ದನ ಕಳ್ಳತನದ ಶಂಕೆಯ ಮೇಲೆ ಗುಂಪೊಂದು ದಾಳಿ ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ (ಜ.19) ಅಸ್ಸಾಂನ ಕೊಕ್ರಜಾರ್‌ನಲ್ಲಿ ನಡೆದಿದೆ.
ಬಲಿಪಶುಗಳು, ರಸ್ತೆ ನಿರ್ಮಾಣ ಯೋಜನೆಯೊಮದರಲ್ಲಿ ಭಾಗಿಯಾಗಿದ್ದರು. ಸೋಮವಾರ ರಾತ್ರಿ ವಾಹನದಲ್ಲಿ ಸ್ಥಳ ಪರಿಶೀಲನೆ ನಡೆಸಿ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ವಾಹನವು ಗೌರಿ ನಗರ-ಮಾಶಿಂಗ್ ರಸ್ತೆಯನ್ನು ತಲುಪಿದಾಗ, ಸ್ಥಳೀಯ ಗ್ರಾಮಸ್ಥರ ಗುಂಪು ಅದನ್ನು ತಡೆಯಲು ಪ್ರಯತ್ನಿಸಿತು, ವಾಹನದಲ್ಲಿದ್ದವರು ದನ ಕಳ್ಳತನ ಮಾಡುವವರು ಎಂದು ಶಂಕಿಸಿ ಹಲ್ಲೆ ನಡೆಸಿದ್ದಾರೆ” ಎಂದು ಪೊಲೀಸರು ಆರಂಭಿಕ ತನಿಖೆಯ ನಂತರ ತಿಳಿಸಿದ್ದಾರೆ.
ಗ್ರಾಮಸ್ಥರು ಬೆನ್ನಟ್ಟಿದ್ದರಿಂದ ವಾಹನ ಅಪಘಾತಕ್ಕೀಡಾಯಿತು, ನಂತರ ಗುಂಪು ವಾಹನದಲ್ಲಿದ್ದವರ ಮೇಲೆ ದಾಳಿ ಮಾಡಿ ವಾಹನಕ್ಕೆ ಬೆಂಕಿ ಹಚ್ಚಿತು. ಸ್ಥಳೀಯ ನಿವಾಸಿಗಳು ಎಚ್ಚರಿಸಿದ ನಂತರ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ನಂತರ, ಅಧಿಕಾರಿಗಳು ಬಲಿಪಶುಗಳನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಸಿಖ್ನಾ ಜ್ವ್ಹ್ಲಾವ್ ಬಿಸ್ಮಿತ್ ಅಲಿಯಾಸ್ ರಾಜಾ ಎಂಬ ವ್ಯಕ್ತಿ ಗಾಯಗೊಂಡು ಸಾವನ್ನಪ್ಪಿದರು. ಪ್ರಭಾತ್ ಬ್ರಹ್ಮ, ಜುಬಿರಾಜ್ ಬ್ರಹ್ಮ, ಸುನಿಲ್ ಮುರ್ಮು ಮತ್ತು ಮಹೇಶ್ ಮುರ್ಮು ಎಂಬ ನಾಲ್ವರು ಗಂಭೀರ ಗಾಯಗೊಂಡಿದ್ದು, ಕೊಕ್ರಝಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯು ಪ್ರದೇಶದ ಕೆಲವು ಭಾಗಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಶಾಂತಿ ಪುನಃಸ್ಥಾಪಿಸಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಬಲಿಪಶುವಿಗೆ ನ್ಯಾಯ ಮತ್ತು ಹೊಣೆಗಾರರನ್ನು ಬಂಧಿಸಬೇಕೆಂದು ಒತ್ತಾಯಿಸಿ ಸ್ಥಳೀಯರು ಮಂಗಳವಾರ ಪೊಲೀಸ್ ಹೊರಠಾಣೆ ಹೊರಗೆ ಪ್ರತಿಭಟನೆ ನಡೆಸಿ ಪ್ರಮುಖ ಹೆದ್ದಾರಿಯನ್ನು ತಡೆದರು. ಪ್ರಕರಣದಲ್ಲಿ ಇದುವರೆಗೆ ಹತ್ತೊಂಬತ್ತು ಜನರನ್ನು ಬಂಧಿಸಲಾಗಿದೆ.


