ಬಹುಪತ್ನಿತ್ವ ನಿಷೇಧಿಸುವ ಮಸೂದೆಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ (ನ.9) ಹೇಳಿದ್ದಾರೆ. ಮಸೂದೆಯಲ್ಲಿ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವುದನ್ನು ಪ್ರಸ್ತಾಪಿಸಲಾಗಿದೆ ಎಂದು ವರದಿಯಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಶರ್ಮಾ, ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆಯನ್ನು ನವೆಂಬರ್ 25ರಂದು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಕರಡು ಶಾಸನವು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ವಿನಾಯಿತಿ ನೀಡುತ್ತದೆ ಎಂದು ತಿಳಿಸಿದ್ದಾರೆ.
ಸಂವಿಧಾನದ ಆರನೇ ಪರಿಚ್ಛೇದದಡಿಯಲ್ಲಿ ಬರುವ ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿ, ಕರ್ಬಿ ಆಂಗ್ಲಾಂಗ್ ಸ್ವಾಯತ್ತ ಮಂಡಳಿ ಮತ್ತು ದಿಮಾ ಹಸಾವೊ ಸ್ವಾಯತ್ತ ಮಂಡಳಿಯ ಪ್ರದೇಶಗಳಿಗೆ ಹೊಸ ಕಾನೂನು ಸದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಶರ್ಮಾ ಹೇಳಿದ್ದಾರೆ.
ಅಸ್ಸಾಂನ ಮೂವತ್ತೈದು ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳು ಮೇಲೆ ಉಲ್ಲೇಖಿಸಿರುವ ಮೂರು ಮಂಡಳಿಗಳ ಭಾಗವಾಗಿವೆ. ಸಂವಿಧಾನದ ಆರನೇ ಪರಿಚ್ಛೇದ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ನಾಗರಿಕರಿಗೆ ಭೂಮಿಯ ರಕ್ಷಣೆ ಮತ್ತು ನಾಮಮಾತ್ರದ ಸ್ವಾಯತ್ತತೆಯನ್ನು ಖಾತರಿಪಡಿಸುತ್ತದೆ.
ಹೊಸ ಕಾನೂನು ರಾಜ್ಯದ ಎಲ್ಲರಿಗೂ (ಸರ್ವ ವರ್ಗದವರಿಗೂ) ಅನ್ವಯಿಸುತ್ತದೆ. 2005ಕ್ಕಿಂತ ಮೊದಲು ಆರನೇ ಪರಿಚ್ಛೇದದಡಿ ಬರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಮುಸ್ಲಿಮರಿಗೆ ವಿನಾಯಿತಿದೆ ಸಿಎಂ ಹೇಳಿದ್ದಾರೆ.
ಬಹುಪತ್ನಿತ್ವದ ಬಲಿಪಶುಗಳಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರವು ನಿಧಿಯನ್ನು ಕೂಡ ರಚಿಸಲಿದೆ. ಯಾವುದೇ ಮಹಿಳೆ ತನ್ನ ಜೀವನದಲ್ಲಿ ಕಷ್ಟಗಳನ್ನು ಎದುರಿಸದಂತೆ ಅಗತ್ಯವಿರುವ ಸಂದರ್ಭಗಳಲ್ಲಿ ಸರ್ಕಾರ ಆರ್ಥಿಕ ಸಹಾಯವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
असम कैबिनेट ने बहुविवाह की प्रथा पर रोक लगाने के लिए एक नए अधिनियम को स्वीकृति दी है।
नारी का अपमान करने वालों को बख्शा नहीं जाएगा। pic.twitter.com/meYgQdMuyj
— Himanta Biswa Sarma (@himantabiswa) November 9, 2025
ರಾಜ್ಯದಲ್ಲಿ ಬಹುಪತ್ನಿತ್ವ ನಿಷೇಧ ಕಾನೂನು ಜಾರಿಗೆ ತರುವುದಾಗಿ ಸಿಎಂ ಶರ್ಮಾ ಬಹಳ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದರು. ಇದು ರಾಜ್ಯ ಎಲ್ಲಾ ವರ್ಗದವರಿಗೂ ಅನ್ವಯಿಸುತ್ತದೆ ಎಂದರೂ, ಮುಸ್ಲಿಮರನ್ನು ಗುರಿಯಾಗಿಸಿ ಕಾನೂನು ರೂಪಿಸಲಾಗುತ್ತಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಏಕೆಂದರೆ, ಬಹುಪತ್ನಿತ್ವ ನಿಷೇಧದ ಉದ್ದೇಶವು ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರ ಸಬಲೀಕರಣವಾಗಿದೆ ಎಂದು ಶರ್ಮಾ ಈಗಾಗಲೇ ಹೇಳಿದ್ದಾರೆ.
ಕೆಲ ಸಮುದಾಯ ಮುಖಂಡರು, ಹೋರಾಟಗಾರರು, ಚಿಂತಕರು ಮತ್ತು ಮಹಿಳೆಯರು ಸರ್ಕಾರದ ಹೊಸ ಕಾನೂನನ್ನು ಸ್ವಾಗತಿಸಿದರೂ, ಒಂದು ಸಮುದಾಯವನ್ನು ಅಪರಾಧೀಕರಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ. 1950ರ ದಶಕದಲ್ಲಿ ಹಿಂದೂ ಸಂಹಿತೆ ಮಸೂದೆಯ ಮೂಲಕ ಹಿಂದೂಗಳಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಲಾಯಿತು. ಈ ಹಿಂದೂ ಸಂಹಿತೆ ಮಸೂದೆ ಹಿಂದೂ ಧರ್ಮದ ಉತ್ತರಾಧಿಕಾರ, ದತ್ತು, ಮದುವೆ ಮತ್ತು ವಿಚ್ಛೇದನದಂತಹ ವಿಷಯಗಳನ್ನು ನಿಯಂತ್ರಿಸುತ್ತದೆ.
ಬಹುಪತ್ನಿತ್ವವನ್ನು ಅಪರಾಧೀಕರಿಸುವ ಒತ್ತಾಯವನ್ನು ಹಿಂದುತ್ವ ಸಂಘಟನೆಗಳು ಏಕರೂಪ ನಾಗರಿಕ ಸಂಹಿತೆಯನ್ನು ಪರಿಚಯಿಸಲು ಸಮರ್ಥನೆಯಾಗಿ ಬಳಸುತ್ತಿವೆ.
ಏಕರೂಪ ನಾಗರಿಕ ಸಂಹಿತೆಯು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಎಲ್ಲಾ ನಾಗರಿಕರಿಗೆ ಒಂದೇ ಕಾನೂನನ್ನು ಅನ್ವಯಿಸಲಿದೆ. ಪ್ರಸ್ತುತ, ವಿವಿಧ ಧಾರ್ಮಿಕ ಮತ್ತು ಬುಡಕಟ್ಟು ಗುಂಪುಗಳ ತಮ್ಮ ವೈಯಕ್ತಿಕ ವಿಷಯಗಳಿಗೆ ನಿರ್ದಿಷ್ಟ ಕಾನೂನುಗಳನ್ನು ಆಧರಿಸಿವೆ. ಈ ಕಾನೂನುಗಳು ಹೆಚ್ಚಾಗಿ ಧಾರ್ಮಿಕ ಗ್ರಂಥಗಳನ್ನು ಆಧರಿಸಿವೆ.
ಏಕರೂಪ ನಾಗರಿಕ ಸಂಹಿತೆ ಪರಿಚಯಿಸುವುದು ಬಿಜೆಪಿಯ ಕಾರ್ಯಸೂಚಿಯಲ್ಲಿ ಬಹಳ ಹಿಂದಿನಿಂದಲೂ ಇದ್ದು, ಹಿಂದುತ್ವ ಪಕ್ಷ ಆಳುವ ಹಲವಾರು ರಾಜ್ಯಗಳಲ್ಲಿ ಅದನ್ನು ಜಾರಿಗೆ ತರುವತ್ತ ಹೆಜ್ಜೆ ಹಾಕುತ್ತಿದೆ.
ಜನವರಿಯಲ್ಲಿ, ಉತ್ತರಾಖಂಡ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿದೆ. ಈ ಮೂಲಕ ಸ್ವಾತಂತ್ರ್ಯದ ನಂತರ ಈ ಕಾನೂನು ಜಾರಿ ಮಾಡಿದ ಮಾಡಿದ ಮೊದಲ ರಾಜ್ಯ ಎಂದೆನೆಸಿಕೊಂಡಿದೆ. 1867ರಲ್ಲಿ ಪೋರ್ಚುಗೀಸರು ಗೋವಾದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಪರಿಚಯಿಸಿದರು. ಅದು ಈಗಲೂ ಜಾರಿಯಲ್ಲಿದೆ.
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಾಗ ಬಿಜೆಪಿ ಮುಖ್ಯವಾಗಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಗುರಿಯಾಗಿಸಿಕೊಂಡಿತ್ತು. ಮುಸ್ಲಿಂ ಪುರುಷರಿಗೆ ಬಹುಪತ್ನಿತ್ವ, ಹೆಚ್ಚಿನ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು, ವಿಚ್ಛೇದನವನ್ನು ಪ್ರಾರಂಭಿಸಲು ಮತ್ತು ಜೀವನಾಂಶವನ್ನು ನಿರಾಕರಿಸಲು ಅವಕಾಶ ನೀಡುವ ಮೂಲಕ ಮುಸ್ಲಿಂ ವೈಯಕ್ತಿಕ ಕಾನೂನು ಮಹಿಳೆಯರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ವಾದಿಸಿತ್ತು.
ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆಯನ್ನು ಪ್ರಾಥಮಿಕವಾಗಿ ಹಿಂದೂ ವೈಯಕ್ತಿಕ ಕಾನೂನಿನಿಂದ ಪಡೆಯಲಾಗಿದೆ. ಇದು ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ವೈಯಕ್ತಿಕ ಕಾನೂನು ಪದ್ಧತಿಗಳನ್ನು ಅಳಿಸಿಹಾಕಲು ಕಾರಣವಾಗಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಶಾಲಾ ಮಕ್ಕಳು ಆರ್‌ಎಸ್‌ಎಸ್ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ


