ರಾಜ್ಯದಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸವನ್ನು ಬಡಿಸುವುದು ಹಾಗೂ ಸೇವಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಹೊಸ ನಿಬಂಧನೆಗಳನ್ನು ಅಳವಡಿಸಲು ಗೋಮಾಂಸ ಸೇವನೆಯ ಅಸ್ತಿತ್ವದಲ್ಲಿರುವ ಕಾನೂನಿಗೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
“ಅಸ್ಸಾಂನಲ್ಲಿ, ನಾವು ಯಾವುದೇ ರೆಸ್ಟೋರೆಂಟ್ ಅಥವಾ ಹೋಟೆಲ್‌ನಲ್ಲಿ ಗೋಮಾಂಸವನ್ನು ನೀಡುವುದಿಲ್ಲ. ಅದನ್ನು ಯಾವುದೇ ಸಾರ್ವಜನಿಕ ಸಮಾರಂಭ ಅಥವಾ ಸಾರ್ವಜನಿಕ ಸ್ಥಳದಲ್ಲಿ ನೀಡುವಂತಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ಆದ್ದರಿಂದ, ಇಂದಿನಿಂದ ನಾವು ಹೋಟೆಲ್‌ಗಳು, ಸಾರ್ವಜನಿಕ ಸ್ಥಳಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಗೋಮಾಂಸ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದ್ದೇವೆ” ಎಂದು ಮುಖ್ಯಮಂತ್ರಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, “ಈ ಹಿಂದೆ ದೇವಾಲಯಗಳ 5 ಕಿಮೀ ವ್ಯಾಪ್ತಿಯಲ್ಲಿ ಗೋಮಾಂಸವನ್ನು ಬಡಿಸಬಾರದು ಅಥವಾ ಸೇವಿಸಬಾರದು ಎಂಬ ನಿಬಂಧನೆ ಇತ್ತು. ಆದರೆ, ಈಗ ನಾವು ಅದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದ್ದೇವೆ. ನೀವು ಅದನ್ನು ಯಾವುದೇ ಸಮುದಾಯ ಸ್ಥಳ, ಸಾರ್ವಜನಿಕ ಸ್ಥಳ, ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ತಿನ್ನಲು ಸಾಧ್ಯವಾಗುವುದಿಲ್ಲ” ಎಂದರು.
ಮುಸ್ಲಿಂ ಪ್ರಾಬಲ್ಯದ ಪ್ರದೇಶವಾದ ಸಮಗುರಿಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಗೋಮಾಂಸವನ್ನು ಹಂಚಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಶರ್ಮಾ ಅವರನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದ ಕೆಲವು ದಿನಗಳ ನಂತರ ಈ ಘೋಷಣೆ ಬಂದಿದೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರಿಗೆ ಪತ್ರ ಬರೆದರೆ ಅಸ್ಸಾಂನಲ್ಲಿ ಗೋಮಾಂಸವನ್ನು ನಿಷೇಧಿಸಲು ಸಿದ್ಧ ಎಂದು ಮುಖ್ಯಮಂತ್ರಿ ಹೇಳಿದ್ದರು.
ಇದನ್ನೂ ಓದಿ; ಹಾಸಿಗೆ ಒದ್ದೆ ಮಾಡಿದ್ದಕ್ಕೆ ಬಾಲಕಿಗೆ ಚಿತ್ರಹಿಂಸೆ ನೀಡಿದ ಹಾಸ್ಟೆಲ್ ಸಿಬ್ಬಂದಿ; ಮೂವರ ಬಂಧನ


