ಮಾರ್ಚ್ 27 ರಂದು ಪಂಚರಾಜ್ಯಗಳ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಅಂದು ಚುನಾವಣೆ ನಡೆದ ಅಸ್ಸಾಂನಲ್ಲಿನ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಜಯಗಳಿಸಿದೆ ಎಂಬ ‘ಜಾಹೀರಾತನ್ನು, ಸುದ್ದಿಯ ರೂಪದಲ್ಲಿ ನೀಡಿದ್ದಾರೆ’ ಎಂದು ಆರೋಪಿಸಿ ದೂರು ದಾಖಲಾಗಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ರಾಜ್ಯದ ಬಿಜೆಪಿ ಅಧ್ಯಕ್ಷ ರಂಜೀತ್ ಕುಮಾರ್ ದಾಸ್ ಮತ್ತು ಎಂಟು ಪ್ರಮುಖ ಪತ್ರಿಕೆಗಳ ವಿರುದ್ದ ಕಾಂಗ್ರೆಸ್ ದೂರು ದಾಖಲಿಸಿದೆ.
ಮಾದರಿ ನೀತಿ ಸಂಹಿತೆ (ಎಂಸಿಸಿ), ಜನರ ಪ್ರಾತಿನಿಧ್ಯ ಕಾಯ್ದೆ, 1951 ರ ಸೆಕ್ಷನ್ 126 ಎ ಮತ್ತು ಮಾರ್ಚ್ 26 ರಂದು ಹೊರಡಿಸಿದ ಇಸಿಐ ನಿರ್ದೇಶನಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾನುವಾರ ರಾತ್ರಿ ಎಫ್‌ಪೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಅಸ್ಸಾಂ ಕಾಂಗ್ರೆಸ್‌ನ ಕಾನೂನು ವಿಭಾಗದ ಅಧ್ಯಕ್ಷ ನಿರನ್ ಬೋರಾ ಹೇಳಿದ್ದಾರೆ.
ಇದನ್ನೂ ಓದಿ: ಹಿಂದಿಯಲ್ಲಿ ಸ್ವಾಗತ ಕೋರಿದ ನಿರೂಪಕಿ: ವೇದಿಕೆಯಿಂದ ಕೆಳಗಿಳಿದ ಎ ಆರ್ ರಹಮಾನ್!
“ಬಿಜೆಪಿ ನಾಯಕರು ಮತ್ತು ಸದಸ್ಯರು ಎಂಸಿಸಿ, ಜನರ ಪ್ರಾತಿನಿಧ್ಯ ಕಾಯ್ದೆ, 1951 ಮತ್ತು ಇಸಿಐನ ಸಂಬಂಧಿತ ಸೂಚನೆಗಳು ಮತ್ತು ಮಾಧ್ಯಮ ನೀತಿಗಳ ಉಲ್ಲಂಘನೆಯಾಗಿದೆ. ಬಿಜೆಪಿಗೆ ಸೋಲಾಗುತ್ತದೆ ಎಂದು ತಿಳಿದ ನಂತರ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲು ಹತಾಶ, ಅಕ್ರಮ ಮತ್ತು ಅಸಂವಿಧಾನಿಕ ವಿಧಾನಗಳನ್ನು ಆಶ್ರಯಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಎರಡನೇ ಮತ್ತು ಮೂರನೇ ಹಂತಗಳಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾರರನ್ನು ಮೋಸಗೊಳಿಸಲು ಮಾಡಲಾದ ಪೂರ್ವ ಯೋಜಿತ ಪಿತೂರಿಯಾಗಿದೆ ಇದು. ಸಿಎಂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಾಧ್ಯಕ್ಷ ಮತ್ತು ಪಕ್ಷದ ಇತರ ಸದಸ್ಯರು ಉದ್ದೇಶಪೂರ್ವಕವಾಗಿ ಉತ್ತರ ಅಸ್ಸಾಂನ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುವ ಮೂಲಕ ವಿವಿಧ ಪತ್ರಿಕೆಗಳ ಮುಖ ಪುಟಗಳಲ್ಲಿ ಜಾಹೀರಾತುಗಳನ್ನು ಸುದ್ದಿಯ ರೀತಿಯಲ್ಲಿ ಬಿಡುಗಡೆ ಮಾಡಿದ್ದಾರೆ” ಎಂದು ಬೋರಾ ಹೇಳಿದ್ದಾರೆ.
“ಮತದಾರರ ಮನಸ್ಸನ್ನು ಪೂರ್ವಾಗ್ರಹ ಪೀಡಿತಗೊಳಿಸುವ ರೀತಿಯಲ್ಲಿ ಜಾಹೀರಾತುಗಳನ್ನು ಪ್ರಸ್ತುತಪಡಿಸಲಾಗಿದೆ. ಈ ದುರುದ್ದೇಶಪೂರಿತ ಮತ್ತು ತಿರುಚಿರುವ ಜಾಹೀರಾತುಗಳು ಜನರ ಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 126 ಎ ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಂತ್ರಸ್ತ ಯುವತಿ ಪ್ರಾಣಕ್ಕೆ ಅಪಾಯವಾದರೇ ಬಿಜೆಪಿ ಸರ್ಕಾರವೇ ಹೊಣೆ- ಸಿದ್ದರಾಮಯ್ಯ
ಇದಲ್ಲದೆ, ಅಸ್ಸಾಂಗೆ ನಿರ್ದಿಷ್ಟವಾದ ಇಸಿಐನ ಸೂಚನೆಗಳು ಇದ್ದು, ಮಾರ್ಚ್ 27 ರಿಂದ ಏಪ್ರಿಲ್ 29 ರ ವರೆಗೆ ಮತದಾನ ಫಲಿತಾಂಶಗಳಿಗೆ ಸಂಬಂಧಿಸಿದ ಯಾವುದೇ ರೀತಿಯ ಮುನ್ಸೂಚನೆಯನ್ನು ಪ್ರಸಾರ ಮಾಡುವುದನ್ನು ನಿಷೇಧಿಸಿವೆ ಎಂದು ಬೋರಾ ಹೇಳಿದ್ದಾರೆ.
“ಪ್ರಸಕ್ತ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ತಮ್ಮ ಪರವಾಗಿದೆ ಎಂದು ತಪ್ಪಾಗಿ ಊಹಿಸುವ ದೊಡ್ಡ ಪ್ರಮಾಣದ ಜಾಹೀರಾತುಗಳನ್ನು ಬಿಜೆಪಿ ಪ್ರಕಟಿಸುವುದರಿಂದ ಇದು ಈ ಸೂಚನೆಗಳ ನೇರ ಉಲ್ಲಂಘನೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಪತ್ರಿಕೆಗಳು ಸೇರಿದಂತೆ ದೂರಿನಲ್ಲಿ ಹೆಸರಿಸಲಾದವರ ವಿರುದ್ಧ “ತ್ವರಿತ ಮತ್ತು ಅಗತ್ಯ ಕ್ರಮ” ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಅಸ್ಸಾಂನಲ್ಲಿ ಶನಿವಾರ ನಡೆದ ಮೊದಲ ಹಂತದ ಮತದಾನದ ವೇಳೆ ಒಟ್ಟು 81.09 ಲಕ್ಷ ಮತದಾರರಲ್ಲಿ ಶೇಕಡಾ 79.93 ರಷ್ಟು ಜನರು 47 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಎರಡನೇ ಹಂತದಲ್ಲಿ 39 ಸ್ಥಾನಗಳಿಗೆ ಚುನಾವಣೆ ಏಪ್ರಿಲ್ 1 ರಂದು ಮತ್ತು 40 ಸ್ಥಾನಗಳಿಗೆ ಮೂರನೇ ಮತ್ತು ಅಂತಿಮ ಹಂತದಲ್ಲಿ ಏಪ್ರಿಲ್ 6 ರಂದು ಮತದಾನ ನಡೆಯಲಿದೆ.
ಇದನ್ನೂ ಓದಿ: ಸಿಡಿ ಪ್ರಕರಣ: ರಕ್ಷಣೆ ಕೊಡಿ ಎಂದು ಹೈಕೋರ್ಟ್ ಸಿಜೆಐಗೆ ಪತ್ರ ಬರೆದ ಸಂತ್ರಸ್ತ ಯುವತಿ


