ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಕೊಡಿ ಎಂದು ಕೇಳಿದ ಪೌರ ಕಾರ್ಮಿಕರೊಬ್ಬರ ಮೇಲೆ ಹಲ್ಲೆ ನಡೆದಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಕಸ ವಿಲೇವಾರಿಗೆ ಸಂಬಂಧಿಸಿದಂತೆ ನಗರ ಸಭೆಯ ಪೌರ ಕಾರ್ಮಿಕರೊಬ್ಬರ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ನೇಜಾರಿನ ಇಸ್ಮಾಯಿಲ್ (55) ಹಾಗೂ ಹೂಡೆಯ ಸುಹೈಲ್ (28) ಎಂಬುವವರನ್ನು ಬಂಧಿಸಲಾಗಿದೆ.
ಬಾಗಲಕೋಟೆ ಮೂಲದ ನಿಟ್ಟೂರು ನಿವಾಸಿ ಸಂಜು ಮಾದಾರ್ (26) ಹಲ್ಲೆಗೊಳಗಾದ ಪೌರ ಕಾರ್ಮಿಕ. ಸಂಜು ಇತರ ಪೌರ ಕಾರ್ಮಿಕರೊಂದಿಗೆ ಕಸ ಸಂಗ್ರಹಿಸಲು ತೆರಳಿದ್ದರು. ಈ ವೇಳೆ ಸಿಟಿ ಬಸ್ ಸ್ಟಾಂಡ್ ಸಮೀಪದ ಆಸ್ಮಾ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಹಸಿ ಮತ್ತು ಒಣ ಕಸ ಬೆರೆಸಿರುವುದನ್ನು ಸಂಜು ಪ್ರಶ್ನಿಸಿದ್ದರು. ಈ ವೇಳೆ ಪೌರ ಕಾರ್ಮಿಕರು ಮತ್ತು ಅಂಗಡಿಯವರ ನಡುವೆ ವಾಗ್ವಾದ ನಡೆದಿದೆ. ನಂತರ ಇಸ್ಮಾಯಿಲ್ ಮತ್ತು ಸುಹೈಲ್ ಇಬ್ಬರು ಸಂಜುವಿಗೆ ಬೈದಿದ್ದು ಮಾತ್ರವಲ್ಲದೆ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ನಗರ ಸಭೆಯ ಅಧಿಕಾರಿಗಳು ಬಂದ ವೇಳೆ ಅವರ ಎದುರಲ್ಲೇ ಸಂಜುವಿನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ವಿಡಿಯೊ | ಪೌರ ಕಾರ್ಮಿಕರಿಗೆ ಹೂವು, ನೋಟಿನ ಹಾರ ಹಾಕಿದ ಪಂಜಾಬಿಗರು
ಸಂಜು ನೀಡಿದ ದೂರಿನ ಆಧಾರದ ಮೇಲೆ, ಉಡುಪಿ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ. ಇವರ ಮೇಲೆ ಐಪಿಸಿ ಸೆಕ್ಷನ್ 323, 504, 506 ಮತ್ತು 34 ರ ಅಡಿಯಲ್ಲಿ ಹಾಗೂ ಎಸ್‌ಸಿ ಎಸ್‌ಟಿ ಕಾಯ್ದೆ 1989 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಇಬ್ಬರನ್ನು ಬಂಧಿಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಉಡುಪಿ ಪಟ್ಟಣ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಕಾನೂನು ಮತ್ತು ಸುವ್ಯವಸ್ಥೆ) ಶಕ್ತಿವೇಲು ತಿಳಿಸಿದ್ದಾರೆ.
ನಗರವನ್ನು ಸ್ವಚ್ಚಗೊಳಿಸುವ ಸಲುವಾಗಿ ವ್ಯವಸ್ಥಿತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಪ್ರತೀ ಅಂಗಡಿ, ಮನೆಗಳಿಗೆ ಹಸಿ ಕಸ, ಒಣ ಕಸ ಎಂದು ವಿಂಗಡಿಸಿ ನೀಡುವಂತೆ ನಗರಸಭೆ ಅನೇಕ ಬಾರಿ ಮನವಿ ಮಾಡಿಕೊಂಡಿದೆ. ಅದಕ್ಕಾಗಿ ವ್ಯವಸ್ಥೆ ಮಾಡಿಕೊಟ್ಟಿದೆ. ಇದನ್ನು ಪಾಲಿಸಿದ ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಈ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮದ್ದೂರು ಪೌರಕಾರ್ಮಿಕ ಆತ್ಮಹತ್ಯೆ ಪ್ರಕರಣ: ಇಬ್ಬರು ಪುರಸಭೆ ಅಧಿಕಾರಿಗಳ ಅಮಾನತು


