ಅಸ್ಸಾಂನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ತೆರೆಬಿದ್ದಿದ್ದು, ಹಾಲಿ ಸಿಎಂ ಸರ್ಬಾನಂದ ಸೋನೊವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲಿಗೆ ಸದ್ಯ ಆರೋಗ್ಯ ಸಚಿವರಾಗಿದ್ದ ಹಿಮಂತ ಬಿಸ್ವ ಶರ್ಮಾ ಅಸ್ಸಾಂ ನೂತನ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ.
ಅಸ್ಸಾಂನ ಸ್ಥಳೀಯ ಸೋನೊವಾಲ್-ಕಾಚಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಸೋನೊವಾಲ್ ಮತ್ತು ಈಶಾನ್ಯ ರಾಜ್ಯಗಳ ಎನ್‌ಡಿಎ ಕನ್ವೀನರ್ ಆಗಿರುವ ಅಸ್ಸಾಮೀ ಬ್ರಾಹ್ಮಣರಾದ ಹಿಮಂತ ಬಿಸ್ವ ಶರ್ಮಾರವರ ನಡುವೆ ಮೇ 02 ರಂದು ಫಲಿತಾಂಶ ಪ್ರಕಟವಾದಾಗಿನಿಂದಲೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ನಿನ್ನೆ ಇಬ್ಬರು ನಾಯಕರು ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
Assam: Outgoing CM Sarbananda Sonowal submits his resignation to Governor Jagdish Mukhi
(file photo) pic.twitter.com/fZOQHIg1td
— ANI (@ANI) May 9, 2021
ಹಿಮಂತ ಬಿಸ್ವಾ ಶರ್ಮಾ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು. ನಂತರ ಪ್ರಬಲವಾಗಿ ಬೆಳೆದ ಅವರನ್ನು ಪಕ್ಷದ ಟ್ರಬಲ್ ಶೂಟರ್ ಎನ್ನಲಾಗುತ್ತದೆ. ಪ್ರಚೋದನಾಕಾರಿ ಹೇಳಿಕೆಗಳಿಗೆ ಕುಖ್ಯಾತಿಯಾದ ಅವರು ಈ ಚುನವಣೆಯ ಸಂದರ್ಭದಲ್ಲಿಯೂ ಸಹ “ಹಗ್ರಾಮ ಮೊಹಿಲರಿ ಉಗ್ರವಾದ ಚಟುವಟಿಕೆಯಲ್ಲಿ ತೊಡಗಿದರೆ… ಆತ ಜೈಲಿಗೆ ಹೋಗುತ್ತಾನೆ. ಇದು ನೇರವಾದ ಮಾತು… ಈಗಾಗಲೇ ಸಾಕಷ್ಟು ಪುರಾವೆಗಳು ದೊರೆತಿವೆ. ಈ ಪ್ರಕರಣವನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಗೆ ನೀಡಲಾಗುತ್ತಿದೆ” ಎಂದು ಬೆದರಿಕೆ ಹಾಕಿದ್ದರು.
ಆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ 48 ಗಂಟೆಗಳ ಕಾಲ ಪ್ರಚಾರದಿಂದ ಚುನಾವಣಾ ಆಯೋಗ ನಿಷೇಧ ಹೇರಿತ್ತು.
ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ ಜಯಗಳಿಸಿದೆ. ಎನ್‌ಡಿಎ ಮಿತ್ರಪಕ್ಷಗಳಾದ ಎಜಿಪಿ 09 ಮತ್ತು ಯುಪಿಪಿಎಲ್ 06 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಹುಮತ ಹೊಂದಿವೆ.
ಈಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸರ್ಬಾನಂದ ಸೋನೊವಾಲ್‌ಗೆ ಕೇಂದ್ರ ಸಂಪುಟದಲ್ಲಿ ಸ್ಥಾನಮಾನ ನೀಡಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ಕೊರೊನಾ ಎದುರಿಸಲು ನೆಹರು-ಇಂದಿರಾ-ಮನಮೋಹನ್ ಸಿಂಗ್ ಕಟ್ಟಿದ ವ್ಯವಸ್ಥೆಯೆ ದೇಶಕ್ಕೆ ಸಹಾಯ ಮಾಡಿದೆ: ಶಿವಸೇನೆ


