ಒಡಿಶಾದಲ್ಲಿ ವಿದ್ಯಾರ್ಥಿನಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಳಿಕ, ಬಾಲಕಿಯನ್ನು ಅಪಹರಿಸಿ ಬೆಂಕಿ ಹಚ್ಚಿದ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.
ಪುರಿಯಲ್ಲಿ 15 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದು ಪೂರ್ವ ಯೋಜಿತ ಕೃತ್ಯ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಿಗ್ಗೆ ಪುರಿಯ ಬಲಂಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕರ ಗುಂಪೊಂದು ಬಾಲಕಿಯನ್ನು ನದಿ ಬದಿಗೆ ಹೊತ್ತೊಯ್ದು ದೇಹದ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ವರದಿಗಳು ಹೇಳಿವೆ.
ಗಂಭೀರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದರು. ಆ ಬಳಿಕ ಆಕೆಯನ್ನು ಭುವನೇಶ್ವರದ ಏಮ್ಸ್‌ಗೆ ದಾಖಲಿಸಲಾಗಿದೆ. ಪ್ರಸ್ತುತ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ದಾಳಿಗೊಳಗಾದ ಬಾಲಕಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವಳು ಎಂದು ತಿಳಿದು ಬಂದಿದೆ.
ಸಂತ್ರಸ್ತೆ ತನ್ನ ಸ್ನೇಹಿತೆಯ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಮೂವರು ಯುವಕರು, ಬೈಕ್‌ನಲ್ಲಿ ಬಂದು ಆಕೆಯ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿ ಸ್ಥಳೀಯ ಭಾರ್ಗವಿ ನದಿಯ ದಡಕ್ಕೆ ಹೊತ್ತೊಯ್ದಿದ್ದರು. ಅಲ್ಲಿ, ಆಕೆಯ ದೇಹದ ಮೇಲೆ ಬೆಂಕಿ ಹೊತ್ತಿಕೊಳ್ಳುವ ವಸ್ತು ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಬಾಲಕಿ ಹತ್ತಿರದ ಹಳ್ಳಿಯ ಕಡೆಗೆ ಓಡಿ ಸಹಾಯ ಯಾಚಿಸಿದ್ದಳು. ಸ್ಥಳೀಯ ನಿವಾಸಿ ದುಃಖಿಶ್ಯಾಮ್ ಸೇನಾಪತಿ ಎಂಬವರು ಆಕೆಯನ್ನು ರಕ್ಷಿಸಿದ್ದಾರೆ. ಬೆಂಕಿ ನಂದಿಸಿ, ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ಹೊಸ ಬಟ್ಟೆ ಒದಗಿಸಿದ್ದಾರೆ.
“ದುಷ್ಕರ್ಮಿಗಳು ಬಾಲಕಿಯ ಚಲನವಲನಗಳನ್ನು ಗಮನಿಸುತ್ತಿದ್ದರು ಎಂದನಿಸುತ್ತದೆ. ಹಾಗಾಗಿಯೇ ಅವರು ದಾಳಿಗೆ ಸಿದ್ಧರಾಗಿ ಬಂದಿರಬಹುದು. ನಾವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ, ತನಿಖೆ ಮುಂದುವರಿದಿದೆ. ಒಂದಷ್ಟು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪುರಿ ಜಿಲ್ಲೆಯ ಉಸ್ತುವಾರಿ ಎಸ್ಪಿಯೂ ಆಗಿರುವ ಡಿಐಜಿ ಪಿನಕ್ ಮಿಶ್ರಾ ನೇತೃತ್ವದ ಪೊಲೀಸ್ ತಂಡವು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಕನಿಷ್ಠ ಎರಡು ಬಾಟಲಿಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತು ಪತ್ತೆಯಾಗಿದೆ. ಅದು ಸೀಮೆಎಣ್ಣೆ ಎಂದು ಅಂದಾಜಿಸಲಾಗಿದೆ. ಆ ವಸ್ತುವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಸರಣಿ ಪ್ರಕರಣ
ಕಳೆದ ಎರಡು ವಾರಗಳಿಂದ ಒಡಿಶಾದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಸರಣಿ ಪ್ರಕರಣಗಳು ವರದಿಯಾಗುತ್ತಿವೆ.
ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದರೂ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಳ್ಳದ ಹಿನ್ನೆಲೆ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವಿಗೀಡಾದ ಘಟನೆ ಕಳೆದ ಸೋಮವಾರ ನಡೆದಿತ್ತು.
ಈ ಪ್ರಕರಣ ರಾಜ್ಯಾದ್ಯಂತ ದೊಡ್ಡ ಜನಾಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳು ಬೀದಿಗಿಳಿದ್ದು ಸರ್ಕಾರದ ವಿರುದ್ದ ಪ್ರತಿಭಟಿಸಿದ್ದವು. ಈ ಬೆನ್ನಲ್ಲೇ ಇದೀಗ ಬಾಲಕಿಯನ್ನು ಹೊತ್ತೊಯ್ದು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಅಂಬೇಡ್ಕರ್ ನಗರ: ನಿವೃತ್ತ ಮುಸ್ಲಿಂ ಶಿಕ್ಷಕರ 3 ಅಂತಸ್ತಿನ ಮನೆ ನೆಲಸಮ – ಒಂದು ಕುಟುಂಬದ ನೋವಿನ ಕಥೆ


