ನಂದಿಗ್ರಾಮ: ವೀಲ್‌ಚೇರ್‌ನಲ್ಲಿಯೇ ರ್‍ಯಾಲಿ ನಡೆಸುತ್ತಿರುವ ಮಮತಾ ಬ್ಯಾನರ್ಜಿ
PC: ANI

ಪಶ್ಚಿಮ ಬಂಗಾಳದಲ್ಲಿ ಒಂದು ಹಂತದ ಮತದಾನ ಮುಗಿದಿದೆ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಆಡಿಯೊ ಲೀಕ್ ಪ್ರಕರಣದ ಬಗ್ಗೆ ಆರೋಪ-ಪ್ರತ್ಯಾರೋಪಗಳ ನಡುವೆಯೇ ಎರಡನೇ ಹಂತದ ಮತದಾನಕ್ಕೆ ಭರ್ಜರಿ ಪ್ರಚಾರ ಆರಂಭವಾಗಿದೆ. ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್‌ಚೇರ್‌ನಲ್ಲಿಯೇ ಕುಳಿತು ರ್‍ಯಾಲಿ ನಡೆಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿರುವ ನಂದಿಗ್ರಾಮದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ನಾಮಪತ್ರ ಸಲ್ಲಿಸುವಾಗ ಹಲ್ಲೆಗೊಳಗಾಗಿದ್ದರು. ನಂದಿಗ್ರಾಮಕ್ಕೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಪ್ರಚಾರ ಆರಂಭವಾಗಿದೆ.

ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್, ನಂದಿಗ್ರಾಮದಲ್ಲಿ ಎಂಟು ಕಿ.ಮೀ ರೋಡ್ ಶೋ ನಡೆಸಿದೆ. ದೇಶದಲ್ಲಿ ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಟಿಎಂಸಿ ಸಾರ್ವಜನಿಕ ಸಭೆ ಆಯೋಜಿಸಿದೆ. ಗುರುವಾರ (ಏಪ್ರಿಲ್ 1) ನಂದಿಗ್ರಾಮದಲ್ಲಿ ಮತದಾನ ನಡೆಯಲಿದೆ.

ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿರುವ ಸುವೇಂದು ಅಧಿಕಾರಿ ನಡುವೆ ತೀವ್ರ ಪೈಪೋಟಿ ಇದೆ.

ಇದನ್ನೂ ಓದಿ: ದೆಹಲಿ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ: ಈ ಮಸೂದೆ ಏನು ಹೇಳುತ್ತದೆ?

 

ರಾಜ್ಯದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯು ಆಡಳಿತ ಪಕ್ಷ ಟಿಎಂಸಿ ವಿರುದ್ಧ ಹಲವು ದೋಷಾರೋಪಣೆಗಳನ್ನು ಮಾಡಿದೆ. ನಂದಿಗ್ರಾಮದಲ್ಲಿ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಚುನಾವಣಾ ಆಯೋಗ ಅಮಾನತುಗೊಳಿಸಿತ್ತು.

ಮೊದಲ ಹಂತದ ಮತದಾನ ಮುಗಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ 30 ರಲ್ಲಿ 26 ಸ್ಥಾನಗಳನ್ನು ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ 200 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಬಹುಮತ ಪಡೆಯುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಎಂಟು ಹಂತಗಳಲ್ಲಿ ಮಾರ್ಚ್ 27 ರಿಂದ 8 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಎರಡನೇ ಹಂತದ ಮತದಾನ ಏಪ್ರಿಲ್ 1 ರಂದು ನಡೆಯಲಿದೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ.


 

ಇದನ್ನೂ ಓದಿ: ಪಂಜಾಬ್ ಬಿಜೆಪಿ ಶಾಸಕನ ಮೇಲೆ ಹಲ್ಲೆ ಪ್ರಕರಣ: ನಮ್ಮ ರೈತರು ಭಾಗಿಯಾಗಿಲ್ಲವೆಂದ ರಾಕೇಶ್ ಟಿಕಾಯತ್

LEAVE A REPLY

Please enter your comment!
Please enter your name here