ನೈಜೀರಿಯಾ: ದೋಣಿ ಮುಳುಗಿ ಕನಿಷ್ಠ 27 ಸಾವು, 100 ಮಂದಿ ನಾಪತ್ತೆಯಾಗಿರುವ ದುರ್ಘಟನೆ ನೈಜೀರಿಯಾದಲ್ಲಿ ನಡೆದಿದೆ.
ಇಲ್ಲಿಯವರೆಗೆ ರಕ್ಷಣಾ ತಂಡವು 27 ಶವಗಳನ್ನು ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಸ್ಥಳೀಯ ಮುಳುಗುದಾರರು ಇನ್ನೂ ಶೋಧನಾ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಕೋಗಿ ರಾಜ್ಯ ತುರ್ತು ಸೇವೆಗಳ ವಕ್ತಾರ ಸಾಂಡ್ರಾ ಮೂಸಾ ತಿಳಿಸಿದ್ದಾರೆ.
ಈ ದುರ್ಘಟನೆ ನಡೆದು 12 ಗಂಟೆಗಳು ಕಳೆದರೂ ಇಲ್ಲಿಯವರೆಗೆ ಬದುಕುಳಿದವರು ಯಾರೊಬ್ಬರು ಪತ್ತೆಯಾಗಿಲ್ಲವೆಂದು ಅವರು ಹೇಳಿದ್ದಾರೆ.
ಅಲ್ಲಿನ ಆಡಳಿತವು ಈ ಘಟನೆಗೆ ಯಾವುದೇ ಕಾರಣವನ್ನು ದೃಢಪಡಿಸಿಲ್ಲ. ಅಲ್ಲಿನ ಮಾಧ್ಯಮಗಳು ಧೋಣಿಯಲ್ಲಿ ಹೆಚ್ಚಿನ ಜನದಟ್ಟನೆಯೇ ಕಾರಣವೆಂದು ಹೇಳಿವೆ. ನೈಜೀಯಾದ ಕಡಿದಾದ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳು ಲಭ್ಯವಿಲ್ಲದೇ ಇರುವ ಕಾರಣ ದೋಣಿಗಳಲ್ಲಿ ಹೆಚ್ಚಿನ ಜನ ಪ್ರಯಾಣಿಸುವುದು ಸರ್ವೆಸಾಮಾನ್ಯವೆಂದು ಹೇಳಲಾಗಿದೆ.
ದೋಣಿಯು ಮುಳುಗಿದ ನಂತರ ರಕ್ಷಣಾ ತಂಡವು ಅದರ ದಿಕ್ಕನ್ನು ಪತ್ತೆ ಹಚ್ಚುವಲ್ಲಿ ಮೊದಲು ಸಾಕಷ್ಟು ಸಮಸ್ಯೆಯನ್ನೇದುರಿಸಿದರು ಎಂದು ನೈಜೀರಿಯಾದ ರಾಷ್ಟ್ರೀಯ ತುರ್ತು ನಿಯಂತ್ರಣ ಮಂಡಳಿಯ ಮೇಲ್ವಿಚಾರಕ ಜಸ್ಟೀನ್ ಉವಾಜುರುಯೋನಿ ಮಾಹಿತಿ ನೀಡಿದ್ದಾರೆ.
ಜಲಸಾರಿಗೆಗಾಗಿ ಸುರಕ್ಷತಾ ಕ್ರಮಗಳು ಮತ್ತು ನಿಬಂಧನೆಗಳನ್ನು ಜಾರಿಗೊಳಿಸಲು ಇಲ್ಲಿನ ಅಧಿಕಾರಿಗಳು ಹೆಣಗಾಡುತ್ತಿರುವ ಮಧ್ಯೆ, ಆಫ್ರಿಕಾದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ನೈಜೀರಿಯಾದಲ್ಲಿ ಇಂತಹ ಮಾರಣಾಂತಿಕ ಘಟನೆ ಹೆಚ್ಚು ಕಳವಳಕ್ಕೆ ಕಾರಣವಾಗಿದೆ ಎಂದು ಜಸ್ಟೀನ್ ಹೇಳಿದ್ದಾರೆ.
ಬಹುತೇಕ ಇಂತಹ ಘಟನೆಗಳಿಗೆ ಪ್ರಯಾಣದಲ್ಲಿ ಹೆಚ್ಚಿನ ಜನದಟ್ಟನೆ ಮತ್ತು ದೋಣಿಗಳನ್ನು ಸರಿಯಾಗಿ ನಿಭಾಯಿಸುವಲ್ಲಿನ ಕೊರತೆಯೇ ಪ್ರಮುಖ ಕಾರಣವಾಗಿದೆ. ಜಲ ಸಾರಿಗೆಗಾಗಿ ಅಲ್ಲಿನ ಆಡಳಿತವು ಪ್ರಯಾಣಿಕರಿಗೆ ಜೀವ ರಕ್ಷಾ ಜಾಕೆಟ್ ಗಳನ್ನು ಒದಗಿಸುವಲ್ಲಿ ಸಫಲವಾಗಿಲ್ಲ. ಈ ಜೀವ ರಕ್ಷಾ ಕವಚಗಳ ಲಭ್ಯತೆಯ ಕೊರತೆ ಒಂದೆಡೆಯಾದರೆ, ಲಭ್ಯವಿರುವ ಕವಚಗಳಿಗೆ ದುಬಾರಿ ಬೆಲೆ ಮತ್ತೊಂದು ಕಾರಣವಾಗಿದೆ.
ಇದನ್ನೂ ಓದಿ...ಗರ್ಭಿಣಿ ಮಹಿಳಾ ಖೈದಿಗೆ 6 ತಿಂಗಳು ಜಾಮೀನು: ಇದಕ್ಕೆ ನ್ಯಾಯಾಲಯ ನೀಡಿದ ಸಮರ್ಥನೆ ಏನು?


