ಮುಂಬೈ ಉಪನಗರ ರೈಲಿನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಸಹ ಪ್ರಯಾಣಿಕರು ಹಲ್ಲೆ ನಡೆಸಿದ್ದು, ಇದರಿಂದ ಮನನೊಂದು ಕಲ್ಯಾಣ್ ಮೂಲದ 19 ವರ್ಷದ ಬಿಎಸ್ಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಮುಳುಂದ್‌ನ ಕೇಳ್ಕರ್ ಕಾಲೇಜಿನ ವಿದ್ಯಾರ್ಥಿ ಅರ್ನವ್ ಖೈರೆ, ಉಪನಗರ ರೈಲಿನ ಫಸ್ಟ್ ಕ್ಲಾಸ್ ಪಾಸ್ ಅವಧಿ ಮುಗಿದ ಹಿನ್ನೆಲೆ, ಸೆಕೆಂಡ್ ಕ್ಲಾಸ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದ. ಕಾಲೇಜಿಗೆ ತೆರಳುವ ಸಲುವಾಗಿ ಆತ ಕಲ್ಯಾಣ್‌ನಲ್ಲಿ ರೈಲು ಹತ್ತಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಅರ್ನವ್ ತಂದೆ ಜಿತೇಂದ್ರ ಖೈರೆ ಅವರು ಕಲ್ಯಾಣ್‌ನ ಕೊಲೆಸ್ವಾಡಿ (ಈಸ್ಟ್) ಪೊಲೀಸ್ ಠಾಣೆಗ ನೀಡಿದ ದೂರಿನಲ್ಲಿ, ರೈಲಿನಲ್ಲಿ ಜನಸಂದಣಿಯಿಂದಾಗಿ ಆರ್ನವ್ ಆಕಸ್ಮಿಕವಾಗಿ ಒಬ್ಬರು ವ್ಯಕ್ತಿಯ ಮೇಲೆ ಮುಗ್ಗರಿಸಿ ಬಿದ್ದಿದ್ದ. ಈ ವೇಳೆ ಹಿಂದಿಯಲ್ಲಿ, ‘ದಯವಿಟ್ಟು ಸ್ವಲ್ಪ ಮುಂದೆ ನಡೆಯಿರಿ’ ಎಂದು ಹೇಳಿದ್ದ. ಅರ್ನವ್ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಸಹ ಪ್ರಯಾಣಿಕರಾದ ಕೆಲ ಪುರುಷರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂದುವರಿದು, “ನೀನು ಮರಾಠಿಯಲ್ಲಿ ಏಕೆ ಮಾತನಾಡ್ತಿಲ್ಲ? ತನ್ನ ಸ್ವಂತ ಭಾಷೆ ಮಾತನಾಡಲು ನಿನಗೆ ನಾಚಿಕೆಯಾಗ್ತಿದೆಯಾ?” ಎಂದು ಸಹ ಪ್ರಯಾಣಿಕರು ಕೇಳಿದ್ದಾರೆ. “ನಾನು ಮರಾಠಿಯವನೇ” ಎಂದರೂ ಅವರು ಆರ್ನವ್ ಜೊತೆ ವಾಗ್ವಾದ ನಡೆಸಿ ಥಳಿಸಿದ್ದಾರೆ ಎಂದು ಜಿತೇಂದ್ರ ಖೈರೆ ದೂರಿನಲ್ಲಿ ಹೇಳಿದ್ದಾರೆ.
“ಸಹ ಪ್ರಯಾಣಿಕರು ತನ್ನ ಮಾಸ್ಕ್ ಹರಿದು ಹಾಕಿದ್ದರು. ಇದರಿಂದ ನಾನು ತುಂಬಾ ಭಯಭೀತನಾಗಿದ್ದೆ, ನಡುಗಿದ್ದೆ. ಘಟನೆಯ ನಂತರ ನಾನು ಥಾಣೆ ನಿಲ್ದಾಣದಲ್ಲಿ ಇಳಿದು, ಮತ್ತೊಂದು ರೈಲು ಹತ್ತಿ ಮುಳುಂದ್ ತಲುಪಿದೆ” ಎಂದು ಆರ್ನವ್ ಹೇಳಿಕೊಂಡಿದ್ದಾನೆ ಎಂದು ಜಿತೇಂದ್ರ ಖೈರೆ ದೂರಿನಲ್ಲಿ ವಿವರಿಸಿದ್ದಾರೆ.
ಘಟನೆಯ ನಂತರ ಆರ್ನವ್ ಮಾನಸಿಕವಾಗಿ ನೊಂದಿದ್ದ. ಕಾಲೇಜಿನಲ್ಲಿ, ಪ್ರಾಯೋಗಿಕ ಪರೀಕ್ಷೆ ಮುಗಿದ ನಂತರ, ತನ್ನ ತಂದೆಗೆ ಕರೆ ಮಾಡಿ, “ಅಪ್ಪಾ, ನನಗೆ ಹುಷಾರಿಲ್ಲ…” ಎಂದು ಹೇಳಿದ್ದ. ಮಧ್ಯಾಹ್ನ, ಮನೆಗೆ ತಲುಪಿದ ನಂತರ, ಮತ್ತೆ ತನ್ನ ತಂದೆಗೆ ಕರೆ ಮಾಡಿ ಇಡೀ ಘಟನೆಯ ಬಗ್ಗೆ ತಿಳಿಸಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಮಗ ರೈಲಿನಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದಾಗ ನಾನು ಆತನಿಗೆ ಧೈರ್ಯ ತುಂಬಿ ಪೊಲೀಸ್ ದೂರು ನೀಡುವುದಾಗಿ ಹೇಳಿದ್ದೆ. ಆದರೆ, ಮಂಗಳವಾರ (ನವೆಂಬರ್ 18) ಸಂಜೆ ಮನೆಗೆ ತಲುಪಿದಾಗ ಬಾಗಿಲು ಲಾಕ್ ಆಗಿತ್ತು. ನೆರೆಹೊರೆಯವರ ಸಹಾಯದಿಂದ ಬಾಗಿಲು ತೆರೆದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಆಂಬ್ಯುಲೆನ್ಸ್‌ಗೆ ಕರೆಸಿ ರುಕ್ಮಿಣಿಬಾಯಿ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ, ರಾತ್ರಿ 9.05ಕ್ಕೆ ಅರ್ನವ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಜಿತೇಂದ್ರ ಖೈರೆ ಹೇಳಿದ್ದಾರೆ.
ರೈಲಿನಲ್ಲಿ ಆದ ಘಟನೆಯಿಂದ ಮಾನಸಿಕವಾಗಿ ನೊಂದ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜಿತೇಂದ್ರ ಖೈರೆ ಹೇಳಿದ್ದಾರೆ. ಅವರು ಮಗನಿಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಕಲ್ಯಾಣ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕಲ್ಯಾಣ್‌ಜಿ ಘೇಟೆ ಮಾತನಾಡಿ, “ಪ್ರಕರಣದ ತನಿಖೆಗಾಗಿ ನಾವು ತಂಡವನ್ನು ರಚಿಸಿದ್ದೇವೆ” ಎಂದು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.


