ಪುರಿ ರೈಲು ನಿಲ್ದಾಣದಿಂದ ಕರೆದುಕೊಂಡು ಬರಲು ಐಷಾರಾಮಿ ಕಾರುಗಳನ್ನು ಕಳುಹಿಸದ ಕಾರಣಕ್ಕೆ ಒಡಿಶಾ ರಾಜ್ಯಪಾಲರ ಪುತ್ರ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಒಡಿಶಾ ರಾಜಭವನದ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ.
ರಾಜ್ಯಪಾಲ ರಘುಬರ್ ದಾಸ್ ಅವರ ಪುತ್ರ ಹಲ್ಲೆ ನಡೆಸಿರುವುದಾಗಿ ಅಧಿಕಾರಿ ಬೈಕುಂಠ ಪ್ರಧಾನ್ ತಿಳಿಸಿದ್ದಾರೆ.
ಬೈಕುಂಠ ಪ್ರಧಾನ್ ರಾಜಭವನದಲ್ಲಿ ರಾಜ್ಯಪಾಲರ ಸಚಿವಾಲಯದ ಗೃಹ ವಿಭಾಗದ ಸಹಾಯಕ ವಿಭಾಗ ಅಧಿಕಾರಿಯಾಗಿದ್ದಾರೆ. ಪುರಿಯ ರಾಜಭವನ ಆವರಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಯ ಸಿದ್ಧತೆಯ ಮೇಲ್ವಿಚಾರಣೆಗೆ ತನ್ನನ್ನು ನಿಯೋಜಿಸಿದ್ದ ಸಂದರ್ಭದ, ಜುಲೈ 7ರಂದು ರಾತ್ರಿ ರಾಜ್ಯಪಾಲ ರಘುಬರ್ ದಾಸ್ ಅವರ ಪುತ್ರ ಲಲಿತ್ ಕುಮಾರ್ ಮತ್ತು ಇತರ ಐವರು ತನಗೆ ಕಪಾಳಮೋಕ್ಷ ಮಾಡಿ, ಹೊಡೆದು, ಒದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಜುಲೈ 10ರಂದು ಪ್ರಧಾನ್ ಅವರು ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ರಾಜಭವನದ ಅಧಿಕಾರಿಗಳು ಮತ್ತು ಪ್ರಧಾನ ಕಾರ್ಯದರ್ಶಿ ಸಾಸ್ವತ್ ಮಿಶ್ರಾ ಅವರಿಗೆ ಕರೆಮಾಡಿ, ಸಂದೇಶ ಕಳುಹಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದೂರಿನಲ್ಲಿ, “ಪುರಿಯ ರಾಜಭವನದ ಉಸ್ತುವಾರಿಯಾಗಿರುವ ನಾನು ಜುಲೈ 7-8ರಂದು ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಯ ಸಿದ್ಧತೆಯನ್ನು ಮೇಲ್ವಿಚಾರಣೆ ಮಾಡಲು ಜುಲೈ 5ರಿಂದ ಭುವನೇಶ್ವರದ ರಾಜಭವನದಲ್ಲಿದ್ದೆ. ಜುಲೈ 7ರಂದು ರಾತ್ರಿ 11.45 ರ ಸುಮಾರಿಗೆ ಕಚೇರಿ ಕೊಠಡಿಯಲ್ಲಿ ಕುಳಿತಿದ್ದಾಗ, ರಾಜ್ಯಪಾಲರ ವೈಯಕ್ತಿಕ ಅಡುಗೆಯವರು ಬಂದು ಕುಮಾರ್ ಅವರನ್ನು ತಕ್ಷಣ ನೋಡಬೇಕೆಂದು ಹೇಳಿದರು” ಎಂದು ತಿಳಿಸಿದ್ದಾರೆ.
“ಕುಮಾರ್ ನನ್ನನ್ನು ನೋಡಿದ ತಕ್ಷಣ ನಿಂದಿಸಲು ಆರಂಭಿಸಿದರು. ಆಕ್ಷೇಪಾರ್ಹವಾದ ಭಾಷೆ ಬಳಸಿದರು. ನಾನು ಆಕ್ಷೇಪಿಸಿದಾಗ ನನಗೆ ಕಪಾಳಮೋಕ್ಷ ಮಾಡಿದ್ದಾರೆ. ನಾನು ಕೋಣೆಯಿಂದ ಹೊರಗೆ ಓಡಿ ಅನೆಕ್ಸ್‌ನ ಹಿಂದೆ ಅಡಗಿಕೊಂಡಿದ್ದೆ. ಆದರೆ, ಕುಮಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳು ನನ್ನನ್ನು ಪತ್ತೆ ಹೆಚ್ಚಿ ಲಿಫ್ಟ್ ಮೂಲಕ ಕೋಣೆಗೆ ಎಳೆದೊಯ್ದಿದ್ದಾರೆ” ಎಂದು ಪ್ರಧಾನ್ ಆರೋಪಿಸಿದ್ದಾರೆ.
“ಭದ್ರತಾ ಸಿಬ್ಬಂದಿ ಮತ್ತು ಅಲ್ಲಿದ್ದ ಇತರರು ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ಕುಮಾರ್ ನನಗೆ ಮತ್ತೆ ಕಪಾಳಮೋಕ್ಷ ಮಾಡಿದರು. ನನ್ನ ಮುಖದ ಮೇಲೆ ಗುದ್ದಿದರು. ನನ್ನ ದೇಹದ ಪ್ರತಿಯೊಂದು ಭಾಗಕ್ಕೂ ಒದ್ದಿದ್ದಾರೆ. ನನ್ನ ಎಡ ಪಾದವನ್ನು ತಿರುಚಿದರು. ನನ್ನನ್ನು ಕೊಂದರೆ ಯಾರೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು” ಎಂದು ಹೇಳಿದ್ದಾರೆ.
“ಈ ಬಗ್ಗೆ ಜುಲೈ 8ರಂದು ಸಂಜೆ 4.30ಕ್ಕೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ಮೌಖಿಕವಾಗಿ ವಿವರಿಸಿದ್ದು, ಜುಲೈ 10ರಂದು ಪತ್ರವನ್ನು ಮೇಲ್ ಮಾಡಿದ್ದೇನೆ” ಎಂದು ಪ್ರಧಾನ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಶುಕ್ರವಾರ ಭುವನೇಶ್ವರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನ್ ಅವರ ಪತ್ನಿ ಸಯೋಜ್, “ಜುಲೈ 11ರಂದು ಸೀ ಬೀಚ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆವು. ಆದರೆ ನಮ್ಮ ದೂರು ಸ್ವೀಕರಿಸಿಲ್ಲ. ಆದ್ದರಿಂದ, ನಾವು ದೂರನ್ನು ಪೊಲೀಸರಿಗೆ ಮೇಲ್ ಮಾಡಿದ್ದೇವೆ” ಎಂದು ಹೇಳಿದರು.
ಪುರಿ ರೈಲ್ವೆ ನಿಲ್ದಾಣದಲ್ಲಿ ತಮ್ಮನ್ನು ಬರಮಾಡಿಕೊಳ್ಳಲು ಎರಡು ಐಷಾರಾಮಿ ವಾಹನಗಳನ್ನು ಕಳುಹಿಸದಿರುವುದಕ್ಕೆ ಪ್ರಧಾನ್ ಮೇಲೆ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನ್ನ ಪಾದರಕ್ಷೆಯನ್ನು ನೆಕ್ಕಲು ಕುಮಾರ್ ಹೇಳಿದ್ದಾರೆ ಎಂದೂ ಕೂಡಾ ದೂರಿನಲ್ಲಿ ಆರೋಪಿಸಲಾಗಿದೆ. ಇನ್ನು ಪುರಿ ಪೊಲೀಸ್ ವರಿಷ್ಠಾಧಿಕಾರಿ ಪಿನಾಕ್ ಮಿಶ್ರಾ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
“ನನ್ನ ಪತಿಯನ್ನು ರಾಷ್ಟ್ರಪತಿಗಳ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ರಾಜ್ಯಪಾಲರ ಮಗನ ಸೇವೆಗಾಗಿ ಅಲ್ಲ” ಎಂದು ಸಯೋಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಧಾನ್ ಅವರು ಜುಲೈ 10 ರಂದು ರಾಜ್ಯಪಾಲರು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಈ ವೇಳೆ ಅವರ ನಡವಳಿಕೆಯನ್ನೇ ಬದಲಾಯಿಕೊಳ್ಳಲು ಸೂಚಿಸಿದ್ದಾರೆ. 2019 ರಲ್ಲಿ ಎಎಸ್‌ಒ ಕೆಲಸಕ್ಕೆ ನೇಮಕ ಆಗುವ ಮುನ್ನ ಪ್ರಧಾನ್ ಸುಮಾರು 20 ವರ್ಷಗಳ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಸಯೋಜ್ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ವರದಿ ಹಂಚಿಕೊಂಡಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್, “ಈ ಪ್ರಕರಣದಲ್ಲಿ ಯಾರು ಕ್ರಮ ಕೈಗೊಳ್ಳಲಿದ್ದಾರೆ? ಮೋದಿ ಈ ರಾಜ್ಯಪಾಲರನ್ನು ವಜಾಗೊಳಿಸಬಹುದೇ” ಎಂದು ಪ್ರಶ್ನಿಸಿದ್ದಾರೆ.


