ಖ್ಯಾತ ಲೇಖಕಿ ಹಾಗೂ ಹೋರಾಟಗಾರ್ತಿ ಅರುಂಧತಿ ರಾಯ್ ಅವರು ತಮ್ಮ ‘ಪೆನ್ ಪಿಂಟರ್’ (PEN Pinter) ಪ್ರಶಸ್ತಿಯ ಹಣವನ್ನು ಪ್ಯಾಲೆಸ್ತೀನ್ ಮಕ್ಕಳ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಪ್ರಶಸ್ತಿಗೆ ತನ್ನ ಹೆಸರು ಘೋಷಣೆಯಾಗುತ್ತಿದ್ದಂತೆ ಅರುಂಧತಿ ರಾಯ್ ಬಹುಮಾನದ ಮೊತ್ತವನ್ನು ಪ್ಯಾಲೆಸ್ತೀನ್ ಮಕ್ಕಳಿಗಾಗಿ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಬ್ರಿಟಿಷ್-ಈಜಿಪ್ಟ್ ಬರಹಗಾರ ಮತ್ತು ಹೋರಾಟಗಾರ ಅಲಾ ಅಬ್ದುಲ್ ಫತ್ತಾಹ್ ಅವರನ್ನು ‘ರೈಟರ್ ಆಫ್ ಕರೇಜ್’ (ಧೈರ್ಯದ ಬರಹಗಾರ) ಎಂದು ಹೆಸರಿಸಿದ್ದಾರೆ. ಈಜಿಪ್ಟ್‌ನಲ್ಲಿ ಸೆರೆವಾಸ ಅನುಭವಿಸುತ್ತಿರುವ ಅಬ್ದುಲ್ ಫತ್ತಾಹ್ ಅವರ ಧೈರ್ಯವನ್ನು ಗುರುತಿಸಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಅಕ್ಟೋಬರ್ 10ರಂದು ಲಂಡನ್‌ನ ಬ್ರಿಟಿಷ್ ಲೈಬ್ರರಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ‘ಪ್ರಶಸ್ತಿಯ ಮಹತ್ವ ಮತ್ತು ಬರಹಗಾರರ ಪಾತ್ರದ ಬಗ್ಗೆ ಅರುಂಧತಿ ರಾಯ್ ಮಾತನಾಡಿದರು. ಅಲಾ ಅಬ್ದುಲ್ ಫತ್ತಾಹ್ ಅವರನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ರಾಯ್, “ನೀವು ಈ ಕೋಣೆಯಲ್ಲಿ ನಮ್ಮೊಂದಿಗೆ ಇದ್ದೀರಿ. ನೀವು ಇಲ್ಲಿಯ ಅತ್ಯಂತ ಪ್ರಮುಖ ವ್ಯಕ್ತಿ” ಎಂದರು. ಅಬ್ದುಲ್ ಫತ್ತಾಹ್ ಅವರ ವಾಕ್ಯಗಳನ್ನು ಉಲ್ಲೇಖಿಸಿದ ರಾಯ್ ಜಗತ್ತಿನ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಅಬ್ದುಲ್ ಫತ್ತಾಹ್ ಅವರ ಉತ್ಸಾಹ ಮತ್ತು ಬರಹಗಳಿಗೆ ಗೌರವ ಸಲ್ಲಿಸಿದ ರಾಯ್, ಇದು ಫತ್ತಾಹ್ ಅವರ ‘ಅನ್ಯಾಯದ ಸೆರೆವಾಸದ ಬಗೆಗಿನ ಅತಿ ಮಹತ್ವದ ಜಾಗೃತಿ” ಎಂದರು.
ಬ್ರಿಟಿಷ್-ಈಜಿಪ್ಟಿನ ಬರಹಗಾರ, ಸಾಫ್ಟ್‌ವೇರ್ ಡೆವಲಪರ್ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಅಲಾ ಅಬ್ದುಲ್ ಫತ್ತಾಹ್ ಅವರು ಈಜಿಪ್ಟ್ ಜೈಲಿನಲ್ಲಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಅವರಿಗೆ ಜೈಲು ಶಿಕ್ಷೆ ಪೂರ್ಣವಾದರೂ ಇನ್ನು ಈಜಿಪ್ಟ್ ಜೈಲಿನಲ್ಲಿದ್ದಾರೆ.
ರಾಯ್ ತನ್ನ ಭಾಷಣದಲ್ಲಿ ಜಾಗತಿಕವಾಗಿ ನಡೆಯುತ್ತಿರುವ ಅನ್ಯಾಯದ ಗಡಿ ವಿವಾದಗಳು, ಜಾಗತಿಕ, ವಿಶೇಷವಾಗಿ ಭಾರತದ ರಾಜಕೀಯ ಕೈದಿಗಳ ಪರಿಸ್ಥಿತಿಯ ಬಗ್ಗೆ ಒತ್ತಿ ಹೇಳಿದರು. ತನ್ನ ಭಾಷಣದಲ್ಲಿ ಭಾರತ ಜೈಲುಗಳಲ್ಲಿ ಬಂಧಿಯಾಗಿರುವ ತನ್ನ ಸ್ನೇಹಿತರು ಹಾಗೂ ಹೋರಾಟಗಾರರಾದ ಉಮರ್ ಖಾಲಿದ್, ಗುಲ್ಫಿಶಾ ಫಾತಿಮಾ, ಖುರ್ರಮ್ ಫರ್ವೇಝ್ ಸೇರಿದಂತೆ ಹಲವರನ್ನು ನೆನಪಿಸಿದರು. ಅನ್ಯಾಯದ ಬಂಧನಗಳ ಕುರಿತು ಅವರು ಅತಂಕ ವ್ಯಕ್ತಪಡಿಸಿದರು.
ಪೆನ್ ಪಿಂಟರ್ ಪ್ರಶಸ್ತಿಯ ಕುರಿತು ಮಾತನಾಡಿದ ರಾಯ್ ಅವರು, ಹೆರಾಲ್ಡ್ ಪಿಂಟರ್ ಅವರು ‘ಅಚಲವಾದ ಧೈರ್ಯ’ದ ಕಲ್ಪನೆಯೊಂದಿಗೆ ಹೇಗೆ ಗುರುತಿಸಿಕೊಂಡರು ಎಂಬುವುದನ್ನು ವಿವರಿಸಿದರು.
ತನ್ನ ಭಾಷಣದ ಕೊನೆಯ ಭಾಗದಲ್ಲಿ ಗಾಝಾ ಮತ್ತು ಲೆಬನಾನ್ ಮೇಲಿನ ಇಸ್ರೇಲ್ ಆಕ್ರಮಣವನ್ನು ಉಲ್ಲೇಖಿಸಿದ ರಾಯ್, ಇಸ್ರೇಲ್‌ನ ಮಿಲಿಟರಿ ಕ್ರಮಗಳ ವಿರುದ್ದ ಕಿಡಿಕಾರಿದರು. ಇಸ್ರೇಲ್ ಮತ್ತು ಅದರ ಮಿತ್ರರಾಷ್ಟ್ರಗಳು ನರಮೇಧ ನಡೆಸುತ್ತಿವೆ ಎಂದರು. ಇಸ್ರೇಲ್‌ಗೆ ಯುಎಸ್ ಸರ್ಕಾರದ ಬೆಂಬಲವನ್ನು ಅವರು ಖಂಡಿಸಿದರು.
ಅಕ್ಟೋಬರ್ 7, 2023ರಿಂದ, ಇಸ್ರೇಲ್ ಗಾಝಾದಲ್ಲಿ ಸಾವಿರಾರು ಜನರನ್ನು ಕೊಂದಿದೆ. ಅದರ ಬಹುಪಾಲು ಜನರನ್ನು ಸ್ಥಳಾಂತರಿಸಿದೆ. ಈ ಕೃತ್ಯಗಳು ಕೇವಲ ಆತ್ಮರಕ್ಷಣೆಯಲ್ಲ, ಬದಲಾಗಿ ಪ್ಯಾಲೆಸ್ತೀನ್ ಪ್ರದೇಶದ ಮೇಲೆ ಇಸ್ರೇಲ್‌ನ ಆಕ್ರಮಣವನ್ನು ಗಟ್ಟಿಗೊಳಿಸುವ ಮತ್ತು ಅದರ ವರ್ಣಭೇದ ನೀತಿಯನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿರುವ ಆಕ್ರಮಣಕಾರಿ ಯುದ್ಧದ ಲೆಕ್ಕಾಚಾರವಾಗಿದೆ ಎಂದು ರಾಯ್ ಒತ್ತಿ ಹೇಳಿದರು.
ಇದನ್ನೂ ಓದಿ : ಭಾರತದಲ್ಲಿ ಗಂಭೀರ ಹಸಿವು | 127 ದೇಶಗಳಲ್ಲಿ 105 ನೇ ಸ್ಥಾನ!


