“ನೀವು ನನ್ನ ಸರ್ಕಾರವನ್ನು ವಜಾಗೊಳಿಸಲು ಬಯಸಿದರೆ, ನೀವು ಮಾಡಬಹುದು, ಆದರೆ ನಾನು ಎಂದಿಗೂ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಮತ್ತು ಎನ್ಆರ್ಸಿಯನ್ನು ಜಾರಿಗೆ ತರಲು ಬಿಡುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧವಾಗಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕೋಲ್ಕತ್ತಾದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ತೃಣಮೂಲ ಕಾಂಗ್ರೆಸ್ ಪಕ್ಷದ ನೂರಾರು ಮುಖಂಡರು ಮತ್ತು ಸಾವಿರಾರು ಬೆಂಬಲಿಗರು ಪೋಸ್ಟರ್ ಮತ್ತು ಧ್ವಜಗಳನ್ನು ಹಿಡಿದು ಸಾಥ್ ನೀಡಿದರು.
“ನಾನು ಬದುಕಿರುವವರೆಗೂ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ಜಾರಿಗೊಳಿಸುವುದಿಲ್ಲ. ಅವರು ಬಯಸಿದರೆ ಅವರು ನಮ್ಮ ಸರ್ಕಾರವನ್ನು ವಜಾಗೊಳಿಸಬಹುದು. ನಾವು ಶರಣಾಗುವುದಿಲ್ಲ” ಎಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ ಹೇಳಿದ್ದಾರೆ.
“ಅವರು ನನ್ನ ಮೃತ ದೇಹದ ಮೇಲೆ ಬಂಗಾಳದಲ್ಲಿ ಸಿಎಬಿ ಮತ್ತು ಎನ್ಆರ್ಸಿಯನ್ನು ಜಾರಿಗೆ ತರಬೇಕಾಗುತ್ತದೆ. ನಾವು ಎನ್ಆರ್ಸಿ ವಿರುದ್ಧ ಧ್ವನಿ ಎತ್ತಿದಾಗ, ನಾವು ಒಬ್ಬಂಟಿಯಾಗಿದ್ದೆವು. ಈಗ, ಇತರ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾರೆ, ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಈ ಅಸಾಂವಿಧಾನಿಕ ಕಾಯ್ದೆಯ ವಿರುದ್ಧ ಪ್ರತಿಭಟನೆಗೆ ಜನರು ಭಾಗವಹಿಸಬೇಕೆಂದು ಮಮತಾ ಬ್ಯಾನರ್ಜಿ ಟ್ವಿಟ್ಟರ್ನಲ್ಲಿ ಕರೆ ನೀಡಿದ್ದರು. ಇದಕ್ಕೆ ಬಂಗಾಳದ ರಾಜ್ಯಪಾಲರು ಕೆಂಡಾಮಂಡಲವಾಗಿ ಪ್ರತಿಕ್ರಿಯೆ ನೀಡಿದ್ದರು.
“ಸಿಎಎ ವಿರುದ್ಧ ಮುಖ್ಯಮಂತ್ರಿ ಮತ್ತು ಮಂತ್ರಿಗಳು ರ್ಯಾಲಿ ನಡೆಸಲಿದ್ದಾರೆ ಎಂದು ತಿಳಿದು ನಾನು ತುಂಬಾ ದುಃಖಿತನಾಗಿದ್ದೇನೆ. ಇದು ನೆಲದ ಕಾನೂನಿಗೆ ವಿರುದ್ಧವಾಗಿದ್ದು, ಅಸಂವಿಧಾನಿಕವಾಗಿದೆ. ಈ ಕಠೋರ ಪರಿಸ್ಥಿತಿಯ ಹಂತದಲ್ಲಿ ಈ ಅಸಂವಿಧಾನಿಕ ಮತ್ತು ಗಲಭೆ ಉಂಟುಮಾಡುವ ಕೃತ್ಯದಿಂದ ದೂರವಿರಲು ಮತ್ತು ರ್ಯಾಲಿ ಹಿಂಪಡೆಯಲು ನಾನು ಸಿಎಂಗೆ ಕರೆ ನೀಡುತ್ತೇನೆ.” ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ.
.@MamataOfficial. I am extremely anguished that CM and Ministers are to spearhead rally against CAA, law of the land. This is unconstitutional. I call upon CM to desist from this unconstitutional and inflammatory act at this juncture and devote to retrieve the grim situation.
— Jagdeep Dhankhar (@jdhankhar1) December 16, 2019
ಮಮತಾ ಬ್ಯಾನರ್ಜಿಯವರು ಪೌರತ್ವ ಕಾನೂನಿಗೆ ತೀವ್ರ ವಿರೋಧ ವ್ಯಕ್ತಪಡಿಸಲು ಬುಧವಾರದವರೆಗೆ ಇದೇ ರೀತಿಯ ಮೆರವಣಿಗೆಗಳನ್ನು ಯೋಜಿಸಿದ್ದಾರೆ. 2021 ರಲ್ಲಿ ನಡೆಯಲಿರುವ ಬಂಗಾಳ ವಿಧಾನಸಭೆ ಚುನಾವಣೆಗೆ ಮುಂಚೆಯೇ ಇದು ಮುಖ್ಯಮಂತ್ರಿ ಮತ್ತು ಬಿಜೆಪಿ ನಡುವಿನ ಮತ್ತೊಂದು ಸಂಘರ್ಷದ ಹಂತವನ್ನು ತೆರೆದಿಟ್ಟಿದೆ.


