ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಗುರುವಾರ (ಫೆ.20) ಕಾಂಗ್ರೆಸ್ ಸಂಸದ ರಕೀಬುಲ್ ಹುಸೈನ್ ಮೇಲೆ ಅಪರಿಚಿತ ಜನರ ಗುಂಪೊಂದು ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಧುಬ್ರಿ ಲೋಕಸಭಾ ಕ್ಷೇತ್ರದ ಸಂಸದರಾದ ಹುಸೈನ್ ಅವರು ದಾಳಿ ವೇಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್‌ಒಗಳು) ಅವರನ್ನು ರಕ್ಷಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಸಂಸದ ಹುಸೈನ್ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ನಾಗಾಂವ್ ಜಿಲ್ಲೆಯ ರೂಪಾಹಿಹತ್‌ನ ನಟುನ್ ಬಝಾರ್‌ನಲ್ಲಿ ದಾಳಿ ನಡೆದಿದೆ.
ಹಲ್ಲೆಯ ವೈರಲ್ ವಿಡಿಯೋದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ದುಷ್ಕರ್ಮಿಗಳ ಪೈಕಿ ಒಬ್ಬ ಸಂಸದ ಹುಸೈನ್ ಅವರಿಗೆ ಬ್ಯಾಟ್‌ನಿಂದ ಥಳಿಸಿ ಸ್ಥಳದಿಂದ ಪರಾರಿಯಾಗಿರುವುದು ಇದೆ. ದುಷ್ಕರ್ಮಿಗಳು ಹುಸೈನ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳ ಮೇಲೂ ದಾಳಿ ಮಾಡಿದ್ದಾರೆ. ಈ ವೇಳೆ ಒಬ್ಬರು ಭದ್ರತಾ ಅಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.
Congress MP from #Dhubri seat, #RakibulHussain, and his personal security officers (PSOs) were attacked by a group of unidentified persons in #Rupohihat area of #Assam’s #Nagaon district.
The MP was on his way to attend a public meeting on a scooter when some people tried to… pic.twitter.com/644p3DJLET
— Hate Detector 🔍 (@HateDetectors) February 20, 2025
ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹೇಳಿದ್ದರೂ, ಭದ್ರತಾ ಲೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
“ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸುಧಾರಣೆಯಾಗಿದೆ ಎಂದು ಮುಖ್ಯಮಂತ್ರಿ ವಿಧಾನಸಭೆಗೆ ವಿವರಿಸುತ್ತಾರೆ. ಆದರೆ, ಒಬ್ಬ ಸಂಸದ ಬೀದಿಯಲ್ಲಿ ಸುರಕ್ಷಿತವಾಗಿಲ್ಲ. ಒಬ್ಬ ಸಂಸದನ ಮೇಲೆ ಈ ರೀತಿ ದಾಳಿ ನಡೆಯಲು ಕಾರಣ ಏನು ಎಂಬುದನ್ನು ತನಿಖೆ ಮಾಡಬೇಕಾಗಿದೆ” ಎಂದು ಅಸ್ಸಾಂ ವಿಧಾನಸಭೆಯ ವಿರೋಧ ಪಕ್ಷ ಹಾಗೂ ಕಾಂಗ್ರೆಸ್ ನಾಯಕ ದೇಬಬ್ರತ ಸೈಕಿಯಾ ಹೇಳಿದ್ದಾರೆ.
“ಸಂಸದ ಹುಸೈನ್ ಅವರು ಸುರಕ್ಷಿತವಾಗಿದ್ದಾರೆ. ಅವರ ಮೇಲೆ ಗುಂಪೊಂದು ದಾಳಿ ಮಾಡಿದೆ. ಅವರ ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ. ಆದಾಗ್ಯೂ, ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ” ಎಂದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಹರ್ಮೀತ್ ಸಿಂಗ್ ತಿಳಿಸಿದ್ದಾರೆ.
ರಕೀಬುಲ್ ಹುಸೈನ್ ಅವರು ಕಳೆದ ವರ್ಷದ (2024) ಸಾರ್ವತ್ರಿಕ ಚುನಾವಣೆಯಲ್ಲಿ ಧುಬ್ರಿ ಲೋಕಸಭಾ ಕ್ಷೇತ್ರದಿಂದ ದಾಖಲೆಯ 10 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಹುಸೈನ್ ಅವರು ಈ ಹಿಂದೆ ಐದು ಬಾರಿ ಪ್ರತಿನಿಧಿಸಿದ್ದ ಸಮಗುರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಗೆ ಅವರ ಮಗ ಸ್ಪರ್ಧಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ದಿಪ್ಲು ರಂಜನ್ ಶರ್ಮಾ ವಿರುದ್ಧ ಸೋತಿದ್ದಾರೆ.
ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಉಪಚುನಾವಣೆಗೂ ಮುನ್ನ ಕ್ಷೇತ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಹಿಂಸಾಚಾರ ಘಟನೆಗಳು ನಡೆದಿತ್ತು.
ಸರ್ಕಾರಿ ಪ್ರಾಯೋಜಿತ ಕೃತ್ಯ
ಸಂಸದನ ಮೇಲೆ ನಡೆದ ದಾಳಿಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕೈ ನಾಯಕರು, “ಇದು ಪ್ರಜಾಪ್ರಭುತ್ವದ ಕೊಲೆ. ಜಂಗಲ್ ರಾಜ್ ಮತ್ತು ಗೂಂಡಾ ರಾಜ್ ಇಲ್ಲಿ ಮೇಲುಗೈ ಸಾಧಿಸಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರು ಇಂದು (ಫೆ.21) ಅಸ್ಸಾಂ ವಿಧಾನಸಭಾ ಸಂಕೀರ್ಣದಲ್ಲಿ ಬಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ನಡೆದ್ದಾರೆ. ಅಪರಾಧಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಸಂಸದನ ಮೇಲೆ ದಾಳಿ ನಡೆಯುವ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಪೊಲೀಸರು ಸರಿಯಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿರಲಿಲ್ಲ. ಆ ಪ್ರದೇಶದ (ದಾಳಿ ನಡೆದ ಜಾಗ) ಈ ಹಿಂದೆಯೂ ಇದೇ ರೀತಿಯ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಇದು ಪ್ರಜಾಪ್ರಭುತ್ವದ ಕೊಲೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸ್ಥೈರ್ಯ ಕುಗ್ಗಿಸುವ ಪ್ರಯತ್ನ” ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಕೋಲಾಹಲ
ಸಂಸದನ ಮೇಲೆ ನಡೆದ ದಾಳಿ ಇಂದು (ಫೆ.21) ಅಸ್ಸಾಂ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ವಿಷಯವನ್ನು ಚರ್ಚಿಸಲು ಮಂಡಿಸಲಾದ ನಿಲುವಳಿ ಸೂಚನೆಗೆ ಅವಕಾಶ ನಿರಾಕರಿಸಿದ ಹಿನ್ನೆಲೆ ವಿರೋಧ ಪಕ್ಷ ಕಾಂಗ್ರೆಸ್‌ನ ಶಾಸಕರು ಗದ್ದಲದ ಉಂಟು ಮಾಡಿದರು. ಹಾಗಾಗಿ, ಸ್ಪೀಕರ್ ಬಿಸ್ವಜಿತ್ ಡೈಮರಿ ಮೊದಲ 30 ನಿಮಿಷಗಳಲ್ಲಿ ಎರಡು ಬಾರಿ ಸದನವನ್ನು ಮುಂದೂಡಿದರು.
ದೆಹಲಿ ಕಾಲ್ತುಳಿತಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ತೆಗೆದುಹಾಕುವಂತೆ ಎಕ್ಸ್‌ಗೆ ಸೂಚಿಸಿದ ರೈಲ್ವೆ ಸಚಿವಾಲಯ!


