ಮುಸ್ಲಿಮರ ವಿವಾಹ, ವಿಚ್ಛೇದನದ ಸರ್ಕಾರಿ ನೋಂದಣಿಯನ್ನು ಕಡ್ಡಾಯಗೊಳಿಸುವ ಮತ್ತು ಕಡಿಮೆ ವಯಸ್ಸಿನ ವಿವಾಹವನ್ನು ವಿರೋಧಿಸುವ ಮಸೂದೆಯನ್ನು ಅಸ್ಸಾಂ ವಿಧಾನಸಭೆ ಗುರುವಾರ ಅಂಗೀಕರಿಸಿದೆ.
ಹೊಸ ಮಸೂದೆ ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯ್ದೆ-1935 ಅನ್ನು ಬದಲಿಸಲಿದೆ. ಹಳೆಯ ಕಾನೂನು ಕಾಝಿಗಳ ಅಥವಾ ಧಾರ್ಮಿಕ ಮುಖಂಡರ ಮೂಲಕ ಮುಸ್ಲಿಮರ ವಿವಾಹ ನೋಂದಣಿಗೆ ಅವಕಾಶ ನೀಡಿತ್ತು.
ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಡ್ಡಾಯ ನೋಂದಣಿ ಮಸೂದೆ-2024 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ವಿರೋಧ ಪಕ್ಷಗಳು ಇದನ್ನು ತಾರತಮ್ಯ ಮತ್ತು ಧ್ರುವೀಕರಣದ ಬಿಜೆಪಿಯ ಪ್ರಯತ್ನ ಎಂದು ಕರೆದಿದೆ.
ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ “ನಮ್ಮ ಉದ್ದೇಶ ಬಾಲ್ಯವಿವಾಹ ನಿರ್ಮೂಲನೆ ಮಾಡುವುದಷ್ಟೇ ಅಲ್ಲ, ಕಾಝಿ ಪದ್ಧತಿ ತೊಲಗಿಸುವುದೂ ಆಗಿದೆ. ಎಲ್ಲಾ ವಿವಾಹ ಮತ್ತು ವಿಚ್ಛೇದನಗಳ ನೋಂದಣಿಯನ್ನು ಸರ್ಕಾರಿ ವ್ಯವಸ್ಥೆಯಡಿ ತರಲು ನಾವು ಬಯಸುತ್ತೇವೆ” ಎಂದಿದ್ದಾರೆ.
“ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಇಸ್ಲಾಮಿಕ್ ವಿಧಿವಿಧಾನಗಳ ಮೂಲಕ ನಡೆಯುವ ವಿವಾಹಗಳಿಗೆ ನಾವು ಮಧ್ಯಪ್ರವೇಶಿಸುತ್ತಿಲ್ಲ. ನಮ್ಮ ಏಕೈಕ ಷರತ್ತು ಇಸ್ಲಾಂ ನಿಷೇಧಿತ ವಿವಾಹಗಳನ್ನು ನೋಂದಾಯಿಸಬಾರದು ಎಂದಾಗಿದೆ” ಎಂದು ಸಿಎಂ ಶರ್ಮಾ ಹೇಳಿದ್ದಾರೆ.
ಎಐಯುಡಿಎಫ್‌ನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶರ್ಮಾ, “ಕಾಝಿಗಳು ಈಗಾಗಲೇ ನೆರವೇರಿಸಿರುವ ವಿವಾಹಗಳು ಮಾನ್ಯವಾಗಿರುತ್ತವೆ. ಹೊಸ ವಿವಾಹಗಳು ಮಾತ್ರ ಹೊಸ ಕಾನೂನಿನ ವ್ಯಾಪ್ತಿಗೆ ಬರಲಿವೆ. ನಾವು ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ನಡೆಸುವ ನಿಕಾಹ್‌ಗೆ ಅಡ್ಡಿಪಡಿಸುವುದಿಲ್ಲ. ಆದರೆ, ಮದುವೆಗಳನ್ನು ಸರ್ಕಾರದಲ್ಲಿ ನೋಂದಾಯಿಸಬೇಕು” ಎಂದಿದ್ದಾರೆ.
ಮುಸ್ಲಿಂ ಬಾಹುಳ್ಯವಿರುವ ಜಮ್ಮು ಕಾಶ್ಮೀರ ಮತ್ತು ಕೇರಳದಲ್ಲಿಯೂ ಕೂಡ ಈ ಹಿಂದೆ ಸರ್ಕಾರಿ ಅಧಿಕಾರಿಗಳ ಮೂಲಕ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ : ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅಪರಾಧ; ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ


