“ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಪ್ರಶ್ನೆ ಮಾಡಬಾರದು ಎಂದು ಬೆದರಿಕೆ ಹಾಕಿ ನನ್ನ ಮೇಲೆ ಕೊಲೆ ಯತ್ನ ಮಾಡಲು ಸಂಚು ರೂಪಿಸಿದ್ದಾರೆ” ಎಂದು ನ್ಯೂಸ್ 14 ನ ಸಂಪಾದಕರಾದ ಬಿ.ಆರ್ ಭಾಸ್ಕರ್ ಪ್ರಸಾದ್ ಆರೋಪಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಬಿ.ಆರ್ ಭಾಸ್ಕರ್ ಪ್ರಸಾದ್‌ರವರು ನ್ಯೂಸ್ 14 ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಪ್ರತಿದಿನ ಸಮಾಜದ ಆಗುಹೋಗುಗಳ ಎಲ್ಲಾ ಮಗ್ಗುಲುಗಳನ್ನು ಪರಿಚಯಿಸಿಕೊಡುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಈ ಕುರಿತು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಅವರು, ತಮ್ಮ ಮೇಲಿನ ಹಲ್ಲೆ ಸಂಚಿಗೆ ಸಂಬಂಧಿಸಿದ ಸಾಕ್ಷಿಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ನಮ್ಮ ನ್ಯೂಸ್14 ಕಚೇರಿ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿಕೊಂಡು, ನನ್ನನ್ನು ಕೊಲ್ಲುವ ಪ್ರಯತ್ನ ಮಾಡಿ, ಕೊನೆಗೆ ಅದು ಸಾಧ್ಯವಾಗದೆ, ಓಡಿ ಹೋಗಿದ್ದಾರೆ. ಫೋನ್ ಮಾಡಿ ನನ್ನ ಕೊಲ್ಲುವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ವದರಾಡಿಕೊಂಡು ದುಷ್ಕರ್ಮಿಗಳು ಓಡಿ ಹೋಗಿದ್ದಾರೆ. ಪೋಲಿಸ್ ಕಂಪ್ಲೇಂಟ್ ನೀಡಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಅದಕ್ಕೂ ಒಂದು ದಿನದ ಮುಂಚೆ ಈ 8088518987 ನಂಬರ್ ಇಂದ ಮಧ್ಯ ರಾತ್ರಿಯಲ್ಲಿ ಒಂದು ಫೋನ್ ಕಾಲ್ ಬಂತು. ಏನೋ ಎಮರ್ಜೆನ್ಸಿ ಇರಬೇಕು ಎಂದು ಫೋನ್ ತೆಗೆದೆ. ಒಂದೇ ನಿಮಿಷಕ್ಕೆ ಕಟ್ ಮಾಡಿದೆ. ಕೊಲ್ಲುವ ಮಾತು ಬಿಟ್ಟು ಇವನು ಮತ್ತೇನೂ ಮಾತಾಡಲಿಲ್ಲ. ಮೋದಿ ಬಗ್ಗೆ ನಾನು ಯಾವ ಪ್ರಶ್ನೆಯನ್ನು ಇನ್ಯಾವತ್ತೂ ಮಾಡಬಾರದಂತೆ. ಮಾಡಿದರೆ ಅವತ್ತೇ ನನ್ನ ಕೊಲ್ತಾನಂತೆ. ಸ್ನೇಹಿತರೇ, ನಾನು ಸಾಯೋಕೆ ಯೋಚನೆ ಮಾಡಲ್ಲ. ಆದರದು ನಿಮ್ಮ ಬಲಹೀನತೆಯಾದರೇ,, ಅದು ನಿಮ್ಮ ಸಾವಷ್ಟೇ… Its my real warning” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಸಚಿವನ ಪರ ನಿಂತ ಸರ್ಕಾರ?
ಇದನ್ನೂ ಓದಿ: ದೆಹಲಿ ಗಡಿಯಲ್ಲಿ ಹೋರಾಟದ ಹೊಸ ಭಾಷ್ಯ ಬರೆಯುತ್ತಿರುವ ದೇಶದ ರೈತರು: ಡಾ. ಪುರುಷೋತ್ತಮ ಬಿಳಿಮಲೆ
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಭಾಸ್ಕರ್ ಪ್ರಸಾದ್, “ನಮ್ಮ ಚಾನೆಲ್‌ನಲ್ಲಿ ಪ್ರತಿದಿನ 6 ರಿಂದ 7 ಗಂಟೆಯವರೆಗೆ ಮತ್ತು 8 ರಿಂದ 9 ಗಂಟೆಯವರೆಗೆ ಸುದ್ದಿ ನೇರ ಪ್ರಸಾರ ಇರುತ್ತದೆ. 7 ರಿಂದ 8 ಗಂಟೆಯವರೆಗೆ ಬಿಡುವಿರುತ್ತದೆ. ಈ ಸಮಯದಲ್ಲಿ ನಾನು ಮನೆಗೆ ಹೋಗಿದ್ದೆ. ಆಗ ಟೊಯೊಟಾ ಕಾರ್‌ನಲ್ಲಿ ಕೆಲವರು ಬಂದು ನಮ್ಮ ಕಛೇರಿಯ ಗೇಟನ್ನು ತೆರೆಯಲು ಪ್ರಯತ್ನಿಸಿದರು. ಅದು ಲಾಕ್ ಆಗಿತ್ತು. ಆಗ ನನ್ನ ಹೆಸರು ಕೂಗಿದ್ದಾರೆ. ನಂತರ ನಮ್ಮ ಸಿಬ್ಬಂದಿ ಹೊರಬಂದು ನಾನು ಕಛೇರಿಯಲ್ಲಿಲ್ಲವೆಂದು ಹೇಳಿದ್ದಾರೆ. ಇದಕ್ಕೆ ಕೆರಳಿದ ದುಷ್ಕರ್ಮಿಗಳು ಕಛೇರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನು ನಮ್ಮ ಸಿಬ್ಬಂದಿ ನನಗೆ ಕರೆಯ ಮೂಲಕ ತಿಳಿಸಿದರು. ನಾನು ಪೊಲೀಸರಿಗೆ ತಿಳಿಸಿ ಕಛೇರಿಗೆ ಹೊರಟೆ. 8.30 ರ ಸುಮಾರಿಗೆ ಮತ್ತಷ್ಟು ಜನ ಕಾರು ಮತ್ತು ಬೈಕ್‌ಗಳಲ್ಲಿ ಬಂದು ಗೇಟ್ ತೆಗೆಯಲು ಪ್ರಯತ್ನಿಸಿದರು. ಇದನ್ನು ನಾವು ಫೋಟೋ ತೆಗೆದುಕೊಂಡೆವು. ಜೊತೆಗೆ ಇದು ಸಿಸಿಟಿವಿಯಲ್ಲಿಯೂ ರೆಕಾರ್ಡ್ ಆಗಿದೆ” ಎಂದು ಹೇಳಿದರು.
“ನಾವು ಫೋಟೋ ತೆಗೆದಿದ್ದನ್ನು ನೋಡಿದ ದುಷ್ಕರ್ಮಿಗಳು ನಮ್ಮ ವಿರುದ್ಧವೆ ದೂರು ನೀಡಲು ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಹೋಗಿದ್ದಾರೆ. ನಾವು ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಇದು ನಮಗೆ ಗೊತ್ತಾಯಿತು. ನಾನು ನಡೆದ ವಿವರಗಳನ್ನು ಹೇಳಿ ದೂರು ನೀಡಿದ್ದೇನೆ. ಆದರೆ ಪೊಲೀಸರು ಇನ್ನೂ ಎಫ್‌ಐಆರ್ ಹಾಕಿಲ್ಲ. ಇದುವರೆಗೂ ನನ್ನ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸುಮಾರು 10 ದೂರುಗಳನ್ನು ನೀಡಿದ್ದೇನೆ. ಆದರೆ ಇದಾವುದಕ್ಕೂ ಪೊಲೀಸರು ಎಫ್‌ಐಆರ್ ದಾಖಲಿಸುವುದಾಗಲಿ, ನಮ್ಮ ಕಛೇರಿ ಮತ್ತು ನನಗೆ ಭದ್ರತೆ ಒದಗಿಸುವ ಕೆಲಸವನ್ನಾಗಲಿ ಮಾಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಲವು ದಿನಗಳಿಂದ ನನಗೆ ಕೆಲವು ಬೆದರಿಕೆಯ ಕರೆಗಳು ಬರುತ್ತಿದ್ದು, ಮೋದಿಯ ಬಗ್ಗೆ, ಬಿಜೆಪಿಯ ಬಗ್ಗೆ ಮತ್ತು ಹಿಂದುತ್ವದ ಬಗ್ಗೆ ಮಾತನಾಡಬಾರದೆಂದೂ, ಮಾತನಾಡಿದರೆ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: 37 ಎಸೆತಗಳಲ್ಲಿ 100 ರನ್: 9 ಬೌಂಡರಿ, 11 ಸಿಕ್ಸರ್ ಸಿಡಿಸಿದ ‘ಅಜರ್’


