ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಅಸ್ಸಾಂನಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಆಳವಾದ ಕಂದಕಕ್ಕೆ ಉರುಳಿದ್ದು, 21 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಲ್ಲಿಯವರೆಗೆ 18 ಶವಗಳನ್ನು ಹೊರತೆಗೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಡಿಸೆಂಬರ್ 8ನೇ ತಾರೀಖಿನ ರಾತ್ರಿ ಅರುಣಾಚಲ ಪ್ರದೇಶದ ಹಯುಲಿಯಾಂಗ್-ಚಾಗಲಗಂ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಸೇನೆ ಕಾರ್ಯಾಚರಣೆಯಲ್ಲಿ ಇಂದು 18 ಜನರ ಶವಗಳನ್ನು ಪತ್ತೆ ಮಾಡಲಾಗಿದೆ.
ವಾಹನದಲ್ಲಿ 22 ಕಾರ್ಮಿಕರಿದ್ದು, ಅಂಜಾವ್ ಜಿಲ್ಲೆಯ ಹಯುಲಿಯಾಂಗ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗುವಾಹಟಿಯಲ್ಲಿ ಗುರುವಾರ ರಕ್ಷಣಾ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಗಾಯಗೊಂಡ ಕೆಲಸಗಾರನೊಬ್ಬ ಸಹಾಯ ಕೋರಿ ಅವರನ್ನು ತಲುಪಿದ ನಂತರ, ಸ್ಪಿಯರ್ ಕಾರ್ಪ್ಸ್ ಬುಧವಾರ (ಡಿಸೆಂಬರ್ 10) ಶೋಧ ಮತ್ತು ರಕ್ಷಣಾ ಪ್ರಯತ್ನಗಳಲ್ಲಿ ತೊಡಗಿಕೊಂಡಿತು ಎಂದು ತಿಳಿಸಿದೆ.
“ಚಾಗಲಗಂನಿಂದ ಸರಿಸುಮಾರು 12 ಕಿ.ಮೀ ದೂರದಲ್ಲಿರುವ ಅಪಘಾತ ಸ್ಥಳವು ಸೀಮಿತ ಸಂಪರ್ಕದೊಂದಿಗೆ ಕಠಿಣ ಭೂಪ್ರದೇಶದಲ್ಲಿದೆ ಮತ್ತು ಬದುಕುಳಿದವರು ಬರುವವರೆಗೂ ಯಾವುದೇ ಸ್ಥಳೀಯ ಸಂಸ್ಥೆ, ಗುತ್ತಿಗೆದಾರ ಅಥವಾ ನಾಗರಿಕ ಪ್ರತಿನಿಧಿಯಿಂದ ವರದಿ ಮಾಡಲಾಗಿಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಕಾರ್ಮಿಕರು ಪೂರ್ವ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಗೆಲಾಪುಖುರಿ ಚಹಾ ತೋಟದಲ್ಲಿ ದುಡಿಯುತ್ತಿದ್ದ ಕಾರ್ಮಿಕರಾಗಿದ್ದಾರೆ. ಗುರುವಾರ, ಸ್ಪಿಯರ್ ಕಾರ್ಪ್ಸ್ ಹಲವಾರು ಶೋಧ ಮತ್ತು ರಕ್ಷಣಾ ತಂಡಗಳು, ವೈದ್ಯಕೀಯ ತಂಡಗಳು, ಸ್ಥಳೀಯ ಪೊಲೀಸರು, ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಹಯುಲಿಯಾಂಗ್‌ನ ಅಧಿಕಾರಿಗಳನ್ನು ನೇಮಿಸಲಾಗಿದ್ದು, “ಬೆಳಿಗ್ಗೆ 11.55 ಕ್ಕೆ, ನಾಲ್ಕು ಗಂಟೆಗಳ ತೀವ್ರ ಶೋಧದ ನಂತರ, ಟ್ರಕ್ ಅನ್ನು 200 ಮೀಟರ್ ಆಳ ಕಂದಕದಲ್ಲಿ ಪತ್ತೆ ಹಚ್ಚಲಾಗಿದೆ.
ಈ ವೇಳೆ ಹದಿನೆಂಟು ಶವಗಳನ್ನು ಹುಡುಕಲಾಗಿದ್ದು, ಹಗ್ಗದ ಮೂಲಕ ಅವುಗಳನ್ನು ಮೇಲೆ ತರಲಾಗುತ್ತಿದೆ. ಸಾವು ನೋವುಗಳ ನಡುವೆ ಮೃತದೇಹಗಳನ್ನು ಸ್ಥಳಾಂತರಿಸಲು ಜಿಲ್ಲಾ ವೈದ್ಯಕೀಯ ಅಧಿಕಾರಿಯನ್ನು ಕರೆತರಲಾಗಿದೆ ಎಂದು ಸೇನೆಯ ಹೇಳಿಕೆ ತಿಳಿಸಲಾಗಿದೆ.


