Homeಅಂಕಣಗಳುಮನ್ ಕಿ ಬಾತ್ ಬಿಟ್ಟು, ದಯವಿಟ್ಟು ಆಲಿಸಿ - ದೇವನೂರ ಮಹಾದೇವ

ಮನ್ ಕಿ ಬಾತ್ ಬಿಟ್ಟು, ದಯವಿಟ್ಟು ಆಲಿಸಿ – ದೇವನೂರ ಮಹಾದೇವ

ರಾಷ್ಟ್ರ ಎಂದರೆ- ಅಹಂ, ಪ್ರತಿಷ್ಠೆ. ದೇಶವೆಂದರೆ- ಜನರು. ಇನ್ನೂ ಸ್ಪಷ್ಟಪಡಿಸಬೇಕು ಎಂದರೆ, ರಾಷ್ಟ್ರವು ಪ್ರತಿಷ್ಠೆಯನ್ನು ಹಿಂಬಾಲಿಸುತ್ತದೆ. ಆದರೆ ದೇಶವು ಜನರ ಹಿತ, ಕಲ್ಯಾಣವನ್ನು ಹಿಂಬಾಲಿಸುತ್ತದೆ.

- Advertisement -
- Advertisement -

‘ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತಿದೆ. ಇದು ಒಂದು ಸೂಕ್ತಿಯೊ ಅಥವಾ ಜನ ಸಾಮಾನ್ಯರು ವ್ಯಾಪಾರದ ಚಹರೆ ನೋಡಿ ಈ ನುಡಿಗಟ್ಟನ್ನು ಚಾಲ್ತಿ ಮಾಡಿದರೋ ನನಗೆ ಗೊತ್ತಿಲ್ಲ. ಜಾಗತೀಕರಣದ ಅನಂತರ ವ್ಯಾಪಾರವು ದ್ರೋಹವೇ ಆಗಿ ಕುಪ್ಪಳಿಸುತ್ತಿದೆ. ವ್ಯಾಪಾರಕ್ಕೆ ಈಗ ಬುದ್ಧಿಯೂ ಕೂಡಿಕೊಂಡು ಇದೇ ಜ್ಞಾನ ಅನ್ನಿಸಿಕೊಂಡುಬಿಟ್ಟಿದೆ. ಈ ಎರಡೂ ಸೇರಿ ಭೂಮಿಗೇನೆ ಸುಲಿಗೆ ಬಲೆ ಹೆಣೆಯುತ್ತಿವೆ. ಕುತಂತ್ರವೇ ತಂತ್ರಗಾರಿಕೆಯಾಗಿದೆ. ಇದನ್ನು ನಿರ್ವಹಿಸುವವರು ಚಾಣಾಕ್ಷ ಅನ್ನಿಸಿಕೊಳ್ಳುತ್ತಿದ್ದಾರೆ. ಇದು ಘೋರ ದುರಂತ. ಹಾಗಾಗೇ ಇಂದು ಆಳ್ವಿಕೆಯೇ ವ್ಯಾಪಾರದ ಕೈಯಲ್ಲಿದೆ. ದ್ರೋಹ ಮತ್ತು ಕುತಂತ್ರಗಳು ಆಳ್ವಿಕೆ ನಡೆಸುತ್ತಿವೆ. ಜಾಗತೀಕರಣದ ಜಗತ್ತಿನಲ್ಲಿ ವ್ಯಾಪಾರವೇ ಯುದ್ಧವಾಗಿದೆ.

ಇಂಥ ವಿಷಮ ಪರಿಸ್ಥಿತಿಯಲ್ಲಿ- ಭಾರತವೂ 16 ದೇಶಗಳ ಮುಕ್ತ ವ್ಯಾಪಾರಕ್ಕೆ ಸಹಿ ಮಾಡಲು ಹೊರಟಿದೆ. ಇದು ವಿವೇಕ ವಿವೇಚನೆ ಇಲ್ಲದವರು ಮಾಡುವ ಕೆಲಸ. ಯಾಕೆಂದರೆ ಇದರಿಂದಾಗಿ ಈಗಾಗಲೇ ಕುಸಿಯುತ್ತಿರುವ ಉದ್ಯೋಗಗಳು ಮತ್ತೂ ಕುಸಿದು ಹೋಗುತ್ತವೆ. ದಯವಿಟ್ಟು ಪ್ರಧಾನಮಂತ್ರಿಗಳೇ, ದಡ್ಡನಿಗೆ ಧೈರ್ಯ ಜಾಸ್ತಿ ಎಂಬಂತೆ ದುಡುಕಿ ಸಹಿ ಮಾಡಬೇಡಿ. ನಮ್ಮ ಮಾತು ನೀವು ಕೇಳದಿದ್ದರೂ ಪರವಾಗಿಲ್ಲ. ಕನಿಷ್ಠ ಆರ್‌ಎಸ್‍ಎಸ್‍ನ ಸೋದರ ಸಂಘಟನೆಯಾದ ಸ್ವದೇಶಿ ಜಾಗರಣಾ ಮಂಚ್ ಸಂಘಟನೆಯು, ಹೈನುಗಾರಿಕೆ ಉಲ್ಲೇಖಿಸಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ರುಜು ಮಾಡುವ ಬಗ್ಗೆ ಹೇಳುವ ಮಾತುಗಳನ್ನಾದರೂ, ನಿಮ್ಮ ಮನ್ ಕಿ ಬಾತ್ ಬಿಟ್ಟು, ಆಲಿಸಿ.

ಸ್ವದೇಶಿ ಜಾಗರಣಾ ಮಂಚ್ ಹೇಳುತ್ತದೆ- “ಇದು ಕೇಂದ್ರ ಸರ್ಕಾರದ ಅತ್ಯಂತ ಆತ್ಮಹತ್ಯಾತ್ಮಕ ನಡೆ, ಸ್ವಾತಂತ್ರ್ಯ ಬಂದಾಗಲಿಂದಲೂ ಇಂಥದೊಂದು ಆತ್ಮಹತ್ಯಾತ್ಮಕ ನಡೆ ಸಂಭವಿಸಿರಲಿಲ್ಲ” ಎಂದು. ಇದೇ ಮಾತುಗಳನ್ನು ಬೇರೆಯವರು ಹೇಳಿದ್ದರೆ ನೀವು ಮತ್ತು ನಿಮ್ಮ ಹಿಂಬಾಲಕರು ಹೇಳುವವರನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟಿ ಥರಾವರಿ ಹಿಂಸೆ ಮಾಡುತ್ತಿದ್ದಿರಿ. ಈಗ? ಆರ್‌ಎಸ್‍ಎಸ್‍ನ ಸೋದರ ಸಂಘಟನೆ ಸ್ವದೇಶಿ ಜಾಗರಣಾ ಮಂಚ್ ಹೇಳುತ್ತಿದೆ. ಅವರನ್ನು ದೇಶದ್ರೋಹಿಗಳೆಂದು ಕರೆಯುವ ಧೈರ್ಯವನ್ನು ನೀವು ಮಾಡಲಾರಿರಿ ಎಂಬ ನಂಬಿಕೆ ನನಗಿದೆ. ನೆನಪಿಟ್ಟುಕೊಳ್ಳಿ, ಬಡತನ ನಿರ್ಮೂಲನೆ ಎಂದರೆ ಬಡವರನ್ನು ಸಾವಿನ ದವಡೆಗೆ ನೂಕುವುದಲ್ಲ. ಇಂದು ದುಡಿಯುವ ವರ್ಗ ಎಂದರೆ ಉಂಡು ಎಸೆಯುವ ಬಾಳೆ ಎಲೆ ಆಗಿಬಿಟ್ಟಿದ್ದಾರೆ.

ಕೊನೆಗೊಂದು ಮಾತು. ರಾಷ್ಟ್ರಕ್ಕೂ ದೇಶಕ್ಕೂ ಏನು ವ್ಯತ್ಯಾಸ ಎಂದು ಯಾರೋ ಕೇಳಿದರು. ಏನು ಹೇಳುವುದು? ಸರಳವಾಗಿ, ರಾಷ್ಟ್ರ ಎಂದರೆ- ಅಹಂ, ಪ್ರತಿಷ್ಠೆ. ದೇಶವೆಂದರೆ- ಜನರು. ಇನ್ನೂ ಸ್ಪಷ್ಟಪಡಿಸಬೇಕು ಎಂದರೆ, ರಾಷ್ಟ್ರವು ಪ್ರತಿಷ್ಠೆಯನ್ನು ಹಿಂಬಾಲಿಸುತ್ತದೆ. ಆದರೆ ದೇಶವು ಜನರ ಹಿತ, ಕಲ್ಯಾಣವನ್ನು ಹಿಂಬಾಲಿಸುತ್ತದೆ. ಅಥವಾ ಹೀಗೂ ಹೇಳಬಹುದು. ರಾಷ್ಟ್ರ ಎಂದರೆ- ಜುಟ್ಟಿಗೆ ಮಲ್ಲಿಗೆ ಹೂ. ದೇಶ ಎಂದರೆ ಹೊಟ್ಟೆಗೆ ಹಿಟ್ಟು. ಇದುವರೆಗೂ ಜುಟ್ಟಿಗೆ ಮಲ್ಲಿಗೆ ಹೂ ಸಿಕ್ಕಿಸಿಕೊಂಡು ಓಡಾಡಿದ್ದು ಸಾಕು ಎಂದು ತಮ್ಮಲ್ಲಿ ವಿನಂತಿಸುವೆ.

ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿದೇಶಿ ವಸ್ತ್ರ ಸುಡುವ ಆಂದೋಲನದಿಂದಾಗಿ ಇಂಗ್ಲೆಂಡಿನ ಲ್ಯಾಂಕಾಶೈರ್‍ನ ಗಿರಣಿ ಮುಚ್ಚುವಂತಾಗಿ ಅಲ್ಲಿನ ನಿರುದ್ಯೋಗಿ ಕಾರ್ಮಿಕರು ಗಾಂಧಿಯೊಡನೆ ಅವರ ಬವಣೆ ಹೇಳಿಕೊಂಡಾಗ ಗಾಂಧಿ ಹೇಳುತ್ತಾರೆ- “ಭಾರತದಲ್ಲಿ ಉದ್ಯೋಗವಿಲ್ಲದ ಲಕ್ಷಾಂತರ ಅರೆಹೊಟ್ಟೆಯ ಜನರ ಜೀವ (ಹಸಿವಿನಿಂದ) ಕೊನೆಗೊಂಡರೆ ಉಳಿದವರು ಬದುಕಬಹುದು ಅನ್ನುವ ಗುಂಪೂ ಇದೆ”. ಈ ಗುಂಪಿಗೆ ನೀವು, ನಿಮ್ಮ ಪಕ್ಷ, ನಿಮ್ಮ ಸಂಘ ಮತ್ತು ಅದರ ಪರಿವಾರ ಸೇರ್ಪಡೆಯಾಗದಿರಲಿ ಎಂದು ಆಶಿಸುತ್ತೇನೆ. ಈಗ ಭಾರತಕ್ಕೆ ಬೇಕಾಗಿರುವುದು- ಗೌರವಯುತ ಉದ್ಯೋಗ ಮತ್ತು ಸ್ವಾವಲಂಬನೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...