ಪ್ರತಿಷ್ಠೆಯ ಕಣವಾಗಿದ್ದ ಕೇರಳದ ನಿಲಂಬೂರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಆರ್ಯಡನ್ ಶೌಕತ್ ಅವರು ಭರ್ಜರಿ ಜಯಗಳಿಸಿದ್ದಾರೆ.
ಶೌಕತ್ ಅವರ ಪ್ರತಿಸ್ಪರ್ಧಿ ಆಡಳಿತರೂಢ ಎಲ್‌ಡಿಎಫ್ ಮೈತ್ರಿಕೂಟದ ಸಿಪಿಐ(ಎಂ) ಅಭ್ಯರ್ಥಿ ಎಂ. ಸ್ವರಾಜ್ ಅವರು 11,077 ಮತಗಳಿಂದ ಸೋಲನುಭವಿಸಿದ್ದಾರೆ. ಈ ವರ್ಷದ ಜನವರಿಯವರೆಗೆ ನಿಲಂಬೂರ್ ಶಾಸಕರಾಗಿದ್ದ ಸ್ವತಂತ್ರ ಅಭ್ಯರ್ಥಿ ಪಿ.ವಿ ಅನ್ವರ್ 19,946 ಮತಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.
ಇನ್ನುಳಿದಂತೆ ಬಿಜೆಪಿ ಅಭ್ಯರ್ಥಿ ಮೋಹನ್ ಜಾರ್ಜ್ 8,648 ಮತಗಳನ್ನು ಗಳಿಸಿದರೆ, ಎಸ್‌ಡಿಪಿಐನ ಸಾದಿಕ್ ನಡುತೊಡಿ 2,075 ಮತಗಳನ್ನು ಗಳಿಸಿದ್ದಾರೆ. 630 ನೋಟಾ ಮತಗಳು ಬಿದ್ದಿವೆ. ಒಟ್ಟು 10 ಅಭ್ಯರ್ಥಿಗಳು ನಿಲಂಬೂರ್ ಕಣದಲ್ಲಿದ್ದರು.
ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಸ್ವರಾಜ್ ವಿರುದ್ದ ಶೌಕತ್ ಮುನ್ನಡೆ ಕಾಯ್ದುಕೊಂಡಿದ್ದರು. ಎಣಿಕೆ ಮುಂದುವರೆದಂತೆ ಶೌಕತ್ ಮತ್ತು ಸ್ವರಾಜ್ ನಡುವಿನ ಅಂತರ ಹೆಚ್ಚುತ್ತಲೇ ಹೋಯಿತು. ಐದನೇ ಸುತ್ತಿನ ಮತ ಎಣಿಕೆ ವೇಳೆಗೆ ಶೌಕತ್ ಸ್ವರಾಜ್‌ಗಿಂತ 5,000 ಮತಗಳ ಮುನ್ನಡೆಯಲ್ಲಿದ್ದರು.
ಇದು ಶೌಕತ್ ಅವರ ಮೊದಲ ಗೆಲುವಾಗಿದ್ದು, ಅವರು ಈ ಹಿಂದೆ 2016ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಪಿ.ವಿ ಅನ್ವರ್ ವಿರುದ್ದ ಸೋಲನುಭವಿಸಿದ್ದರು.
ನಿಲಂಬೂರ್ ಪುರಸಭೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಶೌಕತ್ ಅವರು, ಈ ಹಿಂದೆ ಸ್ಥಳೀಯ ಆಡಳಿತ ಮತ್ತು ಕಾಂಗ್ರೆಸ್ ಪಕ್ಷದ ಇತರ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಮತ್ತು ಚಿತ್ರಕಥೆಗಾರರೂ ಆಗಿದ್ದಾರೆ.
ಶೌಕತ್ ಅವರು ಮಾಜಿ ಸಚಿವ ಮತ್ತು ನಿಲಂಬೂರಿನಿಂದ ಎಂಟು ಬಾರಿ ಶಾಸಕರಾಗಿದ್ದ ಪ್ರಮುಖ ಕಾಂಗ್ರೆಸ್ ನಾಯಕ ದಿವಂಗತ ಆರ್ಯಡನ್ ಮುಹಮ್ಮದ್ ಅವರ ಪುತ್ರ. 1982ರಲ್ಲಿ ಅಲ್ಪಾವಧಿಯ ಸೋಲಿನ ನಂತರ, ಮುಹಮ್ಮದ್ ಅವರು 1987 ರಿಂದ 2016 ರವರೆಗೆ ನಿಲಂಬೂರ್ ಕ್ಷೇತ್ರವನ್ನು ನಿರಂತರವಾಗಿ ಗೆದ್ದಿದ್ದರು.
ಒಂಬತ್ತು ವರ್ಷಗಳ ಕಾಲ ಶಾಸಕರಾಗಿದ್ದ ಅನ್ವರ್, ಜನವರಿಯಲ್ಲಿ ರಾಜೀನಾಮೆ ನೀಡಿದ್ದರು. ಅವರು ಈ ಹಿಂದೆ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟವನ್ನು ಬೆಂಬಲಿಸಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗಿನ ಭಿನ್ನಾಭಿಪ್ರಾಯದ ನಂತರ ಅವರು ಮೈತ್ರಿಕೂಟದಿಂದ ಹೊರಬಂದಿದ್ದರು.
ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಜೊತೆಗೆ ಪ್ರಧಾನಿ ಮೋದಿ ಮಾತುಕತೆ; ಶಾಂತಿಗಾಗಿ ಕರೆ


