ಹೋಟೆಲ್‍ನಲ್ಲಿ ಕುಡಿಯುವ ನೀರು ಕೇಳಿದ ಸಣ್ಣ ಕಾರಣಕ್ಕೆ ಸವರ್ಣೀಯರ ದೌರ್ಜನ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ಅರಕಲಗೂಡು ತಾಲೂಕು ದಲಿತ ಮುಖಂಡ ವೆಂಕಟೇಶ್(42) ಸಾವನಪ್ಪಿದ್ದು, ಇದರ ವಿರುದ್ಧ ತೀವ್ರ ಪ್ರತಿಭಟನೆ ದಾಖಲಾಗಿದೆ.
ಅರಕಲಗೂಡು ತಾಲ್ಲೂಕಿನ ಕಬ್ಬಡಿ ಗ್ರಾಮದ ವೆಂಕಟೇಶ್ ದಲಿತಪರ ಹೋರಾಟಗಾರರಾಗಿದ್ದು, ಜೂನ್ 4 ರಂದು ಮಲ್ಲಿಪಟ್ಟಣದ ಮಲ್ನಾಡ್ ಹಿಂದೂ ಮಿಲ್ಟ್ರಿ ಹೋಟೆಲ್ ಹೋಗಿ ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾರೆ. ಇಷ್ಟಕ್ಕೇ ಕೆರಳಿದ ಹೋಟೆಲ್ ಮಾಲೀಕ ಜಗದೀಶ್ ಗೌಡ ಮತ್ತವರ ಮಕ್ಕಳಾದ ಕಿರಣ್, ಲತೇಶ್ ಮತ್ತು ಸ್ಥಳೀಯ ಮಲ್ಲೇಶ್ ಎಂಬುವರು ಸೇರಿ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಂಭೀರ ಗಾಯಗೊಂಡ ವೆಂಕಟೇಶ್‍ಗೆ ಅರಕಲಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹಾಸನ ಜಿಲ್ಲಾಸ್ಪತ್ರೆ ಹಾಗೂ ಬೆಂಗಳೂರಿನಲ್ಲೂ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಕಿಡ್ನಿ, ಲಿವರ್ ಹಾಗೂ ಹೃದಯದ ಭಾಗಕ್ಕೆ ಪೆಟ್ಟಾಗಿರುವುದು ಪತ್ತೆಯಾಗಿದೆ. ಜೊತೆಗೆ ರಕ್ತಸ್ರಾವ ಕೂಡ ಆಗಿತ್ತು. ನಂತರ ಅವರನ್ನು ಹಾಸನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾಗ ಜೂನ್ 10 ರಂದು ಪ್ರಾಣಬಿಟ್ಟಿದ್ದಾರೆ.
ಈ ವಿಚಾರದಲ್ಲಿ ಅರಕಲಗೂಡು ಪೊಲೀಸರು ಎಫ್‍ಐಆರ್ ದಾಖಲು ಮಾಡಲು ವಿಳಂಬ ತೋರಿದ್ದಾರೆ ಎಂದು ಆರೋಪಿಸಿ ದಸಸಂ ಮತ್ತು ಬಿಎಸ್‌ಪಿ ಕಾರ್ಯಕರ್ತರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ವೆಂಕಟೇಶ್ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು. ಘಟನೆ ನಡೆದು ವಾರ ಕಳೆದಿದ್ದರೂ, ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ ಅರಕಲಗೂಡು ಪೊಲೀಸರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವೆಂಕಟೇಶ್ ಸಂಬಂಧಿಕರು, ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ, ಬೀದಿಗೆ ಬಂದಿರುವ ಮೃತನ ಬಡ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‍ಗೌಡ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ “ಈಗಾಗಲೇ ಮೂವರನ್ನು ಬಂಧಿಸಲಾಗಿದೆ, ಮತ್ತೋರ್ವನನ್ನು ಶೀಘ್ರ ಬಂಧಿಸಲಾಗುವುದು. ಮೃತನ ಕುಟುಂಬಕ್ಕೆ ಈಗಾಗಲೇ 8.25 ಲಕ್ಷರೂ ಪರಿಹಾರ ಧನ ಬಿಡುಗಡೆಯಾಗಿದ್ದು, ಮೊದಲ ಕಂತಿನಲ್ಲಿ 4.12 ಲಕ್ಷ ನೀಡಲಾಗಿದೆ. ಉಳಿದ ಹಣ ಶೀಘ್ರ ಕುಟುಂಬಕ್ಕೆ ತಲುಪಲಿದೆ. ಮೃತನ ಪತ್ನಿಗೆ ಮಾಸಿಕ ಪಿಂಚಣಿ ಮತ್ತು ಸರ್ಕಾರಿ ಕೆಲಸ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂ ನಂತರ ಸಾವಿಗೆ ಕಾರಣಗಳನ್ನು ತಿಳಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವೆಂಕಟೇಶ್ ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಮತ್ತಷ್ಟು ಸುದ್ದಿಗಳು
ಉತ್ತರ ಪ್ರದೇಶ: ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದಕ್ಕೆ ದಲಿತ ಬಾಲಕನನ್ನು ಗುಂಡಿಕ್ಕೆ ಹತ್ಯೆ
ಯೋಗಿಯ ರಾಮರಾಜ್ಯ ದಲಿತರ ಪಾಲಿಗೆ ಸ್ಮಶಾನವಾಗಿದೆ : ಚಂದ್ರಶೇಖರ್ ರಾವಣ್


