಗಳನ್ನು ಇಡೀ ದಕ್ಷಿಣ ಭಾರತದಲ್ಲಿ ಇಂದಿಗೂ ರೈತರು ಬೆಳೆಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ಹಾಸನ, ಚಾವiರಾಜನಗರ ಮುಂತಾದ ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ಈ ವಿಜ್ಞಾನಿಯನ್ನು ರಾಗಿ ತಳಿಬ್ರಹ್ಮ ಎಂದೇ ರೈತರು ಪ್ರಶಂಸಿದ್ದಾರೆ.

ರಾಗಿ ಲಕ್ಷ್ಮಣಯ್ಯ

ಪಿ.ಲಂಕೇಶ್‍ರವರು ಲಕ್ಷ್ಮಣಯ್ಯರವರ ಕೊಡುಗೆ ಮೆಚ್ಚಿ ಅವರಿಗೆ ಗೌರವ ಡಾಕ್ಟರೇಟ್ ನೀಡುವಂತೆ ಅಂದಿನ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.
ಅನೇಕ ಕೀಟಗಳ ಬಾಧೆಗೆ ಒಳಗಾಗಿದ್ದ ಹತ್ತಿಯಲ್ಲಿ ಬಿಟಿ ಹತ್ತಿ ಅಭಿವೃದ್ಧಿ ಮಾಡಿ ರೈತರಿಗೆ ಕೋಟ್ಯಾಂತರ ರೂಗಳ ಆದಾಯ ತಂದಿದ್ದು ಧಾರವಾಡ ಭಾಗದ ಕೃಷಿ ವಿಜ್ಞಾನಿಗಳು. ಸೂರ್ಯಕಾಂತಿಯಲ್ಲಿ ಡಾ. ಸೀತಾರಾಮ್‍ರವರು ಕೆ.ಬಿ.ಎಸ್.ಹೆಚ್ ಸರಣಿ ತಳಿಗಳನ್ನು ಬಿಡುಗಡೆಗೊಳಿಸಿದ್ದರು. ಕೃಷಿ ತಾಂತ್ರಿಕತೆಯನ್ನು ರೈತರ ಮನೆ ಬಾಗಿಲಿಗೆ ಕೊಂಡೊಯ್ದ ಶ್ರೇಯ ಡಾ.ಆರ್.ದ್ವಾರಕೀನಾಥ್ ಎಂಬ ಮತ್ತೋರ್ವ ವಿಜ್ಞಾನಿಯದ್ದು. ಬತ್ತದಲ್ಲಿ ವಿವಿಧ ಮಣ್ಣಿನ ಗುಣಕ್ಕೆ ತಕ್ಕಂತೆ ತಳಿಗಳನ್ನು ಅಭಿವೃದ್ಧಿಗೊಳಿಸಿರುವುದಲ್ಲದೆ ಅಲ್ಪ ನೀರಿನಲ್ಲಿ ಬೆಳೆಯಬಹುದಾದ Aerobic ಬತ್ತದ ತಳಿಗಳನ್ನು ಕಾಣಬಹುದಾಗಿದೆ.

ಕಬ್ಬು ಬೆಳೆಯಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿಗೊಳಿಸಿ ಹೆಚ್ಚೆಚ್ಚು ಸಕ್ಕರೆ ಉತ್ಪಾದನೆಗೆ ನಾಂದಿಯಾಗಿದೆ. ಕಾಳುಗಳಲ್ಲಿಯೂ ಹೊಸ ಕ್ರಾಂತಿಯೇ ಮೊಳಗಿದೆ. ತೆಂಗು, ಅಡಿಕೆ, ಬಾಳೆ, ಮಾವು, ಹಲಸು ಇತರೆ ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿಯೂ ಅತ್ಯುತ್ತಮ ತಳಿಗಳನ್ನು ಕೃಷಿ ವಿವಿಗಳು ಬಿಡುಗಡೆ ಮಾಡಿವೆ. ವಾರಕ್ಕೆ ಎರಡು ಬಾರಿ ಹವಾಮಾನ ಆಧಾರಿತ ಕೃಷಿ ಮಾಹಿತಿಯನ್ನು ಟಿ.ವಿ, ರೇಡಿಯೋ, ಎಸ್.ಎಂ.ಎಸ್, ದಿನಪತ್ರಿಕೆಗಳ ಮೂಲಕ ರೈತರಿಗೆ ಒದಗಿಸಿ ಹವಾಮಾನಕ್ಕನುಗುಣವಾದ ಕೃಷಿ ಕ್ರಮಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿವೆ.

ಮೂಡಿಗೆರೆಯ ಸಸ್ಯ ಕಾಶಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ತಾಣಕ್ಕೆ ಹೊಂದಿಕೊಂಡಂತಿದ್ದ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಅಲ್ಲಿ ನಡೆಯುತ್ತಿದ್ದ ಕೃಷಿ ಸಂಶೋಧನೆಗೆ ಸದಾ ತಮ್ಮ ಕಿವಿ ಕಣ್ಣು ತೆರೆದು ಸ್ವಾಗತಿಸುತ್ತಿದ್ದರು. ಡಾ. ಬೆಳವಾಡಿ, ಡಾ.ಚಂದ್ರಶೇಖರ್, ಡಾ.ಚಕ್ರವರ್ತಿ ಮುಂತಾದ ಕೃಷಿ ವಿಜ್ಞಾನಿಗಳಿಗೆ ತೇಜಸ್ವಿವೇ ಗುರುಗಳು. ಒಬ್ಬ ಕೀಟಶಾಸ್ತ್ರಜ್ಞನ ಮೇಲೆಯೆ ಕರ್ವಾಲೋ ಕೃತಿ ರಚಿಸಿದ್ದು, ಹಾರುವ ಓತಿಯನ್ನು ನಾಡಿಗೆ ಪರಿಚಯಿಸಿದ್ದು ತೇಜಸ್ವಿ ಎಂಬ ಚಿಂತಕನಿಗೆ ಕೃಷಿ ವಿಜ್ಞಾನಿ ಮೇಲಿದ್ದ ಗೌರವವೇ ಸರಿ.

ಅಂದು ಹಸಿರುಕ್ರಾಂತಿ ನಡೆದ ಕಾಲದಲ್ಲಿ ಶ್ರೀ ಬಾಬು ಜಗಜೀವನರಾಮ ಕೃಷಿ ಸಚಿವರಾಗಿ ಉದಾತ್ತ ಕೊಡುಗೆ ನೀಡಿ ಕೃಷಿ ವಿವಿಗಳ ಸ್ಥಾಪನೆ ಮತ್ತು ಕೃಷಿ ನೀತಿಗಳಿಗೆ ಉತ್ತೇಜನ ನೀಡಿದ್ದರು. ಆದರೆ ಇಂದು ಅಂತಹ ಸಹಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕಾಣುತ್ತಿಲ್ಲ. ಇಂದಿರಾ ಗಾಂಧಿ, ಚರಣ್ ಸಿಂಗ್, ಲಾಲ್ ಬಹದೂರ್ ಶಾಸ್ತ್ರಿ ಮುಂತಾದ ರಾಜಕಾರಣಿಗಳಿಗಿದ್ದ ಕೃಷಿ ಬಗೆಗಿನ ಆಸಕ್ತಿ ಮತ್ತು ಬದ್ಧತೆ ಇಂದಿನ ತಲೆಮಾರಿನ ರಾಜಕಾರಣಿಗಳಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ.

ರಾಜ್ಯದಲ್ಲಿ ಉತ್ತರ ಮತ್ತು ದಕ್ಷಿಣಕ್ಕೆ ಸೀಮಿತ ಎಂಬಂತೆ ಧಾರವಾಡ ಮತ್ತು ಬೆಂಗಳೂರು ಕೃಷಿ ವಿವಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು, ಆದರೆ 2004ರಿಂದೀಚೆಗೆ 6 ವಿವಿಗಳು ತಲೆ ಎತ್ತಿವೆ. ಕೃಷಿಯಿಂದ, ಪಶು ಮತ್ತು ತೋಟಗಾರಿಕಾ ವಿಜ್ಞಾನಗಳನ್ನು ಬೇರ್ಪಡಿಸಿ ಪ್ರತ್ಯೇಕ ವಿವಿಗಳನ್ನು ಮಾಡುವ ಜರೂರೇನಿತ್ತು? ದೂರದ ಊರಿನಿಂದ ಬರುವ ರೈತ ತನ್ನ ಬೆಳೆ ಸಮಸ್ಯೆ ನಿವಾರಿಸಿಕೊಳ್ಳಲು ಕೃಷಿ ವಿವಿಗೆ ಭೇಟಿ ನೀಡಿ ನಂತರ ತನ್ನ ತೋಟದ ಸಮಸ್ಯೆಗೆ ತೋಟಗಾರಿಕೆ ವಿವಿ ಹಾಗೂ ಜಾನುವಾರುಗಳ ಬಗೆಗೆ ಪಶು ವಿಜ್ಞಾನ ವಿವಿಗೆ ಅಲೆದಾಡುವ ಸ್ಥಿತಿ ತಂದಿದ್ದು ಇದೇ ಸರ್ಕಾರಗಳಲ್ಲದೆ ಮತ್ತ್ಯಾರೂ? ವಿವಿಗಳು ಹೆಚ್ಚಾದಂತೆ ತನ್ನ ನಿಷ್ಠಾವಂತ ಪ್ರಾಧ್ಯಾಪಕರನ್ನು ಹೊಸ ವಿವಿಯ ಕುಲಪತಿ ಅಥವಾ ಕುಲಸಚಿವರು ಅಥವಾ ಡೀನ್‍ಗಳನ್ನಾಗಿ ನೇಮಿಸಬಹುದೆಂಬ ಜನಪ್ರತಿನಿಧಿಗಳ ಒಳಮರ್ಮ ಎಲ್ಲರಿಗೂ ತಿಳಿದಿದೆ.

ಇಂದು ಕೃಷಿ ಇಲಾಖೆಗಳಲ್ಲಿ ಕೃಷಿ ಅಧಿಕಾರಿಗಳಿಂದ ಸಮರ್ಪಕವಾದ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆಗಳು ಕೇವಲ ಬೀಜ ಮತ್ತು ಗೊಬ್ಬರಗಳನ್ನು ವಿತರಿಸುವ ಕೇಂದ್ರಗಳಾಗಿವೆ. ಅಲ್ಲಿ ಸರಿಯಾಗಿ ನೇಮಕಾತಿ ಸಾಧ್ಯವಾಗದೆ, ಸಿಬ್ಬಂದಿ ಕೊರತೆಯಿಂದ ಹೊಲ ಗದ್ದೆಗಳಿಗೆ ಹೋಗಿ ರೈತರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿಲ್ಲ.

ಕೇಂದ್ರ ಸರ್ಕಾರದ ಉದ್ದೇಶಿತ ಭೂ ಮಸೂದೆ 2014 ಕಾಯ್ದೆಯಾಗಿ ಜಾರಿಯಾದರೆ ರೈತರ ಆತ್ಮಹತ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗೇ ಬಿ.ಟಿ. ತರಕಾರಿ ಮತ್ತಿತರ ಬೆಳೆಗಳಿಗೆ ಸಂಶೋಧನೆಗೆ ಕೋಟ್ಯಾಂತರ ದುಡ್ಡು ಖರ್ಚು ಮಾಡುವ ಸರ್ಕಾರವು ಅವುಗಳನ್ನು ಬಿಡುಗಡೆಗೊಳಿಸುವಾಗ ಮೀನಾಮೇಷ ಏಣಿಸಿ ಸುಮ್ಮನೆ ಕೂರುತ್ತದೆ. ಆದರೂ ಸಂಶೋಧನೆಗೆ ಹಣ ಬಿಡುಗಡೆ ಮಾಡುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟವಲ್ಲವೆ? ಹಿಂದೆ ಕೃಷಿ ವಿವಿಗಳಲ್ಲಿ ಸಹಾಯಕ ಸಂಶೋಧಕ, ವಿಸ್ತರಣ ಮಾರ್ಗದರ್ಶಕ, ಗ್ರಾಮ ಸೇವಕ, ಕ್ಷೇತ ರಕ್ಷಕಗಳೆಂಬ ಖಾಯಂ ಅಥವಾ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು. ಇವರ ಮುಖ್ಯ ಕೆಲಸವೆಂದರೆ ಕೃಷಿ ವಿವಿ ಮತ್ತು ರೈತ ಸಮುದಾಯದವರ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದರು, ಇದರಿಂದ ಪ್ರಯೋಗಾಲಯದಲ್ಲಿ ನಡೆಯುವ ಸಂಶೋಧನೆಗಳೂ ತ್ವರಿತವಾಗಿ ರೈತರ ಹೊಲಗಳಿಗೆ ತಲುಪುತಿದ್ದವು. ದಶಕಗಳ ಹಿಂದೆಯೆ ಈ ಹುದ್ದೆಗಳನ್ನು ಸರ್ಕಾರವು ಅನೂರ್ಜಿತಗೊಳಿಸಿಬಿಟ್ಟಿತ್ತು. ಇದರಿಂದ ಸಂಪರ್ಕದ ಕೊಂಡಿಯೇ ಕಳಚಿ ಬಿದ್ದಿತು.

ಕೃಷಿ ವಿವಿಗಳು ರೈತರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಬೋಧನೆ, ವಿಸ್ತರಣೆ, ಸಂಶೋಧನೆಗಳ ಮೂಲಕ ಕೃಷಿ ಬಿಕ್ಕಟ್ಟುಗಳನ್ನು ಬಗೆಹರಿಸುವ ದಾರಿಯಲ್ಲಿ ನಡೆಯುತ್ತಿವೆ. ಕೃಷಿ ಸಂಶೋಧನ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರಗಳು ಜಿಲ್ಲೆಗೊಂದು ತೆರೆದು ಸ್ಥಳೀಯ ರೈತರ ಸಬಲೀಕರಣದಲ್ಲಿ ತೊಡಗಿವೆ. ದಿನ ನಿತ್ಯ ನೂರಾರು ರೈತರು ಈ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನು ವಿಜ್ಞಾನಿಗಳ ಬಳಿ ಹಂಚಿಕೊಳ್ಳುತ್ತಿದ್ದಾರೆ. ವರ್ಷಕ್ಕೊಮ್ಮೆ ಕೃಷಿ ಮೇಳಗಳ ಮೂಲಕ ಲಕ್ಷಾಂತರ ರೈತರಿಗೆ ಹೊಸ ಕೃಷಿ ತಾಂತ್ರಿಕತೆಗಳನ್ನು ಪರಿಚಯಿಸಲಾಗುತ್ತಿದೆ. ರೈತರ ಸಂವಾದ, ಸಮ್ಮೇಳನಗಳು ಆಯೋಜನೆಯಲ್ಲಿ ಕೃಷಿ ಬಿಕ್ಕಟ್ಟುಗಳಿಗೆ ಉತ್ತರ ಹುಡುಕುವ ಸೇವೆಯಲ್ಲಿದೆ ಕೃಷಿ ವಿವಿಗಳು. ಕೃಷಿ ವಿವಿಗಳು, ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನಿಗಳು ರೈತರ ಏಳಿಗೆಗೆ ದುಡಿಯುತ್ತಿವೆ.

ಪ್ರಸ್ತುತ ಕೃಷಿ ವಿವಿಗಳ ಮುಂದೆ ಅನೇಕ ಸವಾಲುಗಳಿವೆ. ಇವುಗಳನ್ನು ಮೆಟ್ಟಿ ನಿಲ್ಲಲು ರೈತ ಸಂಘಟನೆಗಳು ನಮ್ಮ ಜೊತೆ ನಿಲ್ಲಬೇಕಿದೆ. ಕೃಷಿ ವಿವಿಗಳ ಜೊತೆ ಎಲ್ಲರೂ ಕೈ ಜೋಡಿಸಿ ಸರ್ಕಾರದಿಂದ ಮತ್ತಷ್ಟು ಸಹಕಾರವನ್ನು ಕೃಷಿ ವಿವಿಗಳಿಗೆ ದೊರಕಿಸಿಕೊಟ್ಟರೆ ರೈತರ ಬದುಕು ಹಸನಾಗಿಸುವ ವಿಜ್ಞಾನಿಗಳ ಧ್ಯೇಯ ಈಡೇರಿಕೆಯಾಗುವುದು.

  • ಡಾ.ಕೆ.ಟಿ. ವಿಜಯಕುಮಾರ್
    ಸಹಾಯಕ ಪ್ರಾಧ್ಯಾಪಕರು
    ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...