ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಸ್ಲಿಮರ ವಿರುದ್ದ ದ್ವೇಷ ಹರಡುತ್ತಿದ್ದಾರೆ, ಅವರ ಜನಾಂಗೀಯ ಹತ್ಯೆಗೆ ಪ್ರಚೋದಿಸುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಹಾಗೂ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ.
ಅಸ್ಸಾಂ ಬಿಜೆಪಿಯ ರಾಜ್ಯ ಘಟಕ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ (ಫೆ.7) ಹಂಚಿಕೊಂಡ ‘ಸಿಎಂ ಶರ್ಮಾ ಮುಸ್ಲಿಮರಿಗೆ ಗುಂಡಿಕ್ಕುವಂತೆ ತೋರಿಸುವ’ ಎಐ ವಿಡಿಯೋಗೆ ಸಂಬಂಧಪಟ್ಟಂತೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗುವಾಹಟಿಯ ಕಾಂಗ್ರೆಸ್ ಪ್ರಧಾನ ಕಚೇರಿ ರಾಜೀವ್ ಭವನದಲ್ಲಿ ಸೋಮವಾರ (ಫೆ.9) ಸುದ್ದಿಗೋಷ್ಠಿ ನಡೆಸಿದ ಗೊಗೊಯ್, “ಅಸ್ಸಾಂ ಬಿಜೆಪಿ ಘಟಕ ಹಂಚಿಕೊಂಡ ವಿಡಿಯೋ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿತ್ತು. ಸಿಎಂ ‘ಕೆಟ್ಟ ಮತ್ತು ಅಪಾಯಕಾರಿ’ ವಿಷಯವನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾನುವಾರ (ಫೆ.8) ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಶರ್ಮಾ, ಗೌರವ್ ಗೊಗೊಯ್ ಮತ್ತು ಅವರ ಕುಟುಂಬ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆಯೂ ಗೊಗೊಯ್ ವಿರುದ್ದ ಶರ್ಮಾ ಈ ಆರೋಪವನ್ನು ಮಾಡಿದ್ದರು. ಶರ್ಮಾ ಅವರ ಆರೋಪಕ್ಕೆ ಗೊಗೊಯ್ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.
ಶರ್ಮಾ ಅವರ ಆರೋಪಗಳನ್ನು ತಳ್ಳಿ ಹಾಕಿದ ಗೊಗೊಯ್, “ನನ್ನ ಪತ್ನಿ 2013ರಲ್ಲಿ ಕೆಲಸದ ನಿಮಿತ್ತ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು. ಆ ವರ್ಷದ ಡಿಸೆಂಬರ್‌ನಲ್ಲಿ 10 ದಿನಗಳ ಭೇಟಿಯ ಸಮಯದಲ್ಲಿ ನಾನು ಅವರ ಜೊತೆಗಿದ್ದೆ. ಈ ವಿಷಯದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಭೇಟಿಯ ಬಗ್ಗೆ ತನ್ನನ್ನು ಎಂದಿಗೂ ಪ್ರಶ್ನಿಸಿಲ್ಲ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಕಳೆದ ಆರು ತಿಂಗಳಿನಿಂದ ಉದ್ದೇಶಪೂರ್ವಕವಾಗಿ ಎಸ್‌ಐಟಿ ವರದಿಯನ್ನು ತಡೆಹಿಡಿದಿದ್ದಾರೆ. ಏಕೆಂದರೆ ಅವರು ಮಾಡಿರುವ ಆರೋಪಗಳಿಗೆ ಆ ವರದಿಯಲ್ಲಿ ಯಾವುದೇ ಪೂರಕ ಸಾಕ್ಷ್ಯಗಳಿಲ್ಲ, ಹಾಗಾಗಿಯೇ ಅವರು ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಹಿಂಜರಿಯುತ್ತಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿ ತನ್ನ ಅಪ್ರಾಪ್ತ ಮಕ್ಕಳನ್ನು ವಿವಾದಕ್ಕೆ ಎಳೆದಿರುವ ಬಗ್ಗೆ ಕಾನೂನು ಆಯ್ಕೆಗಳನ್ನು ಅನ್ವೇಷಿಸುವುದಾಗಿ ಗೊಗೊಯ್ ತಿಳಿಸಿದ್ದಾರೆ.


