ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳ ಅಧಿಕಾರಾವಧಿಯಲ್ಲಿ ಚುನಾವಣಾ ಪ್ರಚಾರದಲ್ಲಿ ದಾಖಲೆ ಮಟ್ಟದಲ್ಲಿ ಸಮಯವನ್ನು ಕಳೆದಿದ್ದಾರೆ. ದೇಶಕ್ಕೆ ಸಂಬಂಧಿಸಿದ ಪ್ರಮುಖ ವ್ಯವಹಾರಗಳ ಬಗ್ಗೆ ಅವರ ಅಸಮರ್ಪಕ ಗಮನದ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು. ಇದೀಗ ಮೋದಿ ಕನ್ಯಾಕುಮಾರಿಯಲ್ಲಿ 48ಗಂಟೆಗಳ ಕಾಲ ಧ್ಯಾನದಲ್ಲಿ ಕುಳಿತುಕೊಂಡಿದ್ದಾರೆ. ಆದರೆ ದೇಶದ ಪ್ರಧಾನಿಯೋರ್ವರು ಇಷ್ಟೊಂದು ಸುದೀರ್ಘ ಅವಧಿಗೆ ಸಂಪರ್ಕಕ್ಕೆ ಅಲಭ್ಯವಾದರೆ ತುರ್ತು ಪರಿಸ್ಥಿತಿ ಉದ್ಭವಿಸಿದರೆ ಮುಂದೇನು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
2022ರ ಜುಲೈನಲ್ಲಿ ಹೊರಡಿಸಲಾದ ಮಂತ್ರಿ ಮಂಡಳಿ ಪಟ್ಟಿಯ ಪ್ರಕಾರ, ಮೋದಿ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನ ಮಂತ್ರಿಯ ನಂತರ ಹಿರಿತನದ ವಿಷಯದಲ್ಲಿ ಮುಂದಿನ ಸಾಲಿನಲ್ಲಿದ್ದಾರೆ. ಆದ್ದರಿಂದ ಪ್ರಧಾನ ಮಂತ್ರಿಯು ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ, ಅವರು ಧ್ಯಾನ ಮಾಡುತ್ತಿರುವುದರಿಂದ ರಾಜನಾಥ್ ಸಿಂಗ್ ಅಧಿಕಾರ ವಹಿಸಿಕೊಳ್ಳಬೇಕು. ಮೋದಿ ಯಾರನ್ನೂ ಉಪಪ್ರಧಾನಿಯಾಗಿ ನೇಮಿಸಿಲ್ಲ. ಅವರ ಮೊದಲ ಅವಧಿಯಲ್ಲಿ 2014ರ ಸೆಪ್ಟಂಬರ್‌ನಲ್ಲಿ ಯುಎಸ್ ಪ್ರವಾಸ ಮಾಡುವಾಗ, ಆಗಿನ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ಅವರನ್ನು “ತುರ್ತು ಸರ್ಕಾರಿ ವ್ಯವಹಾರ” ನಿರ್ವಹಿಸಲು ಮೋದಿ ಅಧಿಕೃತವಾಗಿ ನಿಯೋಜಿಸಿದ್ದರು. ಈ ಕುರಿತು ಟಿಪ್ಪಣಿಯೊಂದನ್ನು ಕೂಡ ಹೊರಡಿಸಲಾಗಿತ್ತು. ಆದರೆ ಮೋದಿ ತಮ್ಮ ಎರಡು ದಿನಗಳ ಅಂದರೆ 45-ಗಂಟೆಗಳ ದೀರ್ಘಾವಧಿಯ ಧ್ಯಾನಕ್ಕೆ ತೆರಳುವಾಗ ಯಾರನ್ನೂ ಅಧಿಕೃತವಾಗಿ ನಿಯೋಜಿಸಿಲ್ಲ. ಈ ಕುರಿತು ಯಾವುದೇ ಪತ್ರಿಕಾ ಪ್ರಕಟಣೆಗಳನ್ನು ನೀಡಲಾಗಿಲ್ಲ.
ಪ್ರಧಾನ ಮಂತ್ರಿಗಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ ಹೇಗೆ?
ಪ್ರಧಾನ ಮಂತ್ರಿಗಳ ಕಚೇರಿಯ ಮಾಜಿ ಅಧಿಕಾರಿಯೋರ್ವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೋದಿ ಪರಮಾಣು ಕಮಾಂಡ್‌ನ ಏಕೈಕ ಮುಖ್ಯಸ್ಥರಾಗಿರುವುದರಿಂದ ಅವರು ಹಂಗಾಮಿ ಪ್ರಧಾನಿಯನ್ನು ಹೆಸರಿಸಬೇಕಾಗಿದೆ. ಯಾರನ್ನಾದರೂ ಉಸ್ತುವಾರಿಯನ್ನಾಗಿ ನೇಮಿಸದಿರುವುದು ಅತ್ಯಂತ ಬೇಜವಾಬ್ದಾರಿಯುತ ನಡೆಯಾಗಿದೆ ಎಂದು ಹೇಳಿದ್ದಾರೆ.
ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಚೀನಾ ಅಥವಾ ಪಾಕಿಸ್ತಾನದೊಂದಿಗಿನ ಗಂಭೀರವಾದ ಗಡಿ ಪರಿಸ್ಥಿತಿಯಂತಹ ತುರ್ತು ವಿಚಾರಗಳಿರುವಾಗ ಪ್ರಧಾನಿ ಸಂಪೂರ್ಣವಾಗಿ ಅಜ್ಞಾತವಾಗಿ ಹೋಗುವಂತಿಲ್ಲ. ಅಂತಹ ಸನ್ನಿವೇಶಗಳಲ್ಲಿ ಅವರು ತನ್ನ ಧ್ಯಾನದಿಂದ ಎಚ್ಚರಗೊಳ್ಳಬೇಕಾಗುತ್ತದೆ. ಆದರೆ ದಿನನಿತ್ಯದ ವಿಷಯಗಳಲ್ಲಿ ಅವರ ಸಂಪುಟ ಮತ್ತು ಹಿರಿಯ ಸಚಿವರು ನಿರ್ವಹಿಸಬಹುದು ಎಂದು ಹೇಳಿದ್ದಾರೆ.
ಇನ್ನೊಬ್ಬ ಮಾಜಿ PMO ಅಧಿಕಾರಿ ಈ ಬಗ್ಗೆ ಮಾತನಾಡಿದ್ದು, ತಾಂತ್ರಿಕವಾಗಿ, ಯಾರೂ ಉಸ್ತುವಾರಿ ವಹಿಸುವ ಅಗತ್ಯವಿಲ್ಲ, ಅವರು ಧ್ಯಾನದಲ್ಲಿದ್ದಾರೆ ಆದರೆ ಅಸಮರ್ಥರಲ್ಲ. ಯಾವುದೇ ರೀತಿಯ ವೈದ್ಯಕೀಯ ಅಲ್ಪವಿರಾಮದಲ್ಲಿಯೂ ಇಲ್ಲ. ಇದು ಸ್ವಯಂ ಹೇರಿದ ಪ್ರತ್ಯೇಕತೆಯಾಗಿದೆ ಮತ್ತು ತುರ್ತು ಸಂದರ್ಭದಲ್ಲಿ ಅದನ್ನು ಉಲ್ಲಂಘಿಸಬಹುದಾಗಿದೆ ಎಂದು ಹೇಳಿದ್ದಾರೆ.
2019ರ ಸಾರ್ವತ್ರಿಕ ಚುನಾವಣೆಯ ವೇಳೆ ಮೋದಿ ಕೇದಾರನಾಥದಲ್ಲಿರುವ ರುದ್ರ ಧ್ಯಾನದ ಗುಹೆಯಲ್ಲಿ 17 ಗಂಟೆಗಳ ಕಾಲ ಧ್ಯಾನದಲ್ಲಿ ಕಳೆದಿದ್ದರು. ಮಾದರಿ ನೀತಿ ಸಂಹಿತೆ ಮತ್ತು ಮೌನ ಅವಧಿಯ ವೇಳೆ ಮೋದಿಯ ಧ್ಯಾನದ ಮಾಧ್ಯಮಗಳ ಕವರೇಜ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಬಾರಿಯೂ ಕಾಂಗ್ರೆಸ್ ಔಪಚಾರಿಕವಾಗಿ ನೀತಿ ಸಂಹಿತೆಯ ಉಲ್ಲಂಘನೆ ಬಗ್ಗೆ ದೂರು ನೀಡಿದೆ. ಆದರೆ ಚುನಾವಣಾ ಆಯೋಗ ಈ ಬಗ್ಗೆ ಮೌನವಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ: ಸರ್ಕಾರಿ ಜಮೀನಿನಲ್ಲಿರುವ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಕೇರಳ ಹೈಕೋರ್ಟ್


