ಕ್ರಿಶ್ಚಿಯನ್ನರು ಮಾತ್ರ ಕ್ರಿಸ್‌ಮಸ್ ಆಚರಿಸಬೇಕೆ ಹೊರತು ಹಿಂದೂಗಳು ಆಚರಿಸಬಾರದು ಎಂದು ಬಜರಂಗದಳ ಸದಸ್ಯರು ಚರ್ಚ್‌ಗೆ ನುಗ್ಗಿ, ದಾಂಧಲೆ ನಡೆಸಿ ಕ್ರಿಸ್‌ಮಸ್ ಆಚರಣೆಗೆ ತಡೆಯೊಡ್ಡಿರುವ ಅಹಿತಕರ ಘಟನೆ ಅಸ್ಸಾಂನ ಸಿಲ್ಚಾರ್‌ನಲ್ಲಿ ನಡೆದಿದೆ.
ನಾವು ಕ್ರಿಶ್ಚಿಯನ್ನರು ಕ್ರಿಸ್‌ಮಸ್ ಆಚರಿಸುವುದಕ್ಕೆ ವಿರೋಧಿಸುವುದಿಲ್ಲ. ಆದರೆ ಡಿಸೆಂಬರ್ 25 ಹಿಂದೂಗಳ ತುಳಸಿ ಹಬ್ಬ ಕೂಡ. ಆದರೆ ಹಿಂದೂಗಳು ಯಾರೂ ತುಳಸಿ ಹಬ್ಬ ಆಚರಿಸಿಲ್ಲ. ಇದು ನಮ್ಮ ಭಾವನೆಗಳಿಗೆ ಧಕ್ಕೆ ತಂದಿದೆ. ಹಿಂದೂ ಹುಡುಗ-ಹುಡುಗಿಯರು ಸಹ ಮೆರ್ರಿ ಕ್ರಿಸ್‌ಮಸ್ ಎಂದು ಹೇಳುತ್ತಾ ಹೊರಟರೆ ನಮ್ಮ ಧರ್ಮವನ್ನು ಉಳಿಸುವವರು ಯಾರು? ಇದು ನಮಗೆ ತುಂಬಾ ನೋವು ಮಾಡುತ್ತದೆ. ಹಾಗಾಗಿ ಹಿಂದೂಗಳು ಕ್ರಿಸ್‌ಮಸ್ ಆಚರಿಸುವುದನ್ನು ತಡೆಯುತ್ತಿದ್ದೇವೆ ಎಂದು ಯುವಕನೊಬ್ಬ ಹೇಳಿರುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.
ಚರ್ಚ್‌ನ ಬಾಗಿಲಿನಲ್ಲೇ ಜನರನ್ನು ತಡೆಯುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದದೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಸ್ವಯಂ ಪ್ರೇರಿತ ದೂರು ದಾಖಲಿಸುವಷ್ಟು ಗಂಭೀರ ಪ್ರಕರಣವಲ್ಲ ಎಂದು ಪೊಲೀಸರು ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಕಳೆದ ವರ್ಷ ಸಹ ವಿಶ್ವ ಹಿಂದೂ ಪರಿಷತ್ ಮುಖಂಡನೊಬ್ಬ ಹಿಂದೂಗಳು ಕ್ರಿಸ್‌ಮಸ್ ಆಚರಿಸಲು ಚರ್ಚ್‌ಗೆ ತೆರಳಿದರೆ ಅವರ ಮೇಲೆ ಹಲ್ಲೆ ಮಾಡಲಾಗುವುದು ಎಂದು ಬೆದರಿಸಿದ್ದ.
ಇತ್ತೀಚೆಗೆ ಚರ್ಚ್‌ಗಳ ಮೇಲೆ ದಾಳಿ, ಶಾಲೆಗಳ ಮೇಲೆ ದಾಳಿ, ಕ್ರಿಸ್‌ಮಸ್ ಆಚರಣೆಗೆ ಬಲಪಂಥೀಯ ಶಕ್ತಿಗಳು ತಡೆಯೊಡ್ಡುವ ಕೆಲಸ ಆರಂಭಿಸಿದ್ದಾರೆ. ನಿನ್ನೆ ಬಲಪಂಥೀಯ ಗುಂಪು ಗುರ್ಗಾಂವ್‌ನ ಪಟೌಡಿ ಚರ್ಚ್ ಒಂದಕ್ಕೆ ನುಗ್ಗಿ ದಾಂಧಲೆ ನಡೆಸಿ, ಕ್ರಿಸ್‌ಮಸ್ ಪ್ರಾರ್ಥನೆಗೆ ಅಡ್ಡಿಪಡಿಸಿರುವ ಘಟನೆ ವರದಿಯಾಗಿದೆ.
ಈ ಕುರಿತು ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಬಲಪಂಥೀಯ ಕಾರ್ಯಕರ್ತರು ವೇದಿಕೆಗೆ ನುಗ್ಗಿ, ಅಲ್ಲಿದ್ದವರನ್ನು ಕೆಳಗೆ ತಳ್ಳಿ, ಮೈಕ್ ಕಿತ್ತುಕೊಂಡು ಜೈ ಶ್ರೀರಾಮ್ ಮತ್ತು ಭಾರತ್ ಮಾತಾಕೀ ಜೈ ಎನ್ನುವ ಘೋಷಣೆಗಳನ್ನು ಕೂಗುವುದನ್ನು ನೋಡಬಹುದು.
ಅದೇ ರೀತಿಯ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರದ ನಿರ್ಮಲ ಇಂಗ್ಲಿಷ್ ಶಾಲೆಯಲ್ಲಿ ವಿದ್ಯಾರ್ಥಿಗಳು ಕ್ರಿಸ್‌ಮಸ್ ಆಚರಣೆ ಮಾಡದಂತೆ ತಡೆದ ಘಟನೆ ಗುರುವಾರ ನಡೆದಿದೆ. ದುಷ್ಕರ್ಮಿಗಳ ಗುಂಪು ಬಲವಂತವಾಗಿ ಶಾಲೆಗೆ ನುಗ್ಗಿ ಶಾಲೆಯಲ್ಲಿರುವ ಶಿಕ್ಷಕರ ಜೊತೆಗೆ ವಾಗ್ವಾದ ನಡೆಸಿ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಶಾಲೆಗೆ ನುಗ್ಗಿ ಕ್ರಿಸ್‌ಮಸ್ ಆಚರಿಸದಂತೆ ಬೆದರಿಸಿದ ಬಲಪಂಥೀಯರು


