ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದ ಭಾರತ ತಂಡ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಹಾಗೂ ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಹಾಗಾಗಿ, ಟೀಮ್ ಇಂಡಿಯಾಕ್ಕೆ ಏಷ್ಯಾ ಕಪ್ ಟ್ರೋಫಿ ವಿತರಣೆಯಾಗಿಲ್ಲ.
ಭಾನುವಾರ (ಸೆ.28) ಫೈನಲ್ ಪಂದ್ಯದ ನಂತರ, ಗೆದ್ದ ಭಾರತೀಯ ಆಟಗಾರರು ವೇದಿಕೆಯಿಂದ ದೂರ ನಿಂತಿದ್ದರು. ನಖ್ವಿ ವೇದಿಕೆಯಲ್ಲಿ ಟ್ರೋಫಿ ನೀಡಲು ಕಾಯುತ್ತಿದ್ದರು. ಇದರಿಂದ ಟ್ರೋಫಿ ವಿತರಣೆ ಸಮಾರಂಭ ಗೊಂದಲ ಮತ್ತು ವಿಳಂಬದಿಂದ ಕೂಡಿತ್ತು.
ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ನ ಉಪಾಧ್ಯಕ್ಷ ಖಾಲಿದ್ ಅಲ್ ಝರೂನಿ ಈ ವೇಳೆ ಉಪಸ್ಥಿತರಿದ್ದರು. ನಖ್ವಿ ಬದಲಾಗಿ ಅವರಿಂದ ಟ್ರೋಫಿ ಪಡೆಯಲು ಭಾರತ ತಂಡ ಸಿದ್ದ ಇತ್ತು. ಆದರೆ, ನಖ್ವಿ ತಾನೇ ಟ್ರೋಫಿ ಹಸ್ತಾಂತರಿಸಬೇಕೆಂದು ಹಠ ಹಿಡಿದರು.
ಸುಮಾರು ಒಂದು ಗಂಟೆಯ ಗೊಂದಲಮಯ ಪರಿಸ್ಥಿತಿಯ ನಂತರ, ಟ್ರೋಫಿಯನ್ನು ಸದ್ದಿಲ್ಲದೆ ವೇದಿಕೆಯಿಂದ ವಾಪಸ್ ತೆಗೆದುಕೊಂಡು ಹೋಗಲಾಯಿತು. ಚಾಂಪಿಯನ್ ಟ್ರೋಫಿ ಬಿಟ್ಟು, ಇತರ ವೈಯಕ್ತಿಕ ಪ್ರಶಸ್ತಿಗಳನ್ನು ವಿತರಿಸಲಾಗಿದ್ದರೂ, ಭಾರತೀಯ ತಂಡದ ಸಂಭ್ರಮಾಚರಣೆ ಅಪೂರ್ಣವಾಗಿ ಉಳಿಯಿತು. ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದೆ.
ಸ್ನೇಹ, ಸೌಹಾರ್ದತೆಯನ್ನು ವೃದ್ದಿಸಬೇಕಾದ ಪಂದ್ಯಾವಳಿಯಾದ್ಯಂತ ಎರಡು ತಂಡಗಳು ಪರಸ್ಪರ ಶತ್ರುಗಳಂತೆ ಸೆಣಸಾಡಿದವು. ಭಾರತೀಯ ಆಟಗಾರರು ಈ ಹಿಂದೆ ಪಂದ್ಯಕ್ಕೂ ಮುನ್ನ ಹಸ್ತಲಾಘವ, ಪಾಕಿಸ್ತಾನಿ ಸಹ ಆಟಗಾರರೊಂದಿಗೆ ಫೋಟೋ ತೆಗೆಯುವುದನ್ನು ತಪ್ಪಿಸಿದ್ದರು. ಅಲ್ಲದೆ, ನಖ್ವಿ ಅವರೊಂದಿಗೆ ಯಾವುದೇ ಔಪಚಾರಿಕ ಮಾತುಕತೆಯನ್ನು ನಿರಾಕರಿಸಿದ್ದರು.
ಕ್ರೀಡಾಂಗಣದಲ್ಲಿ ಅಭಿಮಾನಿಗಳು, ಮುಖ್ಯವಾಗಿ ಭಾರತೀಯ ಬೆಂಬಲಿಗರು ನಖ್ವಿ ವಿರುದ್ದ ತಮ್ಮ ಅಸಮ್ಮತಿಯನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದರು. ನಖ್ವಿ ಅವರನ್ನು ಅಪಹಾಸ್ಯ ಮಾಡುತ್ತಾ, ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಇದ್ದರು. ಪಂದ್ಯದ ನಂತರ ಪಾಕಿಸ್ತಾನ ತಂಡವು ಸುಮಾರು ಒಂದು ಗಂಟೆ ಕಾಲ ಡ್ರೆಸ್ಸಿಂಗ್ ಕೋಣೆಯಲ್ಲಿಯೇ ಇತ್ತು, ಅವರ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ವೇದಿಕೆಯಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದರು.
ನಖ್ವಿ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸೇರಿದಂತೆ ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ, ಅವರು ಟ್ರೋಫಿಯನ್ನು ಪ್ರದಾನ ಮಾಡಿದರೆ ಅದನ್ನು ಸ್ವೀಕರಿಸುವುದಿಲ್ಲ ಎಂದು ಭಾರತವು ಎಸಿಸಿಗೆ ಮೊದಲೇ ತಿಳಿಸಿತ್ತು ಎಂದು ವರದಿಗಳು ಹೇಳಿವೆ.
ನಖ್ವಿಯವರು ಈ ಹಿಂದೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಮಾನ ಅಪಘಾತ ಸಂಭ್ರಮಾಚರಣೆಯ ಕ್ರಿಪ್ಟಿಕ್ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು, ಇದು ‘ಆಪರೇಷನ್ ಸಿಂಧೂರ’ ಸಮಯದಲ್ಲಿ ಆರು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಗೆ ನೇರ ಉಲ್ಲೇಖವಾಗಿದೆ.
ಅಲ್ಲದೆ, ಸೂರ್ಯಕುಮಾರ್ ಭಾರತೀಯ ಸೇನೆಯನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳೊಂದಿಗೆ ಒಗ್ಗಟ್ಟು ತೋರಿಸಿದ್ದಕ್ಕಾಗಿ, ಅವರ ವಿರುದ್ದ ಐಸಿಸಿಯಿಂದ ಲೆವೆಲ್ 4 ಅಪರಾಧದ ಆರೋಪ ಹೊರಿಸಬೇಕೆಂದು ಒತ್ತಾಯಿಸಿದ್ದರು.
ಎಐ ಮೊರೆ ಹೋದ ಆಕ್ಸೆಂಚರ್: 11,000 ಉದ್ಯೋಗಿಗಳ ವಜಾ, ಇನ್ನಷ್ಟು ಉದ್ಯೋಗ ಕಡಿತದ ಎಚ್ಚರಿಕೆ


