ಮುಂದಿನ ವರ್ಷದಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರೈತ ಹಕ್ಕುಗಳ ಹೋರಾಟಗಾರರ ಸಮೂಹವಾದ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (ಕೆಎಂಎಸ್ಎಸ್) ಶೀಘ್ರದಲ್ಲೇ ಹೊಸ ಪ್ರಾದೇಶಿಕ ಪಕ್ಷ ಪ್ರಾರಂಭಿಸಲಿದ್ದು, ಅದರ ಸಂಸ್ಥಾಪಕ ಅಖಿಲ್ ಗೊಗೊಯ್ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದೆ.
ಪ್ರಸ್ತುತ ಹೋರಾಟಗಾರ ಅಖಿಲ್ ಗೊಗೊಯ್ ಜೈಲಿನಲ್ಲಿದ್ದಾರೆ. ನಿಷೇಧಿತ ಸಿಪಿಐ (ಮಾವೋವಾದಿ)ಯೊಂದಿಗಿನ ಸಂಪರ್ಕವಿದೆ ಎಂದು ಆರೋಪಿಸಿ ದೇಶದ್ರೋಹದ ಆರೋಪದ ಮೇಲೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಎನ್‌ಐಎ ವಿರುದ್ಧ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಸ್ಸಾಂನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಗೊಗೊಯ್ ಮುಂದಾಳತ್ವದ ಕೆಎಂಎಸ್ಎಸ್ ಮಹತ್ವದ ಪಾತ್ರ ವಹಿಸಿತ್ತು.
“ನಾವು ರಾಜಕೀಯ ಪಕ್ಷವನ್ನು ರಚಿಸುತ್ತೇವೆ. ಗೊಗೊಯ್ ಜೈಲಿನಿಂದ ಹೊರಬಂದ ನಂತರ ಪಕ್ಷದ ಹೆಸರು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದರ ಕುರಿತು ಇತರ ವಿವರಗಳನ್ನು ಪ್ರಕಟಿಸಲಾಗುವುದು. ಗೊಗೊಯ್ ಸಿಎಂ ಅಭ್ಯರ್ಥಿಯಾಗಲಿದ್ದಾರೆ” ಎಂದು ಕೆಎಂಎಸ್ಎಸ್ ಅಧ್ಯಕ್ಷ ಭಾಸ್ಕೊ ಡಿ ಸೈಕಿಯಾ ಹೇಳಿದ್ದಾರೆ.
ಹೊಸ ಪಕ್ಷವನ್ನು ರಾಜ್ಯದ ವಿವಿಧ ಬುಡಕಟ್ಟು, ಜನಾಂಗೀಯ, ಧಾರ್ಮಿಕ ಮತ್ತು ಭಾಷಾ ಸಮುದಾಯಗಳಿಗೆ ಸೇರಿದ ನಾಯಕರು ಮುನ್ನೆಡೆಸಲಿದ್ದಾರೆ. ಈ ಪ್ರಾದೇಶಿಕ ಪಕ್ಷವು ಅವರಿಗಾಗಿ ಕೆಲಸ ಮಾಡಲಿದೆ ಎಂದು ಅವರು ಗುವಾಹಟಿಯಲ್ಲಿ ಹೇಳಿದರು.
ಕಾಂಗ್ರೆಸ್ ಮತ್ತು ಎಐಯುಡಿಎಫ್ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ. ಈ ಹಿಂದೆ ಕೆಎಂಎಸ್‌ಎಸ್ ರಾಜಕೀಯದಲ್ಲಿ ನಮ್ಮೊಂದಿಗೆ ಸೇರಲಿದೆ ಎಂದು ಕಾಂಗ್ರೆಸ್ ಮತ್ತು ಎಐಯುಡಿಎಫ್ ನಾಯಕರು ಹೇಳಿದ್ದರು.
ಆದರೆ ಸೈಕಿಯಾ ಅಂತಹ ಯಾವುದೇ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. “ನಾವು ಯಾವುದೇ ರಾಷ್ಟ್ರೀಯ ಪಕ್ಷ ಅಥವಾ ಯಾವುದೇ ಕೋಮು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಬಿಜೆಪಿಯನ್ನು ಅಸ್ಸಾಂನಿಂದ ಹೊರಹಾಕಲು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಬೇಕೆಂದು ನಾವು ಮನವಿ ಮಾಡುತ್ತೇವೆ” ಹೊಸ ಪಕ್ಷವು, ಯಾರೊಂದಿಗೂ ರಾಜಿ ಮಾಡಿಕೊಳ್ಳದ ರಾಜಕೀಯ ಶಕ್ತಿಯಾಗಲಿದೆ ಎಂದು ಅವರು ಹೇಳಿದರು.
“ಅಖಿಲ್ ಗೊಗೊಯ್ ಅಕ್ಟೋಬರ್ ವೇಳೆಗೆ ಬಿಡುಗಡೆಯಾಗಬಹುದು. ಅವರು ಜೈಲಿನಿಂದ ಹೊರಬಂದ ನಂತರ ಪಕ್ಷದ ಹೆಸರನ್ನು ಪ್ರಕಟಿಸಲಿದ್ದಾರೆ. ಪಕ್ಷದ ಹೆಸರು ಈಗಾಗಲೇ ಅಂತಿಮಗೊಂಡಿದೆ ” ಎಂದು ಸೈಕಿಯಾ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಸಿಎಎ ವಿರೋಧಿ ಪ್ರತಿಭಟನಕಾರರ ಬಂಧನ: ಆತಂಕ ವ್ಯಕ್ತಪಡಿಸಿದ ವಿಶ್ವಸಂಸ್ಥೆ


