Homeಮುಖಪುಟಕಲಾವಿದ ಸೈಯದ್‌, ಸತ್ಯಜಿತ್‌ ಆದ ಕತೆ; ಅಗಲಿದ ಹಿರಿಯ ನಟನಿಗೆ ನಮನ

ಕಲಾವಿದ ಸೈಯದ್‌, ಸತ್ಯಜಿತ್‌ ಆದ ಕತೆ; ಅಗಲಿದ ಹಿರಿಯ ನಟನಿಗೆ ನಮನ

- Advertisement -
- Advertisement -

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಸತ್ಯಜಿತ್‌ ಅವರು ಭಾನುವಾರ ಮುಂಜಾನೆ ನಿಧನರಾಗಿದ್ದು, ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡು ಡಿಸ್ಚಾರ್ಜ್‌ ಆಗಿದ್ದ ಅವರ ಆರೋಗ್ಯ ಏರುಪೇರಾಗಿದ್ದರಿಂದ ಮತ್ತೆ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿ ಕೊನೆಯುಸಿರೆಳೆದಿದ್ದಾರೆ.

2016ರಲ್ಲಿ ಗ್ಯಾಂಗ್ರೀನ್‌ಗೆ ತುತ್ತಾಗಿದ್ದ ಅವರು ಎಡಗಾಲನ್ನು ಕಳೆದುಕೊಂಡಿದ್ದರು. ಆನಂತರವೂ ನಟಿಸಿದ್ದ ಅವರು, ಈವರೆಗೆ ಸುಮಾರು 600 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಖಳನಾಯಕ ಪಾತ್ರಗಳ ಮೂಲಕ ಕನ್ನಡ ಸಿನಿ ರಸಿಕರ ಮನಸೂರೆಗೊಂಡಿದ್ದಾರೆ.

ಇದನ್ನೂ ಓದಿರಿ: ನಿರೂಪಕ ‘ಅಜಿತ್ ಹನುಮಕ್ಕನವರ್‌’ಗೆ ನಟಿ ಸಂಜನಾ ಸಭ್ಯತೆಯ ಪಾಠ; ವಿಡಿಯೊ ವೈರಲ್

ಸತ್ಯಜಿತ್‌ ಇತ್ತೀಚಿನ ವರ್ಷಗಳಿಂದ ಅನಾರೋಗ್ಯದಿಂದ ತೀವ್ರ ಬಳಲಿದ್ದರು. ಅಲ್ಲದೇ ಇವರ ಪುತ್ರಿ, “ನಮ್ಮ ತಂದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ” ಎಂದು ಪೊಲೀಸರಿಗೆ ದೂರು ನೀಡಿದ್ದರು. ನಂತರ ಸತ್ಯಜಿತ್‌ ಇದಕ್ಕೆ ಸ್ಪಷ್ಟನೆ ನೀಡಿದ್ದರು.

ಸತ್ಯಜೀತ್ ಅವರಿಗೆ ಕೆಲ ದಿನಗಳ ಹಿಂದೆ ಅವರಿಗೆ ಜಾಂಡೀಸ್ ಆಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಹೃದಯಾಘಾತವೂ ಆಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದ ಬಳಿಕ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟು, ಭಾನುವಾರ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗ್ಯಾಂಗ್ರಿನ್ ಬಲಗಾಲಿಗೂ  ಹರಡಲಾರಂಭಿಸಿತ್ತು.

ವಿಶಿಷ್ಟ ಧ್ವನಿಯ ಮೂಲಕ ಗಮನ ಕನ್ನಡ ಚಿತ್ರಪ್ರೇಮಿಗಳ ಮನದಲ್ಲಿ ನೆಲಸಿರುವ ಸತ್ಯಜಿತ್‌, ಖಳನಾಯಕ ಹಾಗೂ ಪೋಷಕ ಪಾತ್ರಗಳಿಗೆ ಜೀವ ತುಂಬಿದವರು. ‘ಅಂಕುಶ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ​ಸತ್ಯಜಿತ್​ ಅವರು 1995ರಲ್ಲಿ ಪುಟ್ನಂಜ ಸಿನಿಮಾದಲ್ಲಿ, 1988ರಲ್ಲಿ ಶಿವ ಮೆಚ್ಚಿದ ಕಣ್ಣಪ್ಪ, 1992ರಲ್ಲಿ ಚೈತ್ರಾದ ಪ್ರೇಮಾಂಜಲಿ ಸಿನಿಮಾದಲ್ಲಿ ಅಭಿನಯಿಸಿ ನಟನೆಯಲ್ಲಿ ಗಮನ ಸೆಳೆದರು. 2004ರಲ್ಲಿ ತೆರೆಕಂಡ ‘ಆಪ್ತಮಿತ್ರ’ ಸಿನಿಮಾದಲ್ಲಿನ ಅವರ ಅಭಿನಯ ಅನನ್ಯವಾದದ್ದು.

ಇದನ್ನೂ ಓದಿರಿ: ಡ್ರಗ್ಸ್ ಕೇಸ್‌ನಲ್ಲಿ ಬಿಜೆಪಿ ಕೈವಾಡವಿದೆ ಎಂದು ಕಿಡಿ ಕಾರಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್

‘ಅರುಣ ರಾಗ’, ‘ಅಂತಿಮ ತೀರ್ಪು’, ‘ರಣರಂಗ’, ‘ನಮ್ಮೂರ ರಾಜ’, ‘ನ್ಯಾಯಕ್ಕಾಗಿ ನಾನು’, ‘ಯುದ್ಧಕಾಂಡ’, ‘ಇಂದ್ರಜಿತ್’, ‘ನಮ್ಮೂರ ಹಮ್ಮೀರ’, ‘ಪೊಲೀಸ್ ಲಾಕಪ್’, ‘ಮನೆದೇವ್ರು’, ‘ಮಂಡ್ಯದ ಗಂಡು’, ‘ಪೊಲೀಸ್ ಸ್ಟೋರಿ’, ‘ಸರ್ಕಲ್ ಇನ್ಸ್‌ಪೆಕ್ಟರ್’, ‘ಪಟೇಲ’, ‘ದುರ್ಗದ ಹುಲಿ’, ‘ಅಪ್ಪು’, ‘ಧಮ್’, ‘ಅಭಿ’, ‘ಅರಸು’, ‘ಇಂದ್ರ’, ‘ಭಾಗ್ಯದ ಬಳೇಗಾರ’, ‘ಕಲ್ಪನಾ’, ‘ಗಾಡ್ ಫಾದರ್’, ‘ಲಕ್ಕಿ’, ‘ಉಪ್ಪಿ 2’, ‘ಮಾಣಿಕ್ಯ’, ‘ರನ್ನ’, ‘ರಣವಿಕ್ರಮ’, ‘ಮೈತ್ರಿ’ ಮೊದಲಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು.

ಅಂದಹಾಗೆ ಸತ್ಯಜಿತ್‌ ಅವರ ನಿಜವಾದ ಹೆಸರು ನಿಜಾಮುದ್ದೀನ್‌ ಸೈಯದ್‌. ಒಬ್ಬ ಸಾಮಾನ್ಯ ವ್ಯಕ್ತಿ ‘ಸತ್ಯಜಿತ್‌’ ಆಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಗಮನಾರ್ಹ. ಹುಬ್ಬಳ್ಳಿಯಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಬಸ್‌ ಡ್ರೈವರ್‌ ಆಗಿದ್ದ ಸೈಯದ್‌, ಇಲ್ಲಿನ ಹವ್ಯಾಸ ರಂಗತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಾಟಕ ಪ್ರದರ್ಶನಕ್ಕಾಗಿ ಮುಂಬೈಗೆ ಹೋಗಿದ್ದಾಗ ತಂತ್ರಜ್ಞರು ಸೈಯದ್‌ರನ್ನು ಗುರುತಿಸಿ, ಚಿತ್ರರಂಗಕ್ಕೆ ಕರೆತಂದರು.

ಮೇರು ನಟ ನಾನಾ ಪಾಟೇಕರ್‌ ಅವರು ನಾಯಕನಟರಾಗಿ ಅಭಿನಯಿಸಿದ್ದ ‘ಅಂಕುಶ್‌’ ಹಿಂದಿ ಸಿನಿಮಾದಲ್ಲಿ ಸೈಯದ್ ಅಭಿನಯಿಸಿ ಚಿತ್ರಂಗಕ್ಕೆ ಕಾಲಿಟ್ಟರು. ಅಂಕುಶ್‌ ಸಿನಿಮಾದ ಟೈಟಲ್‌ ಕಾರ್ಡ್‌‌ನಲ್ಲೇ ‘ಸತ್ಯಜಿತ್‌’ ಎಂದು ಕರೆಯಲಾಯಿತು. ಮುಂದೆ ಸತ್ಯಜಿತ್‌ ಎಂದೇ ಗುರುತಿಸಿಕೊಂಡ ಸೈಯದ್ ಕನ್ನಡ ಚಿತ್ರರಂಗದಲ್ಲಿ ಮನೆಮಾತಾದರು. ಹಿರಿಯ ನಟ ಸತ್ಯಜಿತ್‌‌ ನಿಧನಕ್ಕೆ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಹಲವು ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿರಿ: ಪುರುಷ ಪ್ರಧಾನ ನೈತಿಕತೆ ಪ್ರಶ್ನಿಸಿ ನಟಿ ಸಮಂತಾ ಪೋಸ್ಟ್‌; ಆರೋಪಗಳಿಗೆ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...