ಭಾನುವಾರ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರವರು ’ದೆಹಲಿಯ ನಿರ್ಮಾತೃಗಳು’ ಎಂದು ಕರೆಯಲ್ಪಡುವ 60 ಜನರ ಗುಂಪಿನೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಮೂಲಕ ಆಮ್ ಆದ್ಮಿ ಪಾರ್ಟಿ ಹುಟ್ಟಿದ ರಾಮ್‌ಲೀಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯವಾಗಿ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ಪಕ್ಷಗಳ ಮುಖಂಡರನ್ನು ಆಹ್ವಾನಿಸದಿರುವುದು ಗಮನಾರ್ಹವಾಗಿದೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ನಗರದ ಏಳು ಬಿಜೆಪಿ ಸಂಸದರಿಗೆ ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಎಎಪಿ ಹಿರಿಯ ಮುಖಂಡ ಗೋಪಾಲ್ ರೈ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಪಿಎಂಒಗೆ ಪತ್ರ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಪಕ್ಷದ ಇತರ ಹಿರಿಯ ಸದಸ್ಯರು ಪ್ರಧಾನಮಂತ್ರಿಯ ಆಹ್ವಾನ ಕೇವಲ “ಪ್ರೋಟೋಕಾಲ್” ಎಂದು ಹೇಳಿದ್ದಾರೆ. ಆದಾಗ್ಯೂ, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೋದಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಧಾನಿ ಕಚೇರಿಯ ವೇಳಾಪಟ್ಟಿಯ ಪ್ರಕಾರ, 30 ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಗೆ ಭಾನುವಾರ ಪ್ರಯಾಣಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಮುಖ್ಯಮಂತ್ರಿ ಸಾಮಾನ್ಯರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ವಿಚಾರದ ಕುರಿತು ತ್ವರಿತ ಕರಡನ್ನು – ‘ದೆಹಲಿ ಕೆ ನಿರ್ಮಾತಾ’ ಬ್ಯಾನರ್ ಅಡಿಯಲ್ಲಿ – ಕೇಜ್ರಿವಾಲ್ ಅವರ ಕಚೇರಿಗೆ ಶುಕ್ರವಾರ ಕಳುಹಿಸಲಾಗಿದೆ ಎಂದು ಎಎಪಿ ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಈ 60 ಜನರ ಗುಂಪಿನಲ್ಲಿ ವೈದ್ಯರು, ಶಿಕ್ಷಕರು, ಪೌರ ಕಾರ್ಮಿಕರು, ಬಸ್ ಕಂಡಕ್ಟರ್‌ಗಳು, ಬಸ್ ಚಾಲಕರು, ಮಹಿಳಾ ಭದ್ರತೆಗಾಗಿ ನಿಯೋಜಿಸಲಾದ ಮಾರ್ಷಲ್‌ಗಳು, ಆಟೋರಿಕ್ಷಾ ಚಾಲಕರು, ರೈತರು, ಅಂಗನವಾಡಿ ನೌಕರರು, ಕ್ರೀಡಾಪಟುಗಳು, ಐಐಟಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಪಿಡಬ್ಲ್ಯೂಡಿ ಎಂಜಿನಿಯರ್‌ಗಳು ಮತ್ತು ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯ ವಿತರಣಾ ಏಜಂಟು ಸೇರಿದ್ದಾರೆ ಎನ್ನಲಾಗುತ್ತಿದೆ.
“ಅತಿಥಿಗಳನ್ನು ತಮ್ಮ ಉದ್ಯೋಗಗಳಲ್ಲಿನ ಸಾಧನೆಯ ಆಧಾರದ ಮೇಲೆ ಸರ್ಕಾರಗಳು, ನಾಗರಿಕ ಸಂಸ್ಥೆಗಳು ಅಥವಾ ಮಾಧ್ಯಮಗಳು ಅಥವಾ ಕೆಲವು ಸಂದರ್ಭಗಳಲ್ಲಿ ವಿಭಾಗದ ಮುಖ್ಯಸ್ಥರಿಂದ ಉಲ್ಲೇಖದ ಆಧಾರದ ಮೇಲೆ ಆಯ್ಕೆಯಾಗಿದ್ದಾರೆ” ಎಂದು ಹಿರಿಯ ಎಎಪಿ ಮುಖಂಡರು ಹೇಳಿದರು.
ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿಯೇತರ ಆಡಳಿತದ ರಾಜ್ಯಗಳಿಂದ ಬೇರೆ ಯಾವುದೇ ಮುಖ್ಯಮಂತ್ರಿ ಅಥವಾ ರಾಜಕೀಯ ಮುಖಂಡರನ್ನು ಆಹ್ವಾನಿಸದಿರುವುದು, ಈ ಸಮಯದಲ್ಲಿ ಪಕ್ಷವು ಯಾವುದೇ ಸೈದ್ಧಾಂತಿಕ ವಯಲದೊಂದಿಗೆ ಗುರುತಿಸಿಕೊಳ್ಳದಿರಲು ಬಯಸುವುದಿಲ್ಲ ಎಂಬುದರ ಸ್ಪಷ್ಟ ಸಂಕೇತವಾಗಿದೆ ಎಂದು ಅಭಿವೃದ್ಧಿಶೀಲ ಸಂಘಗಳ ಅಧ್ಯಯನ ಕೇಂದ್ರದ ರಾಜಕೀಯ ವಿಶ್ಲೇಷಕ ಪ್ರವೀಣ್ ರೈ ಹೇಳಿದ್ದಾರೆ.
ಪ್ರಮಾಣವಚನ ಸಮಾರಂಭದಲ್ಲಿ ತನ್ನೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಸಾಮಾನ್ಯ ಜನರನ್ನು ಆಹ್ವಾನಿಸುವ ಮಟ್ಟಿಗೆ, ಇದು ದೆಹಲಿಯ ನಾಗರಿಕರ ಮೇಲಿನ ನಂಬಿಕೆಯ ಪುನರ್ ದೃಢೀಕರಣ ಮತ್ತು ಒಳಗೊಳ್ಳುವ ಆಡಳಿತದ ಎಎಪಿ ಕಲ್ಪನೆಯ ಪ್ರತಿಬಿಂಬವಾಗಿದೆ. ವಿಎಪಿ ಸಂಸ್ಕೃತಿ ಮತ್ತು ಸೆಲೆಬ್ರಿಟಿಗಳ ಅನುಮೋದನೆಯನ್ನು ಎಎಪಿ ನಂಬುವುದಿಲ್ಲ ಎಂಬ ದೊಡ್ಡ ರಾಜಕೀಯ ಸಂದೇಶವನ್ನೂ ಇದು ಕಳುಹಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಅದೇ ಜಾಗವನ್ನು ಸಾಮಾನ್ಯರೊಂದಿಗೆ ಹಂಚಿಕೊಳ್ಳಲು ಮತ್ತು ಹೊಸ ರಾಜಕೀಯ ಇನ್ನಿಂಗ್ಸ್‌ಗಾಗಿ ಅವರ ಆಶೀರ್ವಾದ ಪಡೆಯಲು ಎಎಪಿ ಬಯಸಿದೆ ಎಂದು ಅವರು ಹೇಳಿದ್ದಾರೆ.
ಎಎಪಿಯ ಈ ವಿನೂತನ ಯೋಜನೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿಯ ಮಾಧ್ಯಮ ವಕ್ತಾರ ನೀಲಕಂತ್ ಬಕ್ಷಿ, “ಇದು ಅವರ ಪ್ರದರ್ಶನ. ಅವರು ಬಯಸಿದ್ದನ್ನು ಅವರು ಮಾಡಲಿ” ಎಂದಿದ್ದಾರೆ.



ಕೇಜ್ರಿವಾಲರ ಈ ಕ್ರಮ ಸ್ವಾಗತಾರ್ಹ.