ಶನಿವಾರ ಸಂಜೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬ ನೀರು ಎರಚಿ ದಾಳಿಗೆ ಪ್ರಯತ್ನಿಸಿದ ಘಟನೆ ನಡೆದಿದೆ. ವ್ಯಕ್ತಿಯನ್ನು ತಕ್ಷಣವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ವ್ಯಕ್ತಿಯು ಕೇಜ್ರಿವಾಲ್ ಮೇಲೆ ನೀರು ಎರಚಿರುವುದು ದಾಖಲಾಗಿದೆ. ಆರೋಪಿಯನ್ನು ಖಾನ್ಪುರ್ ಡಿಪೋದ ಬಸ್ ಮಾರ್ಷಲ್ ಅಶೋಕ್ ಝಾ ಎಂದು ಗುರುತಿಸಲಾಗಿದೆ.
ರಾಷ್ಟ್ರ ರಾಜಧಾನಿಯ ಶೇಖ್ ಸರಾಯ್ ಪ್ರದೇಶದಲ್ಲಿ ಕೇಜ್ರಿವಾಲ್ ಅವರು ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದಾಗ ಕೇಜ್ರಿವಾಲ್ ಮತ್ತು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು ಕಿರಿದಾದ ಹಾದಿಯಲ್ಲಿ ನಡೆದು ಜನರಿಗೆ ಶುಭಾಶಯ ಕೋರುತ್ತಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಜನಸಂದಣಿ ನಿಯಂತ್ರಣಕ್ಕಾಗಿ ಸರಿಯಾದ ಪೋಲೀಸ್ ನಿಯೋಜನೆಯ ಹೊರತಾಗಿಯೂ, ಸಂಜೆ 5.50 ರ ಸುಮಾರಿಗೆ, ಖಾನ್ಪುರ್ ಡಿಪೋದ ಬಸ್ ಮಾರ್ಷಲ್ ಅಶೋಕ್ ಝಾ ಅವರು ಕೇಜ್ರಿವಾಲ್ ಮೇಲೆ ನೀರು ಎರಚಲು ಪ್ರಯತ್ನಿಸಿದರು. ಸಮೀಪದಲ್ಲಿದ್ದ ಪೊಲೀಸರು ಝಾ ಅವರನ್ನು ಬಂಧಿಸಿದ್ದರಿಂದ ಅವರ ಪ್ರಯತ್ನವನ್ನು ತಕ್ಷಣವೇ ವಿಫಲಗೊಳಿಸಲಾಯಿತು” ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅಂಕಿತ್ ಚೌಹಾನ್ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಈ ಕೃತ್ಯದ ಹಿಂದಿನ ಉದ್ದೇಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಚೌಹಾಣ್ ಹೇಳಿದ್ದಾರೆ. ಅರಂಭದಲ್ಲಿ ಕೇಜ್ರಿವಾಲ್ ಅವರ ಮೇಲೆ ‘ದ್ರವ’ ಎರಚಲಾಗಿದೆ ಎಂದು ವರದಿಯಾಗಿತ್ತು. ನಂತರ ಎರಚಿದ್ದು ನೀರು ಎಂದು ಸ್ಪಷ್ಟಪಡಿಲಾಗಿದೆ ಎಂದು ವರದಿ ಉಲ್ಲೇಖಿಸಿವೆ.
#WATCH | A person tried to throw a liquid on former Delhi CM and AAP National Convenor Arvind Kejriwal during his padyatra in Delhi's Greater Kailash area.
The person was later held by his security staff. pic.twitter.com/9c9MhzLEzj
— ANI (@ANI) November 30, 2024
ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಮೇಲೆ ದಾಳಿ ನಡೆಸಿದ ವ್ಯಕ್ತಿ ಬಿಜೆಪಿಯೊಂದಿಗೆ ನಂಟು ಹೊಂದಿದ್ದಾನೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
“ಬಿಜೆಪಿ ನಾಯಕರು ಎಲ್ಲಾ ರಾಜ್ಯಗಳಲ್ಲಿ ರ‍್ಯಾಲಿಗಳನ್ನು ನಡೆಸುತ್ತಾರೆ, ಆದರೆ ಅವರು ಎಂದಿಗೂ ದಾಳಿಗೆ ಒಳಗಾಗಿಲ್ಲ… ಅರವಿಂದ್ ಕೇಜ್ರಿವಾಲ್ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ… ನಂಗ್ಲೋಯ್‌ನಲ್ಲಿ ಬಿಜೆಪಿ ಅವರ ಮೇಲೆ ಹಲ್ಲೆ ನಡೆಸಿದೆ. ಛತ್ತರ್‌ಪುರದಲ್ಲಿ ಅವರ ಮೇಲೆ ದಾಳಿ ನಡೆದಿದೆ… ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದ್ದು, ಕೇಂದ್ರ ಸರ್ಕಾರ ಮತ್ತು ಗೃಹ ಸಚಿವರು ಏನೂ ಮಾಡುತ್ತಿಲ್ಲ…” ಎಂದು ” ಎಂದು ಗ್ರೇಟರ್ ಕೈಲಾಶ್ ಶಾಸಕ ತಿಳಿಸಿದ್ದಾರೆ.
ದೆಹಲಿಯ ನಂಗ್ಲೋಯ್ ಪ್ರದೇಶದಲ್ಲಿ ಬುಧವಾರ ಬಿಜೆಪಿ ನೇತೃತ್ವದಲ್ಲಿ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ ನಡಸಲಾಗಿತ್ತು. ಹಾಗಾಗಿ ಅವರ ಭೇಟಿಯನ್ನು ಮಧ್ಯದಲ್ಲಿ ರದ್ದುಗೊಳಿಸಬೇಕಾಯಿತು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಘಟನೆ ಬಗ್ಗೆ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಪ್ರತಿಕ್ರಿಯಿಸಿದ್ದು, “ಇಂದು ಹಗಲು ಹೊತ್ತಿನಲ್ಲಿ ಬಿಜೆಪಿ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಮೇಲೆ ಹಲ್ಲೆ ನಡೆಸಿದ್ದಾನೆ. ದೆಹಲಿ ಚುನಾವಣೆಯಲ್ಲಿ ಮೂರನೇ ಬಾರಿಗೆ ಸೋತಿರುವ ಬಗ್ಗೆ ಬಿಜೆಪಿ ಆತಂಕದಲ್ಲಿದೆ. ದೆಹಲಿಯ ಜನರು ಇಂತಹ ಅಗ್ಗದ ಕೃತ್ಯಗಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ಕಳೆದ ಬಾರಿ ಅವರು [ಬಿಜೆಪಿ] ಎಂಟು ಸ್ಥಾನಗಳನ್ನು ಪಡೆದಿದ್ದರು. ಈ ಬಾರಿ ದೆಹಲಿ ಜನರು ಬಿಜೆಪಿಗೆ ಶೂನ್ಯ ಸ್ಥಾನಗಳನ್ನು ನೀಡುತ್ತಾರೆ” ಎಂದು ಹೇಳಿದ್ದಾರೆ.
ಅದಾಗ್ಯೂ ಬಿಜೆಪಿ ಈ ಆರೋಪವನ್ನು ನಿರಾಕರಿಸಿದ್ದು, ಚುನಾವಣೆಗೆ ಮುನ್ನ ಕೇಜ್ರಿವಾಲ್ ಹಳೆಯ ತಂತ್ರಕ್ಕೆ ಮರಳಿದ್ದಾರೆ ಎಂದು ಹೇಳಿದೆ.
“ಅರವಿಂದ್ ಕೇಜ್ರಿವಾಲ್ ಅವರ ಪ್ರತಿಯೊಂದು ರಾಜಕೀಯ ತಂತ್ರವೂ ವಿಫಲವಾಗಿದೆ. ಈಗ ಅವನು ತನ್ನ ಹಳೆಯ ತಂತ್ರಗಳಿಗೆ ಹೊರಳಿದ್ದಾರೆ. ಈ ಹಳೆಯ ತಂತ್ರಗಳಲ್ಲಿ ಅವರಿಗೆ ಕಪಾಳಮೋಕ್ಷ ಮತ್ತು ಅವನ ಮೇಲೆ ಶಾಯಿಯನ್ನು ಎರಚಲಾಗುತ್ತದೆ. ಅಂತಹದ್ದೇ ಘಟನೆ ಇಂದು ನಡೆದಿದೆ. ಅರವಿಂದ್ ಕೇಜ್ರಿವಾಲ್ ಅವರು ಇಂದು ಯಾವ ಹೊಸ ಆಟವನ್ನು ಪ್ರಾರಂಭಿಸಿದ್ದಾರೆ ಎಂದು ಅವರೇ ಹೇಳಬೇಕು” ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಹೇಳಿದ್ದಾರೆ.
2016ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ ಕೇಜ್ರಿವಾಲ್ ಮೇಲೆ ಶಾಯಿ ಎರಚಿದ್ದ. ಆಗ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದರು. ದೆಹಲಿಯಲ್ಲಿ ಫೆಬ್ರವರಿ ವೇಳೆ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ.


