ಹಿಂದಿಯಲ್ಲಿ ಸ್ವಾಗತ ಕೋರಿದ ನಿರೂಪಕಿ: ವೇದಿಕೆಯಿಂದ ಕೆಳಗಿಳಿದ ಎ ಆರ್ ರಹಮಾನ್

‘99 ಸಾಂಗ್ಸ್’ ಚಿತ್ರದ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯೊಬ್ಬರು ಹಿಂದಿಯಲ್ಲಿ ಸ್ವಾಗತಿಸಿದರು ಎನ್ನುವ ಕಾರಣಕ್ಕೆ ಎ ಆರ್ ರಹಮಾನ್ ವೇದಿಕೆಯಿಂದ ಕೆಳಗಿಳಿದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತಗಾರ ಎ ಆರ್ ರೆಹಮಾನ್ ಅವರ ಮೊದಲ ನಿರ್ಮಾಣದ, ವಿಶ್ವೇಶ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ ‘99 ಸಾಂಗ್ಸ್’ ಚಿತ್ರದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

‘99 ಸಾಂಗ್ಸ್‌’ನಲ್ಲಿ ಹೊಸಮುಖಗಳಾದ ಇಹಾನ್ ಭಟ್ ಮತ್ತು ಎಡಿಲ್ಸಿ ವರ್ಗಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ, ಚೆನ್ನೈನಲ್ಲಿ ಚಿತ್ರದ ಲಾಂಚಿಂಗ್ ಕಾರ್ಯಕ್ರಮ ನಡೆಯಿತು. ಈ ಚಿತ್ರವನ್ನು ಎ ಆರ್ ರಹಮಾನ್ ಅವರೇ ಅವರ ವೈಎಂ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಹೊಸಮುಖಗಳ ಜೊತೆಗೆ ಲಿಸಾ ರೇ, ಮನೀಶಾ ಕೊಯಿರಾಲಾ, ಆದಿತ್ಯ ಸೀಲ್, ಡ್ರಮ್ಮರ್ ರಂಜಿತ್ ಬರೋಟ್ ಮತ್ತು ರಾಹುಲ್ ರಾಮ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ರಹಮಾನ್ ಅವರನ್ನು ತಮಿಳಿನಲ್ಲಿ ಸ್ವಾಗತಿಸಿದ ನಿರೂಪಕಿ, ನಟ ಇಹಾನ್ ಭಟ್ ಅವರನ್ನು ಹಿಂದಿಯಲ್ಲಿ ಸ್ವಾಗತಿಸಿದರು. “ಇಹಾನ್ ಭಟ್, ಚೆನ್ನೈ ಮೇ ಆಪ್ ಕಾ ಹಾರ್ದಿಕ್ ಸ್ವಾಗತ್ ಕರ್ತಿ ಹೂ” ಎಂದರು.

ಇದಕ್ಕೆ ರಹಮಾನ್, ಆಶ್ಚರ್ಯಕರ ರೀತಿಯಲ್ಲಿ ‘ಹಿಂದಿ’! ಎಂದು ಪ್ರತಿಕ್ರಿಯಿಸಿ ವೇದಿಕೆಯಿಂದ ಕೆಳಗಿಳಿದರು. ನಂತರ ‘ನೀವು ತಮಿಳು ಭಾಷೆಯಲ್ಲಿ ಮಾತನಾಡುತ್ತೀರೋ ಇಲ್ಲವೋ ಎಂದು ನಾನು ಆಗಲೇ ನಿಮ್ಮನ್ನು ಕೇಳಿರಲಿಲ್ಲವೇ?’ ಎಂದು ಹಾಸ್ಯಚಟಾಕಿ ಹಾರಿಸಿದರು. ಈ ವೇಳೆ, ಕಾರ್ಯಕ್ರಮದಲ್ಲಿ ಸೇರಿದ್ದ ಜನ ಸಮೂಹ ನಗೆಗಡಲಲ್ಲಿ ತೇಲಿತು.

ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡ ಮಾಯ, ತಮಿಳುನಾಡಿನಲ್ಲಿ ತಮಿಳುಮಯ: ಹಿಂದಿ ಹೇರಿಕೆಗೆ ಆಕ್ರೋಶ

ಬಳಿಕ ತಮಿಳಿನಲ್ಲಿ ಉತ್ತರಿಸಿದ ನಿರೂಪಕಿ, “ಇಹಾನ್ ಭಟ್ ಅವರಿಗೆ ಅರ್ಥವಾಗಲಿ ಎಂದು ಅವರನ್ನು ಹಿಂದಿ ಭಾಷೆಯಲ್ಲಿ ಸ್ವಾಗತಿಸಲು ಪ್ರಯತ್ನಿಸಿದೆ. ಕೋಪಿಸಿಕೊಳ್ಳಬೇಡಿ ಸರ್” ಎಂದು ವಿವರಣೆ ನೀಡಿದರು.

ಆದರೆ ಇದು ಆ ಕ್ಷಣಕ್ಕೆ ಹಾಸ್ಯದಂತೆ ಕಂಡರೂ ಸಹ ಹಿಂದಿ ಹೇರಿಕೆಯ ವಿರುದ್ಧದ ತಮಿಳಿಗರ ಧೋರಣೆಯನ್ನು ಬಿಂಬಿಸುತ್ತದೆ. ಹಾಗಾಗಿಯೇ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡು ಹಿಂದಿ ಭಾಷಾ ಹೇರಿಕೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ ಅಲ್ಲ: ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ದೊಡ್ಡರಂಗೇಗೌಡ

1 COMMENT

LEAVE A REPLY

Please enter your comment!
Please enter your name here